Wednesday, November 16, 2011

ಅಣ್ಣಿಗೇರಿ ತಲೆಬುರುಡೆ ಪ್ರಕರಣವೂ ಆತುರದ ತೀರ್ಮಾನಗಳೂ...

(ಫೋಟೋಗಳು:ಸಂಗ್ರಹದಿಂದ)


ಚರಿತ್ರೆಯ ವಿದ್ಯಮಾನಗಳನ್ನು ತೆಳುವಾದ ಗ್ರಹಿಕೆಗಳಲ್ಲಿ ಸರಳಗೊಳಿಸಿ ಆತುರಾತುರದ ತೀರ್ಮಾನಗಳನ್ನು ಹರಿಬಿಡುವ ಪ್ರವೃತ್ತಿ ಈಗ ಸಾಮಾನ್ಯರಲ್ಲಷ್ಟೆ ಅಲ್ಲ, ವಿದ್ವಜ್ಜನರಲ್ಲೂ ಸಾಮಾನ್ಯ. ಮೊದಲೆಲ್ಲ ಚರಿತ್ರೆಯ ಹೊಸ ಶೋಧ ವಿದ್ವತ್ಪತ್ರಿಕೆಗಳ ಪುಟಗಳಲ್ಲಿ ಪರಿಣತರ ನಡುವಿನ ಸಂವಾದವಾಗಿ, ಗಹನವಾದ ಚಿಂತನ-ಮಂಥನವಾಗಿ ಅಧಿಕೃತತೆಯನ್ನು ಪಡೆದುಕೊಳ್ಳುತಿತ್ತು. ಈಗ ಮಾಧ್ಯಮಗಳ ಭರಾಟೆ. ಮಾಧ್ಯಮಗಳು ರಂಜನೀಯವಾಗಿ ವಿಷಯವನ್ನು ಹಿಗ್ಗಿಸಿ ಸಂಬಂಧಪಟ್ಟವರನ್ನು (ಪಡದವರನ್ನೂ) ಮಾತಿಗೆಳೆಯುತ್ತವೆ, ಮಾತಿಗೆಳೆಯಲ್ಪಟ್ಟವರು ಮಾತಾಡುತ್ತ ಹೋಗುತ್ತಾರೆ. ಮಾತನಾಡಬೇಕಾದ ವಿಷಯದ ಕುರಿತ ಮೂಲಮಾಹಿತಿ ಅಗತ್ಯ ಪ್ರಮಾಣದಲ್ಲಿ ಲಭ್ಯವಿದೆಯೇ ಎಂಬ ಪ್ರಶ್ನೆ ಅವರನ್ನು "ಅನಗತ್ಯ"ವಾಗಿ ಬಾಧಿಸಿ ವಿಚಲಿತಗೊಳಿಸುವದಿಲ್ಲ.

ಕಳೆದ ವರ್ಷ (೨೦೧೦) ಆಗಸ್ಟ್ ಮಾಸಾಂತ್ಯದಲ್ಲಿ ನಾನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕೆಲಸದ ಮೇಲೆ ಹೋದ ಸಂದರ್ಭ ನನಗೆ ಕನ್ನಡದ ವಾರ್ತಾವಾಹಿನಿಯೊಂದರಿಂದ ಫೋನ್ ಬಂತು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿಯಲ್ಲಿ ಅಲ್ಲಿಯ ಪುರಸಭೆಯವರು ಆಗಸ್ಟ್ ೨೮ರ ಶನಿವಾರದಂದು ಚರಂಡಿಯೊಂದನ್ನು ಅಗಲಗೊಳಿಸಲು ಅಗಸಿ ಓಣಿಯಲ್ಲಿ ಅಗೆಯುತ್ತಿದ್ದಾಗ ಇಪ್ಪತ್ತಕ್ಕಿಂತ ಹೆಚ್ಚು ಮಾನವ ತಲೆಬುರುಡೆಗಳು ಸಿಕ್ಕಿದ್ದಾಗಿಯೂ ನಂತರ ೩೧ರಂದು ಮಂಗಳವಾರ ಮತ್ತಷ್ಟು ತಲೆಬುರುಡೆಗಳು ಸಿಕ್ಕು ಅವುಗಳ ಸಂಖ್ಯೆ ಸರಿ ಸುಮಾರು ನೂರನ್ನು ಮುಟ್ಟಿದ್ದಾಗಿಯೂ ಆ ಕುರಿತು ಒಂದು ಚರ್ಚೆಯನ್ನು ಆ ಚಾನೆಲ್ ನ (ಸುವರ್ಣ ಟಿವಿ ಅಥವಾ ಟಿವಿ 9 ಯಾವುದೆಂದು ಖಚಿತವಾಗಿ ನೆನಪಿಲ್ಲ) ಸ್ಟುಡಿಯೋದಲ್ಲಿ ಇಟ್ಟುಕೊಂಡಿರುವದಾಗಿಯೂ ನಾನು ಬರಬೇಕೆಂದೂ ಅವರು ಹೇಳಿದರು. ನಾನಿರುವದು ಕೋಣನಕುಂಟೆಯಲ್ಲಿ ಎಂದಾಗ ವಾಹನ ಕಳಿಸುತ್ತೇವೆ ಎಂದರು. ಅಣ್ಣಿಗೇರಿಯಲ್ಲಿ ಜನ ಭಯಭೀತರಾಗಿದ್ದಾರೆಂದರು, ಆದಕಾರಣ ನಾನು ಬರಬೇಕೆಂದರು.

