Sunday, September 16, 2012

ಸಾಹಿತ್ಯಲೋಕದ ಒಂಟಿ ಸಲಗ : ಬುದ್ದಣ್ಣ ಹಿಂಗಮಿರೆ





     
`ಋಜುಪಥವ ಹಿಡಿದೆ ಛಲ ಬಿಡದೆ                          
ರಾಜಿಯಾಗದೆ ನಿಜದ ನೇರಕೆ ನಡೆದೆ
ಬುದ್ಧದರ್ಶನಕೆ ಹುಲ್ಲು ಗೆಜ್ಜೆ ನಿನಾದಕೆ
ಮುಪ್ಪಿಲ್ಲ ಹಿಂಗಮಿರೆಯಿತ್ತ ಕಾವ್ಯಗೌರವಕೆ
ಮಣಿಹವಿದು ನೀ ಗೈದ ಸೃಷ್ಟಿ ಸಾಮರ್ಥ್ಯಕೆ`
ಕನ್ನಡದ ಖ್ಯಾತ ಕವಿ, ವಿಮರ್ಶಕ ಡಾ.ಬುದ್ದಣ್ಣ ಹಿಂಗಮಿರೆಯವರಿಗೆ ಅರ್ಪಿತವಾದ `ಜನಪರ` (2011, ಸಂ: ಶಿವಾನಂದ ಗಾಳಿ) ಎಂಬ ಅಭಿನಂದನಾ ಗ್ರಂಥದಲ್ಲಿ ಪ್ರೊ. ಹಂಪನಾ ಅವರು ಬರೆದ ಕವಿತೆಯೊಂದರ ಸಾಲುಗಳಿವು. ಹಿಂಗಮಿರೆಯವರ ವ್ಯಕ್ತಿತ್ವ ಮತ್ತು ಸಾಹಿತ್ಯಕ್ಕೆ ಸಮನಾಗಿಯೇ ಸಂದ ಹೃದಯಸ್ಪರ್ಶಿ ಶ್ರದ್ಧಾಂಜಲಿ ಇದು.

ಕರ್ನಾಟಕ-ಮಹಾರಾಷ್ಟ್ರ ಗಡಿಯ ಕೃಷ್ಣಾ ನದಿ ತೀರದ ರಾಜಾಪುರ ಎಂಬ ಕುಗ್ರಾಮ ಹಿಂಗಮಿರೆ ಅವರ ಹುಟ್ಟೂರು (ಜ: 1933). ಸ್ವಪ್ರಯತ್ನದಿಂದ ಶಿಕ್ಷಣ ಸಾಹಿತ್ಯದಂಥ ಸಂಸ್ಕಾರಗಳನ್ನು ರೂಢಿಸಿಕೊಂಡ ಅವರು, ಖಾಸಗಿ ನೋವು-ಆಘಾತಗಳ ನಡುವೆಯೂ ಬದುಕಿನ ಕುರಿತು ಅಪಾರ ಪ್ರೀತಿಯನ್ನು ಉಳಿಸಿಕೊಂಡು, ಎಲ್ಲರಿಗೂ ಪ್ರೀತಿಯನ್ನೇ ಹಂಚುತ್ತ, ತಾನೂ ಬೆಳೆದು ಇತರರನ್ನೂ ಬೆಳೆಸಿದರು.

`ಸೋವಿಯೆತ್ ಲ್ಯಾಂಡ್ ನೆಹರು ಪ್ರಶಸ್ತಿ` ಪಡೆವವರೆಗೆ; ಸುಮಾರು ಕಾಲು ಶತಮಾನದಿಂದ ತಮ್ಮ ಅಂತರಂಗದಲ್ಲಿ ರೂಪುಗೊಳ್ಳುತ್ತ ನಡೆದ ದರ್ಶನವೊಂದಕ್ಕೆ ಬದುಕಿನ ಇಳಿಸಂಜೆಯಲ್ಲಿ `ಬುದ್ಧ ಕಾವ್ಯ ದರ್ಶನ`ವೆಂಬ ಮಹಾಕಾವ್ಯದ ರೂಪು ಕೊಟ್ಟು, ಅದನ್ನು ಪ್ರಕಟಿಸಿಯೇ ಈ ಲೋಕದಿಂದ ನಿರ್ಗಮಿಸುವವರೆಗೆ ಬುದ್ದಣ್ಣ ಹಿಂಗಮಿರೆ ನಡೆದದ್ದು ನಿರಂತರ ಸಂಘರ್ಷದ ದಾರಿ.

ಅಥಣಿಯ ಹೈಸ್ಕೂಲೊಂದರಲ್ಲಿ ಮಾಸ್ತರ್ ಆಗಿದ್ದ ಹಿಂಗಮಿರೆಯವರ ಜ್ಞಾನದಾಹ ಅವರನ್ನು ಸಾಂಗಲಿಯಲ್ಲಿದ್ದ ರಂ.ಶ್ರಿ.ಮುಗಳಿಯವರ ಬಳಿ ಕೊಂಡೊಯ್ದಿತು. ