Monday, February 7, 2011

ಕುಚ್ಚಿನ ಟೋಪಿಯ ಬೆಚ್ಚನೆ ಬೇಂದ್ರೆ, ನೆನಪುಗಳ ಗುಂಗಿನಲ್ಲಿ...

(ದಿ.ದ.ರಾ.ಬೇಂದ್ರೆಯವರ ಜನ್ಮದಿನವಾದ ಜನವರಿ ೩೧ರಂದೇ ಈ ಬರಹ ನನ್ನ ಈ ಬ್ಲಾಗ್ನಲ್ಲಿ ಪ್ರಕಾಶಿತವಾಗಬೇಕಿತ್ತು. ಈ ಬರಹ ಎಲ್ಲೆಡೆ ಇರುವ ಆಸಕ್ತ ಕನ್ನಡಿಗರ ಓದಿಗೆ ಲಭ್ಯವಾಗಲಿ ಎಂಬ ಕಾರಣಕ್ಕೆ ಮೊದಲು ಇದನ್ನು "ಕೆಂಡಸಂಪಿಗೆ"ಗೆ ಕಳಿಸಿದ್ದೆ. ಅಲ್ಲಿ ಬೇಂದ್ರೆಯವರ ಜನ್ಮದಿನದಂದೇ ಪ್ರಕಟವಾದ ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳಿಂದ ನಾನು ಸ್ವಾಭಾವಿಕವಾಗಿಯೇ ಸಂತುಷ್ಟ.ಈ ಲೇಖನ ಈಗ ಇಲ್ಲಿ, ನಿಮ್ಮ ಓದಿಗಾಗಿ)

"ಅಲ್ಲಿ ಸಂಪಿಗೆಯಿತ್ತು ಪಾರಿಜಾತಕವಿತ್ತು
ಮಾವು ಮಲ್ಲಿಗೆಯಿತ್ತು ಮನೆಯಿದುರು
ಮುಗಿಲ ಮಲ್ಲಿಗೆಯಿತ್ತು ತೆಂಗಿತ್ತು ಹಲಸಿತ್ತು
ನಿಂಬಿಯ ಇಂಬಿತ್ತು ಎಡೆಎಡೆಗೆ
ಹೊಂಗೆಯ ಸಾಲಿತ್ತು ಕಣ್ಮುಂದೆ ಕೆರೆಯಿತ್ತು
ಗುಡ್ಡದ ನೆರೆಯಿತ್ತು ಅದರಾಚೆಗೆ... ....."

"ಸಖಿಗೀತ"ದಲ್ಲಿ ಬರುವ ಈ ಸಾಲುಗಳು ಬೇಂದ್ರೆ ಕಂಡ ಸಾಧನಕೇರಿಯ ಶಬ್ದಚಿತ್ರಗಳು.ನಿನ್ನೆ ಅಂದರೆ ೨೯ ಜನವರಿ ೨೦೧೧ ರಂದು ಮಧ್ಯಾಹ್ನ ಒಂದೆರಡು ತಾಸು ಧಾರವಾಡದ ಬೇಂದ್ರೆ ಭವನದಲ್ಲಿ ಇದ್ದೆ. ಬೇಂದ್ರೆ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಶಾಮಸುಂದರ ಬಿದರಕುಂದಿಯವರೊಂದಿಗೆ ಮಾತಾಡಿ ಆಮೇಲೆ ಬೇಂದ್ರೆಯವರ ಮೂಲನಿವಾಸ "ಶ್ರೀಮಾತಾ"ದಲ್ಲೇ ಇರುವ ಅವರ ಪುತ್ರ ವಾಮನ ಬೇಂದ್ರೆಯವರ ಜೊತೆ ಸ್ವಲ್ಪ ಹೊತ್ತು ಕಳೆದೆ. ಬೇಂದ್ರೆ ಭವನದ ಮೇಲಂತಸ್ತಿನ ಬಾಲ್ಕನಿಯಿಂದ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ನವೀಕೃತ ಸಾಧನಕೆರೆಗೆ ಹೋಗುವ ದಾರಿ,ಉದ್ದಕ್ಕೂ ಕಟಾಂಜನ ಇವನ್ನೆಲ್ಲ ನೋಡುತ್ತಿದ್ದಾಗ ನನ್ನ ಮನಸಿನಲ್ಲಿ ಅಚ್ಚೊತ್ತಿದಂತಿರುವ ಆ ಪರಿಸರದ ಬೇರೆಯದೇ ಚಿತ್ರದ ಮೇಲೆ ನಾನು ಇವುಗಳನ್ನು ಸುಪರಿಂಪೋಸ್ ಮಾಡಬೇಕಾಗಿ ಬಂತು.ನನ್ನ ಮನಸಿನಲ್ಲಿ ಸುಳಿಯುತ್ತಿದ್ದುದು ೩೦-೩೫ ವರ್ಷಗಳ ಹಿಂದೆ ಬೇಂದ್ರೆ ಮನೆ ಇರುವ ಸಾಲಿಗೆ ಎದುರಾಗಿ,ಗೋವಾಕ್ಕೆ ಹೋಗುವ ಮುಖ್ಯರಸ್ತೆಯಾಚೆ, ಸಾಧನಕೆರೆಯ ಒಂದು ಮೇರೆಯಾಗಿರುವ, ನಾನು ಪೋಲಿಸ್ ವಸತಿಗೃಹಗಳಿಗೆ ಸಾಗಿ ಹೋಗುತ್ತಿದ್ದ, ಕಿರಿದಾದ ಮಣ್ಣ ರಸ್ತೆ, ಸಾಧನಕೆರೆಯ ಇನ್ನೊಂದು ಮೇರೆಯಾಗಿ ಆ ಕೆರೆಯ ಏರಿ, ಅದರಾಚೆ ಭತ್ತದ ಗದ್ದೆ, ತೋಟ ಪಟ್ಟಿಗಳು,ಆಗೊಂದು ಈಗೊಂದರಂತೆ ಗೋವಾಕ್ಕೆ ಹೋಗುತ್ತಿದ್ದ ಖಾಸಗಿ ಅಥವಾ ಸರಕಾರಿ ವಾಹನಗಳು,ಕೆಲಗೇರಿ ಹಾಗು ಮುಗದ ಗ್ರಾಮಗಳ ನಡುವಿನ ಕುರುಚಲು ಕಾಡುಗಳಲ್ಲಿ ಸಂಗ್ರಹಿಸಿದ ಕಟ್ಟಿಗೆಗಳ ಹೊರೆ ಹೊತ್ತು ಓಟದ ನಡಿಗೆಯಲ್ಲಿ ಧಾರವಾಡದತ್ತ ಹೋಗುತ್ತಿದ್ದ ಬಡಪಾಯಿ ಹೆಂಗಳೆಯರು, ಮುಕ್ತಾಯಗೊಳ್ಳಬೇಕು ಎಂಬ ಯಾವ ಧಾವಂತವೂ ಇಲ್ಲದೇ ನಿಷ್ಕಾರಣವೆಂಬಂತೆ ನಿಷ್ಕರುಣೆಯಿಂದ ಸುರಿಯುತ್ತಿದ್ದ ಜಿಡ್ಡುಮಳೆ,ಅಂಚಿನಲ್ಲೆಲ್ಲ ಜೊಂಡು ಬೆಳೆದಿದ್ದ ಚಿಕ್ಕದೂ ಅಲ್ಲದ ಬಹಳ ವಿಸ್ತಾರವೂ ಅಲ್ಲದ ಸಾದನಕೆರೆ..ಹಳೆ ಕಾಲದ ಕೆಂಪು ಹಂಚಿನ ಮನೆಗಳು,ಸುಶಿಕ್ಷಿತ ಜನ..ಆ ಪರಿಸರದಲ್ಲಿದ್ದಷ್ಟೂ ಹೊತ್ತು ಮನಸಿನಲ್ಲಿ ನೆನಪುಗಳ ಸಂತೆ ನೆರೆದಿತ್ತು. "ಸಾಧನಕೇರಿಯ ಸಂಜೆ ಮಳೆ ಸೆಳಕುಗಳು" ಎಂಬ ನನ್ನದೊಂದು ಕವಿತೆಯಲ್ಲಿ ಸಾದನಕೇರಿಯ ಇತರೆ ಚಿತ್ರಗಳೊಂದಿಗೆ ಬೇಂದ್ರೆ ನನ್ನ ಮನಸಿನಲ್ಲಿ ಮೂಡಿದ್ದು ಹೀಗೆ:

ರಸ್ತೆ ಆಚೆ ಆ ಹಳೆ ಮನೆಯಲ್ಲಿ
ಹೊಸ್ತಿಲ ಹಿಂದೆ ಖುರ್ಚಿಯ ಹಾಕಿ
ಕಾಲಿನ ಮೇಲೆ ಕಾಲನ್ನಿಕ್ಕಿ
ಗರಗರ ರಪರಪ ಸದ್ದಿನ ಜೊತೆಗೆ ಆಗಸದಿಂದ ಹುಯ್ಯುವ ಮಳೆಗೆ
ಸಂಜೆಯ ಐದರ ಮನಸನ್ನೊಡ್ಡಿ
ಶಬ್ದಕೆ ಶಬ್ದದ ತಂತಿಯ ಬೆಸೆಯುತ
ಕುಚ್ಚಿನ ಟೋಪಿಯ ಬೆಚ್ಚನೆ ತಲೆಯೊಳು
ತುಡಿಯುವ ಮಿದುಳಲಿ ಕವಿತೆಯ ಹೊಸೆಯುತ
ಬೇಂದ್ರೆ ಅಜ್ಜ ಕುಳಿತಿರುತಿದ್ದರೆ
ಇನ್ನೂ ಇದ್ದರೆ ಈಗೂ ಇದ್ದರೆ
ಸಾಧನಕೆರೆಯಲಿ ಸುರಿಯುವ ಮಳೆಗೆಷ್ಟೊಂದು ಅರ್ಥವಿತ್ತು
ಮಳೆ ಎಷ್ಟೆಲ್ಲ ವ್ಯರ್ಥ ಬಿತ್ತು...

ವರ್ಣಚಿತ್ರಗಳು:ಸಾಗರ್ ಶೆಟ್ಟರ್

ನನ್ನ ಪದವಿ ವ್ಯಾಸಂಗದ ಮೂರು ವರ್ಷಗಳ ಅವಧಿಯಲ್ಲಿ, ೧೯೭೫ ರಿಂದ ೭೮ ರವರೆಗೆ, ನಾನು ವಾಸವಾಗಿದ್ದ ಪರಿಸರ ಅದು. ಮೊದಲ ಆರು ತಿಂಗಳು ಸಾಧನಕೇರಿಯ ಮೊದಲನೆಯ ಕ್ರಾಸಿನಲ್ಲಿ ಒಂದು ಬಾಡಿಗೆ ಮನೆಯಲ್ಲಿ, ನಂತರ ಎರಡೂ ವರೆ ವರ್ಷ ಸಾದನಕೆರೆಯ ಆಚೆ ತುದಿಯಲ್ಲಿರುವ ಪೋಲಿಸ್ ಹೆಡ್ ಕ್ವಾರ್ಟರ್ಸ್ ನಲ್ಲಿ ಅಕ್ಕ ಭಾವನ ಆಶ್ರಯದಲ್ಲಿ ಇದ್ದುಕೊಂಡು ನಾನು ಓದುತ್ತಿದ್ದೆ. ಸ್ವಚ್ಚ ಬಿಳಿ ಪೈಜಾಮ ಅಥವಾ ಅದರಂಥ ಪ್ಯಾಂಟು, ಬಿಳಿ ಶರಟು (ಒಮ್ಮೊಮ್ಮೆ ಮೇಲೆ ಕೋಟು) ಒಂದು ಬಣ್ಣದ ಖಾದಿ ಟೋಪಿ ಧರಿಸಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದ ಶಂ.