ಇದ್ದಕ್ಕಿದ್ದಂತೆ ನೂರಾರು ತಲೆಬುರುಡೆ ಒಂದೇ ಕಡೆ ಸಿಕ್ಕರೆ ಯಾರಿಗೆ ಭಯವಾಗುವದಿಲ್ಲ? ಆದರೆ ನಾನು ವಿಶ್ವವಿದ್ಯಾಲಯದಲ್ಲಿ ನನ್ನ ಕೆಲಸವನ್ನು ಇನ್ನೂ ಬಾಕಿ ಉಳಿಸಿದ್ದೆ, ಅಂದೇ ರಾತ್ರಿ ಧಾರವಾಡಕ್ಕೆ ಮರಳುವದೂ ಇತ್ತು. ಅದಕ್ಕಿಂತ ಹೆಚ್ಚಾಗಿ ಅಗೆದು ಹೊರತೆಗೆದ ಬುರುಡೆಗಳ ತಲೆ ಬುಡ ಗೊತ್ತಿಲ್ಲದೆ ಬರೀ ಅವುಗಳ ವಿಜುಅಲ್ಸ್ ನೋಡಿ ಊಹಾಪೋಹಕ್ಕಿಂತ ಹೆಚ್ಚಿನದೇನನ್ನೂ ಮಾಡಲು ಸಾಧ್ಯವಿರಲಿಲ್ಲ. (ಆಮೇಲೆ ಧಾರವಾಡಕ್ಕೆ ಮರಳಿದ ನಂತರ ಆ ವಾಹಿನಿಯಲ್ಲಿ ಪ್ರಸಾರವಾದ, ನನ್ನ ಶಿಷ್ಯೋತ್ತಮ ಡಾ.ಎಸ್.ಕೆ.ಅರುಣಿ ಮತ್ತಿತರರು ಭಾಗವಹಿಸಿದ್ದ, ಚರ್ಚೆಯಲ್ಲಿ ಆದದ್ದು ಮತ್ತು ನಂತರ ಕೂಡ ವರ್ಷಗಟ್ಟಲೇ ಆಗುತ್ತ ಬಂದದ್ದು ಊಹಾಪೋಹವೇ.)

ಊಹಾಪೋಹಕ್ಕಿಂತ ಹೆಚ್ಚಿನ ಅರ್ಥಪೂರ್ಣತೆಯ ಆಯಾಮ ಈ ವಿಷಯಕ್ಕೆ ದಕ್ಕಬೇಕೆಂದರೆ ಮೊದಲು ಆಗಬೇಕಾಗಿದ್ದುದು ಅವುಗಳ ಕಾಲನಿಷ್ಕರ್ಷೆ. ಅದೇ ಆಗಿರಲಿಲ್ಲ. ಅದರ ಗೈರುಹಾಜರಿಯಲ್ಲಿ ಹಲವರು ಗಾಳಿಯಲ್ಲೇ ಕೈಕಾಲು ಬೀಸತೊಡಗಿದ್ದರು. ಗಂಡಹೆಂಡತಿ ಜಗಳ, ಯಾವನೋ ಪುಡಿಕಳ್ಳನನ್ನು ನಾಲ್ಕಾರು ಜನ ಹಿಡಿದು ತದಕುವದೇ ಮೊದಲಾದ ಸಾಮಾನ್ಯ ವಿಷಯಗಳನ್ನೇ ರೋಚಕಗೊಳಿಸಿ ಮುಕ್ಕಾಲು ಗಂಟೆ ಪ್ರಸ್ತುತ ಪಡಿಸುವ ಸುದ್ದಿಮಾಧ್ಯಮಗಳು ನಿಜಕ್ಕೂ sensational ಆದ ಈ ವಿಷಯದ ಬೆನ್ನುಬಿದ್ದದ್ದು ಸೋಜಿಗವೇ? ತರಹೇವಾರಿ ಕಥೆಗಳೂ ವಿವರಣೆಗಳೂ ಓಲಾಡಿ ತೇಲಾಡತೊಡಗಿದವು. ಸರ್ವಪ್ರಥಮವಾಗಿ ರಂಗಪ್ರವೇಶ ಮಾಡಿದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನ ಸಂಸ್ಥೆಯ ಪ್ರಭಾರಿ ನಿರ್ದೇಶಕ ರು.ಮ.ಷಡಕ್ಷರಯ್ಯನವರು ಈ ಬುರುಡೆಗಳ ಚರಿತ್ರೆಗೊಂದು ಗತಿಕಾಣಿಸುವ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿಕೊಂಡು ಚಾಲುಕ್ಯ ಚೋಳರ ಮಧ್ಯೆ ಕೊಪ್ಪಳದ ಬಳಿ ನಡೆದ ಕದನವೊಂದರಲ್ಲಿ ಹಲವಾರು ಜನರು ಕೊಲ್ಲಲ್ಪಟ್ಟಿದ್ದರೆಂದು ನಂಬಲು ಬೇಕಾದಷ್ಟು ಕಾರಣಗಳಿವೆ ಎಂದೂ ಆ ಸಂದರ್ಭದಲ್ಲಿ ಅಣ್ಣಿಗೇರಿಯಲ್ಲಿ ಒಂದು ದೇವಾಲಯ ಅಗ್ನಿಗಾಹುತಿಯಾಗಿತ್ತೆಂದೂ ಸ್ಮಶಾನದಿಂದ ಸಂಗ್ರಹಿಸಲ್ಪಟ್ಟ ಈ ಮಾನವ ತಲೆ ಬುರುಡೆಗಳು ವಾಮಾಚಾರಕ್ಕೆ ಅಥವಾ ಮಾಟ-ಮಂತ್ರದಂಥ ಉದ್ದೇಶಗಳಿಗೆ ಬಳಕೆಯಾಗಿದ್ದವು ಎಂದೂ ಅರೆ ಇತಿಹಾಸ ಅರೆ ಪುರಾಣಭರಿತ ವಿವರಣೆಯೊಂದನ್ನು ನೀಡಿ ಹಸನ್ಮುಖರಾದರು. ಈಗಿನ ಯುಗಧರ್ಮಕ್ಕನುಗುಣವಾಗಿ ಮಾಟ ಮಂತ್ರಗಳ ಈ ವಿವರಣೆ ವಿದ್ಯುನ್ಮಾನ ಮಾಧ್ಯಮಗಳ ಕಿವಿಗೂ ಬಲು ಇಂಪಾಗಿ ಕೇಳಿಸಿತು. ಮಾಟ ಮಂತ್ರಗಳಿಗೆ ಅವು ಬಳಕೆಯಾಗಿದ್ದವೆಂಬುದಕ್ಕೆ ಏನು ಆಧಾರ? ಷಡಕ್ಷರಯ್ಯನವರು ಹೇಳುತ್ತಿದ್ದಾರಲ್ಲ, ಅದೇ ಆಧಾರ! ಅವರಿಗೆ ಅವರೇ ಪ್ರಮಾಣು!! ಜಿಲ್ಲಾಧಿಕಾರಿಗಳಿಗೆ ಅವರೊಂದು ವರದಿಯನ್ನೂ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲು ಕೊಟ್ಟರು. ಮಾಧ್ಯಮದವರು ಕೇಳಿದಾಗ ಜಿಲ್ಲಾಧಿಕಾರಿ ದರ್ಪನ್ ಜೈನ್ ಅವರು ತಾವು ಅಂಥ ವರದಿಯನ್ನು ಸಿದ್ಧಪಡಿಸುವಂತೆ ಯಾರನ್ನೂ ಕೇಳಿಲ್ಲವೆಂದೂ ಸ್ವಯಂಪ್ರೇರಿತರಾಗಿ ಅವರೇ ವರದಿಯನ್ನು ಸಲ್ಲಿಸಿದ್ದಾರೆಂದೂ ಹೇಳಿದರು!

