Sunday, February 10, 2013

ಧಾರವಾಡ ಸಾಹಿತ್ಯ ಸಂಭ್ರಮವೆಂಬ ದಿಗ್ಭ್ರಮೆ

                                  

ಇದೇ (ಜನವರಿ, ೨೦೧೩) ೨೫,೨೬,೨೭ರಂದು  ಧಾರವಾಡ ಸಾಹಿತ್ಯ ಸಂಭ್ರಮ ಎಂಬ ನೋಂದಾಯಿತ ಸಂಸ್ಥೆಯೊಂದು ಆಯೋಜಿಸಿರುವ ಮೂರು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ವಿಶೇಷ ಆಮಂತ್ರಿತನಾಗಿ ನಾನು ಪಾಲ್ಗೊಳ್ಳಬೇಕೆಂದು ಕೋರಿ ಶ್ರೀ ಗಿರಡ್ಡಿ ಗೋವಿಂದರಾಜ ಅವರು ಕಳಿಸಿದ ಮುದ್ರಿತ ಓಲೆ ತಲುಪಿದಾಗ ಕಳೆದ ಮೂರು ದಶಕಗಳಿಂದ ಧಾರವಾಡದ ಸಾಹಿತ್ಯಿಕ ಸಾಂಸ್ಕೃತಿಕ ಲೋಕವನ್ನು ಬಲ್ಲ ನನಗೆ ಸ್ವಲ್ಪ ವಿಚಿತ್ರವೆನಿಸಿತು. ಅವರ ಆತ್ಮೀಯ ಆಹ್ವಾನಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಲೇ ಸದರಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಾನು ಇಚ್ಛಿಸುವದಿಲ್ಲವೆಂದೂ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ ಪಡೆದಿರುವ ಈ ಮತ್ತು ಇಂಥ ಯಾವುದೇ ಸಾಹಿತ್ಯಿಕ ಸಾಂಸ್ಕೃತಿಕ ಸಮಾವೇಶಗಳು ಸಾರ್ವಜನಿಕ ಡೊಮೈನ್ ನಲ್ಲಿ ಇರುವಂಥವಾದ್ದರಿಂದ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ್ದರ ಬಗ್ಗೆ ನನಗೆ ವಿಷಾದವೇಕಿಲ್ಲ ಎಂಬುದನ್ನು ಸಾರ್ವಜನಿಕವಾಗಿಯೇ ಹೇಳಬಹುದೆನ್ನಿಸುತ್ತದೆ ಎಂದೂ ಭಾವಿಸಿ ನಾನು ಗಿರಡ್ಡಿಯವರಿಗೆ ಒಂದು ಬಹಿರಂಗ ಪತ್ರವನ್ನೂ ಬರೆದೆ.

ಗಿರಡ್ಡಿಯವರು ತಮ್ಮ ಪತ್ರದಲ್ಲಿ ಸರಿಯಾಗಿಯೇ ಹೇಳಿರುವಂತೆ ಧಾರವಾಡ ನಗರ ಅನೇಕ ಜನ ಸಾಹಿತಿ-ಕಲಾವಿದರ ನೆಲೆ, ಇಂದಿಗೂ ತನ್ನ ಹಿರಿಯ ಪರಂಪರೆಯನ್ನು ಕ್ರಿಯಾಶೀಲವಾಗಿ ಮುಂದುವರಿಸಿಕೊಂಡು ಬಂದಿರುವ ಊರು. ಆಯ್ದ ಕೆಲವರನ್ನು ಒಳಗೊಂಡು ಕೆಲವರನ್ನು ಹೊರಗಿಟ್ಟು ಅದು ಇಡೀ ಧಾರವಾಡದ ಪ್ರಾತಿನಿಧಿಕ ಸಂಸ್ಥೆ ಅಥವಾ ಕಾರ್ಯಕ್ರಮ ಎಂಬಂತಿದ್ದ ಈ ಪ್ರಯತ್ನ ಸ್ವಾಭಾವಿಕವಾಗಿಯೇ ಹಲವು ಪ್ರಶ್ನೆಗಳಿಗೆ ಜನ್ಮವಿತ್ತಿದೆ. ಧಾರವಾಡದ ವಿಶಿಷ್ಟವೂ ಶ್ರೀಮಂತವೂ ಆದ ಪರಂಪರೆಯ ವಾರಸುದಾರಿಕೆ ಯಾವೊಬ್ಬ ವ್ಯಕ್ತಿ, ಮನೆತನ,ಗುಂಪು, ಜಾತಿ,ಪಂಥಕ್ಕೆ ಸೇರಿದ್ದಲ್ಲ. ವಾಸ್ತವವಾಗಿ ಅದು ಬರಿದೇ ಧಾರವಾಡಕ್ಕೆ ಸೀಮಿತವಾದದ್ದೂ ಅಲ್ಲ. ಧಾರವಾಡ ನೆಲದಿಂದ ಹೊಮ್ಮಿದ  ಸಾಹಿತ್ಯ,ಸಂಗೀತ,ವಿಮರ್ಶೆ,ಚಿತ್ರಕಲೆ,ರಂಗಪ್ರಯೋಗಗಳೇ ಮೊದಲಾದ ಸಮೃದ್ಧಿಯನ್ನು,ಅದರ ಜೊತೆಜೊತೆಗೇ ಇಲ್ಲಿಯ ಸ್ನೇಹ,ಪ್ರೀತಿ,ಸಂಘರ್ಷ, ಪ್ರತಿಭಟನೆ, ಹೊಸತನದ ಹುಡುಕಾಟಗಳ ವಿಶಿಷ್ಟ ಪರಂಪರೆಯ ಕುರಿತು ಹೆಮ್ಮೆ-ಮೆಚ್ಚುಗೆಗಳನ್ನು ಇಟ್ಟುಕೊಂಡವರು ಧಾರವಾಡದ ಹೊರಗೂ ಇದ್ದಾರೆ. ಜೈಪುರದ ಸಾಹಿತ್ಯಹಬ್ಬದಿಂದ ಪ್ರೇರಿತರಾಗಿ ತಾವು "ಇನ್ನೊಂದು ಹೊಸ ಪ್ರಯೋಗ" ವೆಂದು ವ್ಯಾಖ್ಯಾನಿಸಿಕೊಂಡಿರುವ ಸಾಹಿತ್ಯ ಸಂಭ್ರಮದ ಒಟ್ಟಾರೆ ಸ್ವರೂಪ, ಧಾಟಿ ಧೋರಣೆ ಮತ್ತು ವಿಶೇಷವಾಗಿ ಅದರ ನಿಯಮ ನಿಬಂಧನೆಗಳು ಅಂಥ ಹಲವಾರು ಜನರನ್ನು ನಿರಾಶೆಗೊಳಿಸಿವೆ. ಅಂತರ್ಜಾಲ ತಾಣಗಳಲ್ಲಿ, ಬ್ಲಾಗ್ ಗಳಲ್ಲಿ, ದಿನಪತ್ರಿಕೆಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜೋಗಿ, ಜಿ.