ಬಾ.ಜೋಶಿ ಹಾಗೂ ಮುಂಜಾನೆಯ ಎಳೆಬಿಸಿಲಲ್ಲಿ ಅಥವ ಇಳಿಹೊತ್ತಿನಲ್ಲಿ ತಮ್ಮ ಮಗ ಡಾ. ವಾಮನ ಬೇಂದ್ರೆಯವರ ಸ್ಕೂಟರಿನ ಹಿಂದಿನ ಸೀಟ್ ನಲ್ಲಿ ಕರಿ ಕೋಟು ಅಥವ ತುಂಬು ತೋಳಿನ ಸ್ವೆಟರ್, ಧೋತರ, ಮಂಕಿಕ್ಯಾಪ್ ಧರಿಸಿಕೊಂಡು, ತೊಯ್ದ ಗುಬ್ಬಿಯ ಹಾಗೆ ಕೂತು, ಮುಂದೆ ಬಾಗಿ ಮಗನಿಗೆ ಕೇಳಿಸುವಂತೆ ಕಿವಿಸಮೀಪ ಮುಖ ಒಯ್ದು ಮರಾಠಿಯಲ್ಲಿ ಏನೆಂಥದೋ ಮಾತಾಡುತ್ತ ಸಂಚರಿಸುವ ಡಾ. ದ.ರಾ.ಬೇಂದ್ರೆ ಇವು ಅಲ್ಲಿ ದಿನನಿತ್ಯದ ನೋಟಗಳು. ಕಾಲೇಜಿಗೆ ಹೋಗುತ್ತಲೋ ಬರುತ್ತಲೋ ಅಥವ ಸಾಧನಕೇರಿಯ ಬಸ್ ಸ್ಟಾಪ್ ನಲ್ಲಿ ಬಸ್ಸಿಗಾಗಿ ಕಾದು ನಿಂತಾಗಲೋ ನನ್ನ ಕಣ್ಣಿಗೆ ಹೆಚ್ಚೂ ಕಡಿಮೆ ನಿಯಮಿತವಾಗಿ ಬೀಳುತ್ತಿದ್ದ ದೃಶ್ಯಗಳಿವು. ಕರ್ನಾಟಕ ಕಾಲೇಜಿನ ಪರಿಸರದಲ್ಲಿ ಹೊಸದಾಗಿ ಕಾವ್ಯದ ಓದಿಗೆ ಅದರ ಕುರಿತ ಚಿಂತನೆಗಳಿಗೆ ತೆರೆದುಕೊಳ್ಳುತ್ತಿದ್ದ ನನಗೆ ಬೇಂದ್ರೆ ಧಾರವಾಡದ ಉದ್ದಗಲಕ್ಕೂ ಇದ್ದ ಅಸಂಖ್ಯಾತ ಪೆನ್ಶನರ್ ಬ್ರಾಹ್ಮಣ ಮುದುಕರಲ್ಲೊಬ್ಬರಂತೆ ಕಾಣುತ್ತಿದ್ದರು.
"ಟೊಂಕದ ಮ್ಯಾಲ ಕೈ ಇಟಗೊಂಡ ಬಿಂಕದಾಕಿ ಯಾರೀಕಿ
ವಂಕಿತೋಳ ತೋರಸತಾಳ ಸುಂಕದ ಕಟ್ಟ್ಯಾಂವಗ"
ಎಂಬಂಥ, ಅಥವಾ
"ಯಲ್ಲಿ ಮಲ್ಲಿ ಪಾರಿ ತಾರೀ ನೋಡೀರೇನವ್ವಾ?
ನಿಂಗೀ ಸಂಗೀ ಸಾವಂತರೀ ಎಲ್ಹಾನ ನನ್ನಾಂವಾ?
ಸೆಟ್ಟರ ಹುಡುಗಾ ಸೆಟಗೊಂಡ ಹೋದಾ ಅಂತ ನನ್ನ ಜೀಂವಾ
ಹಾದೀಬೀದಿ ಹುಡುಕತೈತ್ರೇ ಬಿಟ್ಟ ಎಲ್ಲ ಹ್ಯಾಂವಾ"
ಎಂಬಂಥ, ಅಥವ
"ಬೆಳಕಿಗಿಂತ ಬೆಳ್ಳಗೆ ಇತ್ತ ಗಾಳಿಗಿಂತ ತೆಳ್ಳಗೆ ಇತ್ತ
ಜಡಿಯಿಂದಿಳಿದ ಗಂಗಿ ಹಾಂಗ ಚಂಗನೆ ನೆಗೆದಿತ್ತ" ..
ಎಂಬಂಥ ಸಾಲುಗಳನ್ನು ಬರೆದ ಕವಿಗೂ ಈ ಅಗದೀ ಗಾಂವಟೀವ್ಯಕ್ತಿಯಂತೆ ಕಾಣುತ್ತಿದ್ದ ಬೇಂದ್ರೆಯವರಿಗೂ ಸಂಬಂಧ ಕಲ್ಪಿಸುವದು ಮೊದಮೊದಲು ನನಗೆ ಕಷ್ಟವೇ ಆಗುತ್ತಿತ್ತು. ಅದು ಹೋಗಲಿ, ಕವಿ - ಸಾಹಿತಿ ಎಂದರೆ ಋಷಿಸದೃಶ ವ್ಯಕ್ತಿತ್ವಗಳೆಂದು ಕಾರಂತರನ್ನೋ ಕುವೆಂಪು ಅವರನ್ನೋ ಡಿವಿಜಿ ಅವರನ್ನೋ ಕಣ್ಮುಂದೆ ತಂದುಕೊಳ್ಳುತ್ತಿದ್ದ ನನಗೆ ನಾನಾಗಲೇ ಓದಿದ್ದ ಅವರ ಹಲವು ಅತ್ಯಂತ ಶಿಷ್ಟವಾದ, ತಾತ್ವಿಕವಾದ ಕವಿತೆಗಳ ಸಂಬಂಧವನ್ನು ಅವರೊಂದಿಗೆ ಕಲ್ಪಿಸುವದೂ ತ್ರಾಸದಾಯಕವಾಗಿತ್ತು. ಇಷ್ಟು ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದರು ಅಸಾಮಾನ್ಯ "ಬೇಂದ್ರೆ ಮಾಸ್ತರ್"!