ಧಾರವಾಡ ಜಿಲ್ಲಾಧಿಕಾರಿಗಳು ಅವುಗಳ ಕಾಲನಿಷ್ಕರ್ಷೆಯ ಸಾಧ್ಯತೆಯ ಕುರಿತು ಹೈದರಾಬಾದಿನ CDFD ಯನ್ನು (ಸೆಂಟರ್ ಫಾರ್ ಡಿ.ಎನ್.ಎ ಫಿಂಗರ್ ಪ್ರಿಂಟಿಂಗ್ ಎಂಡ್ ಡೈಗ್ನಾಸ್ಟಿಕ್ಸ್) ಸಂಪರ್ಕಿಸಿದಾಗ ತಲೆಬುರುಡೆಗಳ ಕಾಲನಿಷ್ಕರ್ಷೆಯಲ್ಲಿ ಕಾರ್ಬನ್ ಡೇಟಿಂಗ್ ಟೆಸ್ಟ್ ಪ್ರಕ್ರಿಯೆಗೆ ಅಗತ್ಯವಾದ ಸಾಮರ್ಥ್ಯ ತನಗಿಲ್ಲ ಎಂದು ಆ ಸಂಸ್ಥೆ ನಿವೇದಿಸಿಕೊಂಡಿತು. ಈ ಮಧ್ಯೆ ಕರ್ನಾಟಕದ ಪುರಾತತ್ವ ಹಾಗೂ ವಸ್ತುಸಂಗ್ರಹಾಲಯ ನಿರ್ದೇಶನಾಲಯದ ನಿರ್ದೇಶಕ ಆರ್.ಗೋಪಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ತಲೆಬುರುಡೆಗಳು ದೊರೆತ ಸ್ಥಳವನ್ನು ಸಂರಕ್ಷಿತ ಸ್ಥಳವಾಗಿಸಿದರು. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅನುಮತಿ ದೊರೆತ ನಂತರ ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಂ.ಎಸ್.ಕೃಷ್ಣಮೂರ್ತಿ ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ಹಾಗೂ ಶಾಸನಶಾಸ್ತ್ರ ವಿಭಾಗದ ಡಾ.ಎಸ್.ವಿ.ಪಾಡಿಗಾರ್ ಮತ್ತು ಪುರಾತತ್ವ ಇಲಾಖೆಯ ಕೆಲವರ ಒಂದು ತಂಡ ರಚಿಸಿ, ಈ ವರ್ಷದ ಜನವರಿಯಲ್ಲೆಂದು ಕಾಣುತ್ತದೆ, ಉತ್ಖನನ ಕೈಗೊಂಡರು. ಆ ಅಗೆತದಲ್ಲಿ ಒಂದೇ ದಿನದಲ್ಲಿ ಮತ್ತೆ ನಾನೂರೈವತ್ತಕ್ಕಿಂತ ಹೆಚ್ಚು ತಲೆಬುರುಡೆಗಳು, ಇತರೆ ಅವಯವಗಳ ಅವಶೇಷಗಳು ಆ ಪರಿಸರದಲ್ಲಿ ದೊರೆತು ಇಡೀ ಪ್ರಕರಣದ ರೋಚಕತೆ ಹಾಗೂ ನಿಗೂಢತೆ ಮತ್ತಷ್ಟು ವೃದ್ಧಿಸಿ ಮಾಧ್ಯಮಗಳು ಪ್ರಶ್ನೆಗಳನ್ನು ಕೇಳಿದ್ದೇ ಕೇಳಿದ್ದು. ಉತ್ಖನನ ಮುಗಿದಾದ ಮೇಲೆ ಜಿಲ್ಲಾಧಿಕಾರಿಯವರು ೧೫.೬ ಮೀ. ಉದ್ದ ಹಾಗೂ ೧.೭ಮೀ. ಅಗಲದ ಸ್ಥಳದಲ್ಲಿ ೪೭೧ ತಲೆಬುರುಡೆಗಳು ದೊರೆತಿದ್ದಾಗಿಯೂ, ಮಾನವ ಬುರುಡೆಗಳು ಕೆಳದವಡೆಗಳಿಲ್ಲದೆ ಬರೀ ಮೇಲ್ಭಾಗದಿಂದ ಕೂಡಿದ್ದುದಾಗಿಯೂ ವಿವಿಧ ದಿಕ್ಕುಗಳಿಗಭಿಮುಖವಾಗಿ ಅವುಗಳನ್ನು ನೀಟಾಗಿ ಜೋಡಿಸಿಟ್ಟಂತೆ ಇದ್ದುದಾಗಿಯೂ, ಒಂದು ಸಾಲು ಕಣ್ಮರೆಯಾಗಿದ್ದು ಅದು ಗಟಾರಕ್ಕಾಗಿ ಅಗೆಯುವ ಪ್ರಕ್ರಿಯೆಯಲ್ಲಿ ಆಗಿರಬಹುದೆಂದೂ ವಿವರಗಳನ್ನು ನೀಡಿದ್ದರು. ಒಟ್ಟು ಆ ನೆಲೆಯಲ್ಲಿ ಸುಮಾರು ೬೦೦ ತಲೆಬುರುಡೆಗಳು ಇರುವದಾಗಿ ಅಂದಾಜು ಮಾಡಲಾಯಿತು.