ಎನ್.ಮೋಹನ್, ಕೆ.ವಿ.ತಿರುಮಲೇಶ್, ರಹಮತ್ ತರೀಕೆರೆ, ಅಶೋಕವರ್ಧನ್, ಹೆಚ್.ಎಸ್.ರಾಘವೇಂದ್ರರಾವ್, ಕುಂ.ವೀರಭದ್ರಪ್ಪ, ಎಚ್.ಎಸ್.ಅನುಪಮಾ,ಬರಗೂರು ರಾಮಚಂದ್ರಪ್ಪ ಮುಂತಾದವರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು ಆ ನಿರಾಶೆಯನ್ನು ಶಕ್ತವಾಗಿಯೇ ಅಭಿವ್ಯಕ್ತಿಸಿವೆ. ಧಾರವಾಡದಂಥ ಅನೌಪಚಾರಿಕವೂ ಆತ್ಮೀಯವೂ ಆದ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳ ಪರಂಪರೆಗೆ ವ್ಯತಿರಿಕ್ತವಾದ ವಿಲಕ್ಷಣ ನಿಯಮಾವಳಿಗಳನ್ನು ಓದಿ ನಿರಾಶೆಗೊಂಡವರಲ್ಲಿ ನಾನೂ ಒಬ್ಬ."ಕಾರ್ಪೊರೇಟ್ ಜಗತ್ತು ಮತ್ತು ಕನ್ನಡ ಸಾಹಿತ್ಯ" ಎಂಬ ಒಂದು ಗೋಷ್ಠಿಯನ್ನೂ ಒಳಗೊಂಡಿರುವ ಈ ಸಮಾವೇಶ ವಾಸ್ತವವಾಗಿ ಕನ್ನಡ ಸಾಹಿತ್ಯ ಸೃಜನೆ-ವಿಮರ್ಶೆಗಳ ಲೋಕದ ಕಾರ್ಪೊರೇಟೀಕರಣದಂತೇ ಭಾಸವಾಗುತ್ತಿದೆ. ಇದನ್ನು ಕನ್ನಡದ ಮನಸು ಸೈರಿಸಿಕೊಳ್ಳುತ್ತದೆಂದು ನನಗನಿಸುವದಿಲ್ಲ.

                                  

ಸಾಹಿತಿ ಸಾಹಿತಿಗಳ ನಡುವೆ ಮತ್ತು ಲೇಖಕ ಓದುಗರ ನಡುವೆ ಆತ್ಮೀಯ ಸಂಬಂಧವನ್ನು ಬೆಳೆಸುವ ಉದ್ದೇಶವೂ ಈ ಸಂಭ್ರಮಕ್ಕಿದೆ ಎಂದು ಆಯೋಜಕರು ಹೇಳಿದ್ದಾರೆ. ಸರಿಯೇ. ಆದರೆ ಸಂಘಟಕರು ಮತ್ತು ಸಾವಿರದೈನೂರು ರೂಪಾಯಿ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಂಡ ಪ್ರತಿನಿಧಿಗಳ ನಡುವೆಯೂ ಒಂದು ಆತ್ಮೀಯ ಸಂಬಂಧ ಇರಬೇಕೆಂಬುದು ಅವರಿಗೆ ತೋಚಿರಲಿಲ್ಲವೆಂಬುದಕ್ಕೆ ನಿಯಮ ನಿಬಂಧನೆಗಳ ಕುರಿತ ಅವರ ಒಕ್ಕಣೆಯೇ ಸಾಕ್ಷಿ. "ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ ಕೂಡಿ ಕುಂತ ಜನಕೆಲ್ಲ ನಮ್ಮ ನಮನ" ಎಂದು ಕಂಬಾರರ ಒಂದು ಹಾಡಿನಲ್ಲಿ ಬರುವಂತೆ ರಂಗದ ಮೇಲೆ ದೇವಾಧಿದೇವತೆಗಳ ಪಾತ್ರಗಳೂ ಮೊದಲಿಗೆ ದೈವಕ್ಕೆ ಅಂದರೆ ಎದುರಿಗೆ ಕುಳಿತ ಪ್ರೇಕ್ಷಕ ಗಣಕ್ಕೆ ಕೈ ಮುಗಿದು ಆಟ ಪ್ರಾರಂಭಿಸುವ ಜಾನಪದೀಯ ಪರಂಪರೆ ನಮ್ಮದು. ಇವರಿಗೆ ಮಾದರಿಯಾದ ಜೈಪುರ ಲಿಟರರಿ ಫೆಸ್ಟಿವಲ್ ನಂಥವುಗಳಲ್ಲಿ ಅಂಥ ನಿಯಮ ನಿಬಂಧನೆಗಳು ಇರಲು ಕಾರಣವಾದ ಹಿನ್ನೆಲೆಗಳಿವೆ. ಈ ನೋಂದಾಯಿತ ಸಂಸ್ಥೆಯ ಗೌರವಾಧ್ಯಕ್ಷರುಗಳು, ಅಧ್ಯಕ್ಷರು, ಸದಸ್ಯರು ಧಾರವಾಡದಲ್ಲಿ ಹಲವಾರು ದಶಕಗಳಿಂದ ಇದ್ದವರು. ಸಾವಿರಾರು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿರುವವರು. ಎಷ್ಟು ಕಾರ್ಯಕ್ರಮಗಳಲ್ಲಿ ಅನುಚಿತವಾದ, ಅಸಭ್ಯವಾದ ವರ್ತನೆಯನ್ನು ೈವರು ಕಂಡಿದ್ದಾರೆ? ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ, ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನ್ನು ಕರಪತ್ರಗಳ ಮೂಲಕ ಹಂಚಿದ್ದನ್ನು ನೋಡಿದ್ದಾರೆ?? ಪ್ರಚಾರ ಸಾಮಗ್ರಿಯನ್ನು ಕಾರ್ಯಕ್ರಮದ ಸ್ಥಳ,ಪ್ರದೇಶ,ಸಭಾಂಗಣದಲ್ಲಿ ತಂದದ್ದನ್ನು ಅನುಭವಿಸಿದ್ದಾರೆ? ಕಾರ್ಯಕ್ರಮದ ಸ್ಥಳದಲ್ಲಿ ಆಸ್ತಿ-ಪಾಸ್ತಿಗಳಿಗೆ ಯಾರಾದರೂ ಧಕ್ಕೆ ಉಂಟು ಮಾಡಿದ ಎಷ್ಟು ಉದಾಹರಣೆಗಳು ಧಾರವಾಡದಂಥ ಒಂದು ಸಭ್ಯರ ಊರ ಪರಂಪರೆಯಲ್ಲಿವೆ? ಕಾರ್ಯಕ್ರಮದ ಸ್ಥಳದಲ್ಲಿ ಮದ್ಯ ಮಾದಕವಸ್ತುಗಳನ್ನು ತಂದು ಸೇವಿಸುವಂಥ ಅರಾಜಕರೇ ಧಾರವಾಡದ ಮಂದಿ? ಕಾರ್ಯಕ್ರಮದ ಪ್ರವೇಶಸ್ಥಳ/ಸಭಾಂಗಣದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ತರಬಾರದೆಂಬ ನಿಬಂಧನೆಯಂತೂ ಇವೆಲ್ಲವುಗಳ ಕಳಶ. ಇಂಥದೇನೂ ಎಂದೂ ಇಲ್ಲದ ಧಾರವಾಡದಲ್ಲಿ ಯಾಕಾಗಿ ಇಂಥ ಡಿಫೆನ್ಸಿವ್ ಕವಚದ ಅಗತ್ಯಇವರಿಗೆ ಕಂಡಿತು? ಏಕೆ ಇಂಥ ಹಾಸ್ಯಾಸ್ಪವ ಒಕ್ಕಣೆಯಿಂದ ಧಾರವಾಡವನ್ನು ಅವಮಾನಿಸಿದ್ದಾರೆ? ಧಾರವಾಡದಲ್ಲಿ ಪ್ರಗತಿಪರ ಯುವಕರು ಈ ಕುರಿತು ತಮ್ಮ ನೋವು, ವಿರೋಧ ವ್ಯಕ್ತಗೊಳಿಸಿದಾಗ ಸಂಘಟಕರು ಮಾಡಬಹುದಾಗಿದ್ದ ಕನಿಷ್ಟತಮ ಕೆಲಸವೆಂದರೆ ಆ ಅಚಾತುರ್ಯಕ್ಕಾಗಿ ಕ್ಷಮೆ ಕೇಳುವದು. ಆದರೆ ನಿಯಮ ನಿಬಂಧನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಅವುಗಳನ್ನು ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬಂತೆ ಸಂಘಟಕರು ಪತ್ರಿಕೆಗಳಿಗೆ ಹೇಳಿಕೆ ಕೊಟ್ಟ ಕುರಿತು ತಮ್ಮ ನೋವನ್ನು ಪ್ರಗತಿಪರ ಮನೋಭಾವನೆಯ ಯುವಬರಹಗಾರರು ನನ್ನೊಂದಿಗೆ ಹಂಚಿಕೊಂಡರು.

ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆದು ಕಡ್ಡಾಯವಾಗಿ ಕೊರಳಲ್ಲಿ ಧರಿಸಲು ನಿರ್ಬಂಧಿತರಾದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಷಣಕಾರರಲ್ಲ, ಅವರಿಗೆ ರಾತ್ರಿ ಭೋಜನ ವ್ಯವಸ್ಥೆ ಇರುವದಿಲ್ಲ ಅದನ್ನು ಅವರು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು, ಪರ ಊರಿನ ಪ್ರತಿನಿಧಿಗಳು ತಾವು ನಿಗದಿಗೊಳಿಸಿದ  ಹೊಟೆಲ್ ಗಳ ಲಿಸ್ಟ್ ನಲ್ಲಿರುವ ಹೊಟೆಲ್ ಗಳ ವ್ಯವಸ್ಥಾಪಕರನ್ನು ಕಂಡು ತಮ್ಮ ವಸತಿ ವ್ಯವಸ್ಥೆಯನ್ನೂ ತಾವೇ ಮಾಡಿಕೊಳ್ಳಬೇಕು, ಪ್ರತಿನಿಧಿಗಳಿಗೆ ವಾಹನ ಸೌಕರ್ಯ ಇರುವದಿಲ್ಲ ತಮ್ಮ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು....! ಇಂಥ ವರಸೆಯ ಸ್ವಾಗತ ಎಂಥ ಆತ್ಮೀಯತೆಯನ್ನು ಮೂಡಿಸಬಲ್ಲದೋ ಗೊತ್ತಿಲ್ಲ.

ಸಾಹಿತ್ಯದಲ್ಲಿ ಸಂಭ್ರಮದ ಒಂದು ಆಯಾಮ ಇದ್ದೇ ಇದೆ. ಅದರೆ ಇಲ್ಲಿ ಹಣದ, ಶ್ರೇಷ್ಠತೆಯ, ಅಹಮಿಕೆಯ ಧ್ವನಿಗಳು ಢಾಳಾಗಿ ಕಾಣುತ್ತಿವೆ ಎನ್ನಿಸುತ್ತಿದೆ. ಸಂಭ್ರಮಿಸಲು ತಕ್ಕುದಾದ ಮನಸ್ಥಿತಿಯೂ ಸನ್ನಿವೇಶವೂ ಇರಬೇಕಾಗುತ್ತದೆ. ನಮ್ಮ ಇಂದಿನ ಸನ್ನಿವೇಶ ಹಾಗಿದೆ ಎಂದು ಅನ್ನಿಸುತ್ತಿಲ್ಲ. ಇಂಥದರಲ್ಲಿ ಇವರು ಸಂಭ್ರಮಿಸಬಯಸುತ್ತಿದ್ದಾರೆ. ಅವರ ಸಂಭ್ರಮಕ್ಕೆ ಶುಭವಾಗಲಿ. ಆದರೆ ಹಲವು ಪ್ರಶ್ನೆಗಳು ಬಾಕಿ ಉಳಿಯುತ್ತವೆ, ಅವರ ಉತ್ತರದ ನಿರೀಕ್ಷೆಯಲ್ಲಿ..!