ಹೀಗಿರುತ್ತಿರಲಾಗಿ ಒಂದು ದಿನ ಬೇಂದ್ರೆ ಅವರನ್ನು ಭೇಟಿಯಾಗುವ ಪ್ರಸಂಗ ಒದಗಿ ಬಂತು. ನಮ್ಮ ಬೈಲಹೊಂಗಲ ತಾಲೂಕಿನ ಎಂ.ಕೆ. ಹುಬ್ಬಳ್ಳಿಯಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗಸ್ಥರಾಗಿದ್ದ ರಾಜೇಂದ್ರ ಪಾಟೀಲ್ ಎಂಬುವರಿಗೆ ಸ್ವಲ್ಪ ಸಾಹಿತ್ಯದ ಹುಚ್ಚು. ನಮ್ಮೂರು ಬೈಲಹೊಂಗಲದವರು, ನನ್ನಣ್ಣನ ಬಾಲ್ಯಕಾಲದ ಸಹಪಾಠಿ ಬೇರೆ. ತಾವೊಂದು ಸಾಹಿತ್ಯಿಕ ತ್ರೈಮಾಸಿಕ ತರುವದಾಗಿ ಹೇಳಿ ಅದಕ್ಕೆ ಒಂದು ಸಲಹಾ ಮಂಡಲಿ ರಚಿಸುವ, ಬರಹಗಳನ್ನು ತರಿಸಿಕೊಳ್ಳುವ, ಚಂದಾಸಂಗ್ರಹಕ್ಕೆ ಅಗತ್ಯವಿದ್ದ ಮನವಿಪತ್ರ ತಯಾರಿಸುವ, ಆ ನಿಯತಕಾಲಿಕೆಗೆ ಒಂದು ಹೆಸರು ಕೊಡುವ ಹೀಗೆ ಥರಾವರಿ ಹೊಣೆಗಳನ್ನು ನನ್ನ ಕೊರಳಿಗೆ ಹಾಕಿದ ಪಾಟೀಲರು ಒಂದು ಶುಭ್ರ ಮುಂಜಾನೆ "ಕಾವ್ಯಶ್ರೀ" ಗೆ ಹರಕೆ ಹಾರೈಕೆಯ ನಾಲ್ಕು ಮಾತು ಬೇಂದ್ರೆಯವರಿಂದ ಬರೆಸಿಕೊಂಡು ಬರೋಣ ಬಾ ಎಂದು ಬೇಂದ್ರೆಯವರ "ಶ್ರೀಮಾತಾ"ಕ್ಕೆ ಕರೆದೊಯ್ದರು. ನಿನ್ನೆ ಮನೆಗೆ ಹೋದಾಗ ಡಾ. ವಾಮನ ಬೇಂದ್ರೆಯವರು ಕೊಟ್ಟಂತೆಯೇ ಬೇಂದ್ರೆಯವರೂ ನಮಗೆ ಅಂದು ಮನೆಯೊಳಗೆ ಕಾಲಿಟ್ಟಾಕ್ಷಣ ಸಕ್ಕರೆಯ ಕೆಲ ಹಳಕುಗಳನ್ನು ಕೊಟ್ಟು ಅದೂ ಇದೂ ಮಾತಾಡಿ ಕನ್ನಡದಲ್ಲಿ ತಮ್ಮದೊಂದು ಸಹಿಮಾಡಿ ನಮಗೆ ಕೊಟ್ಟು ಅದರಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ, ಅದರ ಮಹತಿ ಹೀಗೆ ಏನೇನೋ ಹೇಳಿದರು. ನವ್ಯ ಸಂವೇದನೆಗಳಲ್ಲೂ ವಿಧವಿಧದ ವೇದನೆಗಳಲ್ಲೂ ಇದ್ದ ಹದಿಹರಯದ ನನಗೆ ಬೇಂದ್ರೆಯವರು ಮಾತಾಡಿದ್ದು ಅರ್ಥವೂ ಆಗಲಿಲ್ಲ, ಇಷ್ಟವೂ ಆಗಲಿಲ್ಲ.. ತುರ್ತು ಪರಿಸ್ಥಿತಿಯ ಆ ದಿನಗಳಲ್ಲಿ, ರಾಜಕೀಯ ಸಾಮಾಜಿಕ ಸಿದ್ಧಾಂತಗಳ ಕಾವಿನಲ್ಲಿದ್ದ ನಮಗೆ ಬೇಂದ್ರೆ ಮಾಸ್ತರ್ ಗಿಂತ ಧಾರವಾಡದ ಸುಪ್ರಸಿದ್ಧ ಹುಚ್ಚರಾಸ್ಪತ್ರೆಯ ಎದುರು ಮನೆ ಮಾಡಿಕೊಂಡಿದ್ದ ಯುನಿವರ್ಸಿಟಿಯಲ್ಲಿ ಇಂಗ್ಲಿಷ್ ಮಾಸ್ತರಾಗಿದ್ದ ಪ್ರೊಫೆಸರ್ ಚಂದ್ರಶೇಖರ ಪಾಟೀಲರು ಇಷ್ಟವಾದರು. ಬೇಂದ್ರೆಯವರ ಜೊತೆ ಮತ್ತೆ ಭೇಟಿಯಾಗಲಿಲ್ಲ. "ಕಾವ್ಯಶ್ರೀ" ಬರಕತ್ತಾಗಲಿಲ್ಲ.!