ಈ ನಡುವೆ ಇತಿಹಾಸದ ಪುಸ್ತಕಗಳನ್ನು, ಗೆಝೆಟಿಯರಗಳನ್ನು ತಿರುವಿಹಾಕಿ, ಶಾಸನಗಳನ್ನು ಹುಡುಕಿ ನೋಡಿ ಅಣ್ಣಿಗೇರಿಯನ್ನು ಕೇಂದ್ರವಾಗಿಸಿಕೊಂಡು ಆ ಪ್ರದೇಶದಲ್ಲಿ ನಡೆದ ಯುದ್ಧ-ಕಾಳಗ-ಬಂಡಾಯದ ವಿವರಗಳನ್ನು ಕಲೆಹಾಕಿ ಈ ಬುರುಡೆಗಳಿಗೂ ತಾವು ಹುಡುಕಿ ತೆಗೆದ ವಿವರಗಳಿಗೂ ತಾಳೆ ಹಾಕುವ ಕೆಲಸದಲ್ಲಿ ಸ್ಥಳೀಯ ವಿದ್ವಾಂಸರು, ಕಾಲೇಜು ವಿಶ್ವವಿದ್ಯಾಲಯಗಳ ಕೆಲ ಕನ್ನಡ ಅಧ್ಯಾಪಕರುಗಳು ನಿರತರಾಗಿದ್ದರು. ಒಬ್ಬರು ಚಾಲುಕ್ಯರ ಕಾಲದ ಯುದ್ಧಗಳಿಗೆ ತಳಕು ಹಾಕಿದರು, ಇನ್ನ್ಯಾರೋ ಬ್ರಿಟಿಷ್ ವಿರೋಧಿ ಬಂಡಾಯಕ್ಕೆ ಜೋಡಿಸಿದರು, ಮತ್ತ್ಯಾರೋ ಕೆಲ ಶತಮಾನಗಳ ಹಿಂದೆ ಪ್ಲೇಗ್ ರೋಗಕ್ಕೆ ಬಲಿಯಾದವರ ರುಂಡಗಳೆಂದರು. ಇದು ಒಂದು ಅಂತರ್-ಶಿಸ್ತೀಯ ಅಧ್ಯಯನದ ನೆಲೆಯಲ್ಲಿ ಚರ್ಚಿತವಾಗಬೇಕಾದ ನಿರ್ಣಿತವಾಗಬೇಕಾದ ವಿಷಯವೆಂಬುದು, ತಲೆಬುರುಡೆಗಳ ಕಾಲ ನಿರ್ಣಯ ವೈಜ್ಞಾನಿಕವಾಗಿ ಅತ್ಯಂತ ಸುಸಜ್ಜಿತ ಪ್ರಯೋಗಶಾಲೆಗಳಲ್ಲಿ ನಡೆದು ತೀರ್ಮಾನವಾಗಬೇಕೆಂಬುದು, ಮೊದಲಾಗಿ ಆ ವಿಷಯ ತೀರ್ಮಾನವಾದ ನಂತರವಷ್ಟೇ ನಿಖರವಾಗಿ ಏನನ್ನಾದರೂ ಹೇಳಲು ಸಾಧ್ಯವೆಂಬುದು ಈ ಪಂಡಿತರನ್ನು "ಅನಗತ್ಯವಾಗಿ" ಬಾಧಿಸಿ ವಿಚಲಿತಗೊಳಿಸಲಿಲ್ಲ. ದಿನಕ್ಕೊಂದರಂತೆ ದಿನಕ್ಕೊಬ್ಬರು ಹೇಳಿಕೆ ಕೊಡುತ್ತ ಅಣ್ಣಿಗೇರಿ "ತಲೆಬುರುಡೆಗಳ ಇತಿಹಾಸ"ವೆಂಬುದು "ಬುರುಡೆಪುರಾಣ"ವಾಗುತ್ತ ಹೋಯಿತು.

ಅವು ದೊರೆತ ಆರಂಭ ಹಂತದಿಂದಲೂ ಅಗೋಚರ ಪ್ರವಾಹದಂತೆ "ಇಂಥ"ದೊಂದು ಗ್ರಹಿಕೆ ಇದ್ದೇ ಇತ್ತಲ್ಲ. ಉತ್ಖನನದಲ್ಲಿ ಭಾಗಿಯಾಗಿದ್ದ ಡಾ. ಕೃಷ್ಣಮೂರ್ತಿಯವರು ಈ ತಲೆಬುರುಡೆಗಳ ಶೋಧವನ್ನು ಒಂದು ನರಮೇಧವೆಂದು ವ್ಯಾಖ್ಯಾನಿಸಿದರು. ಅಂಗಾಂಗಗಳ ವಿಚ್ಛಿನ್ನತೆ ನೋಡಿದರೆ ಇದು ಸೇಡಿನಿಂದ ಕೂಡಿದ ಸಾಮೂಹಿಕ ಹತ್ಯೆ ಎಂಬುದನ್ನು ಸೂಚಿಸುತ್ತದೆ ಎಂದರು. ದಿನಪತ್ರಿಕೆಗಳಲ್ಲಿ ಈ ರುಂಡಗಳು ಸಾಮೂಹಿಕ ನರಮೇಧದ ಪುರಾವೆ ಎಂಬ ವರದಿಗಳು ಬರತೊಡಗಿದವು.

