Tuesday, March 15, 2011

ಅಂತ:ಪ್ರಜ್ಞಾ ಪ್ರವಾಹ

ನನ್ನ ಫೇಸ್ ಬುಕ್ ಸ್ನೇಹಿತೆ ಪ್ರಜ್ಞಾ ಶಾಸ್ತ್ರೀ ಅದೇ ಫೇಸ್ ಬುಕ್ ನಲ್ಲಿ ಬರೆದ ಟಿಪ್ಪಣಿ (ನೋಟ್ಸ್) ಯ ಪೂರ್ಣ ಪಾಠ ಹೀಗಿದೆ:
"ಜಪಾನಿನಲ್ಲಾದ ದುರಂತಕ್ಕೆ ನಾನು ಯಾವ ರೀತಿ ಸ್ಪಂದಿಸಿದ್ದರೆ ಹೆಚ್ಚು ಸಹಜವಾಗಿರುತ್ತಿತ್ತು ಎಂದು ಯೋಚಿಸುತ್ತ ಕೂತಿದ್ದೆ...
ನೈಸರ್ಗಿಕ ಅವಘಡಗಳು ಯಾರನ್ನೂ ಹೇಳಿ-ಕೇಳಿ ಬರುವುದಿಲ್ಲ. ಮತ್ತು ಜಪಾನಿನಲ್ಲಾದದ್ದು ನಾಳೆ ನಮ್ಮಲ್ಲೂ ಆಗಬಹುದು ಎನ್ನುವ ವಾಸ್ತವ ನಮ್ಮನ್ನು ಅಸಹಾಯಕರನ್ನಾಗಿ ಮಾಡುತ್ತದೆ. ಇಲ್ಲಿಯವರೆಗೆ ಕೂಡಿಟ್ಟ ಆಸ್ತಿ, ನಾಳೆ ಏನೋ ಆಗುತ್ತೇನೆಂಬ ಕನಸುಗಳು, ಮಗಳ ಮದುವೆ, ಒಂದು ಅಕೆಡೆಮಿ ಪ್ರಶಸ್ತಿ, ಪೆಗ್ ಏರಿಸುತ್ತ ಕಂಡ ಕ್ರಾಂತಿಯ ಹಳವಂಡಗಳು, ಅವನಿಲ್ಲದೇ ಬದುಕೇ ಇಲ್ಲವೆನ್ನುವ ಹಪಹಪಿಕೆಗಳೂ ಎಲ್ಲವೂ ಕ್ಷಣಾರ್ಧದಲ್ಲಿ ಮಟಾಷ್ ಆಗುವ ಅನಿಶ್ಚಿತ ಬದುಕು.
ಛೇ... ಟೀವಿಯಲ್ಲಿ footage ತೋರಿಸುತ್ತಿದ್ದಾಗ ಎಷ್ಟು ಸಂಕಟವಾಯಿತು ಅನ್ನಲೇ? ಗಂಟಲುಬ್ಬಿ ಬಂತು, ಕಣ್ಣುಗಳು ತುಂಬಿಕೊಂಡವು..ಊಟ ರುಚಿಸುತ್ತಿಲ್ಲ..ಒಂದು ಕವನ ಬರೆಯಲ? ಒಂದು ಸಂತಾಪ ಸೂಚಕ ಸಂವಾದ? All look so pretentious. ಒಂದು ದುರಂತ ಕತೆಯ ಅಂತ್ಯಕ್ಕೆ ಮರುಗುವವರಂತೆ...ಹಾಗಿಲ್ಲದಿದ್ದರೆ ನಾನೊಬ್ಬ ಸಂವೇದನಾ ರಹಿತ ಪ್ರಾಣಿ ಎಂದು ಯಾರಾದರೂ ಅಂದುಕೊಂಡುಬಿಟ್ಟರೆ ಎಂಬ ಅಳುಕಿಗಾದರೂ ಮರುಗುವ ಅನಿವಾರ್ಯತೆ ಎದುರಾದಾಗಲೆಲ್ಲ ನಾನು ಇನ್ನಷ್ಟು ಕುಬ್ಜಳಾದಂತೆ ಅನಿಸುತ್ತಿರುತ್ತದೆ.