ಸಾಹಿತ್ಯ ಸಂಭ್ರಮ: ಮಳೆ ನಿಂತ ಮೇಲೆ ಕೆಲವು ಮರದ ಹನಿಗಳು


     ಧಾರವಾಡದಲ್ಲಿ ಧಾರವಾಡ ಸಾಹಿತ್ಯ ಸಂಭ್ರಮ ಎಂಬ ಖಾಸಗಿ ನೋಂದಾಯಿತ ಸಂಸ್ಥೆಯೊಂದು ಅಯೋಜಿಸಿದ್ದ ಅದೇ ಹೆಸರಿನ ಸಮಾವೇಶ ಮುಗಿದಿದೆ. ಅಲ್ಲೇನಾಯ್ತೋ, ಏನಿಲ್ಲವೋ, ಏನು ಸಾಧಿತವಾಯಿತೋ ಗೊತ್ತಿಲ್ಲ. ಅದರ ವರದಿಗಳನ್ನು ಓದಿದ ನಮಗೆ - ಅಂದರೆ ತಾತ್ವಿಕವಾದ ನೆಲೆಗಳಲ್ಲಿ ಆ ಸಮಾವೇಶದ ಧಾಟಿ ಧೋರಣೆಗಳೊಂದಿಗೆ ಭಿನ್ನವಾಗಿ ಯೋಚಿಸಿ ಅದರಿಂದ ದೂರ ಉಳಿದವರಿಗೆ- ಅದರ ಕುರಿತು ಸಂಭ್ರಮವೂ ಇಲ್ಲ, ಸಂಕಟವೂ ಇಲ್ಲ. ನಾವು ಆ ಕುರಿತ ನಮ್ಮ ಚಿಂತನೆಯಲ್ಲಿ ತುಂಬ ಸೂಕ್ಷ್ಮವಾಗಿದ್ದೇವೆಂಬುದನ್ನು ಮಾತ್ರ ನಾನಿಲ್ಲಿ ಹೇಳಬಯಸುತ್ತೇನೆ. ಅಲ್ಲಿ ಭಾಗವಹಿಸಿದ ನಮ್ಮ ನಾಡಿನ, ಭಾಷೆಯ ಹಿರಿಯ ಲೇಖಕರನ್ನು ನಮ್ಮ ಪ್ರಜ್ಞಾವಲಯದ ಕಪ್ಪು ಪಟ್ಟಿಯಲ್ಲಿರಿಸುವ ಅಥವಾ ಖಳರೆಂಬಂತೆ ನೋಡುವ ಸಣ್ಣತನ ನಮ್ಮದಲ್ಲ. ಕೋಮುವಾದಿ ಚಿಂತನೆಯ ವಿಷ ನಿಧನಿಧಾನವಾಗಿ ನಮ್ಮ ಸಾಮಾಜಿಕ,ರಾಜಕೀಯ ಬದುಕಿನ ತುಂಬ ವ್ಯಾಪಿಸುತ್ತಿರುವಾಗ ಅದರ ವಿರುದ್ಧ ದಿಟ್ಟ ನಿಲುವು ತಳೆಯುತ್ತ ಬಂದಿರುವ ಯು.ಆರ್. ಅನಂತಮೂರ್ತಿಯವರಾಗಲಿ, ಗಿರೀಶ್ ಕಾರ್ನಾಡ್ ಅವರಾಗಲೀ ಧಾಸಾಸಂ ನಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳ ಯಾದಿಯಲ್ಲಿ ಇದ್ದರೆಂದ ಮಾತ್ರಕ್ಕೆ ನಮಗೆ ಅದು ಹೇಗೆ ಅಪಥ್ಯರಾದಾರು? ನಮ್ಮ ವಿಮರ್ಶೆಗೆ ಹೊಸ ಜೀವ ತುಂಬಿದ ಜಿ.ಎಸ್.ಆಮೂರ್, ಸಿ.ಎನ್.ರಾಮಚಂದ್ರನ್ ಮುಂತಾದವರು ಅದು ಹೇಗೆ ನಮಗೆ ಆ ಕಾರಣಕ್ಕೆ ತ್ಯಾಜ್ಯರಾಗುತ್ತಾರೆ? ಇಂಥ ಎಲ್ಲ ವಿಷಯಗಳ ಕುರಿತು ನಾವು ಮುಕ್ತವಾಗಿ, ಗಂಭೀರವಾಗಿ ಚರ್ಚಿಸಿದ್ದೇವೆ. ಇದೇ ರೀತಿಯ ಒಂದು ಘನತೆಯನ್ನು, ಗಾಂಭೀರ್ಯವನ್ನು, ಸಜ್ಜನಿಕೆಯನ್ನು ಈ ಉದ್ದಕ್ಕೂ ಧಾಸಾಸಂ ನ ಅಧಿಕೃತ ವಕ್ತಾರರಾಗಿರುವ ಅದರ ಅಧ್ಯಕ್ಷ ಶ್ರೀಯುತ ಗಿರಡ್ಡಿ ಗೋವಿಂದರಾಜರಿಂದ ನಾವು ನಿರೀಕ್ಷಿಸಿದ್ದೆವು. ದುರದೃಷ್ಟವಶಾತ್ ಆ ನಮ್ಮ ನಿರೀಕ್ಷೆಯನ್ನು ಶ್ರೀಯುತರು ಹುಸಿಗೊಳಿಸಿದ್ದಾರೆ. ಧಾಸಾಸಂ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ  ಸಂಭ್ರಮ ಆರಂಭಿಸುವ ಮುನ್ನ ಹಾಗೂ ನಂತರವೂ ಎದುರಾದ ಎಲ್ಲಾ ತರಹದ ವಿರೋಧವನ್ನು ಮುಕ್ತವಾಗಿ ಸ್ವಾಗತಿಸುವದಾಗಿ ಅವರು ಹೇಳಿದ್ದನ್ನು ಮೆಚ್ಚುತ್ತಿರುವಾಗಲೇ "ವಿರೋಧದ ಹಿಂದೆ ಕೆಡಿಸುವ ಮನಸ್ಸಿರಬಾರದು" ಎಂದೂ ಸೇರಿಸಿದ್ದನ್ನು ಕೇಳಿ ನಾವು ಬೇಸರಗೊಂಡಿದ್ದೇವೆ.

