Thursday, December 9, 2010

ಮೌನಿ

ಶಬ್ದಗಳ ಸಂತೆಯಲ್ಲಿ ನಿಂತು
ಮಾತುಗಳ ಖಾಲಿತನ ಮನದಟ್ಟಾದಂತೆ ಮೌನಿಯಾದ
ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಿದ್ದವರು
ಮೂಕ ಎಂದರು
ಮತ್ತಷ್ಟು ಜನ ಬಂದರು
ಮೂಕ ಎಂದ ಮೇಲೆ ಕಿವುಡನೂ ಇರಬಹುದೆಂದು ಕಣ್ಸನ್ನೆ ಕೈಸನ್ನೆ ಮಾತಾಡಿದರು

ಆಕಾಶ ನೋಡಿದ ಕಣ್ಣರಳಿಸಿ
ತಂಗಾಳಿಯ ಸ್ಪರ್ಶಕ್ಕೆ ಮೈ ಒಡ್ಡಿದ
ದೂರದಲ್ಲೆಲ್ಲೋ ಕೂಗಿದ ಹಕ್ಕಿಯ ಅನುಕರಿಸಿ ಕೂ ಎಂದ, ಮುಗುಳ್ನಕ್ಕ

ದೂರದಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದ ಯಾರದೋ ಮನೆಗಳು
ಕೆಂಪುಹಳದಿ ಜ್ವಾಲೆಗಳ ಹಿoಬೆಳಕಲ್ಲಿ ಕಪ್ಪು ಆಕೃತಿ ಮೂಡಿದಂತೆ
ಅವಸರವಸರವಾಗಿ ಬಂದನೊಬ್ಬ
ವ್ಯರ್ಥ ಕಾಲಹರಣ ಬೇಡ
ಮನೆ ಉರಿಯತೊಡಗಿ ಈಗ ತುಂಬ ಹೊತ್ತು
ಎಲ್ಲ ಸುಟ್ಟು ಹೋಗುವ ಮುನ್ನ ಬನ್ನಿ
ಒಂದಿಷ್ಟು ಗಳ ಹಿರಿಯೋಣ ...
ಹಿಂಬಾಲಿಸಿ ಒಬ್ಬೊಬ್ಬರೇ ತೆರಳಿದರು

ಬೆಂಕಿ ಆರಿಸುವ ಮಾತೇ ಇಲ್ಲ
ಎಲ್ಲಿಗೆ ಬಂತು! ನಿಶ್ಯಬ್ದವಾಗಿ ಅತ್ತ, ಅಳುತ್ತಲೇ ಇದ್ದ
ಇನ್ನಷ್ಟು ಜನ ಬಂದರು, ಭ್ರಮಿಷ್ಟ ಎಂದರು
ಸಂಪನ್ನನ ಸಿಟ್ಟು ಮಾತಾಗತೊಡಗಿತು,ತಾಗತೊಡಗಿತು
ಓ ಇವನಿನ್ನೂ ಲಜ್ಜೆ ಸಮ್ಮಾನ ಸಂಕೋಚ ಉಳ್ಳವನು
ನಾವೆಲ್ಲಾ- ಇಷ್ಟು ಜನ - ಎಲ್ಲ ಕಳಚಿ ನಿಂತಿದ್ದರೆ
ಇವ ನೋಡಿ ಇನ್ನೂ ಬಟ್ಟೆ ತೊಟ್ಟಿದ್ದಾನೆ
ಕಳಚಿ ಹಾಕಿರಿ ಇವನ ಅಂಗಿ
ಚೊಣ್ಣ ಚಡ್ಡಿ ಬನೀನು
ಸಿಳ್ಳೆ ಹೊಡೆದು ಸುತ್ತ ಹೆಜ್ಜೆ ಹಾಕಿ ವಿಕಟ ನಕ್ಕರು

ದಿಗಂಬರನಾಗಿ ನಡೆದ ಒಬ್ಬಂಟಿಯಾಗಿ
ಮುಸ್ಸಂಜೆ ಸಮಯದಲಿ ಬೆಟ್ಟ ದಾರಿಯ ಬದಿಗೆ
ಕುಪ್ಪಳಿಸುತ್ತಿತ್ತೊಂದು ಪುಟ್ಟ ಸುಂದರ ಹಕ್ಕಿ
ಬಳಿಸಾರಿ ಹೇಳಿದ 'ಬಾ, ಎದೆಗವಚಿಕೊಳ್ಳುವೆ'
ಬೆದರಿ ಹಾರಿತು ಹಕ್ಕಿ

ನಿಲ್ಲು, ನಾನು ನಿರುಪದ್ರವಿ ಎಂದ
ಹಕ್ಕಿ ನಂಬಲಿಲ್ಲ
ತನಗೆ ತಾನೇ ಎಂಬಂತೆ ಹೇಳಿಕೊಂಡ :ಫೇರ್ ಇನಫ್ ....
.

4 comments:

  1. Reading your poem brings before me the vivid image of the fugitive Jean Valinjean in Victor Hugo's "Les Miserables" - the last three lines of this poem is truly devastating of all the vanity of civilization and when the "Mauni" really speaks. Indeed, how truly unfathomable is human experience in its purity but Ashok Shettaravare, is'nt it this utter and at times brutal solitude of our experience that is also the very basis of true understanding and acceptance of life?

    ReplyDelete
  2. Solitude!! ಮೌನಿ ಚೆನ್ನಾಗಿದೆ ಸರ್. ಈಗೀಗ ಮೌನವಾಗಿರುವುದೂ ಕಷ್ಟ...ಒಬ್ಬಂಟಿಯಾಗಿರುವುದೂ ಕಷ್ಟ... ಎಲ್ಲರಂತೆ ಗಳ ಹಿರಿಯಲೂ ಆಗದವರಿಗೆ ಬದುಕು ಇನ್ನೂ ಕಷ್ಟ. ಶಾಲ್ಮಲಾದಲ್ಲಿ ಇಂಥವು ಇನ್ನಷ್ಟು ಬರಲಿ...

    ReplyDelete
  3. ಸರ್, ತುಂಬಾ ಇಷ್ಟವಾಯಿತು ನಿಮ್ಮ ಈ ಕವನ.
    ‘ಎಲ್ಲ ಸುಟ್ಟು ಹೋಗುವ ಮುನ್ನ ಬನ್ನಿ
    ಒಂದಿಷ್ಟು ಗಳ ಹಿರಿಯೋಣ ..’
    ಜೀವನದ ವಿಡಂಬನೆ ಅಂದರೆ ಇದೇ ಅಲ್ಲವಾ?

    ReplyDelete