ಅಲ್ಲ, ನಾನೇನು ಮಾಡಬಹುದಿತ್ತು? ಅಷ್ಟು ದೂರದ ಜಪಾನು ಹೋಗಲಿ, ಇಷ್ಟು ಹತ್ತಿರದ ಮುಂಬೈನಲ್ಲೇ ಆದರೂ ನಾನೇನು ಮಾಡುತ್ತಿದ್ದೆ? ಇದರರ್ಥ ನಾನು ಸಿನಿಕಳಾಗಿದ್ದೇನೆ ಎಂದರ್ಥವೇ? ನನಗೇನು ಹಾಗೆನಿಸುತ್ತಿಲ್ಲ. ಅಲ್ಲಿಯ ಪರಿಸ್ಥಿತಿಗೆ ಈಗ ತುರ್ತಾಗಿ ಒಂದಿಷ್ಟು volunteers ಬೇಕು. ಡಾಕ್ಟರ‍್ಸಗಳು ಬೇಕು. ಅನಾಥ ಮಕ್ಕಳನ್ನು ಮಡಿಲಿಗೆಳೆದುಕೊಳ್ಳುವವರು ಬೇಕು. ಅಲ್ಲೀಗ ನಮ್ಮ ಮರುಕಕ್ಕಿಂತ ಹೆಚ್ಚಾಗಿ ನಮ್ಮ ಕ್ರಿಯಾಶೀಲ ಉಪಸ್ಥಿತಿ ಮುಖ್ಯವಲ್ಲವೆ? ಮಸಣದ ಯಾತ್ರೆಯಲ್ಲಿ ಹೆಣಕ್ಕೆ ಹೆಗಲು ಕೊಡುವುದು ಸಾಧ್ಯವಾಗದಿದ್ದ ಮೇಲೆ ಇಲ್ಲಿ ಮರುಕದ ನಾಟಕವೇಕೆ? ಸಂತಾಪ ಸೂಚಿಸಿದವರೆಲ್ಲ ನಾಟಕ ಮಾಡುತ್ತಾರೆ ಅಂತಲ್ಲ, ನಾನೇ ಹಲವಷ್ಟು ಬಾರಿ ನನಗೆ ಅಸಹಜವಾದದ್ದನ್ನೇನೋ ಆವಾಹಿಸಿಕೊಂಡು ಪ್ರತಿಕ್ರಿಯಿಸುತ್ತಿರುತ್ತೇನೆ ಅಂತ ನನಗೆ ಅನಿಸುತ್ತದೆ. ಅಸಹಜ ಎಂದು ನನಗೆ ಯಾಕೆ ಅನಿಸುತ್ತದೆಯೆಂದರೆ...
ಈ ಒಂದು ಕ್ಷಣಕ್ಕೆ ಜಗತ್ತಿನ ಯಾವುದೋ ಮೂಲೆಯಲ್ಲಿ ಜನ ಸಾವು-ಬದುಕಿನ ಮಧ್ಯೆ ನಿಂತಿರುತ್ತಾರೆ ಹಾಗೂ ಮತ್ತೊಂದು ಮೂಲೆಯಲ್ಲಿ ಮಗುವೊಂದು ಹುಟ್ಟಿದ ಸಂಭ್ರಮ...ಎಷ್ಟು ಅಸಂಗತ. ಆದರೆ ಇವು ನಮ್ಮ ಬದುಕಿನ ಸಹಜವಾದ ಅಸಂಗತಗಳಲ್ಲವೇ? ಆದರೆ ಈ ಅಸಂಗತದ ಅರಿವು ನನ್ನಲ್ಲಿ ಒಂದು ಬಗೆಯ ಪಾಪ ಪ್ರಜ್ಞೆಯನ್ನು ಯಾಕೆ ಹುಟ್ಟಿಸುತ್ತದೆ? ಅಲ್ಯಾರೋ ಸಂಕಟ ಪಡುತ್ತಿರುವಾಗ ಇಲ್ಲಿ ನಾನು ನನ್ನ ಮಗುವಿನ ಹುಟ್ಟಿಗೆ ಸಂಭ್ರಮಿಸಿದರೆ ಅದು ಸಹಜವೇ ಅಲ್ಲವೆ? ಇವು ಬದುಕಿನ ಸಹಜ ವ್ಯಾಪಾರಗಳಾದಾಗ ಆ "ಅಸಂಗತ" ದ ಅರಿವು ನಮ್ಮನ್ನು ಇನ್ನಷ್ಟು ಮಾಗಿಸುತ್ತವೆ, ಮತ್ತು ಮಾಗಿಸಬೇಕು. ಅಲ್ಲವೆ? ಆದರೆ ಈ ಅಸಂಗತಗಳು ನಮ್ಮನ್ನು ಯಾಕೆ ಅಧೀರಗೊಳಿಸುತ್ತವೆ?... .....