     ನಮ್ಮ ಕೆಡಿಸುವ ಮನಸ್ಥಿತಿಯ ಕುರಿತ ಗಿರಡ್ಡಿಯವರ ಗುಮಾನಿ ಏನೆಂದರೆ ನಾವು ಸದಾ ಫೋನ್ ಕರೆ ಮಾಡಿ ಇದರಲ್ಲಿ ಪಾಲ್ಗೊಳ್ಳದಂತೆ ಸಂಪನ್ಮೂಲ ವ್ಯಕ್ತಿಗಳ ಮೇಲೆ, ಆಮಂತ್ರಿತರ ಮೇಲೆ ಒತ್ತಡ ತರುತ್ತಿದ್ದೆವೆಂಬುದು. ಸಾಕಷ್ಟು ವಿನಮ್ರವಾಗಿ ನಾನು ಹೇಳಬಯಸುವದೇನೆಂದರೆ ಅವರ ಸಂಭ್ರಮದಲ್ಲಿದ್ದ ಸಂಪನ್ಮೂಲ ವ್ಯಕ್ತಿಗಳ ಅಥವಾ ಅತಿಥಿಗಳ ಯಾದಿಯಲ್ಲಿದ್ದು ಅದರಲ್ಲಿ ಭಾಗವಹಿಸಬೇಕಾಗಿದ್ದ ಡಾ.ಯು.ಆರ್.ಅನಂತಮೂರ್ತಿ,ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ,ಸುಮತೀಂದ್ರ ನಾಡಿಗ, ಸಿದ್ದಲಿಂಗಯ್ಯ, ಅಬ್ದುಲ್ ರಶೀದ್, ಜೋಗಿ, ಬೋಳುವಾರು ಮೊಹಮ್ಮದ್ ಕುಂಞಿ, ಕೆ.ಸತ್ಯನಾರಾಯಣ, ಮುಖ್ಯಮಂತ್ರಿ ಚಂದ್ರು ಮೊದಲಾದವರು ಭಾಗವಹಿಸದೇ ಇರುವದಕ್ಕೆ ನಾವು ಕಾರಣರಲ್ಲ. ಅಂಥ ಮಟ್ಟಿಗಿನ ಪ್ರಭಾವ ನಮಗಿಲ್ಲ. ಜೋಗಿ ಸ್ವತ: ಸಂಭ್ರಮದ ದಿಕ್ಕು ದೆಸೆಗಳನ್ನು ಸಂದೇಹಿಸಿ ಪಾಲ್ಗೊಳ್ಳುವದಿಲ್ಲ ಎಂದು ಘೋಷಿಸಿದವರು. ಸಂಪನ್ಮೂಲ ವ್ಯಕ್ತಿಗಳಾಗಿ ಅಥವಾ ವಿಶೇಷ ಆಹ್ವಾನಿತರಾಗಿ ಇರಬೇಕಾಗಿದ್ದ ನಾನು, ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ, ಜಗದೀಶ ಮಂಗಳೂರುಮಠ, ಎಂ.ಡಿ.ವಕ್ಕುಂದ,  ವೈಯಕ್ತಿಕವಲ್ಲದ,ತಾತ್ವಿಕ-ಸೈದ್ಧಾಂತಿಕ ಇತ್ಯಾದಿಯಾಗಿ ಹೆಸರಿಸಬಹುದಾದ ಕಾರಣಗಳಿಗಾಗಿ ಹೊರಗುಳಿದವರು, ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ ಮೊದಲಾದವರು ನಮ್ಮ ಆಗ್ರಹ ಕಾರಣವಾಗಿ ಭಾಗವಹಿಸಲಿಲ್ಲ ಎಂದರೆ ಅದು ಅವರ ಗ್ರಹಿಕೆ, ವಿವೇಕ ಮತ್ತು ಸ್ವಂತ ತೀರ್ಮಾನ ಕೈಗೊಳ್ಳುವ ಶಕ್ತಿಯನ್ನು ಅವಮಾನಿಸಿದಂತೆ.  ಹಾಂ, ಹಿಂದೆ ವಿವಿಧ ಸಂದರ್ಭಗಳಲ್ಲಿ ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ಚಳುವಳಿಗಳು ಭುಗಿಲೆದ್ದಾಗ ಜೊತೆಯಾಗಿದ್ದ, ನಮ್ಮ ಸಮಾನಮನಸ್ಕರು ಎಂದು ನಾವು ಭಾವಿಸಿಕೊಂಡಿದ್ದ, ಹಿರಿಯರೊಬ್ಬರಿಗೆ ನಾವು ಫೋನ್ ಕರೆ ಮಾಡಿ ಸಂಭ್ರಮದಲ್ಲಿ ಭಾಗವಹಿಸುವ ತಮ್ಮ ನಿರ್ಧಾರವನ್ನು ಪುನ: ಪರಿಶೀಲಿಸುವಂತೆ ಆಗ್ರಹಿಸಿದ್ದು ನಿಜ. ಅದು ನಮ್ಮ ಹಕ್ಕೂ ಹೌದು. ನಮ್ಮ ಆಗ್ರಹವನ್ನು ನಿರಾಕರಿಸಿ, ಸಂಭ್ರಮದಲ್ಲಿ ಪಾಲ್ಗೊಂಡು ತಮ್ಮ ಯಥಾಪ್ರಕಾರದ ಶೈಲಿಯಲ್ಲಿ ಯಾರನ್ನೋ ಚಿಂತಾಜನಕಮೂರ್ತಿಯೆಂದು ಕರೆದು ಶ್ರೋತೃಗಣವನ್ನು ನಗಿಸಿದ ಸದರಿ ಕರುಣಾಜನಕಮೂರ್ತಿ ಹಿರಿಯರು ನಮ್ಮ ಸಮಾನಮನಸ್ಕರೆಂಬ ಭಾವನೆಯು ನಮ್ಮ ಭ್ರಮೆ ಎಂದೂ ಅದನ್ನು ಆದಷ್ಟೂ ಬೇಗ ಕಳಚಿಕೊಳ್ಳಬೇಕೆಂದೂ ಪ್ರಗತಿಪರರು ಮನಗಂಡಿದ್ದಾರೆ. ಗಿರಡ್ಡಿಯವರಿಗೆ ಗೊತ್ತಿರಬೇಕು. ಈ ಪ್ರಗತಿಪರರು ಸಂಭ್ರಮ ಸಮಾವೇಶವನ್ನು ಕೆಡಿಸುವ ಮನಸ್ಥಿತಿಯವರಾಗಿದ್ದರೆ ಗಿರಡ್ಡಿಯವರ ಸಮ್ಮುಖದಲ್ಲೇ ಕಲಬುರ್ಗಿಯವರ ಮನೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ, ಸಂಭ್ರಮ ನಡೆಯುವ ದಿನಗಳಿಗೆ ಪರ್ಯಾಯವಾಗಿಯೇ ಸಮಾವೇಶ ನಡೆಸುವ ಸಿದ್ಧತೆಯ ದಾರಿಯಲ್ಲಿ ಅದಾಗಲೇ ಬಹು ದೂರ ಕ್ರಮಿಸಿದ್ದ ತಮ್ಮ ನಿರ್ಧಾರವನ್ನು ಅವರು ಕೈಬಿಡುತ್ತಿರಲಿಲ್ಲ. ಕೈ ಹಿಡಿದು ಪ್ರೀತಿಯಿಂದ ಹೇಳಿದ ಹಿರಿಯರ ಮಾತಿಗೆ ಪ್ರಗತಿಪರರು ಕೊಟ್ಟ ಗೌರವಕ್ಕೆ ಪ್ರತಿಯಾಗಿ ಗಿರಡ್ಡಿಯವರೂ ಸ್ವಲ್ಪ ಮಟ್ಟಿಗಿನ ಗೌರವವನ್ನು, ಕೃತಜ್ಞತೆಯನ್ನು ಅವರ ಕುರಿತು ಇಟ್ಟುಕೊಳ್ಳಬಹುದಿತ್ತು.
 
    
ಸಂಭ್ರಮದ ಎರಡನೇ ದಿನದ ನಡಾವಳಿಗಳು ಪೂರ್ಣಗೊಂಡ ನಂತರದ ತಮ್ಮ ಬ್ರೀಫಿಂಗ್ ನಲ್ಲಿ ಗಿರಡ್ಡಿಯವರು "ನಾಡಿನ ಹಿರಿಯ ಸಾಹಿತಿಗಳು ಪಾಲ್ಗೊಳ್ಳುತ್ತಿರುವ ಈ ಸಂಭ್ರಮದಲ್ಲಿ ಯಾವುದೇ ಹಣದ ಅಪವ್ಯಯಕ್ಕೆ ಆಸ್ಪದವಿಲ್ಲ. ಈ ಎರಡೂ ದಿನಗಳಲ್ಲಿ ಅದು ಸಂಭವಿಸಲೂ ಇಲ್ಲ ಎಂಬುದು ಗಮನಾರ್ಹ. ಆದರೆ, ಕೆಲವು ವಿಶಿಷ್ಟ ಹಿತಾಸಕ್ತಿಗಳು ಈ ಸಂಭ್ರಮದ ವಿರುದ್ಧ ಅಪಪ್ರಚಾರ ಮಾಡುತ್ತಿರುವದು ಧಾರವಾಡ ಸಾಂಸ್ಕೃತಿಕ ಪರಿಸರಕ್ಕೆ ಮಾಡುತ್ತಿರುವ ದೊಡ್ಡ ಅಪಚಾರವೆಂದೇ ಭಾವಿಸಿದ್ದೇನೆ" ಎಂದದ್ದು ದಿನಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಯಾರು ಈ ಕೆಲವು ವಿಶಿಷ್ಟ ಹಿತಾಸಕ್ತಿಗಳು? ಇದರ ಧಾಟಿ ಧೋರಣೆಯನ್ನು ಸಕಾರಣವಾಗಿಯೇ ಪ್ರಶ್ನಿಸಿದ ಪಾಟೀಲ್ ಪುಟ್ಟಪ್ಪನವರೇ? ಸಾಹಿತ್ಯವೆಂಬುದು ಶ್ರೀಮಂತರಿಗಷ್ಟೆ ಎಂದು ಧಾಸಾಸಂ ನವರು ಭಾವಿಸಿದ್ದಾರೆಂದು ತೋರುತ್ತದೆ ಎಂದು ಪತ್ರಿಕೆಯೊಂದರ ತಮ್ಮ ಅಂಕಣದಲ್ಲಿ ಸಂದೇಹ ವ್ಯಕ್ತಪಡಿಸಿದ ಕಥೆಗಾರ ಜೋಗಿಯೆ? ಅಂತರ್ಜಾಲ ತಾಣಗಳಲ್ಲಿ ಇದರ ಕುರಿತು ಬರೆದು ಇದರಲ್ಲಿ ಎಲೀಟಿಕರಣದ ಅಪಾಯವನ್ನು ಕಂಡ ಕೆ.ವಿ.ತಿರುಮಲೇಶ್ ಅಥವಾ ಹೆಚ್. ಎಸ್.