Wednesday, April 18, 2018

H.S.Shivaprakash ಅವರ TO ASIFA ಎಂಬ ಇಂಗ್ಲೀಷ್ ಕವಿತೆಯ ಅನುವಾದ:
ಅಸೀಫಾಳಿಗೆ
ಕಾದಲು ದಂಡಿಗೆ ಹೋದ ನಾಡಿನ ಕಲಿಗಳು
ಸಮುದ್ರಕ್ಕಿಳಿದ ತೀರಪ್ರದೇಶದ ಸಾಹಸಿ ನಾವಿಕರು
ಮರಳಿ ಮನೆಗೆ ಬಂದಾರು..
ಹೊಲಗದ್ದೆ ಕಾಡುಮೇಡುಗಳಲ್ಲಿ ಮೇಯಲು ಹೋದ
ದನಕರುಗಳು, ಕುರಿಮಂದೆ, ಕುದುರೆಗಳು
ಅವೂ ಮರಳಿ ಬಂದಾವು
ಆದರೆ ಅಲ್ಲೇ ಪಕ್ಕದ ಕಾಡಿನಲ್ಲಿ ಕುದುರೆಗಳ ಮೇಯಿಸಲು ಕರದೊಯ್ದ ಪುಟ್ಟ ಬಾಲೆ
ಕುದುರೆಗಳು ಮರಳಿದ ಮೇಲೂ
ಮನೆಗೆ ಮರಳಲಾರಳು
ಶಾಲೆಗೆ ಹೋದ ಅಥವ ತಮ್ಮ ನಾಯಿಗಳೊಂದಿಗೆ ವಾಕಿಂಗ್ ಗೆ ಹೋದ
ನಮ್ಮ ಹೆಂಗೂಸುಗಳು
ನಾಯಿಗಳು ಮರಳಿದ ಮೇಲೆ
ತಾವೂ ಮನೆಗೆ ಮರಳಿಯಾವೆ?
ಕಣ್ಣುಬಿಟ್ಟು ನೋಡು ಭೂಮಿತಾಯಿ
ಬೇಟೆಗೆ ಹೊಂಚುಹಾಕಿ ಹೊಸ
ಕಿರಾತಕ ಸುಳಿಯುತ್ತಿರುವನು
ಅಡವಿಯಲ್ಲಿ, ನಗರದಲ್ಲಿ
ಮೃದುಮಧುರವಾದ ಎಲ್ಲವನ್ನೂ ಹುರಿದು ಮುಕ್ಕಲು
ಕಾಲಡಿ ಹೊಸಕಲು
ಎಚ್ಚರಾಗು
ನಮ್ಮ ಹೃದಯಗಳಲ್ಲೋ ಹುದುಗಿರುವ ಭೂಮಿತಾಯಿ
ನಿನ್ನ ಮರುಜನ್ಮಕಿದು ಸಕಾಲ...
Tuesday, March 8, 2016

ನೀನಿಲ್ಲದೇ ನಾನಿಲ್ಲನಿನ್ನ ಹೊರತು ನಾನೆಲ್ಲಿದ್ದೆ
ಪುರಾಣಪುರುಷನೇನಲ್ಲ, ಯೋನಿಜ ನಾನು
ನಿನಗೆ ಬಗೆದ ಅನ್ಯಾಯಕ್ಕೆಪ್ರಾಯಶ್ಚಿತ್ತ
ಕ್ಷಮೆ ಎಂಬೆರಡು ಅಕ್ಷರಗಳೆಂದಾದರೆ
ಆ ಅಕ್ಷರಗಳು ಕೂಡಿ ಸಂಭವಿಸಿದ ಶಬ್ದ
ನಾಚಿಕೆಯಿಂದ ಸಾಯಲಿ

ಧನ್ಯವಾದ, ನನ್ನೊಂದಿಗೆ ನೀನಿರುವ ಮೋದಕ್ಕೆ
ನೀನಿಲ್ಲದ ಜಗತ್ತಿನಲ್ಲಿ ನಾನು ಬದುಕುವ
ಬೇಸರ ಕಲ್ಪನೆಯಲ್ಲೇ ಅಂಜಿಸುತ್ತದೆ.
ಪ್ರೇಮಿಸಿದ್ದೇನೆ
ಕಾಮಿಸಿದ್ದೇನೆ
ಜಗಳ ಕಾದಿದ್ದೇನೆ
ನನಗೇ ಅಸಹ್ಯವಾಗುವ ಹಾಗೆ ವ್ಯವಹರಿಸಿದ್ದೇನೆ
ನೊಂದಿದ್ದೇನೆ
ನೋಯಿಸಿದ್ದೇನೆ

ಎಲ್ಲ ಅಳೆದೂ ಸುರಿದೂ ಕೊನೆಗೆ ಹೆಣ್ಣೇ
ತಾಯಿಯಾಗಿ, ಅಕ್ಕನಾಗಿ ತಂಗಿಯಾಗಿ ಹೆಂಡತಿಯಾಗಿ,
ಗೆಳತಿಯಾಗಿ, ಮಗಳಾಗಿ, ದೇವತೆಯಾಗಿ ... ..., ನನ್ನ ತುಂಬಿಕೊಂಡಿರುವ
ನಿನ್ನ ಹೊರತು ನಾನೆಲ್ಲಿ...

Thursday, March 12, 2015

ಸಾವು ಬದುಕಿನ ಆಟಆಮೇಲೆ
ನನ್ನ ಬದುಕು ಮತ್ತು ಸಾವು
ಎದುರಾ ಎದುರು ಸ್ನೇಹಿತರಂತೆ ಕೂತು
ಪಗಡೆ ಆಡೋಣ ಅಂತ ಮಾತಾಡಿಕೊಂಡವು

ನನಗೆ ತುಂಬ ಭಯವಾಯಿತು

ದಾಳ ಉರುಳುತ್ತಿತ್ತು
ನಾನು ಚಲಿಸುತ್ತಿದ್ದೆ ಅಥವ ನಿಲ್ಲುತ್ತಿದ್ದೆ, ಒಮ್ಮೊಮ್ಮೆ ತುಂಬ ಹೊತ್ತು, ಚಲನೆಯನ್ನೇ ಮರೆತಂತೆ.
ಪಾತ್ರವೂ ನಾನೇ ಪ್ರೇಕ್ಷಕನೂ ನಾನೇ
ಕೊನೆಕೊನೆಗೆ ಆ ನೀಚ ಆಟ
ಮುಗಿದರೆ ಸಾಕು ಎಂಬಂತಾಯ್ತು

ಆ ಮನೆಯಿಂದ ಈ ಮನೆಗೆ ಸಾಗಿ
ಮೇಲೇರಿ ಕೆಳಗಿಳಿದು ಕೆಳಗಿಂದ ಮೇಲೇರುವಾಗ ಒಂದೆಡೆ
ಬದುಕಿನ ಮುಖ ಕಳೆಗುಂದಿತ್ತು ಸಾವಿನ ಮುಖದಲೊಂದು ಹುಬ್ಬುಮೇಲೇರಿತ್ತು
ಅದು ನಗುತ್ತಿತ್ತು
ನಗು ಅಷ್ಟು ಕೆಟ್ಟದಾಗಿರುತ್ತದೆಂದು ಗೊತ್ತಿರಲಿಲ್ಲ

ದುರುಳ ಸ್ವಪ್ನ ಮುಗಿದು ಕಣ್ಣು ಬಿಟ್ಟಾಗ
ಬದುಕು ಬರಸೆಳೆದು ನನ್ನನಪ್ಪಿತು
ನಾನದರ ಮುಖಕೆ ಮುತ್ತಿಕ್ಕಿದೆ

Tuesday, December 24, 2013

ಸರಿಯಾಗಿ ನೆನಪಿಲ್ಲ

(ಕವಿ ಗುಲ್ಜಾರ್ ಅವರ "ಠೀಕ್ ಸೇ ಯಾದ್ ನಂಹಿ" ಎಂಬ ಕವಿತೆಯ ಅನುವಾದ)


ಸರಿಯಾಗಿ ನೆನಪಿಲ್ಲ
ಫ್ರಾನ್ಸ್ ನ ’ಬೋರ್ದೂ’ ಬಳಿ ಒಂದೆಡೆ
ನಿಂತಿದ್ದೆವು ಕೆಲ ಗಳಿಗೆ
ಸಣ್ಣ ಜನವಸತಿ, ಅಲ್ಲಿ ಮರಮುಟ್ಟುಗಳದೊಂದು  ಇಗರ್ಜಿ
ಎದುರಿಗೆ ಅಲ್ಟರ್ ಬೆಂಚ್ ಇತ್ತು
ಬಹುಶ: ಒ೦ದೇ

ಕುರಿಮರಿಯನ್ನೆತ್ತಿಕೊಂಡ ಏಸುವಿನ ಕಟ್ಟಿಗೆಯದೊಂದು ವಿಗ್ರಹ
ಜನ ಹಚ್ಚಿದ್ದ ಮೋಂಬತ್ತಿಗಳ ಹೊಗೆಯಿಂದ
ಕಪ್ಪುಗಟ್ಟಿದ್ದವು ಪಾದಗಳು
ಕರಗಿ ಕೆಳಗಿಳಿದ ಮೇಣದ ನಡುವೆ ಕೊಂಚ ಮುಳುಗಿದಂತಿದ್ದವು

ದೇಹದ ಮೇಲೆ ಮೊಳೆಗಳು
ಭುಜದ ಮೇಲೆ ಒಂದು - ಜೋಡಣೆ ಸೀಳು ಬಿಡುತ್ತಿದ್ದ ಜಾಗದಲ್ಲಿತ್ತು
ಕುರಿಮರಿಯ ಕಾಲೊಳಗೆ ಹೊಡೆದ ಇನ್ನೊಂದು ಬದಿಯಿಂದ ಉಡುಪಿನಾಚೆ ಹೊರಚಾಚಿತ್ತು
ಮತ್ತೊಂದು ಮೊಳೆ ಮೊಳಕೈಯ್ಯ ತುಸು ಕೆಳಗೆ
ಮೂರ್ತಿ ಬಿದ್ದಾಗ ಅಥವ ಸ್ವಚ್ಛಗೊಳಿಸುತ್ತಿದ್ದಾಗ
ಕಟ್ಟಿಗೆ ಸೀಳಿದ್ದ ಜಾಗದಲ್ಲಿ...

Sunday, February 10, 2013

ಧಾರವಾಡ ಸಾಹಿತ್ಯ ಸಂಭ್ರಮವೆಂಬ ದಿಗ್ಭ್ರಮೆ

                                  

ಇದೇ (ಜನವರಿ, ೨೦೧೩) ೨೫,೨೬,೨೭ರಂದು  ಧಾರವಾಡ ಸಾಹಿತ್ಯ ಸಂಭ್ರಮ ಎಂಬ ನೋಂದಾಯಿತ ಸಂಸ್ಥೆಯೊಂದು ಆಯೋಜಿಸಿರುವ ಮೂರು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ವಿಶೇಷ ಆಮಂತ್ರಿತನಾಗಿ ನಾನು ಪಾಲ್ಗೊಳ್ಳಬೇಕೆಂದು ಕೋರಿ ಶ್ರೀ ಗಿರಡ್ಡಿ ಗೋವಿಂದರಾಜ ಅವರು ಕಳಿಸಿದ ಮುದ್ರಿತ ಓಲೆ ತಲುಪಿದಾಗ ಕಳೆದ ಮೂರು ದಶಕಗಳಿಂದ ಧಾರವಾಡದ ಸಾಹಿತ್ಯಿಕ ಸಾಂಸ್ಕೃತಿಕ ಲೋಕವನ್ನು ಬಲ್ಲ ನನಗೆ ಸ್ವಲ್ಪ ವಿಚಿತ್ರವೆನಿಸಿತು. ಅವರ ಆತ್ಮೀಯ ಆಹ್ವಾನಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಲೇ ಸದರಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಾನು ಇಚ್ಛಿಸುವದಿಲ್ಲವೆಂದೂ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ ಪಡೆದಿರುವ ಈ ಮತ್ತು ಇಂಥ ಯಾವುದೇ ಸಾಹಿತ್ಯಿಕ ಸಾಂಸ್ಕೃತಿಕ ಸಮಾವೇಶಗಳು ಸಾರ್ವಜನಿಕ ಡೊಮೈನ್ ನಲ್ಲಿ ಇರುವಂಥವಾದ್ದರಿಂದ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ್ದರ ಬಗ್ಗೆ ನನಗೆ ವಿಷಾದವೇಕಿಲ್ಲ ಎಂಬುದನ್ನು ಸಾರ್ವಜನಿಕವಾಗಿಯೇ ಹೇಳಬಹುದೆನ್ನಿಸುತ್ತದೆ ಎಂದೂ ಭಾವಿಸಿ ನಾನು ಗಿರಡ್ಡಿಯವರಿಗೆ ಒಂದು ಬಹಿರಂಗ ಪತ್ರವನ್ನೂ ಬರೆದೆ.

ಗಿರಡ್ಡಿಯವರು ತಮ್ಮ ಪತ್ರದಲ್ಲಿ ಸರಿಯಾಗಿಯೇ ಹೇಳಿರುವಂತೆ ಧಾರವಾಡ ನಗರ ಅನೇಕ ಜನ ಸಾಹಿತಿ-ಕಲಾವಿದರ ನೆಲೆ, ಇಂದಿಗೂ ತನ್ನ ಹಿರಿಯ ಪರಂಪರೆಯನ್ನು ಕ್ರಿಯಾಶೀಲವಾಗಿ ಮುಂದುವರಿಸಿಕೊಂಡು ಬಂದಿರುವ ಊರು. ಆಯ್ದ ಕೆಲವರನ್ನು ಒಳಗೊಂಡು ಕೆಲವರನ್ನು ಹೊರಗಿಟ್ಟು ಅದು ಇಡೀ ಧಾರವಾಡದ ಪ್ರಾತಿನಿಧಿಕ ಸಂಸ್ಥೆ ಅಥವಾ ಕಾರ್ಯಕ್ರಮ ಎಂಬಂತಿದ್ದ ಈ ಪ್ರಯತ್ನ ಸ್ವಾಭಾವಿಕವಾಗಿಯೇ ಹಲವು ಪ್ರಶ್ನೆಗಳಿಗೆ ಜನ್ಮವಿತ್ತಿದೆ. ಧಾರವಾಡದ ವಿಶಿಷ್ಟವೂ ಶ್ರೀಮಂತವೂ ಆದ ಪರಂಪರೆಯ ವಾರಸುದಾರಿಕೆ ಯಾವೊಬ್ಬ ವ್ಯಕ್ತಿ, ಮನೆತನ,ಗುಂಪು, ಜಾತಿ,ಪಂಥಕ್ಕೆ ಸೇರಿದ್ದಲ್ಲ. ವಾಸ್ತವವಾಗಿ ಅದು ಬರಿದೇ ಧಾರವಾಡಕ್ಕೆ ಸೀಮಿತವಾದದ್ದೂ ಅಲ್ಲ. ಧಾರವಾಡ ನೆಲದಿಂದ ಹೊಮ್ಮಿದ  ಸಾಹಿತ್ಯ,ಸಂಗೀತ,ವಿಮರ್ಶೆ,ಚಿತ್ರಕಲೆ,ರಂಗಪ್ರಯೋಗಗಳೇ ಮೊದಲಾದ ಸಮೃದ್ಧಿಯನ್ನು,ಅದರ ಜೊತೆಜೊತೆಗೇ ಇಲ್ಲಿಯ ಸ್ನೇಹ,ಪ್ರೀತಿ,ಸಂಘರ್ಷ, ಪ್ರತಿಭಟನೆ, ಹೊಸತನದ ಹುಡುಕಾಟಗಳ ವಿಶಿಷ್ಟ ಪರಂಪರೆಯ ಕುರಿತು ಹೆಮ್ಮೆ-ಮೆಚ್ಚುಗೆಗಳನ್ನು ಇಟ್ಟುಕೊಂಡವರು ಧಾರವಾಡದ ಹೊರಗೂ ಇದ್ದಾರೆ. ಜೈಪುರದ ಸಾಹಿತ್ಯಹಬ್ಬದಿಂದ ಪ್ರೇರಿತರಾಗಿ ತಾವು "ಇನ್ನೊಂದು ಹೊಸ ಪ್ರಯೋಗ" ವೆಂದು ವ್ಯಾಖ್ಯಾನಿಸಿಕೊಂಡಿರುವ ಸಾಹಿತ್ಯ ಸಂಭ್ರಮದ ಒಟ್ಟಾರೆ ಸ್ವರೂಪ, ಧಾಟಿ ಧೋರಣೆ ಮತ್ತು ವಿಶೇಷವಾಗಿ ಅದರ ನಿಯಮ ನಿಬಂಧನೆಗಳು ಅಂಥ ಹಲವಾರು ಜನರನ್ನು ನಿರಾಶೆಗೊಳಿಸಿವೆ. ಅಂತರ್ಜಾಲ ತಾಣಗಳಲ್ಲಿ, ಬ್ಲಾಗ್ ಗಳಲ್ಲಿ, ದಿನಪತ್ರಿಕೆಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜೋಗಿ, ಜಿ.ಎನ್.ಮೋಹನ್, ಕೆ.ವಿ.ತಿರುಮಲೇಶ್, ರಹಮತ್ ತರೀಕೆರೆ, ಅಶೋಕವರ್ಧನ್, ಹೆಚ್.ಎಸ್.ರಾಘವೇಂದ್ರರಾವ್, ಕುಂ.ವೀರಭದ್ರಪ್ಪ, ಎಚ್.ಎಸ್.ಅನುಪಮಾ,ಬರಗೂರು ರಾಮಚಂದ್ರಪ್ಪ ಮುಂತಾದವರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು ಆ ನಿರಾಶೆಯನ್ನು ಶಕ್ತವಾಗಿಯೇ ಅಭಿವ್ಯಕ್ತಿಸಿವೆ. ಧಾರವಾಡದಂಥ ಅನೌಪಚಾರಿಕವೂ ಆತ್ಮೀಯವೂ ಆದ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳ ಪರಂಪರೆಗೆ ವ್ಯತಿರಿಕ್ತವಾದ ವಿಲಕ್ಷಣ ನಿಯಮಾವಳಿಗಳನ್ನು ಓದಿ ನಿರಾಶೆಗೊಂಡವರಲ್ಲಿ ನಾನೂ ಒಬ್ಬ."ಕಾರ್ಪೊರೇಟ್ ಜಗತ್ತು ಮತ್ತು ಕನ್ನಡ ಸಾಹಿತ್ಯ" ಎಂಬ ಒಂದು ಗೋಷ್ಠಿಯನ್ನೂ ಒಳಗೊಂಡಿರುವ ಈ ಸಮಾವೇಶ ವಾಸ್ತವವಾಗಿ ಕನ್ನಡ ಸಾಹಿತ್ಯ ಸೃಜನೆ-ವಿಮರ್ಶೆಗಳ ಲೋಕದ ಕಾರ್ಪೊರೇಟೀಕರಣದಂತೇ ಭಾಸವಾಗುತ್ತಿದೆ. ಇದನ್ನು ಕನ್ನಡದ ಮನಸು ಸೈರಿಸಿಕೊಳ್ಳುತ್ತದೆಂದು ನನಗನಿಸುವದಿಲ್ಲ.

                                  

ಸಾಹಿತಿ ಸಾಹಿತಿಗಳ ನಡುವೆ ಮತ್ತು ಲೇಖಕ ಓದುಗರ ನಡುವೆ ಆತ್ಮೀಯ ಸಂಬಂಧವನ್ನು ಬೆಳೆಸುವ ಉದ್ದೇಶವೂ ಈ ಸಂಭ್ರಮಕ್ಕಿದೆ ಎಂದು ಆಯೋಜಕರು ಹೇಳಿದ್ದಾರೆ. ಸರಿಯೇ. ಆದರೆ ಸಂಘಟಕರು ಮತ್ತು ಸಾವಿರದೈನೂರು ರೂಪಾಯಿ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಂಡ ಪ್ರತಿನಿಧಿಗಳ ನಡುವೆಯೂ ಒಂದು ಆತ್ಮೀಯ ಸಂಬಂಧ ಇರಬೇಕೆಂಬುದು ಅವರಿಗೆ ತೋಚಿರಲಿಲ್ಲವೆಂಬುದಕ್ಕೆ ನಿಯಮ ನಿಬಂಧನೆಗಳ ಕುರಿತ ಅವರ ಒಕ್ಕಣೆಯೇ ಸಾಕ್ಷಿ. "ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ ಕೂಡಿ ಕುಂತ ಜನಕೆಲ್ಲ ನಮ್ಮ ನಮನ" ಎಂದು ಕಂಬಾರರ ಒಂದು ಹಾಡಿನಲ್ಲಿ ಬರುವಂತೆ ರಂಗದ ಮೇಲೆ ದೇವಾಧಿದೇವತೆಗಳ ಪಾತ್ರಗಳೂ ಮೊದಲಿಗೆ ದೈವಕ್ಕೆ ಅಂದರೆ ಎದುರಿಗೆ ಕುಳಿತ ಪ್ರೇಕ್ಷಕ ಗಣಕ್ಕೆ ಕೈ ಮುಗಿದು ಆಟ ಪ್ರಾರಂಭಿಸುವ ಜಾನಪದೀಯ ಪರಂಪರೆ ನಮ್ಮದು. ಇವರಿಗೆ ಮಾದರಿಯಾದ ಜೈಪುರ ಲಿಟರರಿ ಫೆಸ್ಟಿವಲ್ ನಂಥವುಗಳಲ್ಲಿ ಅಂಥ ನಿಯಮ ನಿಬಂಧನೆಗಳು ಇರಲು ಕಾರಣವಾದ ಹಿನ್ನೆಲೆಗಳಿವೆ. ಈ ನೋಂದಾಯಿತ ಸಂಸ್ಥೆಯ ಗೌರವಾಧ್ಯಕ್ಷರುಗಳು, ಅಧ್ಯಕ್ಷರು, ಸದಸ್ಯರು ಧಾರವಾಡದಲ್ಲಿ ಹಲವಾರು ದಶಕಗಳಿಂದ ಇದ್ದವರು. ಸಾವಿರಾರು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿರುವವರು. ಎಷ್ಟು ಕಾರ್ಯಕ್ರಮಗಳಲ್ಲಿ ಅನುಚಿತವಾದ, ಅಸಭ್ಯವಾದ ವರ್ತನೆಯನ್ನು ೈವರು ಕಂಡಿದ್ದಾರೆ? ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ, ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನ್ನು ಕರಪತ್ರಗಳ ಮೂಲಕ ಹಂಚಿದ್ದನ್ನು ನೋಡಿದ್ದಾರೆ?? ಪ್ರಚಾರ ಸಾಮಗ್ರಿಯನ್ನು ಕಾರ್ಯಕ್ರಮದ ಸ್ಥಳ,ಪ್ರದೇಶ,ಸಭಾಂಗಣದಲ್ಲಿ ತಂದದ್ದನ್ನು ಅನುಭವಿಸಿದ್ದಾರೆ? ಕಾರ್ಯಕ್ರಮದ ಸ್ಥಳದಲ್ಲಿ ಆಸ್ತಿ-ಪಾಸ್ತಿಗಳಿಗೆ ಯಾರಾದರೂ ಧಕ್ಕೆ ಉಂಟು ಮಾಡಿದ ಎಷ್ಟು ಉದಾಹರಣೆಗಳು ಧಾರವಾಡದಂಥ ಒಂದು ಸಭ್ಯರ ಊರ ಪರಂಪರೆಯಲ್ಲಿವೆ? ಕಾರ್ಯಕ್ರಮದ ಸ್ಥಳದಲ್ಲಿ ಮದ್ಯ ಮಾದಕವಸ್ತುಗಳನ್ನು ತಂದು ಸೇವಿಸುವಂಥ ಅರಾಜಕರೇ ಧಾರವಾಡದ ಮಂದಿ? ಕಾರ್ಯಕ್ರಮದ ಪ್ರವೇಶಸ್ಥಳ/ಸಭಾಂಗಣದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ತರಬಾರದೆಂಬ ನಿಬಂಧನೆಯಂತೂ ಇವೆಲ್ಲವುಗಳ ಕಳಶ. ಇಂಥದೇನೂ ಎಂದೂ ಇಲ್ಲದ ಧಾರವಾಡದಲ್ಲಿ ಯಾಕಾಗಿ ಇಂಥ ಡಿಫೆನ್ಸಿವ್ ಕವಚದ ಅಗತ್ಯಇವರಿಗೆ ಕಂಡಿತು? ಏಕೆ ಇಂಥ ಹಾಸ್ಯಾಸ್ಪವ ಒಕ್ಕಣೆಯಿಂದ ಧಾರವಾಡವನ್ನು ಅವಮಾನಿಸಿದ್ದಾರೆ? ಧಾರವಾಡದಲ್ಲಿ ಪ್ರಗತಿಪರ ಯುವಕರು ಈ ಕುರಿತು ತಮ್ಮ ನೋವು, ವಿರೋಧ ವ್ಯಕ್ತಗೊಳಿಸಿದಾಗ ಸಂಘಟಕರು ಮಾಡಬಹುದಾಗಿದ್ದ ಕನಿಷ್ಟತಮ ಕೆಲಸವೆಂದರೆ ಆ ಅಚಾತುರ್ಯಕ್ಕಾಗಿ ಕ್ಷಮೆ ಕೇಳುವದು. ಆದರೆ ನಿಯಮ ನಿಬಂಧನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಅವುಗಳನ್ನು ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬಂತೆ ಸಂಘಟಕರು ಪತ್ರಿಕೆಗಳಿಗೆ ಹೇಳಿಕೆ ಕೊಟ್ಟ ಕುರಿತು ತಮ್ಮ ನೋವನ್ನು ಪ್ರಗತಿಪರ ಮನೋಭಾವನೆಯ ಯುವಬರಹಗಾರರು ನನ್ನೊಂದಿಗೆ ಹಂಚಿಕೊಂಡರು.

ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆದು ಕಡ್ಡಾಯವಾಗಿ ಕೊರಳಲ್ಲಿ ಧರಿಸಲು ನಿರ್ಬಂಧಿತರಾದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಷಣಕಾರರಲ್ಲ, ಅವರಿಗೆ ರಾತ್ರಿ ಭೋಜನ ವ್ಯವಸ್ಥೆ ಇರುವದಿಲ್ಲ ಅದನ್ನು ಅವರು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು, ಪರ ಊರಿನ ಪ್ರತಿನಿಧಿಗಳು ತಾವು ನಿಗದಿಗೊಳಿಸಿದ  ಹೊಟೆಲ್ ಗಳ ಲಿಸ್ಟ್ ನಲ್ಲಿರುವ ಹೊಟೆಲ್ ಗಳ ವ್ಯವಸ್ಥಾಪಕರನ್ನು ಕಂಡು ತಮ್ಮ ವಸತಿ ವ್ಯವಸ್ಥೆಯನ್ನೂ ತಾವೇ ಮಾಡಿಕೊಳ್ಳಬೇಕು, ಪ್ರತಿನಿಧಿಗಳಿಗೆ ವಾಹನ ಸೌಕರ್ಯ ಇರುವದಿಲ್ಲ ತಮ್ಮ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು....! ಇಂಥ ವರಸೆಯ ಸ್ವಾಗತ ಎಂಥ ಆತ್ಮೀಯತೆಯನ್ನು ಮೂಡಿಸಬಲ್ಲದೋ ಗೊತ್ತಿಲ್ಲ.

ಸಾಹಿತ್ಯದಲ್ಲಿ ಸಂಭ್ರಮದ ಒಂದು ಆಯಾಮ ಇದ್ದೇ ಇದೆ. ಅದರೆ ಇಲ್ಲಿ ಹಣದ, ಶ್ರೇಷ್ಠತೆಯ, ಅಹಮಿಕೆಯ ಧ್ವನಿಗಳು ಢಾಳಾಗಿ ಕಾಣುತ್ತಿವೆ ಎನ್ನಿಸುತ್ತಿದೆ. ಸಂಭ್ರಮಿಸಲು ತಕ್ಕುದಾದ ಮನಸ್ಥಿತಿಯೂ ಸನ್ನಿವೇಶವೂ ಇರಬೇಕಾಗುತ್ತದೆ. ನಮ್ಮ ಇಂದಿನ ಸನ್ನಿವೇಶ ಹಾಗಿದೆ ಎಂದು ಅನ್ನಿಸುತ್ತಿಲ್ಲ. ಇಂಥದರಲ್ಲಿ ಇವರು ಸಂಭ್ರಮಿಸಬಯಸುತ್ತಿದ್ದಾರೆ. ಅವರ ಸಂಭ್ರಮಕ್ಕೆ ಶುಭವಾಗಲಿ. ಆದರೆ ಹಲವು ಪ್ರಶ್ನೆಗಳು ಬಾಕಿ ಉಳಿಯುತ್ತವೆ, ಅವರ ಉತ್ತರದ ನಿರೀಕ್ಷೆಯಲ್ಲಿ..!


ಸಾಹಿತ್ಯ ಸಂಭ್ರಮ: ಮಳೆ ನಿಂತ ಮೇಲೆ ಕೆಲವು ಮರದ ಹನಿಗಳು


     ಧಾರವಾಡದಲ್ಲಿ ಧಾರವಾಡ ಸಾಹಿತ್ಯ ಸಂಭ್ರಮ ಎಂಬ ಖಾಸಗಿ ನೋಂದಾಯಿತ ಸಂಸ್ಥೆಯೊಂದು ಅಯೋಜಿಸಿದ್ದ ಅದೇ ಹೆಸರಿನ ಸಮಾವೇಶ ಮುಗಿದಿದೆ. ಅಲ್ಲೇನಾಯ್ತೋ, ಏನಿಲ್ಲವೋ, ಏನು ಸಾಧಿತವಾಯಿತೋ ಗೊತ್ತಿಲ್ಲ. ಅದರ ವರದಿಗಳನ್ನು ಓದಿದ ನಮಗೆ - ಅಂದರೆ ತಾತ್ವಿಕವಾದ ನೆಲೆಗಳಲ್ಲಿ ಆ ಸಮಾವೇಶದ ಧಾಟಿ ಧೋರಣೆಗಳೊಂದಿಗೆ ಭಿನ್ನವಾಗಿ ಯೋಚಿಸಿ ಅದರಿಂದ ದೂರ ಉಳಿದವರಿಗೆ- ಅದರ ಕುರಿತು ಸಂಭ್ರಮವೂ ಇಲ್ಲ, ಸಂಕಟವೂ ಇಲ್ಲ. ನಾವು ಆ ಕುರಿತ ನಮ್ಮ ಚಿಂತನೆಯಲ್ಲಿ ತುಂಬ ಸೂಕ್ಷ್ಮವಾಗಿದ್ದೇವೆಂಬುದನ್ನು ಮಾತ್ರ ನಾನಿಲ್ಲಿ ಹೇಳಬಯಸುತ್ತೇನೆ. ಅಲ್ಲಿ ಭಾಗವಹಿಸಿದ ನಮ್ಮ ನಾಡಿನ, ಭಾಷೆಯ ಹಿರಿಯ ಲೇಖಕರನ್ನು ನಮ್ಮ ಪ್ರಜ್ಞಾವಲಯದ ಕಪ್ಪು ಪಟ್ಟಿಯಲ್ಲಿರಿಸುವ ಅಥವಾ ಖಳರೆಂಬಂತೆ ನೋಡುವ ಸಣ್ಣತನ ನಮ್ಮದಲ್ಲ. ಕೋಮುವಾದಿ ಚಿಂತನೆಯ ವಿಷ ನಿಧನಿಧಾನವಾಗಿ ನಮ್ಮ ಸಾಮಾಜಿಕ,ರಾಜಕೀಯ ಬದುಕಿನ ತುಂಬ ವ್ಯಾಪಿಸುತ್ತಿರುವಾಗ ಅದರ ವಿರುದ್ಧ ದಿಟ್ಟ ನಿಲುವು ತಳೆಯುತ್ತ ಬಂದಿರುವ ಯು.ಆರ್. ಅನಂತಮೂರ್ತಿಯವರಾಗಲಿ, ಗಿರೀಶ್ ಕಾರ್ನಾಡ್ ಅವರಾಗಲೀ ಧಾಸಾಸಂ ನಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳ ಯಾದಿಯಲ್ಲಿ ಇದ್ದರೆಂದ ಮಾತ್ರಕ್ಕೆ ನಮಗೆ ಅದು ಹೇಗೆ ಅಪಥ್ಯರಾದಾರು? ನಮ್ಮ ವಿಮರ್ಶೆಗೆ ಹೊಸ ಜೀವ ತುಂಬಿದ ಜಿ.ಎಸ್.ಆಮೂರ್, ಸಿ.ಎನ್.ರಾಮಚಂದ್ರನ್ ಮುಂತಾದವರು ಅದು ಹೇಗೆ ನಮಗೆ ಆ ಕಾರಣಕ್ಕೆ ತ್ಯಾಜ್ಯರಾಗುತ್ತಾರೆ? ಇಂಥ ಎಲ್ಲ ವಿಷಯಗಳ ಕುರಿತು ನಾವು ಮುಕ್ತವಾಗಿ, ಗಂಭೀರವಾಗಿ ಚರ್ಚಿಸಿದ್ದೇವೆ. ಇದೇ ರೀತಿಯ ಒಂದು ಘನತೆಯನ್ನು, ಗಾಂಭೀರ್ಯವನ್ನು, ಸಜ್ಜನಿಕೆಯನ್ನು ಈ ಉದ್ದಕ್ಕೂ ಧಾಸಾಸಂ ನ ಅಧಿಕೃತ ವಕ್ತಾರರಾಗಿರುವ ಅದರ ಅಧ್ಯಕ್ಷ ಶ್ರೀಯುತ ಗಿರಡ್ಡಿ ಗೋವಿಂದರಾಜರಿಂದ ನಾವು ನಿರೀಕ್ಷಿಸಿದ್ದೆವು. ದುರದೃಷ್ಟವಶಾತ್ ಆ ನಮ್ಮ ನಿರೀಕ್ಷೆಯನ್ನು ಶ್ರೀಯುತರು ಹುಸಿಗೊಳಿಸಿದ್ದಾರೆ. ಧಾಸಾಸಂ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ  ಸಂಭ್ರಮ ಆರಂಭಿಸುವ ಮುನ್ನ ಹಾಗೂ ನಂತರವೂ ಎದುರಾದ ಎಲ್ಲಾ ತರಹದ ವಿರೋಧವನ್ನು ಮುಕ್ತವಾಗಿ ಸ್ವಾಗತಿಸುವದಾಗಿ ಅವರು ಹೇಳಿದ್ದನ್ನು ಮೆಚ್ಚುತ್ತಿರುವಾಗಲೇ "ವಿರೋಧದ ಹಿಂದೆ ಕೆಡಿಸುವ ಮನಸ್ಸಿರಬಾರದು" ಎಂದೂ ಸೇರಿಸಿದ್ದನ್ನು ಕೇಳಿ ನಾವು ಬೇಸರಗೊಂಡಿದ್ದೇವೆ.