ಜಿಲ್ಲಾಧಿಕಾರಿಗಳು ಅದು ಸ್ಮಶಾನ (burial ground) ಆಗಿರುವದು, ಅಷ್ಟು ದೊಡ್ಡ ಸಂಖ್ಯೆಯಲ್ಲಿ ತಲೆಬುರುಡೆಗಳು ಆ ಸ್ಥಳದಲ್ಲಿ ದೊರೆತಿರುವದು, ವ್ಯವಸ್ಥಿತವಾಗಿ ಅವುಗಳನ್ನು ಹೂಳಲಾಗಿರುವದು, ಬರೀ ರುಂಡಗಳಷ್ಟೇ ಇರುವದು ಇವೆಲ್ಲ ಒಂದು ಸಮೂಹಹತ್ಯೆಯ ಸಾಧ್ಯತೆಯತ್ತ ಬೆರಳು ಮಾಡುತ್ತದೆ ಆದರೆ ಅದು ಯಾವಾಗ ಆಯಿತು, ಅದು ಯಾರದ್ದು, ಹಾಗೆ ರುಂಡ ಕಡಿದ ಸಂದರ್ಭ ಏನಾಗಿತ್ತು ಈ ಕುರಿತು ನಾವು ನಿಖರವಾಗಿ ಹೇಳುವದು ಈಗ ಅಸಾಧ್ಯ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು. ಎಪ್ರಿಲ್ ೨೦ರಂದು ಇದನ್ನು ಟಿವಿ 9 ಬಿತ್ತರಿಸಿತು. ಅಣ್ಣಿಗೇರಿಯಲ್ಲಿ ಧಾರ್ಮಿಕ ನರಮೇಧವೊಂದು ನಡೆದ ಕ್ರಿ. ಶ.೧೩ನೇ ಶತಮಾನದಿಂದ ಹಿಡಿದು ಆದಿಲ್ ಶಾಹಿ ಸೈನ್ಯ ಇಲ್ಲಿ ನೂರಾರು ಜನರನ್ನು ಕೊಂದ ೧೫ನೇ ಶತಮಾನದ ಒಂದು ತೇದಿಯವರೆಗೆ ನಮಗೆ ಹಲವಾರು ಪುರಾವೆಗಳಿವೆ ಎಂದು ರಾಜ್ಯ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯದ ನಿರ್ದೇಶಕರು ಹೇಳಿದ್ದಾಗಿ ಪತ್ರಿಕೆಗಳು ವರದಿ ಮಾಡಿದವು. ಆದರೆ ನೂರಾರು ವರ್ಷಗಳ ಹಿಂದೆ ಏನಾಗಿತ್ತು ಎಂದು ಊಹಾಪೋಹ ಮಾಡುವ ಬದಲು ರೇಡಿಯೋಕಾರ್ಬನ್ ಕಾಲನಿಷ್ಕರ್ಷೆ ವಿಧಾನದ ವರದಿ ಬರುವವರೆಗೆ ಕಾಯುವದನ್ನು ತಾವು ಇಷ್ಟಪಡುವದಾಗಿ ನಿರ್ದೇಶಕರು ಹೇಳಿದರು. ಅಂದರೆ ಈ ಎಲ್ಲ ಮಾತುಗಳು ಭುವನೇಶ್ವರಕ್ಕೆ ಕಾಲನಿಷ್ಕರ್ಷೆಗಾಗಿ ಸ್ಯಾಂಪಲ್ ಕಳಿಸಿದ ನಂತರ ಆದರೆ ಅದರ ಫಲಿತಾಂಶ ಬರುವದಕ್ಕೆ ಮೊದಲೇ ಮಾಡಲಾದ ಊಹಾಪೋಹಗಳು!

ಸದ್ಯ, ಕರ್ನಾಟಕದ ಪುಣ್ಯ. ಇಂಥದ್ದಕ್ಕೆ ಕಾಯ್ದು ಕುಳಿತಂತೆ ಸಾಮಾಜಿಕ ರಾಜಕೀಯ ಉದ್ದೇಶಕ್ಕೆ ಇಂಥವುಗಳನ್ನು ಬಳಸಿಕೊಳ್ಳಲೆಳಸುವ ಶಕ್ತಿಗಳು "ಹಾ ಹಾ ಖಡೆ ಖಡೆ" ಎಂಬಂತೆ ಎದ್ದು ನಿಲ್ಲಲಿಲ್ಲ, ಕಾನೂನು ಸುವ್ಯವಸ್ಥೆಯ ಸಮಸ್ಯೆಯಾಗಲಿಲ್ಲ. ...ಕೊನೆಗೂ ಭುವನೇಶ್ವರದ ಇನ್ಸ್ಟಿಟ್ಯೂಟ್ ಆಫ್ ಫಿಜಿಕ್ಸ್ ಗೆ ಕಳಿಸಲಾದ ತಲೆಬುರುಡೆಗಳ ಸ್ಯಾಂಪಲ್ ಗಳು ಎಕ್ಸೆಲೆರೇಟರ್ ಮಾರ್ಕ್ಸ್ ಸ್ಪೆಕ್ಟ್ರೊಮೆಟ್ರಿ ವಿಶ್ಲೇಷಣೆಯ ಕಾರ್ಬನ್ ಡೇಟಿಂಗ್ ಗೆ ಒಳಪಟ್ಟು ಅವು ೬೩೮ ವರ್ಷಗಳಷ್ಟು ಪುರಾತನವಾದವುಗಳೆಂಬ ವರದಿ ಮೇ ತಿಂಗಳ ಹೊತ್ತಿಗೆ ಬಂದು. ಮತ್ತೊಂದು ರೌಂಡ್ ಇತಿಹಾಸಪುಸ್ತಕಗಳ, ಗೆಝೆಟಿಯರುಗಳ, ಶಾಸನಗಳ ಪುಟ ತಿರುವ್ಯಾಟ ಪ್ರಾರಂಭವಾಯಿತು. ಸುಪ್ರಸಿದ್ಧ ವಿದ್ವಾಂಸ ಡಾ. ಎಂ.ಎಂ.ಕಲಬುರ್ಗಿಯವರು ೧೩ನೇ ಶತಮಾನ ತೀವ್ರ ಮತೀಯ (Communal) ಅಸಹಿಷ್ಣುತೆಯ ಕಾಲವೆಂಬ ತಮ್ಮ ನಿರೂಪಣೆಯನ್ನು ಭುವನೇಶ್ವರದ ಈ ಕಾರ್ಬನ್ ಡೇಟಿಂಗ್ ವರದಿ ಸಮರ್ಥಿಸುತ್ತದೆ ಎಂದು, ಈ ರುಂಡಗಳು ವೀರಶೈವರ ಒಂದು ಪ್ರಭೇದದ ಆತ್ಮಾಹುತಿ ದಳಗಳ ಸದಸ್ಯರದ್ದೆಂದು ಹೇಳಿ ಶ್ರೀಶೈಲದಲ್ಲಿ ಹೀಗೇ ರುಂಡಗಳು ಸಾಲುಸಾಲಾಗಿ ಜೋಡಿಸಿಟ್ಟಂತೆ ಚಿತ್ರಿತವಾದ ಶಿಲ್ಪವೊಂದರ ಜೊತೆ ಈ ಪ್ರಕರಣವನ್ನು ಹೋಲಿಸಿದರು. ಜಿಲ್ಲಾಡಳಿತಕ್ಕೆ ಭುವನೇಶ್ವರದ ಸಂಸ್ಥೆ ಕಳಿಸಿದ ವರದಿಯಲ್ಲಿ ತಮ್ಮಲ್ಲಿ ಮಾಡಿದ ಪರೀಕ್ಷೆಯ ನಿಖರತೆಯ ಕುರಿತು ಸ್ವಲ್ಪ ಸಂದೇಹದ ಸೂಚನೆಗಳು ಇದ್ದವು ಮತ್ತು ಕಲಬುರ್ಗಿಯವರ ವಿವರಣೆ ಈ ಕಾಲನಿರ್ದೇಶನದ ಮೇಲೆ ಅವಲಂಬಿತವಾಗಿತ್ತು ಹಾಗೂ communalismಎನ್ನುವದು ಆಧುನಿಕ ಕಾಲದ ರಾಜಕೀಯ ಸಿದ್ಧಾಂತ ಎನ್ನುವದು ಬೇರೆ ಮಾತು.

ಭುವನೇಶ್ವರದ ಈ ವರದಿ ಬಂದ ಮೇಲೆ The Times of India ವರದಿಗಾರ ನಮ್ಮ ಬಳಿ ಬಂದಾಗ ನಮಗನ್ನಿಸಿದ್ದನ್ನು ನಾವು ಹೇಳಿದೆವು. ಈ ಬುರುಡೆಗಳನ್ನು ಅವುಗಳ ಇತಿಹಾಸ ಅಥವಾ ಪ್ರಾಕ್ತನ ನೆಲೆಯಲ್ಲಿ ವಿವರಿಸಲು ಅಗತ್ಯವಾದ ಸ್ತರಾನುಕ್ರಮ ಸಂದರ್ಭವೇ (stratigraphical context) ಇಲ್ಲ. ಗಟಾರದ ಕೊಚ್ಚೆಯಲ್ಲಿ ಭೂಮಿಯ ಮೇಲ್ಪದರದಿಂದ ಕೇವಲ ಎರಡು ಅಡಿಗಳ ಆಳದಲ್ಲಿರುವ ಆ ಬುರುಡೆಗಳ ನಡು ನಡುವೆ ಯಾವುದೇ ವಸ್ತು-ಉಪಕರಣಗಳು ಹರಡಿಲ್ಲವಾಗಿ (assemblage) ಅದು ಸ್ಮಶಾನಭೂಮಿಯೋ ವಾಸದನೆಲೆಯೋ ಎಂಬುದೂ ಸ್ಪಷ್ಟವಿಲ್ಲ. ಹೆಚ್ಚುವರಿ ಪರೀಕ್ಷೆಗಳ ಫಲಿತಾಂಶಕ್ಕೆ ಕಾಯಬೇಕು ಎಂಬುದು ನನ್ನ ಅಭಿಪ್ರಾಯವಾಗಿತ್ತು. ನನ್ನ ಸಹೋದ್ಯೋಗಿ, ಸ್ವತ: ಪ್ರಾಗೈತಿಹಾಸತಜ್ಞರಾಗಿರುವ ಡಾ. ರವಿ ಕೋರಿಶೆಟ್ಟರ್ ಹರಿತವಾದ ಆಯುಧಗಳ ಬಳಕೆಯಾಗಿದ್ದರೆ ಮೂಳೆವಸ್ತುಗಳ ಮೇಲೆ cut marks ರೂಪದಲ್ಲಿರುವ ಅದು ವಿಧಿವಿಜ್ಞಾನ ಪರೀಕ್ಷೆಯಲ್ಲಿ ಖಚಿತವಾಗಬೇಕು, ಅಂಥದೇನೂ ಇದ್ದಂತಿಲ್ಲ. ಇವು ದೀರ್ಘ ಕಾಲದ ಹಿಂದೆ ಹೂಳಲ್ಪಟ್ಟಿದ್ದರೆ ಸಾಮಾನ್ಯವಾಗಿ ಉಂಟಾಗುವ ಬದಲಾವಣೆಗಳಿಗೆ ಅವು ಒಳಪಟ್ಟಂತೆ ತೋರುವದಿಲ್ಲವಾದ್ದರಿಂದ ಅವು ಈಚಿನವು ಎನ್ನಿಸುತ್ತದೆ ಎಂದರು. ಅಣ್ಣಿಗೇರಿ ಉತ್ಖನನದಲ್ಲಿ ಸ್ವತ: ಭಾಗಿಯಾಗಿದ್ದ ಇನ್ನೊಬ್ಬ ಸಹೋದ್ಯೋಗಿ ಡಾ. ಶ್ರೀನಿವಾಸ ಪಾಡಿಗಾರ್ ಇದು ಸಾಮೂಹಿಕ ನರಮೇಧವಾಗಿರಲಿಕ್ಕಿಲ್ಲ. ಹಾಗೆಂದು ಹೇಳಲು ಬೇಕಾದ ಚಾರಿತ್ರಿಕ ಪ್ರಾಕ್ತನಶಾಸ್ತ್ರೀಯ ಪುರಾವೆಗಳಿಲ್ಲ. ಬಹುಶ: ಇನ್ನೂರು ವರ್ಷಗಳ ಹಿಂದೆ ವಸತಿನೆಲೆಯಿಂದ ಸ್ವಲ್ಪ ದೂರ ಇವುಗಳನ್ನು ರಹಸ್ಯವಾಗಿ ವ್ಯವಸ್ಥಿತವಾಗಿ ಹೂಳಲಾಗಿತ್ತು ಎನಿಸುತ್ತದೆ ಎಂದರು. ಅದಕ್ಕಿಂತ ಮುಖ್ಯವಾಗಿ ಅವು ಸುಮಾರು ೬೩೮ ವರ್ಷಗಳಷ್ಟು ಪುರಾತನ ಎಂದು ಹೇಳಿದ ಕಾರ್ಬನ್ ಡೇಟಿಂಗ್ ಪರೀಕ್ಷೆಗೆಗೆ ಒಳಪಟ್ಟದ್ದು ಒಂದೇ ಸ್ಯಾಂಪಲ್. ಹೆಚ್ಚು random sampleಗಳನ್ನು ಪರೀಕ್ಷೆಗೊಳಪಡಿಸಬಹುದಿತ್ತು ಎಂದರು.