ಮುಂದೆ ಬೇಂದ್ರೆ ಮನಸ್ಸಿನಲ್ಲಿ ತುಂಬಿಕೊಳ್ಳುತ್ತಲೇ ಹೋದರು. ಅವರ ಕಾವ್ಯವನ್ನು ಓದಿದಷ್ಟೂ, ಅದರ ಕುರಿತು ಚಿಂತಿಸಿದಷ್ಟೂ ವಿಸ್ಮಯವಾಗತೊಡಗಿದರು. ವ್ಯಸನವಾಗತೊಡಗಿದರು. ನಾನು ಧಾರವಾಡ ಬಿಟ್ಟು ಸಂಶೋಧನಾ ವ್ಯಾಸಂಗಕ್ಕಾಗಿ ದೆಹಲಿಗೆ ಹೋದ ವರ್ಷ ೧೯೮೧ ರಲ್ಲಿ ಬೇಂದ್ರೆಯವರು ತೀರಿಹೋದ ಸುದ್ದಿಯನ್ನು ಕೇಳಿದೆ..ಮುಂದೆ ಕೆಲವರ್ಷಗಳ ನಂತರ, ೧೯೮೬ರಲ್ಲಿ ನಾನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನೆಂದು ನೇಮಕವಾದ ಎರಡು ವರ್ಷಗಳ ನಂತರ, ನನ್ನ ಎಂ.ಎ ಸಹಪಾಠಿ ಮತ್ತು ಗೆಳೆಯ ರವಿ ಬೆಳಗೆರೆ ತನ್ನ ಜೀವನ ಸಂಗ್ರಾಮದಲ್ಲಿ ಅಲ್ಲಿ ಬಿದ್ದು ಇಲ್ಲಿ ಬಿದ್ದು ಇನ್ನೆಲ್ಲೋ ತಾಕಿ ಮತ್ತೆಲ್ಲೋ ತಟ್ಟಿ ಕೊನೆಗೆ ಪತ್ರಕರ್ತನ ಅವತಾರದಲ್ಲಿ ಹುಬ್ಬಳ್ಳಿಯ "ಸಂಯುಕ್ತ ಕರ್ನಾಟಕ" ಕಚೇರಿಯಲ್ಲಿ ಸಾಪ್ತಾಹಿಕ ಪುರವಣಿಯ ಸಂಪಾದಕನಾಗಿ ಪ್ರತ್ಯಕ್ಷನಾದ.ಅವನಾಗಲೇ ಇನ್ನಿಲ್ಲದ ಅವಸರದಿಂದ ಮದುವೆಯಾಗಿ ಸಮಯ ಪೋಲು ಮಾಡದೆ ಭಾರತದ ಜನಸಂಖ್ಯೆಗೆ ತನ್ನ ಗಣನೀಯ ಕೊಡುಗೆ ಕೊಟ್ಟು ವಿರಮಿಸಿದ್ದ. ನಾನು ಅದೇ ಆಗ ನವ ವಿವಾಹಿತ.

ಅವನು ಒಂದು ಮಬ್ಬು ಇಳಿಸಂಜೆ ಧಾರವಾಡಕ್ಕೆ ಬಂದು ನಮ್ಮಲ್ಲೇ ವಸ್ತಿ ಒಗೆದು ಮರುದಿನದ ತನ್ನ ಪ್ರೊಗ್ರಾಂ ಅರುಹಿದ. "ಒಬ್ಬ ಕವಿಯಾಗಿ ಬೇಂದ್ರೆ ಎಲ್ಲರಿಗೂ ಗೊತ್ತು, ಒಬ್ಬ ವ್ಯಕ್ತಿಯಾಗಿ, ಒಬ್ಬ ಗೆಳೆಯನಾಗಿ, ತಂದೆಯಾಗಿ ಬೇಂದ್ರೆ ಹೇಗಿದ್ದರು? ಅವರ ಜೊತೆ ಒಡನಾಡಿದವರಲ್ಲಿ, ಸಂಬಂಧಿಗಳಲ್ಲಿ ಈ ಕುರಿತು ಮಾತಾಡಿ, ಅವರನ್ನು ಮಾತಾಡಿಸಿ ಒಂದು ಸ್ಟೋರಿ ಮಾಡುವದು..ಹೆಂಗಂತಿ?". "ಬರೋಬ್ಬರಿ ಅಂತೀನಿ, ನಡಿ ಹೋಗೂಣು!" ಮರುದಿನ ಬೇಂದ್ರೆ ಅವರ ದೀರ್ಘ ಕಾಲದ ಒಡನಾಡಿ ಎನ್.ಕೆ.ಕುಲಕರ್ಣಿ(ಎನ್ಕೆ) ಯವರ ಮನೆಗೆ ಹೋದೆವು. ಯಮ್ಮಿಕೇರಿಯಿಂದ ಸ್ವಲ್ಪ ಮುಂದೆ ಬಾಗಲಕೋಟಿ ಪೆಟ್ರೊಲ್ ಪಂಪ್ ಗೆ ಹೋಗುವ ಇಳಿಜಾರು ರಸ್ತೆಯ ಎಡಕ್ಕೆ ಒಂದು ಮನೆಯಲ್ಲಿ ಎನ್ಕೆ ಇದ್ದರು. "ಸರ್, ಒಬ್ಬ ಕವಿಯಾಗಿ ಬೇಂದ್ರೆ ಏನು ಎಂದು ಎಲ್ಲರಿಗೂ ಗೊತ್ತು. ಒಬ್ಬ ವ್ಯಕ್ತಿಯಾಗಿ, ಗೆಳೆಯನಾಗಿ,...ಅವರು ಹೇಗಿದ್ದ್ದರು? ತಾವು ಅವರ ಜೊತೆ ಬಹುಕಾಲ ಒಡನಾಡಿದವರು.." ಇತ್ಯಾದಿ ರವಿ ಪ್ರಸ್ತಾಪಿಸಿದ. ಕುಟುಂಬದ ಪ್ರೀತಿಪಾತ್ರ ಜೀವಗಳ ಮರಣದಂಥ ಬದುಕಿನ ಅತ್ಯಂತ ದುರ್ಭರ ಅನುಭವಗಳನ್ನೂ ಕಾವ್ಯಕ್ಕೆ ಮೊರೆಹೋಗಿಯೇ ಬೇಂದ್ರೆ ಜೀರ್ಣಿಸಿಕೊಂಡಿದ್ದನ್ನು ಹಲವು ಉದಾಹರಣೆಗಳ ಸಮೇತ ಎನ್ಕೆ ವಿವರಿಸುವಾಗ ನಮ್ಮ ಮುಖ ಮ್ಲಾನವಾಗಿತ್ತು.ಬೇಂದ್ರೆ ಬೇರೆಯದೇ ಆದ ಬೆಳಕುಗಳಲ್ಲಿ ಗೋಚರಿಸತೊಡಗಿದ್ದರು.ವಾತಾವರಣಕ್ಕೆ ಬೇರೆ ರೂಪ ಕೊಡಲು ಬೆಳಗೆರೆ ಸಾಹೇಬರು "ಬೇಂದ್ರೆಯವರಿಗೆ ಚಟಗಳು ಏನಾದರು ಇದ್ದೂ ಏನ್ರಿ.." ಎಂದು ಕೇಳಿದರು. "ಚಟಗೋಳು?".. ಎಂದು ಎನ್ಕೆಯವರು ಸ್ವಲ್ಪ ಯೋಚಿಸಿದರು. ನಂತರ "ಪೆಪ್ಪರಮೆಂಟ್ ತಿಂತಿದ್ರ್ ನೋಡ್ರಿ.ಈ ಲಿಂಬಿ ಹುಳಿ ಅಂತಾರಲ್ಲ, ಅಂಥಾ ಪೆಪ್ಪರ್ಮೆಂಟ್..ಇಷ್ಟಿಷ್ಟು!"ಎಂದು ತಮ್ಮ ಅಂಗೈ ಅಗಲಿಸಿ ತೋರಿಸಿದ ಎನ್ಕೆಯವರು " ಕಿಸೇದಾಗ ಸತತ ಪೆಪ್ಪರ್ ಮೆಂಟ್ ಇರೋವ..ಹಾದೀಗುಂಟ ಸಣ್ಣಹುಡ್ರಿಗೂ ಕೊಡ್ತಿದ್ರು." ಎಂದು ನಮ್ಮ ಮುಖ ನೋಡಿ ಸುಮ್ಮನಾದರು. ಪೆಪ್ಪರ್ ಮೆಂಟ್ ತಿನ್ನುವದು ಚಟದ ವ್ಯಾಖ್ಯಾನಕ್ಕೆ ಒಳಪಟ್ಟ ಕುರಿತು ನಾನು- ಬೆಳಗೆರೆ ಮುಖ ಮುಖ ನೋಡಿಕೊಂಡು ನಕ್ಕೆವು..ನಂತರ ನಮ್ಮ ಸವಾರಿ ಸೀದಾ ಸಾಧನಕೇರಿಯ ಎರಡನೆ ಕ್ರಾಸಿನ ಶಂ. ಬಾ. ಜೋಶಿಯವರ ಮನೆಯತ್ತ ಹೊರಟಿತು.ಧಾರವಾಡದ ಗೆಳೆಯರ ಗುಂಪಿನ ಚರಿತ್ರೆ ಬಲ್ಲವರಿಗೆ ಜೋಶಿ-ಬೇಂದ್ರೆ ಸಂಬಂಧದ ಕುರಿತು ಹೇಳುವ ಅಗತ್ಯವಿಲ್ಲ. ಅವರಿಬ್ಬರಿಗೂ ಒಂದೂರು ಆಗಿಬರುತ್ತಿರಲಿಲ್ಲ. ಈ ಪ್ರಶ್ನೆಯನ್ನಿಟ್ಟುಕೊಂಡು ಜೋಶಿಯವರನ್ನು ಮಾತಿಗೆಳೆಯಲು ಹೋಗಿದ್ದೆವಲ್ಲ ನಾವು, ನಮ್ಮ ಭಂಡ ಧೈರ್ಯದ ಬಗ್ಗೆ ಈಗ ಆಶ್ಚರ್ಯವೆನಿಸುತ್ತದೆ. ಮನೆಯ ಅಂಗಳದಲ್ಲಿ ಪೂರ್ವಾಹ್ನ ಜೋಶಿಯವರು ಮನೆಯೊಳಗಿಂದ ಬಂದು ತಮ್ಮ ಮಗ ಇರಿಸಿ ಹೋಗಿದ್ದ ಖುರ್ಚಿಯ ಮೇಲೆ ಆಸೀನರಾದರು. "ಸರ್, ಒಬ್ಬ ಕವಿಯಾಗಿ ಬೇಂದ್ರೆ ಏನೆಂದು... ... " ರವಿ ಮತ್ತು ನಾನು ಒಬ್ಬರು ಹೇಳಿದ್ದನ್ನೇ ಮತ್ತೊಬ್ಬರು ಸಾವರಿಸಿ ಸಾವರಿಸಿ ಹೇಳುತ್ತಿರುವಾಗಲೇ ಜೋಶಿಯವರ ಭಂಗಿ ಗಡುಸಾಗಿ ಮುಖದ ಸ್ನಾಯುಗಳು ಬಿಗಿಗೊಂಡವು. "ಈ ಸಲ್ಲದ ಕೆಲಸಕ್ಕ ನನ್ನ ಯಾಕ ತೊಡಗಿಸ್ತೀರಿ?" ಎಂದೇ ಆರಂಭಿಸಿದ ಅವರ ಮಾತುಗಳನ್ನೆಲ್ಲ ಇಲ್ಲಿ ಹೇಳುವದರಿಂದ ಯಾವ ಉಪಚಾರವೂ ಆಗುವದಿಲ್ಲ. ಅಂತಿಮವಾಗಿ ಜೋಶಿಯವರು ಒಂದು ಮಾತು ಹೇಳಿದರು: "ಅಂವಾ ನೀ ನನ್ನ ಅನುಯಾಯಿ ಆಗು ಅಂದಾ..ಅದು ನನಗ ಸಾಧ್ಯ ಇದ್ದಿಲ್ಲಾ. ಇಲ್ಲಾ ನಾ ನಿನ್ನ ಗೆಳೆಯಾ ಆಗಿ ಇರತೇನಿ ಅಂದೆ..ಮುಗೀತು."