"

ಪ್ರಜ್ಞಾ ಶಾಸ್ತ್ರಿಯ ಈ ಪುಟ್ಟ ಬರಹ "ಅಸಂಗತ" ಎಂಬುದಕ್ಕೆ ಸಾಮಾನ್ಯವಾಗಿ ಕೊಡಮಾಡಲ್ಪಟ್ಟಿರುವ ಅರ್ಥವನ್ನೇ ಮರುಚಿಂತನೆಗೆ ಒಳಪಡಿಸುವಂಥದು. ಅದಕ್ಕಿಂತ ಹೆಚ್ಚಾಗಿ ಈ ಬರಹ ತುಂಬ ಸರಳ ಶಬ್ದ ಹಾಗೂ ವಾಕ್ಯಗಳಲ್ಲಿ ಏಕಕಾಲಕ್ಕೆ ನೈತಿಕವೂ, ವಾಸ್ತವಿಕವೂ, ವೈಚಾರಿಕವೂ ಆದ ಪಾತಳಿಗಳಲ್ಲಿ ಚಲಿಸುತ್ತ ಅರ್ಥಪೂರ್ಣ ಚಿಂತನೆಯೊಂದರ ಸಾಧ್ಯತೆಯತ್ತ ಆಹ್ವಾನಿಸುವ ಕ್ಷಮತೆ ಉಳ್ಳಂಥದು.. ಅವಳೆತ್ತಿದ ಮುಖ್ಯ ಪ್ರಶ್ನೆ ವಾಸ್ತವವಾಗಿ ಜಪಾನಿನಲ್ಲಾದಂಥ ಈ ಅವಘಡಗಳು (ಇದು "ದುರಂತ" ಎನ್ನುವದಕ್ಕಿಂತ ಹೆಚ್ಚು ಸಮರ್ಪಕ ಶಬ್ದ) ನಮ್ಮನ್ನು ಮಾಗಿಸಬೇಕು.ಇನ್ನೆಲ್ಲೋ ಸಂಭವಿಸಿದ ಇಂಥ ವಿರಾಟ್ ಪ್ರಾಕೃತಿಕ ವ್ಯಾಪಾರಗಳು ನಾಳೆಯೋ ನಾಳಿದ್ದೋ ನಮ್ಮದೇ ಬದುಕಿನ ಪಾಡುಗಳೂ ಆಗಬಹುದು ಎಂಬ ಅರಿವನ್ನು ನಮ್ಮಲ್ಲಿ ಉಂಟು ಮಾಡಬೇಕು.ಆದರೆ ಅವು ನಮ್ಮನ್ನು ಅಧೀರಗೊಳಿಸುತ್ತವೆ. ಯಾಕೆ? ನಾನು ಗಮನಿಸುವ ಹಾಗೆ ನಮ್ಮ ದೇಶದಲ್ಲಿ,ಜನರು ಹಾಗೆ ಅಧೀರಗೊಳ್ಳುವಂತೆ ಮಾಡುವ ಒಂದು ಅತ್ಯಂತ ವ್ಯವಸ್ಥಿತವಾದ ರಚನೆ, ಈ ಅತ್ಯಾಧುನಿಕ ಕಾಲದಲ್ಲೂ- ಆ ಅತ್ಯಾಧುನಿಕತೆಯ ಭಾಗವಾಗಿರುವ ವಿದ್ಯುನ್ಮಾನ ಮಾಧ್ಯಮದಲ್ಲಿಯೇ-ಪಡಪೋಸಿ ಲಾಭದಾಸೆಯಿಂದ ವಿಝೃಂಭಿಸುತ್ತಿದೆ. ಒಂದು ಕೃತ್ರಿಮ ಸಮೂಹ ಸನ್ನಿಗೆ ಸಮನಾದ ಸ್ಥಿತಿಯಲ್ಲಿ ಒಬ್ಬ ಸಂವೇದನಾಶೀಲ ವ್ಯಕ್ತಿ ಕೇಳಿಕೊಳ್ಳಬಹುದಾದ ಈ ಪ್ರಶ್ನೆಗಳಿಗೆ ದಕ್ಕಬಹುದಾದ ಉತ್ತರ ಅಂತಿಮವಾಗಿ ಧರ್ಮವನ್ನು ಆಧ್ಯಾತ್ಮದಿಂದ ಬೇರ್ಪಡಿಸಿ ಸ್ವಾರ್ಥಪ್ರಧಾನವಾಗಿ ಲೌಕಿಕಗೊಳಿಸಿದ ಶಕ್ತಿಗಳತ್ತಲೇ ಹೋಗುತ್ತದೆ. ಭಾರತದ ಚರಿತ್ರೆಯಲ್ಲಿ ಸ್ವಾರ್ಥಕ್ಕಾಗಿ ಜನರನ್ನು ಚಿಂತನಾವಿಹೀನರನ್ನಾಗಿಸುವ ಇಂಥದೊಂದು ಧಾರೆ ಇರದೇ ಹೋಗಿದ್ದರೆ ಭಾರತದ ಬೌದ್ಧಿಕ ಇರುವಿಕೆಯ ಚಿತ್ರ ಪ್ರಜ್ಞಾಳಲ್ಲಿ ಇಂಥ ಪ್ರಶ್ನೆಗಳ ಹುಟ್ಟಿಗೆ ಅನುವು ಮಾಡಿ ಕೊಟ್ಟ ಚಿತ್ರಕ್ಕಿಂತ ಭಿನ್ನವಾಗಿರುತ್ತಿತ್ತು ಎಂಬುದು ನೋವಿನದಾದರೂ ವಾಸ್ತವಿಕ ಸ್ಥಿತಿ.ಇಂಥ ಸಂಕೀರ್ಣ ಸಂದರ್ಭದಲ್ಲಿ ಈ "ಯಾಕೆ?" ಎಂಬುದು ನಾವು ಗಮನ ಹರಿಸಲೇಬೇಕಾದ ಪ್ರಶ್ನೆ.

ಅದಕ್ಕಿಂತ ಮುಖ್ಯವಾಗಿ ಪ್ರಜ್ಞಾಳ ಬರಹದಲ್ಲಿ ನನ್ನನ್ನು ತಟ್ಟಿದ್ದು,-ಒಂದಿಲ್ಲೊಂದು ಸಂದರ್ಭದಲ್ಲಿ ನಮ್ಮನಿಮ್ಮಂಥವರನ್ನೂ ಕಾಡಿರಬಹುದಾದ- ಒಂದು "ನೈತಿಕ" ಪ್ರಶ್ನೆ. ಅದು ಜಗತ್ತು ( ಅಂದರೆ ನಮ್ಮ ಸುತ್ತಲಿನ ಸಮಾಜ, ಅಂದರೆ ಕೆಲವು ಡಝನ್ ಜನ) ನಮ್ಮ ಯೋಚನೆಯ ಕುರಿತು ಏನಂದುಕೊಳ್ಳಬಹುದೆಂಬ ಆತಂಕದಿಂದ ಸ್ವಾಯತ್ತವಾಗಿ, ಮುಕ್ತವಾಗಿ ಯೋಚಿಸುವ ಮಾರ್ಗದಲ್ಲಿ ಬರುವ ಅಡೆತಡೆಗಳ ಕುರಿತಾದದ್ದು. ರೂಕ್ಷವಾಗಿ ಹೇಳುವದಾದರೆ ಇದು ೧೯೮೫ರಲ್ಲಿ ಮೈಸೂರಿನಲ್ಲಿ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಜರುಗುತ್ತಿದ್ದ ಸಂದರ್ಭದಲ್ಲಿ ಶಿವರಾಮ ಕಾರಂತರು ಕೇಳಿದ "ಬರ ಇದೆ ಎಂದು ಯಾರಾದರೂ ಮಸಾಲೆ ದೋಸೆ ತಿನ್ನೋದು ಬಿಟ್ಟಿದ್ದಾರಾ?" ಎಂಬ ಪ್ರಶ್ನೆಯ ಸುತ್ತ ಸುತ್ತಿದ ನೈತಿಕ ಪ್ರಶ್ನೆ-ಟೀಕೆಗಳಂಥದು.. ಕಾರಂತರು ಹೇಳುವದು ವಾಸ್ತವ. ಅವರ ಟೀಕಾಕಾರರಿಗೆ ಅದು ಜನವಿರೋಧಿ ನಿಲುವಿನ ದ್ಯೋತಕ. ಕೆಲ ವರ್ಷಗಳ ಹಿಂದೆ ಗುಜರಾತಿನಲ್ಲಿ ನಡೆದ ಭೂಕಂಪ, ಮೂವತ್ತು ವರ್ಷಗಳ ಹಿಂದೆ ಭೋಪಾಲದಲ್ಲಿ ನಡೆದ ವಿಷಾನಿಲ ಸೋರಿಕೆಯಂಥ ದುರಂತಗಳು