ಈಗ ಚಕ್ರ ಒಂದು ಸುತ್ತು ಸುತ್ತಿ ಮೊದಲಿದ್ದಲ್ಲಿಗೇ ಬಂದು ನಿಂತಿದೆ. ಕಳೆದ ವಾರ ಈ ಬುರುಡೆಗಳ ಕಾಲನಿಷ್ಕರ್ಷೆಗಾಗಿ ಅವುಗಳನ್ನು ಪರೀಕ್ಷೆಗೊಳಪಡಿಸಿದ ಅಮೆರಿಕೆಯ ಫ್ಲೋರಿಡಾದ ಮಿಯಾಮಿಯಲ್ಲಿರುವ ಬೆಟಾ ಎನಾಲಿಟಿಕ್ ಸಂಸ್ಥ್ರೆ ಇವು ಸುಮಾರು ೧೮೦ ವರ್ಷಗಳಷ್ಟು ಪುರಾತನ ಎಂದು ಮೂರು ಪುಟಗಳ ವಿವರವಾದ ವರದಿ ಸಲ್ಲಿಸಿದೆ ಎಂಬುದನ್ನು ರಾಜ್ಯ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯ ಬಹಿರಂಗಗೊಳಿಸಿದೆ. ತಾಂತ್ರಿಕವಾಗಿ ಹೇಳುವದಾದರೆ ಬೆಟ ಎನಲಿಟಿಕ್ ನವರು ೧೯೫೦ನೇ ಇಸ್ವಿಯನ್ನು ಬೇಸ್ ಆಗಿ ಇಟ್ಟುಕೊಂಡು ಈ ಪರೀಕ್ಷೆಯನ್ನು ನಡೆಸಿದ್ದಾರೆ. ತಲೆಬುರುಡೆಗಳು ಹಾಗೂ ಮೂಳೆಗಳು ನೂರಿಪ್ಪತ್ತು ವರ್ಷಗಳಷ್ಟು ಹಳೆಯವೆಂದು ಹೇಳಿದ್ದಾರೆ. ೧೯೫೦ನ್ನು ಬೇಸ್ ಆಗಿ ತೆಗೆದುಕೊಂಡರೆ ಈ ತಲೆಬುರುಡೆಗಳು ಮತ್ತು ಮೂಳೆಗಳು ಸು. ೧೮೩೦ರ ಆಸುಪಾಸಿನವು ಎಂದಾಗುತ್ತದೆ ಎಂಬುದು ಪುರಾತತ್ವ ಇಲಾಖೆಯ ನಿರ್ದೇಶಕರ ಸ್ಪಷ್ಟನೆ.

೬೦, ೪೦,೨೦,೬ ಹೀಗೆ ವಿವಿಧ ವಯೋಮಾನದ ಜನರ ತಲೆಬುರುಡೆಗಳು ಇವಾಗಿದ್ದು ಬರ ಅಥವಾ ಸಾಂಕ್ರಾಮಿಕ ಪಿಡುಗು ಕಾರಣವಾಗಿ ದೊಡ್ಡ ಸಂಖ್ಯೆಯಲ್ಲಿ ಜನ ವಲಸೆ ಹೋಗಿ ಕಾಲಾಂತರದಲ್ಲಿ ಮರಳಿದ ನಂತರ ಅಲ್ಲೇ ಉಳಿದು ವಿಕೋಪಕ್ಕೆ ಬಲಿಯಾದ ತಮ್ಮವರ ಕಳೇಬರಗಳನ್ನು ಹೂಳಿದ್ದರೆಂದು ತೋರುತ್ತದೆ ಎಂದಿದ್ದಾರೆ ನಿರ್ದೇಶಕ ಆರ್.ಗೋಪಾಲ. ಅಂದರೆ ಅವರ ಪ್ರಕಾರ ಇದು ಪಶ್ಚಾತ್ ಹೂಳಿಕೆ (second burial)ಯ ನಿದರ್ಶನ. ಇಂಥ ಪರೀಕ್ಷೆಗಳನ್ನು ನಡೆಸುವಲ್ಲಿ ಬೆಟಾ ಎನಲಿಟಿಕ್ ಕಂಪನಿ ಹೊಂದಿರುವ ಕಾರ್ಯಕ್ಷಮತೆಯ ದಾಖಲೆಯ ಹಿನ್ನೆಲೆಯಲ್ಲಿ ರಾಜ್ಯ ಪುರಾತತ್ವ ಇಲಾಖೆ ವರದಿಯನ್ನು ಒಪ್ಪಿಕೊಂಡಿದ್ದು ಅಣ್ಣಿಗೇರಿ ಬುರುಡೆ ಸ್ಥಳಶೋಧ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದಿವೆ ಪತ್ರಿಕೆಗಳು. ಆದರೆ ಯು ಎನ್ ಐ ವರದಿಯ ಪ್ರಕಾರ ಜಿಲ್ಲಾಡಳಿತವು ಅಣ್ಣಿಗೇರಿ ತಲೆಬುರುಡೆಗಳು ನೂರೆಂಬತ್ತು ವರ್ಷ ಹಳೆಯವೆನ್ನುವ ಅಮೇರಿಕದ ಪ್ರಯೋಗಶಾಲೆಯ ವರದಿ ತನಗೆ ಸಮ್ಮತವಲ್ಲ ಎಂದಿದೆ. ಭಾರತೀಯ ವಿಜ್ಞಾನಿಗಳ ನಿಷ್ಕರ್ಷೆಗೂ ಮಿಯಾಮಿ ಪರಿಣತರ ನಿಷ್ಕರ್ಷೆಗೂ ನಡುವೆ ಇರುವ ವ್ಯತ್ಯಾಸದ ಮಹದಂತರದ ಹಿನ್ನೆಲೆಯಲ್ಲಿ ಭಾರತೀಯ ಸ್ಥಿತಿಗತಿಗಳಲ್ಲಿ ಇವು ಪರೀಕ್ಷೆಗೊಳಪಡಬೇಕೆನ್ನುವದು ಪ್ರಾಕ್ತನಶಾಸ್ತ್ರಜ್ಞರ ಅಭಿಪ್ರಾಯವೆಂದು ಜಿಲ್ಲಾಡಳಿತ ಭಾವಿಸಿದೆ ಎಂದು ಈ ವರದಿ ಹೇಳುತದೆ, ಆದರೆ ಈ ಕುರಿತ ವಿವರಗಳು ಅದರಲ್ಲಿಲ್ಲ.