ರಾಘವೇಂದ್ರ ರಾವ್ ಅವರೇ? ಧಾರವಾಡದ ಸಾಂಸ್ಕೃತಿಕ ಪರಿಸರದ ಠೇಕೆದಾರಿಕೆಯ ಅಹಮಿಕೆಗಳನ್ನೇ ಪ್ರಶ್ನಿಸಿದ ನಾನೆ? ಸಂಭ್ರಮದಲ್ಲಿ ಪಾಲ್ಗೊಳ್ಳಲು ನಿರಾಕರಿಸಿ ಬರೆದ ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ ಮುಂತಾದವರೆ? ಧಾರವಾಡದಲ್ಲಿ ಗೌರವಾನ್ವಿತರಾದ, ಸಂಭ್ರಮ ನೋಂದಾಯಿತ ಸಂಸ್ಥೆಯ ಗೌರವಾಧ್ಯಕ್ಷರುಗಳಾದ ಕೆಲ ಹಿರಿಯರು ಸಂಭ್ರಮದ ಆಕ್ಷೇಪಾರ್ಹ ಲಕ್ಷಣಗಳಿಗೆ ಕುರುಡಾದ ಕುರಿತು ಬೇಸರ ನೋವು ತೋಡಿಕೊಂಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿಯವರೇ? ಅಥವಾ ಇನ್ನುಳಿದಂತೆ ಇದರ ವಿರುದ್ದ ತಾತ್ವಿಕ ನೆಲೆಗಳಲ್ಲಿ ಪ್ರಶ್ನೆಗಳನ್ನೆತ್ತಿದ, ಡಾ. ಬರಗೂರು ರಾಮಚಂದ್ರಪ್ಪ,ಡಾ. ಎಚ್. ಎಸ್.ಅನುಪಮಾ, ಜಿ,ಎನ್.ಮೋಹನ್,ಬಸವರಾಜ ಸೂಳಿಬಾವಿ, ಡಾ.ಎಂ.ಡಿ.ವಕ್ಕುಂದ ಕುಂ.ಸಿ.ಉಮೇಶ್, ಬೇಳೂರು ಸುದರ್ಶನ,ಸಿದ್ದನಗೌಡ ಪಾಟೀಲ್, ಡಾ. ಸಂಜೀವ ಕುಲಕರ್ಣಿ ಮೊದಲಾದವರೇ?

     ಸಾಹಿತ್ಯ, ಸಮಾಜ, ಸಂಸ್ಕೃತಿಗಳ ಸಂಬಂಧದ ಕುರಿತ ಗಂಭೀರ ಸಂವಾದದ ಸಾಧ್ಯತೆಯೊಂದನ್ನು ಜೀವನಪೂರ್ತಿ ಸಾಹಿತ್ಯದ ಪಾಠ ಮಾಡಿದ ಗಿರಡ್ಡಿಯವರು ಹೀಗೆ ಟ್ರಿವಿಅಲೈಜ್ ಮಾಡುವದು ನೋವಿನ ಸಂಗತಿ. ಅವರು ಅದನ್ನು ತಮ್ಮ ವ್ಯಕ್ತಿನಿಷ್ಟ ಯಾವುದೋ ಕಟ್ಟುಪಾಡುಗಳಿಗೆ ಬದ್ಧರಾಗಿ ಟ್ರಿವಿಅಲೈಜ್ ಮಾಡುತ್ತಿದ್ದಾರೆಂಬುದು ಅನುಮಾನವಲ್ಲ ಆರೋಪ. "ಶಿಸ್ತನ್ನು ಕಾಪಾಡಿ ಕೊಳ್ಳುವ ಉದ್ದೇಶದಿಂದ ಕೆಲ ನಿಬಂಧನೆಗಳನ್ನು ವಿಧಿಸಿದ್ದು ಸ್ವಾಭಾವಿಕ. ಇವುಗಳನ್ನು ತೀರ ಗಂಭೀರವಾಗಿ ತೆಗೆದುಕೊಂಡು ಟೀಕೆ, ಅಪಹಾಸ್ಯಗಳನ್ನು ಮಾಡುತ್ತಿದ್ದುದು ನಿಜಕ್ಕೂ ವಿಷಾದನೀಯ" ಎನ್ನುತ್ತಾರೆ ಗಿರಡ್ಡಿಯವರು. ಅಂದರೆ ತಾವೇ ವಿಧಿಸಿದ ನಿಯಮ ನಿಬಂಧನೆಗಳ ಕುರಿತು ಸ್ವತ: ಇವರೇ ಗಂಭೀರವಾಗಿರಲಿಲ್ಲ ಅಂದರೆ ಇವು ಇವರ ಇನ್ ಸ್ಟಂಟ್ ಪ್ರಚಾರದ ಗಿಮಿಕ್ಕೆ? ಇದನ್ನು ಯಾಕೆ ಕೇಳಬೇಕಾಗಿದೆ ಎಂದರೆ ಸಮಾರೋಪ ಸಮಾರಂಭದಲ್ಲಿ ಗಿರಡ್ಡಿಯವರು "ಸಂಭ್ರಮದ ಯಶಸ್ಸಿಗೆ ನಮ್ಮ ವಿರೋಧಿಗಳು ಕಾರಣ ಏಕೆಂದರೆ ನಮಗೆ ಪ್ರಚಾರದ ಅಗತ್ಯವೇ ಬೀಳಲಿಲ್ಲ, ನಮಗೆ ಪ್ರಚಾರವನ್ನು ನಮ್ಮ ವಿರೋಧಿಗಳೇ ಒದಗಿಸಿಬಿಟ್ಟರು" ಎಂದರೆಂದು ಅದರಲ್ಲಿ ಭಾಗವಹಿಸಿದವರು ನಮಗೆ ಹೇಳಿದರು. ವಿರೋಧಿಗಳು ಪ್ರಧಾನವಾಗಿ ಪ್ರಶ್ನಿಸಿದ್ದೇ ಈ ಇವರ ಹಾಸ್ಯಾಸ್ಪದ ನಿಯಮ ನಿಬಂಧನೆಗಳನ್ನು. ಅದು ಹೋಗಲಿ ಸಮಾರೋಪ ಸಮಾರಂಭದ ಅತಿಥಿಗಳಾಗಿದ್ದ ವಿಮರ್ಶಕ ಜಿ.ಎಚ್.