ಪ್ರಾಮಾಣಿಕವಾಗಿ ಯೋಚಿಸುವವರಿಗೆ ಶಬ್ದಗಳಿಗೆ ಮೀರಿದ, ಆ ಅವಘಡ ಮತ್ತದರ ಪರಿಣಾಮಗಳನ್ನು ಶಬ್ದಾಡಂಬರದಲ್ಲಿ ಪೋಣಿಸಿ ಪ್ರಸ್ತುತಪಡಿಸುವದು ತಮ್ಮಷ್ಟಕ್ಕೆ ತಾವೇ ಸಂವೇದನಾರಾಹಿತ್ಯದ ಕೆಟಗರಿಗೆ ಸೇರಬೇಕಾದವುಗಳು ಅಂತ ಅನ್ನಿಸುವಂಥ ದುರಂತಗಳು. ಅಂಥವುಗಳನ್ನೂ, ಅವುಗಳ ಕುರಿತು ಒಂದು ಕವಿತೆ ಹೊಸೆಯುವದು ತಮ್ಮ ನೈತಿಕ "ಕೆಲಸ" ಎಂಬಂತೆ, ನೀರಸ ಕವಿತೆಯಾಗಿಸುವ,ಬಗೆಬಗೆಯ ಮೈಮಾಟದೊಂದಿಗೆ ಅವುಗಳನ್ನು ಸಾರ್ವಜನಿಕ ಸಭೆಗಳಲ್ಲಿ ವಾಚಿಸುವ ಕವಿ-ಕವಯಿತ್ರಿಯರು ಇರುವಂಥ ಒಂದು ವಿಲಕ್ಷಣ ಸನ್ನಿವೇಶದಲ್ಲಿ ನಾವಿರುವ ಇಂದು ಪ್ರಜ್ಞಾ ಎತ್ತುವ ಪ್ರಶ್ನೆ ಬರೀ ಅವಳದಲ್ಲ, ಇದು ಜಪಾನಿನ ಒಂದು ಅವಘಡದ ಕುರಿತಾದದ್ದೂ ಅಲ್ಲ. ಇದು ನಮ್ಮನ್ನೆಲ್ಲ ಆತ್ಮಶೋಧನೆಗೆ ಹಚ್ಚಬೇಕಾದ ಪ್ರಶ್ನೆ. ಪ್ರಜ್ಞಾ ಕೇಳುವ ಎಲ್ಲ ಪ್ರಶ್ನೆಗಳು, ಆಕೆಯ ಯೋಚನೆಯ ಎಲ್ಲ ಸ್ವಗತಗಳು ತಮ್ಮ ಆತ್ಮಶೋಧನೆಯ ಗುಣದಿಂದಾಗಿಯೇ ನಮ್ಮನ್ನು ಕಲಕುತ್ತವೆ.
ಅಂದರೆ ಆ ಯೋಚನೆ,ಸ್ವಗತಗಳಿಗೆ ಒಂದು ಅರ್ಥವಿದೆ,ಆಳವಿದೆ,ಶಕ್ತಿಯಿದೆ.ಮಾನವದುರಂತಗಳಿಗೆ ಮರುಗುವ ಒಂದು ಮನಸು, ಅದನ್ನು ನಾಟಕೀಯಗೊಳಿಸಲು ಇಚ್ಚಿಸದ ಒಂದು ಅಂತ:ಸ್ಸಾಕ್ಷಿ, ಅದರ ಕುರಿತು ಏನೂ ಮಾಡಲಾಗದ ವಿಚಿತ್ರ ಅಸಹಾಯಕತೆ,ದಿನ ನಿತ್ಯ ಎಲ್ಲೋ ಒಂದೆಡೆ ಸಂಭವಿಸಬಹುದಾದ ಯಾವುದೋ ಅವಘಡಕ್ಕೆ ಹೊರತಾದ ಒಂದು ಜೀವನಕ್ರಮಕ್ಕೆ ಬದ್ಧವಾಗಿರುವ ಬದುಕಿನ ಸ್ಥಿತಿ ಇವೆಲ್ಲ ಸಂಯುಕ್ತವಾಗಿಯೇ ಹುಟ್ಟು ಹಾಕುವ ಈ ಪ್ರಶ್ನೆಗಳು ಬರುಬರುತ್ತ ಹೆಚ್ಚುಹೆಚ್ಚಾಗಿ ನಮ್ಮ ನಿಮ್ಮೆಲ್ಲರ ಪ್ರಶ್ನೆಗಳೂ ಸ್ವಗತಗಳೂ ಆಗಬಹುದು..