Thursday, May 5, 2011

ಎಲ್ಲ ಹಾಗೇ ಇದೆ,ನೀನಿಲ್ಲವಯ್ಯ..
ಬದುಕಿನಾಟ ಸಾಗಿತ್ತು, ನೋಡಿದಿರಿ..
ಆಟದ ನಿಯಮಗಳು ಸರಿ ಇಲ್ಲ ಅನ್ನಿಸಿತು
ಹಾಗೆಂದಿರಿ ನೊಂದಿರಿ ನಡೆದಿರಿ, ಎರಡು ನೀರ್ವರಿ ಅಪ್ಪಿ ಹರಿವ ಸಂಗಮದಲ್ಲಿ
ಬಗೆಗಂಗಳಲ್ಲಿ ಯಾ ಕಾಣ್ಕೆ ಹೊಳೆದು ಯಾ ತತ್ವ ಮಿಂಚಿ

ಕಾಲ ಚಲನೆಯಲೊಂದು ನಳನಳಿಸೋ ಸ್ಥಿತಿ ಬಂತು
ಕದಳಿ ಕಶ್ಮಿರ ಅತ್ತ ಸೊನ್ನಲಿಗೆ ಬಳ್ಳಿಗಾಮೆ-ನೂರು ತೊರೆಗಳು ಬಂದು ಸೇರಿದವು ಕಲ್ಯಾಣ
ತರತಮದ ಕೊಳೆತೊಳೆಯೆ ಒಗ್ಗೂಡಿ ಹರಿದು
ಊರು ಪಟ್ಟಣ ಗ್ರಾಮ ಹೊಲಗೇರಿ ಹೊಕ್ಕು
ಸ್ಥಿತಿಗೊಂದು ಗತಿಬಂತು ತೊಳಗಿ ಬೆಳಗಿತು ಬದುಕು
ಹಮ್ಮು ಬಿಮ್ಮಳಿದ ಶಿವಭಕುತರ ತಾಣ, ಶಿವಮಯವು ಕಲ್ಯಾಣ.

ಎಂಥ ಸುಗ್ಗಿ!
"ಬಿತ್ತಿತ್ತು ಬೆಳೆಯಿತ್ತು ಕೆಯ್ಯ ಕೊಯ್ಯಿತ್ತು ಗೂಡು ಮುರಿಯಿತ್ತು
ಕುತ್ತಿರಿಯೊತ್ತಿತ್ತು ಒಕ್ಕಿತ್ತು ತೂರಿತ್ತು ತುಂಬಿತ್ತು..."

ಎಳಹೂಟೆ ಹಳವಂಡ ಕಂಡಿದ್ದರಾರು!
ಕನಸುಗಳ ಶಿರ ಕಡಿವರೆದ್ದರು ನಾಲಗೆಗಳಲಗು ಝಳಪಿಸಿ
ಲಡ್ಡು ಸನಾತನ ಮರದ ಬೊಡ್ಡೆ ಟಿಸಿಲೊಡೆಸಿ
ರೆಂಬೆ ಕೊಂಬೆಗಳಲ್ಲಿ ಹಸಿರು ಹಾಸಿರಲಿಲ್ಲ
ರಕ್ತಗೆಂಪಿನ ಹೂ ತೂಗಿ
ಅಲ್ಲಿ ಕೋರೆಹಲ್ಲು ಇಲ್ಲಿ ಕುರುಚಲು ಗಡ್ಡ ಎಂತೆಂಥವೋ ನಾಮ ವಿಕಟಾಟ್ಟಹಾಸ
ಒಳಿತೆಲ್ಲ ಅಳಿದಿತ್ತು ಮೇಟಿ ಕಿತ್ತಿತ್ತು ಕಣ ಹಾಳಾಯಿತ್ತಯ್ಯ