ನಾಯಕ್ ಅವರು ಸಹ ಹುಕುಂ ಸ್ವರೂಪದ ಆ ನಿಯಮಗಳ ಕುರಿತು ತಮ್ಮ ಆಕ್ಷೇಪವನ್ನು ಎತ್ತಿದರು ಎಂಬುದು ನಮಗೆ ಗೊತ್ತಿದೆ. ಹೌದು, ಸಂಭ್ರಮದ ಯಶಸ್ಸಿನ ಒಂದು ಪಾಲಿಗೆ ನಾವು ಕಾರಣಕರ್ತರಾಗಿದ್ದೇವೆ. ಅದರೆ ಅದು ಗಿರಡ್ಡಿಯವರು ವ್ಯಂಗ್ಯವಾಗಿ ಹೇಳುವ ಆ ಕಾರಣಕ್ಕಾಗಿ ಅಲ್ಲ. ಅದು ಪ್ರತಿನಿಧಿ ಶುಲ್ಕ ಸಾವಿರದೈನೂರು ರೂಪಾಯಿಗಳಿಂದ ಕೇವಲ ಐನೂರು ರೂಪಾಯಿಗಿಳಿದು ಆ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ನೋಂದಾಯಿಸಿಕೊಳ್ಳಲು ಅನುವಾಯಿತೆನ್ನುವ ಕಾರಣಕ್ಕೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರ ಹತ್ತು ಲಕ್ಷ ರೂಪಾಯಿ ನೀಡಿತ್ತೆನ್ನುವ ಹಿನ್ನೆಲೆಯಲ್ಲಿ  "ಸಾಹಿತ್ಯ ಸಂಭ್ರಮಕ್ಕೆ ಪ್ರವೇಶ ನೀಡುವದನ್ನು ಕಾಯ್ದಿರಿಸಲಾಗಿದೆ" ಎಂಬುದನ್ನು ಪ್ರಗತಿಪರರು ವಿರೋಧಿಸಿದ್ದು ಕಾರಣವಾಗಿ  ಆ ನಿಬಂಧನೆ ಸಡಿಲುಗೊಂಡು ಜನರಿಗೆ ಮುಕ್ತ ಪ್ರವೇಶ ದೊರೆತು ಸಭಾಭವನ ತುಂಬಿ ಶೋಭಿಸಿತು ಎಂಬ ಕಾರಣಕ್ಕೆ...! ಸಂಭ್ರಮದ ಯಶಸ್ಸಿನ ಆ ಕ್ರೆಡಿಟ್ ಅನ್ನು ನಾವು ತೆಗೆದುಕೊಳ್ಳುತ್ತೇವೆ ಏಕೆಂದರೆ ಸಾಮಾನ್ಯ ಸಾಹಿತ್ಯಾಸಕ್ತರಿಗೆ, ವಿದ್ಯಾರ್ಥಿಗಳಿಗೆ ಅದರಿಂದ ಪ್ರಯೋಜನವಾಗಿರುವದು ಸಾಧ್ಯವಿದೆ. ಆದರೆ ಸಂಭ್ರಮದ ಲೋಪಗಳಿಗೆ, ದೋಷಗಳಿಗೆ, ವೈಫಲ್ಯಗಳಿಗೆ ಸಂಘಟಕರೇ ಕಾರಣ. ಉದಾ: ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಮರ್ಶಕ ಟಿ.ಪಿ.ಅಶೋಕ್ "ಬರೀ ಹಿರಿಯ ತಲೆಮಾರಿನ ಸಾಹಿತಿಗಳ ಚರ್ಚೆ, ಕಾವ್ಯವಾಚನ,ವಿಮರ್ಶೆ ಕೇಳುವಂತಾಗಿತ್ತು, ಇದರ ಜೊತೆಗೆ ಈ ತಲೆಮಾರಿನ ಹೊಸ ಹುಡುಕಾಟಗಳ ತುಡಿತಗಳ ಯುವ ಬರಹಗಾರರಿಗೂ ಅವಕಾಶ ನೀಡಬೇಕಿತ್ತು" ಎಂದು ಎತ್ತಿ ತೋರಿಸಿದ ಓರೆ-ಕೋರೆ. ಆ ಲೋಪವನ್ನು ಸಂಘಟಕರ ಭುಜಗಳಿಗೆ ವರ್ಗಾಯಿಸುತ್ತೇವೆ. ಹಾಗೇ ಸಾಹಿತ್ಯದ ಆತ್ಮವಾದ ಮನುಷ್ಯನನ್ನು, ಅವನ ಬದುಕನ್ನು, ಸಮಾಜವನ್ನು ಅದರಿಂದ ಕರುಳ ಬಳ್ಳಿಯನ್ನು ಕಿತ್ತೆಸೆದಂತೆ ಮೂರು ದಿನ ಕಿತ್ತೆಸೆಯಲಾಯಿತು ಎಂಬುದಕ್ಕೆ ಸಮಾಜದ ಕುರಿತು, ಅದನ್ನು ಬಾಧಿಸುತ್ತಿರುವ ಸಮಕಾಲೀನ ಅಪಾಯಗಳ ಕುರಿತು, ವರ್ತಮಾನದ ಸಂಕಷ್ಟಗಳು, ತಬ್ಬಲಿತನಗಳು, ತಲ್ಲಣಗಳ ಕುರಿತು ಅವುಗಳಿಗೆ ಸಾಹಿತ್ಯ, ಸಾಹಿತಿಯ ಸ್ಪಂದನೆಯ ಕುರಿತು ಯಾವ ಚರ್ಚೆಯೂ ಆಗಲಿಲ್ಲ ಎಂಬುದಕ್ಕೂ ಕಾರಣರು ನಾವಲ್ಲ..!

     ಇನ್ನುಳಿದಂತೆ ಧಾರವಾಡದ ಸಾಂಸ್ಕೃತಿಕ ಪರಿಸರಕ್ಕೆ ದೊಡ್ಡ ಅಪಚಾರವೆಂಬುದು ಆಗುತ್ತಿದೆಯೇ ಆಗುತ್ತಿದ್ದರೆ ಅದನ್ನು ಯಾರು ಬಗೆಯುತ್ತಿದ್ದಾರೆಂಬುದನ್ನು ಸಾರ್ವಜನಿಕರ ವಿವೇಕಕ್ಕೇ ಬಿಡುವದು ಒಳಿತು.