     ನಮ್ಮ ಕೆಡಿಸುವ ಮನಸ್ಥಿತಿಯ ಕುರಿತ ಗಿರಡ್ಡಿಯವರ ಗುಮಾನಿ ಏನೆಂದರೆ ನಾವು ಸದಾ ಫೋನ್ ಕರೆ ಮಾಡಿ ಇದರಲ್ಲಿ ಪಾಲ್ಗೊಳ್ಳದಂತೆ ಸಂಪನ್ಮೂಲ ವ್ಯಕ್ತಿಗಳ ಮೇಲೆ, ಆಮಂತ್ರಿತರ ಮೇಲೆ ಒತ್ತಡ ತರುತ್ತಿದ್ದೆವೆಂಬುದು. ಸಾಕಷ್ಟು ವಿನಮ್ರವಾಗಿ ನಾನು ಹೇಳಬಯಸುವದೇನೆಂದರೆ ಅವರ ಸಂಭ್ರಮದಲ್ಲಿದ್ದ ಸಂಪನ್ಮೂಲ ವ್ಯಕ್ತಿಗಳ ಅಥವಾ ಅತಿಥಿಗಳ ಯಾದಿಯಲ್ಲಿದ್ದು ಅದರಲ್ಲಿ ಭಾಗವಹಿಸಬೇಕಾಗಿದ್ದ ಡಾ.ಯು.ಆರ್.ಅನಂತಮೂರ್ತಿ,ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ,ಸುಮತೀಂದ್ರ ನಾಡಿಗ, ಸಿದ್ದಲಿಂಗಯ್ಯ, ಅಬ್ದುಲ್ ರಶೀದ್, ಜೋಗಿ, ಬೋಳುವಾರು ಮೊಹಮ್ಮದ್ ಕುಂಞಿ, ಕೆ.ಸತ್ಯನಾರಾಯಣ, ಮುಖ್ಯಮಂತ್ರಿ ಚಂದ್ರು ಮೊದಲಾದವರು ಭಾಗವಹಿಸದೇ ಇರುವದಕ್ಕೆ ನಾವು ಕಾರಣರಲ್ಲ. ಅಂಥ ಮಟ್ಟಿಗಿನ ಪ್ರಭಾವ ನಮಗಿಲ್ಲ. ಜೋಗಿ ಸ್ವತ: ಸಂಭ್ರಮದ ದಿಕ್ಕು ದೆಸೆಗಳನ್ನು ಸಂದೇಹಿಸಿ ಪಾಲ್ಗೊಳ್ಳುವದಿಲ್ಲ ಎಂದು ಘೋಷಿಸಿದವರು. ಸಂಪನ್ಮೂಲ ವ್ಯಕ್ತಿಗಳಾಗಿ ಅಥವಾ ವಿಶೇಷ ಆಹ್ವಾನಿತರಾಗಿ ಇರಬೇಕಾಗಿದ್ದ ನಾನು, ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ, ಜಗದೀಶ ಮಂಗಳೂರುಮಠ, ಎಂ.ಡಿ.ವಕ್ಕುಂದ,  ವೈಯಕ್ತಿಕವಲ್ಲದ,ತಾತ್ವಿಕ-ಸೈದ್ಧಾಂತಿಕ ಇತ್ಯಾದಿಯಾಗಿ ಹೆಸರಿಸಬಹುದಾದ ಕಾರಣಗಳಿಗಾಗಿ ಹೊರಗುಳಿದವರು, ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ ಮೊದಲಾದವರು ನಮ್ಮ ಆಗ್ರಹ ಕಾರಣವಾಗಿ ಭಾಗವಹಿಸಲಿಲ್ಲ ಎಂದರೆ ಅದು ಅವರ ಗ್ರಹಿಕೆ, ವಿವೇಕ ಮತ್ತು ಸ್ವಂತ ತೀರ್ಮಾನ ಕೈಗೊಳ್ಳುವ ಶಕ್ತಿಯನ್ನು ಅವಮಾನಿಸಿದಂತೆ.  ಹಾಂ, ಹಿಂದೆ ವಿವಿಧ ಸಂದರ್ಭಗಳಲ್ಲಿ ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ಚಳುವಳಿಗಳು ಭುಗಿಲೆದ್ದಾಗ ಜೊತೆಯಾಗಿದ್ದ, ನಮ್ಮ ಸಮಾನಮನಸ್ಕರು ಎಂದು ನಾವು ಭಾವಿಸಿಕೊಂಡಿದ್ದ, ಹಿರಿಯರೊಬ್ಬರಿಗೆ ನಾವು ಫೋನ್ ಕರೆ ಮಾಡಿ ಸಂಭ್ರಮದಲ್ಲಿ ಭಾಗವಹಿಸುವ ತಮ್ಮ ನಿರ್ಧಾರವನ್ನು ಪುನ: ಪರಿಶೀಲಿಸುವಂತೆ ಆಗ್ರಹಿಸಿದ್ದು ನಿಜ. ಅದು ನಮ್ಮ ಹಕ್ಕೂ ಹೌದು. ನಮ್ಮ ಆಗ್ರಹವನ್ನು ನಿರಾಕರಿಸಿ, ಸಂಭ್ರಮದಲ್ಲಿ ಪಾಲ್ಗೊಂಡು ತಮ್ಮ ಯಥಾಪ್ರಕಾರದ ಶೈಲಿಯಲ್ಲಿ ಯಾರನ್ನೋ ಚಿಂತಾಜನಕಮೂರ್ತಿಯೆಂದು ಕರೆದು ಶ್ರೋತೃಗಣವನ್ನು ನಗಿಸಿದ ಸದರಿ ಕರುಣಾಜನಕಮೂರ್ತಿ ಹಿರಿಯರು ನಮ್ಮ ಸಮಾನಮನಸ್ಕರೆಂಬ ಭಾವನೆಯು ನಮ್ಮ ಭ್ರಮೆ ಎಂದೂ ಅದನ್ನು ಆದಷ್ಟೂ ಬೇಗ ಕಳಚಿಕೊಳ್ಳಬೇಕೆಂದೂ ಪ್ರಗತಿಪರರು ಮನಗಂಡಿದ್ದಾರೆ. ಗಿರಡ್ಡಿಯವರಿಗೆ ಗೊತ್ತಿರಬೇಕು. ಈ ಪ್ರಗತಿಪರರು ಸಂಭ್ರಮ ಸಮಾವೇಶವನ್ನು ಕೆಡಿಸುವ ಮನಸ್ಥಿತಿಯವರಾಗಿದ್ದರೆ ಗಿರಡ್ಡಿಯವರ ಸಮ್ಮುಖದಲ್ಲೇ ಕಲಬುರ್ಗಿಯವರ ಮನೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ, ಸಂಭ್ರಮ ನಡೆಯುವ ದಿನಗಳಿಗೆ ಪರ್ಯಾಯವಾಗಿಯೇ ಸಮಾವೇಶ ನಡೆಸುವ ಸಿದ್ಧತೆಯ ದಾರಿಯಲ್ಲಿ ಅದಾಗಲೇ ಬಹು ದೂರ ಕ್ರಮಿಸಿದ್ದ ತಮ್ಮ ನಿರ್ಧಾರವನ್ನು ಅವರು ಕೈಬಿಡುತ್ತಿರಲಿಲ್ಲ. ಕೈ ಹಿಡಿದು ಪ್ರೀತಿಯಿಂದ ಹೇಳಿದ ಹಿರಿಯರ ಮಾತಿಗೆ ಪ್ರಗತಿಪರರು ಕೊಟ್ಟ ಗೌರವಕ್ಕೆ ಪ್ರತಿಯಾಗಿ ಗಿರಡ್ಡಿಯವರೂ ಸ್ವಲ್ಪ ಮಟ್ಟಿಗಿನ ಗೌರವವನ್ನು, ಕೃತಜ್ಞತೆಯನ್ನು ಅವರ ಕುರಿತು ಇಟ್ಟುಕೊಳ್ಳಬಹುದಿತ್ತು.
 
    
ಸಂಭ್ರಮದ ಎರಡನೇ ದಿನದ ನಡಾವಳಿಗಳು ಪೂರ್ಣಗೊಂಡ ನಂತರದ ತಮ್ಮ ಬ್ರೀಫಿಂಗ್ ನಲ್ಲಿ ಗಿರಡ್ಡಿಯವರು "ನಾಡಿನ ಹಿರಿಯ ಸಾಹಿತಿಗಳು ಪಾಲ್ಗೊಳ್ಳುತ್ತಿರುವ ಈ ಸಂಭ್ರಮದಲ್ಲಿ ಯಾವುದೇ ಹಣದ ಅಪವ್ಯಯಕ್ಕೆ ಆಸ್ಪದವಿಲ್ಲ. ಈ ಎರಡೂ ದಿನಗಳಲ್ಲಿ ಅದು ಸಂಭವಿಸಲೂ ಇಲ್ಲ ಎಂಬುದು ಗಮನಾರ್ಹ. ಆದರೆ, ಕೆಲವು ವಿಶಿಷ್ಟ ಹಿತಾಸಕ್ತಿಗಳು ಈ ಸಂಭ್ರಮದ ವಿರುದ್ಧ ಅಪಪ್ರಚಾರ ಮಾಡುತ್ತಿರುವದು ಧಾರವಾಡ ಸಾಂಸ್ಕೃತಿಕ ಪರಿಸರಕ್ಕೆ ಮಾಡುತ್ತಿರುವ ದೊಡ್ಡ ಅಪಚಾರವೆಂದೇ ಭಾವಿಸಿದ್ದೇನೆ" ಎಂದದ್ದು ದಿನಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಯಾರು ಈ ಕೆಲವು ವಿಶಿಷ್ಟ ಹಿತಾಸಕ್ತಿಗಳು? ಇದರ ಧಾಟಿ ಧೋರಣೆಯನ್ನು ಸಕಾರಣವಾಗಿಯೇ ಪ್ರಶ್ನಿಸಿದ ಪಾಟೀಲ್ ಪುಟ್ಟಪ್ಪನವರೇ? ಸಾಹಿತ್ಯವೆಂಬುದು ಶ್ರೀಮಂತರಿಗಷ್ಟೆ ಎಂದು ಧಾಸಾಸಂ ನವರು ಭಾವಿಸಿದ್ದಾರೆಂದು ತೋರುತ್ತದೆ ಎಂದು ಪತ್ರಿಕೆಯೊಂದರ ತಮ್ಮ ಅಂಕಣದಲ್ಲಿ ಸಂದೇಹ ವ್ಯಕ್ತಪಡಿಸಿದ ಕಥೆಗಾರ ಜೋಗಿಯೆ? ಅಂತರ್ಜಾಲ ತಾಣಗಳಲ್ಲಿ ಇದರ ಕುರಿತು ಬರೆದು ಇದರಲ್ಲಿ ಎಲೀಟಿಕರಣದ ಅಪಾಯವನ್ನು ಕಂಡ ಕೆ.ವಿ.ತಿರುಮಲೇಶ್ ಅಥವಾ ಹೆಚ್. ಎಸ್.ರಾಘವೇಂದ್ರ ರಾವ್ ಅವರೇ? ಧಾರವಾಡದ ಸಾಂಸ್ಕೃತಿಕ ಪರಿಸರದ ಠೇಕೆದಾರಿಕೆಯ ಅಹಮಿಕೆಗಳನ್ನೇ ಪ್ರಶ್ನಿಸಿದ ನಾನೆ? ಸಂಭ್ರಮದಲ್ಲಿ ಪಾಲ್ಗೊಳ್ಳಲು ನಿರಾಕರಿಸಿ ಬರೆದ ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ ಮುಂತಾದವರೆ? ಧಾರವಾಡದಲ್ಲಿ ಗೌರವಾನ್ವಿತರಾದ, ಸಂಭ್ರಮ ನೋಂದಾಯಿತ ಸಂಸ್ಥೆಯ ಗೌರವಾಧ್ಯಕ್ಷರುಗಳಾದ ಕೆಲ ಹಿರಿಯರು ಸಂಭ್ರಮದ ಆಕ್ಷೇಪಾರ್ಹ ಲಕ್ಷಣಗಳಿಗೆ ಕುರುಡಾದ ಕುರಿತು ಬೇಸರ ನೋವು ತೋಡಿಕೊಂಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿಯವರೇ? ಅಥವಾ ಇನ್ನುಳಿದಂತೆ ಇದರ ವಿರುದ್ದ ತಾತ್ವಿಕ ನೆಲೆಗಳಲ್ಲಿ ಪ್ರಶ್ನೆಗಳನ್ನೆತ್ತಿದ, ಡಾ. ಬರಗೂರು ರಾಮಚಂದ್ರಪ್ಪ,ಡಾ. ಎಚ್. ಎಸ್.ಅನುಪಮಾ, ಜಿ,ಎನ್.ಮೋಹನ್,ಬಸವರಾಜ ಸೂಳಿಬಾವಿ, ಡಾ.ಎಂ.ಡಿ.ವಕ್ಕುಂದ ಕುಂ.ಸಿ.ಉಮೇಶ್, ಬೇಳೂರು ಸುದರ್ಶನ,ಸಿದ್ದನಗೌಡ ಪಾಟೀಲ್, ಡಾ. ಸಂಜೀವ ಕುಲಕರ್ಣಿ ಮೊದಲಾದವರೇ?