ರಾಜಸತ್ತೆ ಪಿಶಾಚಿ ರಕ್ತದಾಹಕೆ ಬಿದ್ದು.. ಅನ್ಯದಾರಿಯಿಲ್ಲ
ಆತ್ಮಗೌರವ ಬೀಜ ಸಸಿಯಾಗಿ ಅರಳಿ ಮರವಾಗಿ ಬೆಳೆದಿದ್ದ
ಮಾಚಯ್ಯ ಮಾರಯ್ಯ ಚೌಡಯ್ಯ ಕೇತಯ್ಯ ಚಂದಯ್ಯ ಹಳ್ಳಯ್ಯ ಬೊಮ್ಮಯ್ಯರು
ರಾಮಣ್ಣ ಸಂಗಣ್ಣ ಬೊಮ್ಮಣ್ಣರು
ಉರಿಲಿಂಗ ಪೆದ್ದಿಗಳು ಪ್ರಭುದೇವರು.. ... ಯಾರೆತ್ತ ಹೋದರೋ.. ...
ಮಹದೇವಿ ನೀಲವ್ವ ಗಂಗವ್ವ ನಾಗಮ್ಮ
ಲಕ್ಕಮ್ಮ ರೆಮ್ಮವ್ವೆ ಕಾಳವ್ವೆ ಸಂಗವ್ವೆ
ಅವರ ಹಸುಗರು ಕೂಸು ಕುನ್ನಿ ಕಂದಮ್ಮಗಳು.. ... ಎತ್ತೆತ್ತ ಓಡಿದರೋ.. ...
ಅಕ್ಕರಗಳು ಚೆಲ್ಲುವರಿದ ನುಡಿಗಟ್ಟ ಗಂಟುಗಳ
ಒಡಲ ಕೂಸುಗಳಂತೆ ಎದೆಗವಚಿ ಓಡಿದರು
ಯಾ ದಾರಿ ಯಾ ಊರು-ಉಳವಿಯಂತೆ ಶ್ರೀಶೈಲವಂತೆ ಸಂಗಮವಂತೆ
ಗೊಂಡಾರಣ್ಯಗಳಲ್ಲೂ ನೂರು ಹೆಜ್ಜೆ ಗುರುತು.. ...
ಗುಹೆ ಹೊಕ್ಕು ಶೂನ್ಯಕ್ಕೆ ಶರಣಾದರು!
ಈ ಲೋಕದ ಕೆಲಸ ಮುಗಿಯಿತು ಐಹಿಕದ ಮಿತಿ ತಿಳಿಯಿತೆಂಬಂತೆ ನೀವೂ ನಡೆದಿರಿ
ಯಾರು ಬಂದರೋ ಬರಲಿಲ್ಲವೋ.. ಕ್ಷುಬ್ದಸಾಗರವಾದ ಮನವ ಸಂತೈಸುತ್ತ, ನಿಮ್ಮಷ್ಟಕ್ಕೆ, ಮತ್ತೆ..
ಹರಿವ ನೀರಿನೆಡೆಗೆ, ಮಹಾಬೆಳಗಿನೆಡೆಗೆ, ಅನಂತದೆಡೆಗೆ, ಸಂಗಮನ ತೆಕ್ಕೆಗೆ.
ಒಂಟಿಯಾಗಿ, ಒಬ್ಬಂಟಿಯಾಗಿ

*** ***

ಜಂಗಮ ಸ್ಥಾವರಗೊಂಡು ವೇದಜಡಜೇಡ ಬಲೆ ಹೆಣೆಯುತ್ತಿದೆ, ಸುತ್ತ ಹುತ್ತಗಟ್ಟಿದೆ
ಎತ್ತ ನೋಡಿದಡತ್ತ ಸಿರಿಯ ಗರ ಹೊಡೆದವರು, ನುಡಿಸುವರಿಲ್ಲ ನಡೆಸುವರಿಲ್ಲ
ದಯೆ ಇರದ ಧರ್ಮ ನಿಷ್ಟೆ ಇರದ ಕಾಯಕ
ಅನೃತದ ಗೋಪುರಗಳಡಿ ಸಾವಿರ ದೀಪ-ಒಳಗೆ ಕಗ್ಗತ್ತಲು
ಉಗ್ಘಡಣೆಯೊಡಲೊಳಗೆ ಸಹಿಸಲಸದಳ ಮೌನ

ತಮ್ಮೊಡಲಿಗೆ ತಮ್ಮೊಡವೆಗೆ ತಮ್ಮ ಮಡದಿ ಮಕ್ಕಳಿಗೆ ಕುದಿವರ ನಡುವೆ


ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರೊಂದೆಡೆ
ಹಿರಿಯ ಮಾಹೇಶ್ವರ ಕೇರಿಯ ಹೊಕ್ಕರೆ
ಸಾವಿರ ಜನರೆದುರು ಒಂದು ಮೀಸಲನ್ನದ ತಟ್ಟೆ, ಅಲ್ಲಿ ಎಡಗೈ ಬಲಗೈ ಕಾಳಗ.. ....
ಏನು ಬದಲಾಯ್ತಣ್ಣ?