ನಿನ್ನೆ ಹುಬ್ಬಳ್ಳಿಯ ಗೋಕುಲ್ ಗಾರ್ಡನ್ಸ್ ನಲ್ಲಿ ಈ ಟಿವಿ ಕನ್ನಡ ಚಾನಲ್ ಪ್ರಾಯೋಜಿಸಿದ, ತಾನು ನಿರೂಪಿಸಲಿದ್ದ "ಎಂದೂ ಮರೆಯದ ಹಾಡು;ಅಂಬಿಕಾತನಯದತ್ತರ ಹಾಡು ಪಾಡು"ಎಂಬ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆ ಮಧ್ಯಾಹ್ನ ಫೋನ್ ಮಾಡಿ "ಬೇಂದ್ರೆಯವರ ಕಾವ್ಯದ ಬಗ್ಗೆ ಸಾರವತ್ತಾಗಿ ಒಂದೆರಡು ವಾಕ್ಯಗಳಲ್ಲಿ ಹೇಳುವದಾದರೆ ನೀನು ಏನು ಹೇಳುತ್ತೀ?" ಎಂದ.ಈ ಸರಣಿಯ ಕಾರ್ಯಕ್ರಮಗಳನ್ನು ನಿರೂಪಿಸುವ ಮುನ್ನ ಅವನು ಗಂಭೀರವಾಗಿ ಹೋಮ್-ವರ್ಕ್ ಮಾಡಿಕೊಳ್ಳುತ್ತಾನೆಂಬುದು ಸಾಮಾನ್ಯವಾಗಿ ಗೊತ್ತು. ಈ ಪ್ರಶ್ನೆಗೆ ಉತ್ತರಿಸಲು ನಾನು ಬಹಳ ತಲೆ ಕೆಡಿಸಿಕೊಳ್ಳಲಿಲ್ಲ.ತಮ್ಮನ್ನೂ ಒಳಗೊಂಡಂತೆ ನರಮನುಷ್ಯ,ಪಶು-ಪ್ರಾಣಿ,ಕ್ರಿಮಿ-ಕೀಟ,ಹಕ್ಕಿ-ಪಕ್ಷಿ,ತರು-ಲತೆ,ಗಿಡ-ಮರ,ಗಾಳಿ ಬೆಳಕು ಬಿಸಿಲು ಮಳೆ ಕಾಮ ಪ್ರೇಮ ಋತು ಜನನ ಮರಣ ಸರಸ ವಿರಸ ಸಂಸಾರ ವಿರಹ ವೈರಾಗ್ಯ ವಿನೋದ ವ್ಯಾಮೋಹ ಎಲ್ಲವೂ ಭಾಗವಹಿಸುವ ಜೀವನ ನಾಟಕದ ಒಟ್ಟು ಸಾರವನ್ನು ಬಹಳ ಆಳದ ನೆಲೆಯಲ್ಲಿ ಗ್ರಹಿಸುವ, ಅದೇ ಕಾಲಕ್ಕೆ ಅದು ಶುಷ್ಕ ತಾತ್ವಿಕತೆಯಾಗದೇ ಕಾವ್ಯವಾಗಿಯೇ ಅನಾವರಣಗೊಳ್ಳುವ ಸಿದ್ಧಿಯನ್ನು ಸಾಧಿಸಿದ ಒಂದು ಅತೀ ಸಂಕೀರ್ಣವೂ ವಿಸ್ತೃತವೂ ಆದ ಕ್ಯಾನವಾಸ್ ಬೇಂದ್ರೆ ಕಾವ್ಯದ್ದು. ನಾನದನ್ನು ಅರ್ಥೈಸಿಯೇ ಸಿದ್ಧ ಎಂದು ಹೊರಟರೆ ಅವರ ಕವಿತೆಯ ಓದು ಒಂದು ಅರ್ಥಪೂರ್ಣ ಬೌದ್ಧಿಕ ಕಸರತ್ತು ಆಗಬಲ್ಲದು. ಅಂಥ ಹಟಗಳೇನೂ ಇಲ್ಲದೇ ಓದಿದರೆ ಅದು ಒಂದು ಸುಂದರ ಅನುಭೂತಿ. ನಾನು ಸುಮ್ಮನೆ ಬೇಂದ್ರೆ ಕಾವ್ಯವನ್ನು ಓದಿ ಸುಖಿಸುವವ. ಬೇಂದ್ರೆ ಸೃಷ್ಟಿಸುವ ರೂಪಕಗಳ ಶಕ್ತಿಯನ್ನು ನಿಬ್ಬೆರಗಾಗಿ ಆನಂದಿಸುವವ. ಅವರ ಕಾವ್ಯದ ಒಂದು ಮುಖ್ಯ ಲಕ್ಷಣವಾಗಿರುವ ಭಾಷಾಬಳಕೆಯ ಒಂದು ನಿಶ್ಚಿತ ರೀತಿಯನ್ನು ಬರಿದೇ ಜಾನಪದವೆಂದರೆ ಅದರ ಅರ್ಥ ಎಷ್ಟು ಸಂಕುಚಿತಗೊಳ್ಳುತ್ತದೆಂಬುದರ ಬಗ್ಗೆ ಕಿ.ರಂ.ಇತ್ತೀಚೆ ಪ್ರಕಟವಾದ "ಮತ್ತೆ ಮತ್ತೆ ಬೇಂದ್ರೆ" ಎಂಬ ಪುಸ್ತಕದ ಒಂದು ಉಪನ್ಯಾಸದಲ್ಲಿ ಪ್ರಸ್ತಾಪಿಸಿದ್ದಾರೆ.
"ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?" ಎಂಬಲ್ಲಾಗಲಿ,ಅದಕ್ಕಿಂತ
"ಎಳ್ಳ ಅಮಾಸಿಗೆ ಎಳ್ಳಷ್ಟು, ಅವರೆಯ
ಕಾಳಷ್ಟು ಬೆಳೆದಿತ್ತು ಅವರಾತ್ರಿಗೆ
ಬಿಸಿಲಲ್ಲಿ,ಬೇಯಿಸುವ ಬೆಂಕಿಯು!ಬೇಗೆಯು