     ಸಾಹಿತ್ಯ, ಸಮಾಜ, ಸಂಸ್ಕೃತಿಗಳ ಸಂಬಂಧದ ಕುರಿತ ಗಂಭೀರ ಸಂವಾದದ ಸಾಧ್ಯತೆಯೊಂದನ್ನು ಜೀವನಪೂರ್ತಿ ಸಾಹಿತ್ಯದ ಪಾಠ ಮಾಡಿದ ಗಿರಡ್ಡಿಯವರು ಹೀಗೆ ಟ್ರಿವಿಅಲೈಜ್ ಮಾಡುವದು ನೋವಿನ ಸಂಗತಿ. ಅವರು ಅದನ್ನು ತಮ್ಮ ವ್ಯಕ್ತಿನಿಷ್ಟ ಯಾವುದೋ ಕಟ್ಟುಪಾಡುಗಳಿಗೆ ಬದ್ಧರಾಗಿ ಟ್ರಿವಿಅಲೈಜ್ ಮಾಡುತ್ತಿದ್ದಾರೆಂಬುದು ಅನುಮಾನವಲ್ಲ ಆರೋಪ. "ಶಿಸ್ತನ್ನು ಕಾಪಾಡಿ ಕೊಳ್ಳುವ ಉದ್ದೇಶದಿಂದ ಕೆಲ ನಿಬಂಧನೆಗಳನ್ನು ವಿಧಿಸಿದ್ದು ಸ್ವಾಭಾವಿಕ. ಇವುಗಳನ್ನು ತೀರ ಗಂಭೀರವಾಗಿ ತೆಗೆದುಕೊಂಡು ಟೀಕೆ, ಅಪಹಾಸ್ಯಗಳನ್ನು ಮಾಡುತ್ತಿದ್ದುದು ನಿಜಕ್ಕೂ ವಿಷಾದನೀಯ" ಎನ್ನುತ್ತಾರೆ ಗಿರಡ್ಡಿಯವರು. ಅಂದರೆ ತಾವೇ ವಿಧಿಸಿದ ನಿಯಮ ನಿಬಂಧನೆಗಳ ಕುರಿತು ಸ್ವತ: ಇವರೇ ಗಂಭೀರವಾಗಿರಲಿಲ್ಲ ಅಂದರೆ ಇವು ಇವರ ಇನ್ ಸ್ಟಂಟ್ ಪ್ರಚಾರದ ಗಿಮಿಕ್ಕೆ? ಇದನ್ನು ಯಾಕೆ ಕೇಳಬೇಕಾಗಿದೆ ಎಂದರೆ ಸಮಾರೋಪ ಸಮಾರಂಭದಲ್ಲಿ ಗಿರಡ್ಡಿಯವರು "ಸಂಭ್ರಮದ ಯಶಸ್ಸಿಗೆ ನಮ್ಮ ವಿರೋಧಿಗಳು ಕಾರಣ ಏಕೆಂದರೆ ನಮಗೆ ಪ್ರಚಾರದ ಅಗತ್ಯವೇ ಬೀಳಲಿಲ್ಲ, ನಮಗೆ ಪ್ರಚಾರವನ್ನು ನಮ್ಮ ವಿರೋಧಿಗಳೇ ಒದಗಿಸಿಬಿಟ್ಟರು" ಎಂದರೆಂದು ಅದರಲ್ಲಿ ಭಾಗವಹಿಸಿದವರು ನಮಗೆ ಹೇಳಿದರು. ವಿರೋಧಿಗಳು ಪ್ರಧಾನವಾಗಿ ಪ್ರಶ್ನಿಸಿದ್ದೇ ಈ ಇವರ ಹಾಸ್ಯಾಸ್ಪದ ನಿಯಮ ನಿಬಂಧನೆಗಳನ್ನು. ಅದು ಹೋಗಲಿ ಸಮಾರೋಪ ಸಮಾರಂಭದ ಅತಿಥಿಗಳಾಗಿದ್ದ ವಿಮರ್ಶಕ ಜಿ.ಎಚ್.ನಾಯಕ್ ಅವರು ಸಹ ಹುಕುಂ ಸ್ವರೂಪದ ಆ ನಿಯಮಗಳ ಕುರಿತು ತಮ್ಮ ಆಕ್ಷೇಪವನ್ನು ಎತ್ತಿದರು ಎಂಬುದು ನಮಗೆ ಗೊತ್ತಿದೆ. ಹೌದು, ಸಂಭ್ರಮದ ಯಶಸ್ಸಿನ ಒಂದು ಪಾಲಿಗೆ ನಾವು ಕಾರಣಕರ್ತರಾಗಿದ್ದೇವೆ. ಅದರೆ ಅದು ಗಿರಡ್ಡಿಯವರು ವ್ಯಂಗ್ಯವಾಗಿ ಹೇಳುವ ಆ ಕಾರಣಕ್ಕಾಗಿ ಅಲ್ಲ. ಅದು ಪ್ರತಿನಿಧಿ ಶುಲ್ಕ ಸಾವಿರದೈನೂರು ರೂಪಾಯಿಗಳಿಂದ ಕೇವಲ ಐನೂರು ರೂಪಾಯಿಗಿಳಿದು ಆ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ನೋಂದಾಯಿಸಿಕೊಳ್ಳಲು ಅನುವಾಯಿತೆನ್ನುವ ಕಾರಣಕ್ಕೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರ ಹತ್ತು ಲಕ್ಷ ರೂಪಾಯಿ ನೀಡಿತ್ತೆನ್ನುವ ಹಿನ್ನೆಲೆಯಲ್ಲಿ  "ಸಾಹಿತ್ಯ ಸಂಭ್ರಮಕ್ಕೆ ಪ್ರವೇಶ ನೀಡುವದನ್ನು ಕಾಯ್ದಿರಿಸಲಾಗಿದೆ" ಎಂಬುದನ್ನು ಪ್ರಗತಿಪರರು ವಿರೋಧಿಸಿದ್ದು ಕಾರಣವಾಗಿ  ಆ ನಿಬಂಧನೆ ಸಡಿಲುಗೊಂಡು ಜನರಿಗೆ ಮುಕ್ತ ಪ್ರವೇಶ ದೊರೆತು ಸಭಾಭವನ ತುಂಬಿ ಶೋಭಿಸಿತು ಎಂಬ ಕಾರಣಕ್ಕೆ...! ಸಂಭ್ರಮದ ಯಶಸ್ಸಿನ ಆ ಕ್ರೆಡಿಟ್ ಅನ್ನು ನಾವು ತೆಗೆದುಕೊಳ್ಳುತ್ತೇವೆ ಏಕೆಂದರೆ ಸಾಮಾನ್ಯ ಸಾಹಿತ್ಯಾಸಕ್ತರಿಗೆ, ವಿದ್ಯಾರ್ಥಿಗಳಿಗೆ ಅದರಿಂದ ಪ್ರಯೋಜನವಾಗಿರುವದು ಸಾಧ್ಯವಿದೆ. ಆದರೆ ಸಂಭ್ರಮದ ಲೋಪಗಳಿಗೆ, ದೋಷಗಳಿಗೆ, ವೈಫಲ್ಯಗಳಿಗೆ ಸಂಘಟಕರೇ ಕಾರಣ. ಉದಾ: ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಮರ್ಶಕ ಟಿ.ಪಿ.ಅಶೋಕ್ "ಬರೀ ಹಿರಿಯ ತಲೆಮಾರಿನ ಸಾಹಿತಿಗಳ ಚರ್ಚೆ, ಕಾವ್ಯವಾಚನ,ವಿಮರ್ಶೆ ಕೇಳುವಂತಾಗಿತ್ತು, ಇದರ ಜೊತೆಗೆ ಈ ತಲೆಮಾರಿನ ಹೊಸ ಹುಡುಕಾಟಗಳ ತುಡಿತಗಳ ಯುವ ಬರಹಗಾರರಿಗೂ ಅವಕಾಶ ನೀಡಬೇಕಿತ್ತು" ಎಂದು ಎತ್ತಿ ತೋರಿಸಿದ ಓರೆ-ಕೋರೆ. ಆ ಲೋಪವನ್ನು ಸಂಘಟಕರ ಭುಜಗಳಿಗೆ ವರ್ಗಾಯಿಸುತ್ತೇವೆ. ಹಾಗೇ ಸಾಹಿತ್ಯದ ಆತ್ಮವಾದ ಮನುಷ್ಯನನ್ನು, ಅವನ ಬದುಕನ್ನು, ಸಮಾಜವನ್ನು ಅದರಿಂದ ಕರುಳ ಬಳ್ಳಿಯನ್ನು ಕಿತ್ತೆಸೆದಂತೆ ಮೂರು ದಿನ ಕಿತ್ತೆಸೆಯಲಾಯಿತು ಎಂಬುದಕ್ಕೆ ಸಮಾಜದ ಕುರಿತು, ಅದನ್ನು ಬಾಧಿಸುತ್ತಿರುವ ಸಮಕಾಲೀನ ಅಪಾಯಗಳ ಕುರಿತು, ವರ್ತಮಾನದ ಸಂಕಷ್ಟಗಳು, ತಬ್ಬಲಿತನಗಳು, ತಲ್ಲಣಗಳ ಕುರಿತು ಅವುಗಳಿಗೆ ಸಾಹಿತ್ಯ, ಸಾಹಿತಿಯ ಸ್ಪಂದನೆಯ ಕುರಿತು ಯಾವ ಚರ್ಚೆಯೂ ಆಗಲಿಲ್ಲ ಎಂಬುದಕ್ಕೂ ಕಾರಣರು ನಾವಲ್ಲ..!

     ಇನ್ನುಳಿದಂತೆ ಧಾರವಾಡದ ಸಾಂಸ್ಕೃತಿಕ ಪರಿಸರಕ್ಕೆ ದೊಡ್ಡ ಅಪಚಾರವೆಂಬುದು ಆಗುತ್ತಿದೆಯೇ ಆಗುತ್ತಿದ್ದರೆ ಅದನ್ನು ಯಾರು ಬಗೆಯುತ್ತಿದ್ದಾರೆಂಬುದನ್ನು ಸಾರ್ವಜನಿಕರ ವಿವೇಕಕ್ಕೇ ಬಿಡುವದು ಒಳಿತು.