ಒಟ್ಟಿನಲ್ಲಿ ಕೇಸ್ ಖಲ್ಲಾಸ್ ಎನ್ನಲಾಗುವದಿಲ್ಲ. ಉತ್ತರಿಸಬೇಕಾದ ಹಲವು ಪ್ರಶ್ನೆಗಳಿವೆ, ಅಧ್ಯಯನ ಮುಂದುವರೆಯಬೇಕಾದ ಆಯಾಮಗಳಿವೆ, ಇದೊಂದು ವಿರಳಾತಿವಿರಳ ಸಂಗತಿ. ಬರೀ ರುಂಡಗಳು ಒಂದೆಡೆ ಹೂಳಲ್ಪಟ್ಟು ಇತರ ಅವಯವಗಳ ಅಸ್ಥಿಗಳು ಬೇರೆಡೆ ಹರಡಿರುವದೇಕೆ? ಕೆಳದವಡೆಗಳಿಲ್ಲದೇ ಬರಿದೇ ತಲೆಬುರುಡೆಗಳ ಮೇಲ್ಭಾಗ ಮಾತ್ರ ಇರುವದೇಕೆ? ಎರಡು ಪರೀಕ್ಷೆಗಳ ನಡುವೆ ನಾಲ್ಕೂವರೆನೂರು ವರ್ಷಗಳ ಅಂತರವನ್ನು ಹೇಗೆ ವಿವರಿಸುವದು? ಅವು ನೂರೆಂಬತ್ತು ವರ್ಷಗಳಷ್ಟು ಪುರಾತನವೆನ್ನುವದಾದರೆ ಸರಳ ವಿವರಣೆಗೆ ಅವು ನಿಲುಕುತ್ತವೆ. ೧೭೯೧ರಿಂದ ೧೮೭೭ರ್ ವರೆಗಿನ ಅವಧಿಯಲ್ಲಿ ಸ್ಥಾನಿಕವಾಗಿ ಡೌಗಿ ಬರ, (ಅಕ್ಷರಶ: ತಲೆಬುರುಡೆ ಬರ, ಅಂದರೆ ಹೂಳುವಿಕೆಗೂ ಗತಿ ಇಲ್ಲದೆ ಚೆಲ್ಲಾಡಿದ್ದ ಅಸಂಖ್ಯ ಕಳೇಬರಗಳು ಬುರುಡೆಗಳ ಸನ್ನಿವೇಶ) ಬ್ಯಾನಿಬರ, ಬ್ಯಾಸಿಗಿಬರ ಮೊದಲಾಗಿ ಕರೆಯಲ್ಪಟ್ಟ ಭೀಕರ ಬರಗಾಲಗಳು ಈ ಪ್ರದೇಶದಲ್ಲಿ ಸಂಭವಿಸಿದ ಕುರಿತು ೧೮೯೪ರಲ್ಲಿ ಮುಂಬೈ ಪ್ರಾಂತದ ಗೆಝೆಟಿಯರ್ ಸಂಕಲಿಸಿದ ಜೇಮ್ಸ್ ಕ್ಯಾಂಪಬೆಲ್ ಉಲ್ಲೇಖಿಸಿದ್ದಾನೆ. (ಸಂಕ್ಷಿಪ್ತ ವಿವರಗಳಿಗೆ, ೧೩ ನವೆಂಬರ್ ೨೦೧೧ರ The Hindu ಪತ್ರಿಕೆಯಲ್ಲಿ ಎನ್. ದಿನೇಶ್ ನಾಯಕ್ ಬರೆದ Historical records speak of famine, epidemics in region ಎಂಬ ವರದಿಯನ್ನು ನೋಡಿ.) ಈ ಕಾಲಾವಧಿಯಲ್ಲಿ ಈ ಬರಗಾಲದ ಬವಣೆಯನ್ನು ಮತ್ತಷ್ಟು ಭೀಕರಗೊಳಿಸಿದ ಪೆಂಡಾರಿಗಳ ದಾಳಿಗಳು, ಇನ್ನೊಂದು ಹಂತದಲ್ಲಿ ಪರಶುರಾಮ್ ಭಾವು ನೇತೃತ್ವದ ಮರಾಠಾ ದಾಳಿಗಳ ಹಿನ್ನೆಲೆಗಳೂ ಈ ಪ್ರದೇಶದ ದಾಖಲೆಯಲ್ಲಿವೆ.. ಇವೆಲ್ಲ ನಿರುದ್ವಿಗ್ನವಾಗಿ ಅಧ್ಯಯನಕ್ಕೊಳಪಡಬೇಕು. ಇದೆಲ್ಲಕ್ಕಿಂತ ಹೆಚ್ಚಾಗಿ ಸಾಮೂಹಿಕ ನರಮೇಧದ, ವಾಮಾಚಾರದ, ಸೇಡಿನ ಪ್ರತಿರೂಪವಾದ ಅಂಗಾಂಗ ವಿಚ್ಛಿನ್ನತೆಯ, ಬ್ರಿಟಿಶ್ ವಿರೋಧಿ ಬಂಡಾಯ ಕಾಲದ ದಮನದ ಪ್ರಮೇಯಗಳ ಗತಿ ಏನಾಯಿತು ಅದನ್ನೂ ನೋಡಬೇಕು! ಅಂದರೆ ಆಣ್ಣಿಗೇರಿ ಪ್ರಕರಣ ಯಾವುದರ ಕುರಿತು ಯಾವ ಹಂತದಲ್ಲಿ ಯಾರು ಎಷ್ಟು ಮಾತಾಡಬೇಕು ಎಂಬಂಥ ಅಂಶಗಳ ಕುರಿತೂ ನಮ್ಮ ಕಣ್ಣು ತೆರೆಸಬೇಕು.