ಶಿವಶಿವ ಎನಿಸಿತ್ತು ಶಿವರಾತ್ರಿಗೆ" ಎಂಬಲ್ಲಾಗಲಿ ಇರುವದು, ಇನ್ನುಳಿದಂತೆ ವಿಶ್ವಾತ್ಮಕವಾಗಿರುವ ವಿಷಯ-ವಿದ್ಯಮಾನಗಳನ್ನು. ಹಳ್ಳಿ,ಪಟ್ಟಣ ನಗರಗಳನ್ನೊಳಗೊಂಡು, ಜಾತಿ-ಧರ್ಮಗಳಿಗೆ ಸೀಮಿತಗೊಂಡು ನಿಲ್ಲದೆ, ಒಂದು ನೇಟಿವಿಟಿಯು ವಿವೇಕದಿಂದ, ಜಾಣತನದಿಂದ ಗ್ರಹಿಸಲು ಬೆಳೆಸಿಕೊಂಡು ಬಂದಿರುವ ಪರಂಪರೆ. ಅಲ್ಲಿ ಹಬ್ಬ-ಹುಣ್ಣಿಮೆ ಆಚರಣೆಗಳ ಸೊಗಡು ಸಂಭ್ರಮವಿದೆ. ಮುಗ್ಧತೆ ಇದೆ,ವಿಲಾಸವಿದೆ, ಜೀವನಪ್ರೇಮವಿದೆ,ದಾರ್ಶನಿಕತೆ ಇದೆ..ಲಂಕೇಶ್ ಅವರು, "ಕಂಡದ್ದು ಕಂಡ ಹಾಗೆ" ಎಂಬ ತಮ್ಮ ಬರಹಗಳ ಸಂಕಲನದಲ್ಲಿ ಎಂದು ಕಾಣುತ್ತದೆ, ಬೆಂಗಳೂರಿನ ವಿಚಾರ ಸಂಕಿರಣವೊಂದರಲ್ಲಿ ಬೇಂದ್ರೆಯವರು ವೇದಿಕೆ ಏರಿದ,ತಮ್ಮ ಕೊಡೆ, ಬ್ಯಾಗುಗಳನ್ನು ಇಡಲು ಅತ್ತಿತ್ತ ಸ್ವಲ್ಪಗಲಿಬಿಲಿಯಿಂದ ನೋಡಿದ, ಅಲ್ಲಿಯ ಚರ್ಚೆಯ ಯಾವುದೋ ಅಂಶಕ್ಕೆ ಸಂಬಂಧಿಸಿ ತಕರಾರೆತ್ತಿದ, "ನಾಟಕಾರೀ, ಎಲ್ಲಾ ಅಭಿಪ್ರಾಯಭೇದದ ನಾಟಕಾ" ಎಂದ ಪ್ರಸಂಗವೊಂದನ್ನು ಚಿತ್ರಿಸುತ್ತ "ಬೇಂದ್ರೆ ಸಿಟ್ಟಿನಿಂದ ಚೀರಾಡುತ್ತಿದ್ದ ಹಳ್ಳಿಗನಂತೆ ಕಂಡರು" ಎಂದು ಬರೆದಿದ್ದು ನೆನಪಾಗುತ್ತಿದೆ. ಹಳ್ಳಿಗರೊಂದಿಗೆ ಹಳ್ಳಿಗರಂತೆ ಇರುತ್ತಿದ್ದ ಬೆಂದ್ರೆಯವರಿಗೆ ಅದೇ ಕಾರಣಕ್ಕೆ ಕನ್ನಡ ಕಾವ್ಯಕ್ಕೆ ಒಂದು ಹೊಸದಾದ ಇಡಿಯಮ್ ಸೃಷ್ಟಿಸುವದು ಸಾಧ್ಯವಾಯಿತೆನ್ನಿಸುತ್ತದೆ. ನಿರಂತರ, ಅನವರತ ಎನ್ನುವ ಶಬ್ದಗಳು ಒದಗಿಸಲಾರದ ಚೆಲುವಿಕೆಯನ್ನು ಬೇಂದ್ರೆ ಬಳಸುವ "ಅಸರಂತ" ಎಂಬ ಶಬ್ದ ಸೂಸುತ್ತದೆ. ಭಾರತೀಯ ಒಟ್ಟು ಕಾವ್ಯ ಪರಂಪರೆಯ ಪ್ರಧಾನ ಧಾರೆಯೊಂದಿಗೆ ಸ್ಥಳೀಯ, ದೇಸಿ ಚೆಲುವನ್ನು ಬೇಂದ್ರೆಯವರಷ್ಟು ಹದವಾಗಿ ಮಿಳಿತಗೊಳಿಸಿದವರು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.

ಈ ಬರಹವನ್ನು ಬರೆದು ಮುಗಿಸುವ ಹೊತ್ತಿಗೆ ಇದು ಇಂದು, ಅಂದರೆ ಜನವರಿ ಮೂವತ್ತೊಂದು., ಬೇಂದ್ರೆ ಜನಿಸಿದ ದಿನ. ಬೇಂದ್ರೆ ಕಾವ್ಯ ಒಂದು ಕಣಜ. ಮೊಗೆದಷ್ಟೂ ಒಸರುವ ಒರತೆ. ಜಗತ್ತಿನ ಶ್ರೇಷ್ಠ ಕವಿಗಳ ಸಾಲಿನಲ್ಲಿ ನಿಲ್ಲಬಲ್ಲ ಪ್ರತಿಭೆಯ ಅವರು ಕನ್ನಡ ಕಾವ್ಯದ ಬಹುಮುಖ್ಯ ಧ್ವನಿ.ಹಲವು ವಿಮರ್ಶಕರ ಪ್ರಯತ್ನದ ಹೊರತಾಗಿಯೂ ಅವರ "ಜೋಗಿ" ಕವಿತೆ ಹೇಗೆ ಇಂದಿಗೂ ತನ್ನ ರಹಸ್ಯವನ್ನು, ವಿವಿಧ ಭಾವ ಅರ್ಥಗಳ ತನ್ನ ಸಾಧ್ಯತೆಯನ್ನು ಉಳಿಸಿಕೊಂಡೇ ಇದೆ ಎಂಬುದು ವಿಸ್ಮಯ. ಅರ್ಥವಾಗಲೇಬೇಕೆಂಬ ಹಟ ಬಿಟ್ಟುಕೊಟ್ಟು ಓದುತ್ತಿದ್ದರೆ ಅವರ ಕವಿತೆಗಳು ಯಾವುದೋ ಅಸ್ಪಷ್ಟ ಹೊಳಹುಗಳನ್ನು ಮನದ ತೆರೆಯ ಮೇಲೆ ಮೂಡಿಸುತ್ತವೆ, ಎಂಥದೋ ಭಾವವನ್ನು ಸ್ಫುರಿಸುತ್ತವೆ. ನಮ್ಮ ಲೋಕದಲ್ಲಿ ಅವುಗಳಿಗೆ ನಮ್ಮದೇ ಅರ್ಥ ನಮ್ಮದೇ ಭಾವ.., ನಮ್ಮ ಅನುಭವಗಳಿಗೆ ತಕ್ಕಂತೆ ನಮ್ಮ ಅನುಭಾವಗಳಿಗೆ ಸಿಕ್ಕಷ್ಟು. ಭುವನದ ಭಾಗ್ಯ ಕಂಡು ಕಂಡರಿಸಿದ ಕಾಣ್ಕೆಯಲ್ಲಿ ನಮಗೆ ಕಂಡಷ್ಟು ನಮ್ಮ ಭಾಗ್ಯ.