Saturday, November 24, 2012

ಸ್ವಂತದ ಬದುಕಿನ ಬಿಡಿ ಚಿತ್ರಗಳು-೧

ಅವ್ವ ಈರವ್ವ, ಅಪ್ಪ ಈರಪ್ಪ:ಅಶೋಕ ಶೆಟ್ಟರ್ ನೆನಪ ಮಾಲೆ    ಒಂದೇ ಹೆಸರು ಕವಲೊಡೆದಂತೆ, ನನ್ನ ಅವ್ವ ಈರವ್ವ, ಅಪ್ಪ ಈರಪ್ಪ., ಇಬ್ಬರಿಗೂ ಮಧ್ಯೆ ಹತ್ತು ವರ್ಷಗಳ ವ್ಯತ್ಯಾಸ. ಸ್ವಭಾವ ವ್ಯತ್ಯಾಸಗಳೋ ಹಲವಾರು. ಮೂಲತ: ಇಬ್ಬರೂ ಸಾತ್ವಿಕರು. ಅಪ್ಪನ ಊರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ. ಅಲ್ಲಿಯ ಪರಶೆಟ್ಟೆಪ್ಪ ಶೆಟ್ಟರ ಪುತ್ರನಾಗಿ ನನ್ನ ತಂದೆ ಜನಿಸಿದ್ದು ೨೮ ಡಿಸೆಂಬರ್ ೧೯೦೯ರಲ್ಲಿ.  ಪರಶೆಟ್ಟೆಪ್ಪ ಶೆಟ್ಟರು ನನ್ನ ತಂದೆಯ ಎಳವೆಯಲ್ಲೇ ಮುಂಬಯಿಗೆ ಹೋಗಿ ಅಲ್ಲಿ ತೇಜಿ-ಮಂದಿ ವ್ಯಾಪಾರ ಮಾಡುತ್ತಿದ್ದರು. ಅದು ಸರಕು ಸಾಮಗ್ರಿಗಳನ್ನು ಕೊಂಡಿಟ್ಟು ಹೆಚ್ಚು ಬೆಲೆ ಬಂದಾಗ ಮಾರುವ ವ್ಯಾಪಾರವಿದ್ದೀತು. ನನ್ನ ತಂದೆ ಮುಂಬಯಿಯಲ್ಲಿನ ತಮ್ಮ ಬಾಲ್ಯದ ಕುರಿತು ಹೇಳಿಕೊಳ್ಳುವಾಗ ಭಯ್ಯಾಗಳ ಅಂಗಡಿಗಳಲ್ಲಿ ಹಣ ಕೊಟ್ಟು ಮನಸೋ ಇಚ್ಛೆ ಹಾಲು ಕುಡಿಯುತ್ತಿದ್ದುದು, ಕುದುರೆ ಸವಾರಿ ಮಾಡುತ್ತಿದ್ದುದು-ಇಂಥ ಪ್ರಸಂಗಗಳು ಕೆಲಕಾಲ ನನ್ನ ಅಜ್ಜನ ಆರ್ಥಿಕ ಸ್ಥಿತಿ ಚೆನ್ನಾಗಿತ್ತೆಂಬುದಕ್ಕಿಂತ ಹೆಚ್ಚಿಗೆ ಹೇಳುವದಿಲ್ಲ. ನನ್ನ ತಂದೆ ಅಲ್ಲಿ ಮರಾಠಿ ಪ್ರಾಥಮಿಕ ಶಿಕ್ಷಣ ಪಡೆದರು. ನನ್ನ ತಂದೆಯ ಮರಾಠಿ ಓದು, ಬರಹ, ಮಾತು ಅವರ ಕನ್ನಡದಷ್ಟೇ ನಿರರ್ಗಳ. ತಮ್ಮ ಕಾರ್ಯನಿಮಿತ್ತ ಅವರು ಮಿರಜ್, ಸಾಂಗ್ಲಿ, ಗಡ್ ಹಿಂಗ್ಲಜ್, ನಿಪ್ಪಾಣಿಗೆ ಹೋದಾಗೆಲ್ಲ ಲೋಕಸತ್ತಾ, ಸಕಾಳ, ತರುಣ ಭಾರತ್ ಇತ್ಯಾದಿ ಒಂದು ಸಿವುಡು ಮರಾಠಿ ಪತ್ರಿಕೆಗಳನ್ನು ತೆಗೆದುಕೊಂಡು ಬಂದು ಅರೆಪದ್ಮಾಸನದಲ್ಲಿ ಕುಳಿತು ರಾತ್ರಿ ಹನ್ನೆರಡು-ಒಂದು ಗಂಟೆಯವರೆಗೆ ಓದುತ್ತಿದ್ದುದು, "ಟಾಯಮ್ ಬಾಳ ಆತ, ಮಕ್ಕೊರ್ರೀ ಇನ್ನs" ಎಂದು ನಮ್ಮವ್ವ ಪದೇ ಪದೇ ಹೇಳುವದು ನಮಗೆ ಸಾಮಾನ್ಯ ದೃಶ್ಯವಾಗಿರುತ್ತಿತ್ತು.
ನನ್ನ ಅಜ್ಜನ ಸುಭಿಕ್ಷದ ಕಾಲ ಮುಗಿದು ಅವರು ತಮ್ಮ ವ್ಯವಹಾರದಲ್ಲಿ ಸಂಪೂರ್ಣ ನೆಲ ಕಚ್ಚಿದ್ದರು. ಈ ಅಜ್ಜನ ನೆನಪು ನನಗೆ ಮಸಕು ಮಸಕಾಗಿ ಇದೆ. ಬೈಲಹೊಂಗಲದಲ್ಲಿ ನಾವು ಬಾಡಿಗೆಗಿದ್ದ ಮನೆಯೊಂದರ ಹೊರಕೋಣೆಯಲ್ಲಿ ಆತನ ವಾಸ. ಜೋಳದ ಒಣ ದಂಟು ಸುಲಿದು ಅದರ ಬೆಂಡು ಮತ್ತು ಸಿಬರುಗಳಿಂದ ಆತ ತಾಸುಗಟ್ಟಲೆ ಶ್ರದ್ಧೆ ವಹಿಸಿ ಮಾಡಿಕೊಟ್ಟ ಆಟದ ಬಂಡಿಯನ್ನು ನಾನು ಮುದ್ದಾಂ ಕೆಡಿಸಿ ಅವನ ಕೋಪಕ್ಕೆ ಕಾರಣನಾಗುತ್ತಿದ್ದುದು, ನನ್ನವ್ವ ನನ್ನನ್ನು ಬೈಯ್ಯುತ್ತಿದ್ದುದು ಸ್ಪಷ್ಟವಾಗಿ ನೆನಪಿವೆ. ಮತ್ತೊಂದು ಸ್ಪಷ್ಟ ನೆನಪು ಬಿಳಿ ರುಮಾಲು,ಧೋತ್ರ, ಬಗಲಗಸಿ ಅಂಗಿಯಿಂದಲಂಕೃತವಾದ ಆ ನನ್ನ ಅಜ್ಜನ ಪಾರ್ಥಿವ ಶರೀರವನ್ನು ಅದೇ ಮಂದ ಬೆಳಕಿನ ಹೊರಕೋಣೆಯಲ್ಲಿ ಗೋಡೆಗೊರಗಿಸಿ ಕುಳ್ಳಿರಿಸಿದ್ದು. ನನ್ನವ್ವ ಸಂಪೂರ್ಣ ಶ್ರದ್ಧೆಯಿಂದ ಅಜ್ಜನ ಸ್ವಚ್ಛತೆ ಸುಶ್ರೂಷೆ ಮಾಡುತ್ತಿದ್ದಳು. ನನ್ನ ತಂದೆಯ ತಾಯಿಯನ್ನು ನಾನು ನೋಡಿಲ್ಲ. ಆಕೆ ಮೊದಲೇ ಗತಿಸಿದ್ದಳೆಂದು ತೋರುತ್ತದೆ. ಆಕೆ ಮತ್ತು ಖ್ಯಾತ ಜಾನಪದ ಗಾಯಕರಾಗಿದ್ದ ಹುಕ್ಕೇರಿ ಬಾಳಪ್ಪನವರ ತಾಯಿ ಅಕ್ಕ-ತಂಗಿಯರು. ಸವದತ್ತಿ ತಾಲೂಕಿನ ಆಲದಕಟ್ಟಿ ಅವರ ತವರುಮನೆ. ಆ ಮನೆಯ ಹಿರಿಯರು ತಲ್ಲೂರು ದೇಸಾಯರ ಬಳಿ ಕಾರಭಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದುದರಿಂದ ತಲ್ಲೂರ ಶೆಟ್ಟರು ಎಂದೇ ಕರೆಸಿಕೊಳ್ಳುತ್ತಿದ್ದರು.
ಮುಂಬಯಿಯಿಂದ ಮರಳಿದ ನಂತರ ಅಲ್ಲಿ ತಾವು ಅದುವರೆಗೆ ಪಡೆದ ಹಂತದ ಶಿಕ್ಷಣವನ್ನು ನನ್ನ ತಂದೆ ಪುನ: ಕನ್ನಡದಲ್ಲಿ ಪಡೆಯಬೇಕಾಯಿತು.ಆಗಿನ ಮುಲ್ಕಿ (೭ನೇ ಇಯತ್ತೆ) ಮುಗಿಸಿ ಅವರು ಶಿಕ್ಷಣ ಕೊನೆಗೊಳಿಸಿದ್ದರು. ಬೈಲಹೊಂಗಲಕ್ಕೆ ಬಂದು ನೆಲೆಗೊಳ್ಳುವ ಮುನ್ನ ಅಪ್ಪ ಒಂದಷ್ಟು ವರ್ಷ ಗೋಕಾಕದಲ್ಲಿ, ಒಂದೆರಡು ವರ್ಷ ಮುನವಳ್ಳಿಯಲ್ಲಿ ಇದ್ದರು. ಮತ್ತೊಬ್ಬನ ಪಾಲುದಾರಿಕೆಯಲ್ಲಿ ವ್ಯವಹಾರವೊಂದನ್ನು ಪ್ರಾರಂಭಿಸಿದ್ದರಾದರೂ ಪಾಲುದಾರನ ವಂಚಕ ಬುದ್ಧಿಯಿಂದಾಗಿ ಅದನ್ನೂ ಕೈ ಬಿಟ್ಟಿದ್ದರು. ಕೊನೆಗೆ ತಲ್ಲೂರ ಶೆಟ್ಟರು ಎಂದು ಕರೆಸಿಕೊಳ್ಳುತ್ತಿದ್ದ ತನ್ನ ಸೋದರಮಾವಂದಿರ ಆಶ್ರಯಕ್ಕೆ ಬೈಲಹೊಂಗಲಕ್ಕೆ ಬಂದರು. ಆಮೇಲೆ ಬೈಲಹೊಂಗಲದ ಪ್ರತಿಷ್ಠಿತ ಜಿ.ಎಸ್.ಮೆಟಗುಡ್ ಅವರ ವಿಜಯ ಕಾಟನ್ ಮತ್ತು ಆಯಿಲ್ ಮಿಲ್ ನಲ್ಲಿ ಕಾರಕೂನ ಅಥವಾ ಅಕೌಂಟಂಟ್ ನೌಕರಿ ಸೇರಿ ಪ್ರತ್ಯೇಕವಾಗಿ ಬದುಕಿದರು.
ಹಾಗೆ ಬೈಲಹೊಗಲದಲ್ಲಿ ನನ್ನ ನೆನಪುಗಳು ನಿಚ್ಚಳವಾಗಿ ಹಿಂದಕ್ಕೆ ಹೋಗುವಷ್ಟು ಅವಧಿಯಲ್ಲಿ ನಾವು ಬದುಕಿದ್ದು ಒಂದು ತೀರ ಸಾಮಾನ್ಯ ಮನೆಯಲ್ಲಿ. ಅದಕ್ಕೆ ನಾನಾಗಲೇ ಪ್ರಸ್ತಾಪಿಸಿದ ಪ್ರತ್ಯೇಕವಾಗಿದ್ದ ಒಂದು ಹೊರಕೋಣೆ, ಅದನ್ನು ಬಿಟ್ಟರೆ ಎರಡೇ ಅಂಕಣ- ಒಂದು ಪಡಸಾಲೆ ಮತ್ತು ಒಂದು ಅಡುಗೆಮನೆ.ದೊಡ್ಡದಾಗಿದ್ದ ಅಡುಗೆಮನೆಯ ಒಂದು ಮೂಲೆಯಲ್ಲಿ ಬಚ್ಚಲಿತ್ತು. ಹಿತ್ತಲಲ್ಲಿ ಕಸಕಡ್ಡಿ ಸಗಣಿ-ಗಂಜಳಗಳ ತಿಪ್ಪೆ. ಏಕೆಂದರೆ ನಮ್ಮವ್ವ ಒಂದು ಆಕಳನ್ನು ಸಾಕಿಕೊಂಡಿದ್ದಳು. ಇನ್ನುಳಿದಂತೆ ಸಾಧುವಾಗಿದ್ದ ಆ ಆಕಳಿಗೆ "ಕಾವಕೂಲಿ"ಗೆ ಹೊಡೆದುಕೊಂಡು ಹೋದವ ಸಂಜೆ ಒಮ್ಮೊಮ್ಮೆ ಮನೆಯ ತಿರುವಿನಲ್ಲೇ ಅದನ್ನು ಬಿಟ್ಟು ಹೋದ ಮೇಲೆ ಮನೆಗೆ ಬರದೇ ಸಮೀಪದಲ್ಲಿದ್ದ ಹೊಲ-ಗದ್ದೆಗಳಲ್ಲಿ ತುಡುಗು ಮೇಯುವ ಚಟವಿತ್ತು. ಅದನ್ನು ಕೊಂಡವಾಡಕ್ಕೆ ಒಯ್ದು ಹಾಕಿದರೆ ದಂಡ ತೆರಬೇಕಾದೀತೆಂಬ ಕಾರಣಕ್ಕೆ ನನ್ನವ್ವ ಅದನ್ನು ಕರೆತರಲು ನನ್ನಣ್ಣ ಬಸವರಾಜನನ್ನು-ಅವನಾಗ ಹೈಸ್ಕೂಲ್ ವಿದ್ಯಾರ್ಥಿ-ಕಳಿಸುತ್ತಿದ್ದಳು. ಅದರ ಬೆಂಬತ್ತಿ ಓಡಾಡಿ ಕೋಲಿ ಹಾಯ್ದು ಕೆಸರು ತುಳಿದು ಅಣ್ಣ ಅದು ಹೇಗೋ ಕರೆತಂದಾದ ಮೇಲೆ ಅದನ್ನು ಕಟ್ಟಿಹಾಕಿ "ದನಕ್ಕೆ ಬಡಿದಂತೆ" ಬಡಿದು ತನ್ನ ಕೋಪ ಶಮನಗೊಳಿಸಿಕೊಳ್ಳುತ್ತಿದ್ದ.
ಒಂಬತ್ತು ಮಕ್ಕಳ ಪೈಕಿ ಚೊಚ್ಚಲು ಮಗುವಾಗಿ ಹುಟ್ಟಿ ಎಳವೆಯಲ್ಲೇ ತೀರಿಹೋದ ಒಂದು ಗಂಡು ಮತ್ತು ಬಾಲ್ಯಾವಸ್ಥೆಗೆ ತಲುಪಿ ಕಣ್ಮುಚ್ಚಿದ ಒಂದು ಹೆಣ್ಣು ಬಿಟ್ಟು ಉಳಿದವರು ನಾವು ಏಳು ಜನ ಇದ್ದೆವು. ಅಕ್ಕಂದಿರ ಪೈಕಿ ಶಾಂತಕ್ಕ ಎಂಬುವಳನ್ನು ನನ್ನ ಸೋದರಮಾವನಿಗೆ ಮದುವೆ ಮಾಡಿಕೊಟ್ಟಿದ್ದು ಅವಳು ನನ್ನ ತಾಯಿಯ ತವರೂರಾಗಿದ್ದ ಸವದತ್ತಿ ತಾಲೂಕಿನ ಸತ್ತೀಗೇರಿಯಲ್ಲಿದ್ದುದರಿಂದ ನಮ್ಮ ಮನೆಯಲ್ಲಿ ನಾವು ಆರು ಜನ ಮಕ್ಕಳು, ನನ್ನ ತಂದೆ,ತಾಯಿ ಹಾಗೂ ನಮ್ಮ ಅಜ್ಜ ಹೀಗೆ ಒಂಬತ್ತು ಜನ ಇದ್ದೆವು. ಕೊನೆಯವನಾಗಿ ಹುಟ್ಟಿದ ನನ್ನ ತಮ್ಮ ಆಗಿನ್ನೂ ಕೈಗೂಸು. ಅವನು ಹುಟ್ಟುವ ಹೊತ್ತಿಗೆ ನನ್ನ ತಂದೆಗೆ ೫೦ ವರ್ಷ, ನನ್ನ ತಾಯಿಗೆ ೪೦. ಆ ವಯಸ್ಸಿನಲ್ಲಿ ಮತ್ತೊಂದು ಹಡೆಯಬೇಕಾಗಿ ಬಂದುದು "ನಾಚಿಕಿ ಸಾವಾ"ಗಿತ್ತು ಎಂದು ನನ್ನವ್ವ ಒಮ್ಮೆ ಅಂದಂತಿತ್ತು. ಅದು ಸಂಕೋಚವೋ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಂಬತ್ತು ಮಕ್ಕಳನ್ನು ಹಡೆಯುವ ಸ್ಥಿತಿಯ ಕುರಿತ ಬೇಸರವೋ ಗೊತ್ತಿಲ್ಲ.
ಆಗ ನನ್ನ ತಂದೆಗೆ ಸಿಗುತ್ತಿದ್ದುದು ವಾರಕ್ಕೆ ೨೫ ಅಂದರೆ ತಿಂಗಳಿಗೆ ೧೦೦ ರೂಪಾಯಿಯ ವೇತನ. ಅದರಲ್ಲಿ ಮನೆ ಬಾಡಿಗೆ ಎಂದು ೧೦ ರೂಪಾಯಿ ಕಳೆದು ಉಳಿದ ೯೦ ರೂಪಾಯಿಯಲ್ಲಿ ಒಂಬತ್ತು ಜನರ ಬದುಕು ನಡೆಯಬೇಕಿತ್ತು. ಈಗ ನಾನು ಹೇಳುತ್ತಿರುವುದು ೧೯೬೨-೬೩ರ ಮಾತು. ಬಾಡಿಗೆಯ ಹತ್ತು ರೂಪಾಯಿ ಕೊಡುವಲ್ಲಿ ವಿಳಂಬವಾದರೆ ಮನೆಯ ಮಾಲಿಕ ಯಡಳ್ಳಿ ಬಸವಣ್ಣೆಪ್ಪನೆಂಬ ವೃದ್ಧ ಬಂದು ಮನೆಯಂಗಳದಲ್ಲಿ ನಿಂತು ಕೂಗಾಡುವದು ಶತಸ್ಸಿದ್ಧವಿತ್ತು. ಬ್ರಿಟಿಷರಂಥ ಸ್ವಚ್ಛ ಮೈಬಣ್ಣದ ಆ ಸ್ಫುರದ್ರೂಪಿ ಮುದುಕ ತಲೆಯ ಮೇಲೊಂದು ಹಳದಿ ರುಮಾಲು ಸುತ್ತಿ, ಬಿಳಿ ಅಂಗಿ,ಕೋಟು,ಧೋತರ ಉಟ್ಟು, ಕೈಲೊಂದು ಛತ್ರಿ ಹಿಡಿದು ಬರುತ್ತಿದ್ದ. ತಲೆಯ ಮೇಲಿನ ರುಮಾಲು ತೆಗೆದು ಮೈಸೂರು ಪೇಟ ತೊಡಿಸಿದರೆ ಸಾಕ್ಷಾತ್ ಮುದ್ದೇನಹಳ್ಳಿಯ ಮೋಕ್ಷಗುಂಡಂ ವಿಶ್ವೇಶ್ವರಯ್ಯ! "ಕೊಡತೀವ್ ತೊಗೊರ್ರಿ, ಮುಂದಿನ ವಾರ ಕೊಡತೀವ್ ತೊಗೊರ್ರಿ" ಎಂದು ನನ್ನ ಅವ್ವ- ಅಕ್ಕ ವಿನಂತಿಸಿ ಅವನನ್ನು ಸಾಗಹಾಕಿದ ಮೇಲೆ ಅವನು ಹೇಗೆ ಮುಖವೆತ್ತಿ ಮಾತಾಡಿದ, ಒಂದು ಕಾಲು ಮುಂದಿಟ್ಟು ಛತ್ರಿಯ ಸಮೇತ ಹೇಗೆ ಕೈ ಮೇಲೆತ್ತೆತ್ತಿ ಕೂಗಾಡಿದ ಎಂದು ನಾನು ನನ್ನ ಅಕ್ಕಂದಿರು ನಗಾಡುತ್ತಿದ್ದೆವು. ನನ್ನವ್ವ ಅಪ್ಪನಿಗೂ ಇದು ಸಮ್ಮತವೇ ಇರುತ್ತಿತ್ತು. ಏಕೆಂದರೆ ಅವರೂ ನಗೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ವಾಸ್ತವವಾಗಿ ಬದುಕು ಕಷ್ಟಸಾಧ್ಯವಾಗಿತ್ತು. ಪಡಸಾಲೆಯ ನೆಲದ ಮೇಲೆ ಜಮಖಾನ ಹಾಸಿ ಎಲ್ಲರೂ ಒಬ್ಬರ ಪಕ್ಕದಲ್ಲೊಬ್ಬರು ಮಲಗುತ್ತಿದ್ದೆವು. ಆ ಮನೆಯಲ್ಲಿ ತುಂಬಿಕೊಳ್ಳುತ್ತಿದ್ದ ಹೊಗೆ ನಮ್ಮ ಅತಿ ದೊಡ್ಡ ಸಮಸ್ಯೆಯಾಗಿತ್ತು. ಚಿಕ್ಕ ಕಿಟಕಿಯೊಂದರ ಹೊರತು ಅದಕ್ಕೊಂದು ಔಟ್ ಲೆಟ್ ಅಂತ ಇರಲಿಲ್ಲ. ಅದು ಅಲ್ಲೇ ಸುತ್ತಿ ಮನೆಗೋಡೆಗಳು ಮಸಿಹಿಡಿದಿದ್ದವು. ನನ್ನವ್ವ ಪ್ರತಿನಿತ್ಯ ಅದನ್ನು ಶಪಿಸುತ್ತಿದ್ದಳು. ಮನೆಯಲ್ಲಿ ಕತ್ತಲೆ ಸದಾ ಡೇರೆ ಹಾಕಿರುತಿತ್ತು.
ನನ್ನ ತಂದೆಯ ಸೋದರಮಾವಂದಿರಿಗೆ ಪೇಟೆಯ ಉಪಬೀದಿಯಲ್ಲಿ ಸ್ವಂತ ಮನೆಗಳಿದ್ದವು, ಕಮೀಶನ್ ಏಜನ್ಸಿ ಇತ್ತು, ಸ್ಥಿತಿವಂತಿಕೆ ಇತ್ತು. ಚನಬಸಪ್ಪ ಮತ್ತು ಅಪ್ಪಯ್ಯಪ್ಪ ಎಂಬ ಆ ಸೋದರಮಾವಂದಿರ ಪೈಕಿ ಹಿರಿಯವನಾದ ಚನಬಸಪ್ಪ-ಅದಾಗಲೇ ಹಣ್ಣು ಹಣ್ಣು ಮುದುಕನಾಗಿದ್ದವ-ಹೊರಕೋಣೆಯಲ್ಲಿ ಒಬ್ಬನೇ ಇಸ್ಪೀಟ್ ಎಲೆಗಳನ್ನು ಹರವಿಕೊಂಡು ಅದೇನೋ ಆಡುತ್ತ ಕುಳಿತಿರುತ್ತಿದ್ದ. ಯಲಿಗಾರ್ ಮನೆತನದ ಬಾಲಕನೊಬ್ಬ ತನ್ನ ತಾಯಿಯ ತವರೂರಾದ ಹುಣಸಿಕಟ್ಟೆಯಿಂದ ಬಂದು ಹಾಗೊಮ್ಮೆ ಭೆಟ್ಟಿಯಾದ ಸಂದರ್ಭದಲ್ಲಿ ಚನಬಸಪ್ಪ ಅವನಿಗೆ ಹೇಳಿದ್ದು, "ತಮ್ಮಾ ನಿನಗೆ ವಿದೇಶಯೋಗವಿದೆ ಎಂಬ ಮಾತು. ಅದು ಸತ್ಯವಾಯಿತು. ಮುಂದೆ ಕುಮಾರಸ್ವಾಮಿಗಳೆಂದು ಖ್ಯಾತರಾದ ಆ ಯೋಗಿ ದೇಶ ವಿದೇಶ ಸುತ್ತಿ, ಪೋಪ್ ಜಾನ್ ಪಾಲ್ ರನ್ನು ವ್ಯಾಟಿಕನ್ ಸಿಟಿಯಲ್ಲಿ ಕಂಡು ಇಷ್ಟಲಿಂಗವನ್ನು ಕೊಟ್ಟು ಬಂದರು. ಧಾರವಾಡದಲ್ಲಿ ತಪೋವನ ಸ್ಥಾಪಿಸಿದರು. ಇದನ್ನೆಲ್ಲ ನನ್ನ ತಂದೆ ಹೇಳುತ್ತಿದ್ದರು. ಆದರೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ತಲ್ಲೂರ ಶೆಟ್ಟರ ಮನೆಯಲ್ಲಿ ನಮಗೆ ನಿಯಮಿತವಾಗಿ ಆಮಂತ್ರಣವಿರುತ್ತಿದ್ದು ಆಗ ಊಟಕ್ಕೆ ನಮ್ಮ ತಂದೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದುದು ಬಿಟ್ಟರೆ ಇನ್ನುಳಿದಂತೆ ಸಹಾಯ ಯಾಚಿಸಿಯಾಗಲಿ ಸುಮ್ಮನೇ ಆಗಲಿ ಅವರಲ್ಲಿ ಹೋಗುತ್ತಿರಲಿಲ್ಲ.
ನಮ್ಮ ತಂದೆ ಬದುಕನ್ನು ಸ್ವೀಕರಿಸಿದ ರೀತಿಯೇ ಅದ್ಭುತವಾಗಿತ್ತು. ಬೈಲಹೊಂಗಲಕ್ಕೆ ಬಂದು ನೆಲೆಗೊಳ್ಳುವ ಮುನ್ನ ಗೋಕಾಕದಲ್ಲಿ ಇದ್ದಾಗಲೇ ನನ್ನ ತಂದೆ ಮತ್ತು ಅವರ ತಮ್ಮ ಮಹಾಲಿಂಗಪ್ಪ ಶೆಟ್ಟರ್ ಇಬ್ಬರೂ ಪೂರ್ಣಪ್ರಮಾಣದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು. ರಾಷ್ಟ್ರೀಯವಾದ ನನ್ನ ತಂದೆಯ ಆದರ್ಶವಾಗಿತ್ತು. ಅನಿಶ್ಚಿತತೆ, ಸಂಸಾರದ ತೊತ್ತಳದುಳಿತಗಳು ಅದಕ್ಕೆ ತಡೆಯಾಗಲಿಲ್ಲ. ಯರವಡಾ, ಹಿಂಡಲಗಾ ಜೇಲುಗಳಲ್ಲಿಯ ತಮ್ಮ ವಾಸದ ಅವಧಿಯ ನೆನಪುಗಳನ್ನು ನಮ್ಮ ತಂದೆ ನನ್ನೊಂದಿಗೆ ಹಲವು ಸಲ ಬಿಚ್ಚುತ್ತಿದ್ದರು. ಅದರಲ್ಲಿ ಒಂದು ಘಟನೆ ನನಗೆ ನನ್ನ ತಂದೆಯ ನಿರ್ಧಾರದ ದಿಟ್ಟತನವನ್ನು ತೋರಿತ್ತು. ಹಾಗೆ ಒಮ್ಮೆ ಅವರು ಬ್ರಿಟಿಷ್ ಸರಕಾರದಿಂದ ಶಿಕ್ಷೆಗೊಳಗಾಗಿ ಜೇಲಿನಲ್ಲಿದ್ದಾಗ ನನ್ನ ತಾಯಿಗೆ ಅವಳ ತವರಿನಲ್ಲಿ ಹೆರಿಗೆಯಾಗಿ, ಆ ಸಂದರ್ಭದಲ್ಲಿ ನಮ್ಮ ತಂದೆಯವರನ್ನು ನೋಡಬೇಕೆನ್ನಿಸಿ ಪತ್ರ ಬರೆಸಿದ್ದರಂತೆ. ಜೇಲಿನ ಆಡಳಿತ ಅವರನ್ನು ಪೆರೋಲ್ ಮೇಲೆ ಬಿಡಲು ಸಿದ್ಧವೂ ಆಯಿತು. ಆದರೆ ಅದಕ್ಕೊಂದು ಪೂರ್ವಶರತ್ತು ಇತ್ತು. ಸತ್ಯಾಗ್ರಹದಲ್ಲಿ ತಾನು ಪಾಲ್ಗೊಂಡಿದ್ದು ತಪ್ಪು ಎಂದು ನನ್ನ ತಂದೆ ಲಿಖಿತವಾಗಿ ಕ್ಷಮಾಪಣೆ ಕೋರಬೇಕಿತ್ತು. ನನ್ನ ತಂದೆ ಅದಕ್ಕೆ ಸಿದ್ಧರಾಗಲಿಲ್ಲ. ಅವರ ಮನದಲ್ಲಿದ್ದ ಆಲೋಚನೆಗಳು ಬಹುಶ: ಎರಡು- ಮೊದಲನೆಯದು ಆದರ್ಶದ ಮಾತು. ನನ್ನ ತಂದೆ ಸ್ವತ: ಗಾಂಧೀಜಿಯವರನ್ನು ಕಂಡು ಸತ್ಯಾಗ್ರಹದಲ್ಲಿ ಭಾಗವಹಿಸುವ ಇಚ್ಚೆಯನ್ನು ವ್ಯಕ್ತಗೊಳಿಸಿ ಧುಮುಕಿದ್ದ ಆಂದೋಲನವಾಗಿತ್ತದು. (ಗಾಂಧೀಜಿಯನ್ನು ಮುಖತ: ಕಂಡು ವೈಯಕ್ತಿಕ ಸತ್ಯಾಗ್ರಹದಲ್ಲಿ ಭಾಗವಹಿಸುವದಾಗಿ ಹೇಳಿ ಅವರ ಸಮ್ಮತಿ ಪಡೆದು ಬಂದದ್ದು ನನ್ನ ತಂದೆಯ ಮಟ್ಟಿಗೆ ತಮ್ಮ ಬದುಕಿನ ಅತ್ಯಂತ ಸ್ಮರಣಾರ್ಹ ಘಟನೆಯಾಗಿತ್ತು). ಎರಡನೆಯದು ಸರಳ ತರ್ಕದ ಮಾತು. ಹೇಗೂ ಕೂಸು ಬಾಣಂತಿ ಆರಾಮವಾಗಿದ್ದಾರೆ ಎಂದಿತ್ತು ಪತ್ರ. ಹಾಗಿದ್ದ ಮೇಲೆ ಹೋಗುವ ಅಗತ್ಯವೇನು?
ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಚಿಂತನೆಯನ್ನು ವ್ಯಕ್ತಿತ್ವವನ್ನು ತೀವ್ರವಾಗಿ ಪ್ರಭಾವಿಸಿದ ವಿಚಾರಗಳು ತತ್ತ್ವಗಳು ಸ್ವಾತಂತ್ರ್ಯಾನಂತರ ನನ್ನ ತಂದೆಯ ಬದುಕಿನ ಆದರ್ಶಗಳಾದವು. ನನ್ನ ತಂದೆಯ ವ್ಯಕ್ತಿತ್ವಕ್ಕೊಂದು ಸರಳತೆ ಇತ್ತು, ಸಜ್ಜನಿಕೆ ಇತ್ತು. ಬಿಳಿಯ ಉದ್ದ ತೋಳಿನ ಶರ್ಟು,ಕೋಟು,ಧೋತರ ಹಾಗೂ ಗಾಂಧೀ ಟೋಪಿ ಇವು ಜೀವನದುದ್ದಕ್ಕೂ ಅವರ ಉಡುಗೆಗಳು. ಸಭ್ಯತೆ ಅವರ ವ್ಯಕ್ತಿತ್ವದ ಒಟ್ಟು ಸಾರ. ಯಾರೊಂದಿಗೂ ಅವರು ಕಲಹ ಮಾಡಿದ್ದಾಗಲಿ, ತಮಗೆ ಸಂಬಂಧವಿರದ ವಿಷಯಗಳಲ್ಲಿ ತಲೆ ಹಾಕಿದ್ದಾಗಲಿ, ಅವರಿವರ ಬಗ್ಗೆ ಸಲ್ಲದ ಮಾತಾಡಿದ್ದಾಗಲಿ ನಾನೆಂದೂ ನೋಡಲಿಲ್ಲ. ಯಾವ ವ್ಯಸನಗಳೂ ಇರಲಿಲ್ಲವಾಗಿ ಸ್ವಂತದ್ದೆನ್ನುವ ಖರ್ಚುಗಳೂ ಇರಲಿಲ್ಲ. ವೇತನದ ಹಣವೆಲ್ಲವನ್ನೂ ಮನೆಗೆ ಕೊಡುತ್ತಿದ್ದರು. ಅವ್ವ ಮತ್ತು ನಮ್ಮ ಹಿರಿಯಕ್ಕ, ಗೌರಕ್ಕ, ಹೇಗೋ ನಿಭಾಯಿಸುತ್ತಿದ್ದರು.
ಅಂಥ ದುರ್ಭರ ದಿನಗಳಲ್ಲೇ ನನ್ನ ಹಿರಿಯ ಸೋದರಮಾವ ವೀರಣ್ಣ ಬಸವಂತಪ್ಪ ಮರಡಿಯನ್ನು ಸತ್ತೀಗೇರಿಯಲ್ಲಿ ಗುಂಡಿಟ್ಟು ಕೊಲ್ಲಲಾಯಿತು. ತನ್ನ ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಆತ ನನ್ನ ಹಿರಿಯಕ್ಕ ಗೌರಕ್ಕನನ್ನು ಮದುವೆಯಾಗಿದ್ದ. ಈ ಮದುವೆಯಾದ ಕೆಲವೇ ತಿಂಗಳಲ್ಲಿ ಈ ಕೊಲೆ ನಡೆದುಹೋಗಿತ್ತು. ರಸಿಕತನ, ಆತ್ಮವಿಶ್ವಾಸ, ಅಚ್ಚುಕಟ್ಟಾದ ವೇಷಭೂಷಣ, ಹಾಗೂ ಸುಶಿಕ್ಷಿತ ನಡಾವಳಿಗಳಿಂದ ಕೂಡಿದ ಆಕರ್ಷಕ ವ್ಯಕ್ತಿತ್ವದಿಂದಾಗಿ ಆತ ಸುತ್ತ ಫಾಸಲೆಯಲ್ಲಿ ಎದ್ದು ಕಾಣುವ ಗರಿಮೆಯೊಂದನ್ನು ಹೊಂದಿದ್ದ. ಆತನ ವರ್ಚಸ್ಸು ಸಹಿಸದೇ ಆತನ ಗೆಳೆಯನೇ ಆಗಿದ್ದ ಊರ ಗೌಡ ಆತನಿಗೆ ಗುಂಡಿಕ್ಕಿದ್ದ. ಆ ನನ್ನ ಸೋದರಮಾವ ಬೈಲಹೊಂಗಲಕ್ಕೆ ಬಂದಾಗ ಪಡಸಾಲೆಯ ಗೋಡೆಯಲ್ಲಿದ್ದ ಗೂಟಕ್ಕೆ ತೂಗುಹಾಕಿರುತಿದ್ದ ಜೋಡುನಳಿಗೆಯ ಬಂದೂಕು ನಮಗೆ ಅಚ್ಚರಿಯ ಭಯದ ವಸ್ತುವಾಗಿ ಕಾಣುತ್ತಿತ್ತು. ತನ್ನ ಅಣ್ಣನನ್ನು ಕೊಂದ ಪಾಟೀಲನನ್ನು ಗುಂಡಿಕ್ಕಿ ಕೊಂದು ಸೇಡು ತೀರಿಸಿಕೊಳ್ಳಲೆಂದು ಈಗ ಧಾರವಾಡದಲ್ಲಿ ನೆಲೆಸಿರುವ ನನ್ನ ಕಿರಿಯ ಸೋದರಮಾವ ಗುರುಸಿದ್ದಪ್ಪ ಮರಡಿ ಅದು ಹೇಗೋ ಒಂದು ಕಂಟ್ರಿ ಪಿಸ್ತೂಲು ಸಂಪಾದಿಸಿ ಅದು ಜಪ್ತಿಯಾಗಿ ಪೋಲೀಸರು ಹುಡುಕತೊಡಗಿದಾಗ ತನ್ನ ಹೆಂಡತಿ (ನನ್ನ ಇನ್ನೊಬ್ಬ ಅಕ್ಕ ಶಾಂತಕ್ಕ) ಹಾಗೂ ಮಗನನ್ನು ತಂದು ನಮ್ಮ ಮನೆಯಲ್ಲೇ ಇರಿಸಿ ತಾನು ತಲೆಮರೆಸಿಕೊಂಡ. ಈ ಹೆಚ್ಚುವರಿ ಸದಸ್ಯರಿಂದಾಗಿ ಪರಿಸ್ಥಿತಿ ಮತ್ತಷ್ಟು ದುರ್ಭರವಾಗಿರಬೇಕು.
ಆದರೆ ನನ್ನ ತಂದೆ ಚಿಂತಾಕ್ರಾಂತರಾಗಿ ತಲೆ ಮೇಲೆ ಕೈಹೊತ್ತು ಕುಳಿತದ್ದಾಗಲೀ, ಕೈಲಾಗದವರಂತೆ ಸಿಡುಕಿದ್ದಾಗಲೀ, ಅಸಹನೆಯಿಂದ ವರ್ತಿಸಿದ್ದಾಗಲೀ,ಸಾಲ-ಸೋಲ ಮಾಡಿದ್ದಾಗಲೀ ನಮಗೆ ಅನುಭವಕ್ಕೆ ಬರಲಿಲ್ಲ. ನಾನು ಈಗ ಯೋಚಿಸುವಂತೆ ನಾವಾಗ ಬದುಕಿದ್ದ ಪರಿಸರ ನಮ್ಮ ತಂದೆಯ ಸುಸಂಸ್ಕೃತ ವ್ಯಕ್ತಿತ್ವಕ್ಕಾಗಲೀ ನಮ್ಮ ಕುಟುಂಬದ ಹಿನ್ನೆಲೆಗಾಗಲಿ ಪ್ರಶಸ್ತವಾದುದಾಗಿರಲಿಲ್ಲ. ಬಸ್ ಸ್ಟ್ಯಾಂಡಿನ ಪಾರ್ಶ್ವದಲ್ಲಿ ಎರಡು ತೋಟಗಳ ನಡುವೆ ನೇರವಾಗಿ ಸಾಗುವ ಬೀದಿಯ ಕೊನೆಯೇ ನಮ್ಮ ಓಣಿಯಾಗಿತ್ತು. ಅದನ್ನು ತಾಸೇದಾರ ಓಣಿ ಎನ್ನುತ್ತಿದ್ದರು. ಅಲ್ಲಿಯ ಮನೆಗಳಲ್ಲಿ ಬಾಡಿಗೆಗೆ ಇದ್ದುದು ಬಹುಪಾಲು ಸಭ್ಯ ಜನರೇ. ನಮ್ಮ, ಒಬ್ಬ ಉಡುಪಿ ಹೊಟೆಲ್ ಮಾಲೀಕನ, ಕೆಎಸ್ಸಾರ್ಟಿಸಿಯ ಒಬ್ಬ ಡ್ರೈವರನ, ಮತ್ತೊಬ್ಬ ಕಂಡಕ್ಟರನ ಮನೆಗಳು, ಮತ್ತೆ ಕೆಲವು ಮುಸ್ಲಿಮರ ಮನೆಗಳು ಒಂದು ಸಾಲಿನಲ್ಲಿದ್ದವು. ಕಿರಿದಾದ ರಸ್ತೆಯಾಚೆ ನಮಗೆದುರಾಗಿದ್ದ ಗಿರೆಣ್ಣವರ ಎಂಬುವರ ಮನೆಯ ಬಾಗಿಲು ವಾಸ್ತವವಾಗಿ ಅವರ ಹಿತ್ತಿಲು ಬಾಗಿಲಾಗಿದ್ದು ಅಲ್ಲಿ ಪ್ರವೇಶಿಸಿ ತಲೆಬಾಗಿಲಿನಿಂದ ಹೊರಬಿದ್ದರೆ ಅದು ರಾಣಿ ಕಿತ್ತೂರು ಚೆನ್ನಮ್ಮನನ್ನು ಬಂಧಿಸಿಟ್ಟ ಸೆರೆಮನೆಯ ಶಿಥಿಲ ಅವಶೇಷಗಳಿಗೆ ಮುಖ ಮಾಡಿ ತೆರೆದುಕೊಳ್ಳುತ್ತಿತ್ತು. ಅದಕ್ಕೆ ಹೂಡೆ ಎನ್ನುತ್ತಿದ್ದರು. ಹೀಗಾಗಿ ಅದು ಹೂಡೇದ ಓಣಿ. ಆ ಒಟ್ಟು ಪರಿಸರದಲ್ಲಿ ಕೆಲ ಮನೆಗಳಲ್ಲಿ ಬಟ್ಟಿ ಸಾರಾಯಿ ತಯಾರಾಗುತ್ತಿತ್ತೆಂಬ ಕಾರಣಕ್ಕೆ ಆಗಾಗ ರೇಡ್ ಮಾಡುತ್ತಿದ್ದ ಪೋಲೀಸಿನವರು ಅಂಥವರ ಮನೆಗಳನ್ನಷ್ಟೇ ಅಲ್ಲದೇ ನಮ್ಮ ಮನೆಯನ್ನು ಒಳಗೊಂಡು ಸಾಲು ಮನೆಗಳನ್ನು ಪ್ರವೇಶಿಸಿ ಹಿತ್ತಲಿನ ತಿಪ್ಪೆಗಳನ್ನು ಕೋಲು ಚುಚ್ಚಿ ಪರೀಕ್ಷಿಸುತ್ತಿದ್ದರು. ಬಟ್ಟಿಸಾರಾಯಿಯನ್ನು ಕದ್ದು ಮುಚ್ಚಿ ಕುಡಿಯಲು ಗಿರಾಕಿಗಳು ಅಲ್ಲಿಗೆ ಬರುತ್ತಿದ್ದುದು, ಕೆಲವರು ತಮ್ಮ ಉಪಪತ್ನಿಯರನ್ನು ಅಲ್ಲಿಯ ಒಂದೆರಡು ಮನೆಗಳಲ್ಲಿ ನೆಲೆಗೊಳಿಸಿದ್ದು ಹೀಗೆ ಒಂದು ನಿಗೂಢತೆ ಅಲ್ಲಿತ್ತೇನೋ. ಹಾಗೆ ನಮ್ಮ ಮನೆಯ ಹಿತ್ತಿಲನ್ನು ಪರೀಕ್ಷಿಸುತ್ತಿದ್ದ ಪೋಲಿಸರು ಕೊನೆಗೆ ಅದು ಮೆಟಗುಡ್ ಅವರ ಮಿಲ್ಲಿನಲ್ಲಿ ಉದ್ಯೋಗಿಯಾಗಿದ್ದ ವೀರಪ್ಪ ಶೆಟ್ಟರೆಂಬ ಸಜ್ಜನನೊಬ್ಬನ ಮನೆಯೆಂದು ಮನದಟ್ಟಾಗಿ ಹಾಗೆ ಮಾಡುವದನ್ನು ನಿಲ್ಲಿಸಿದರು.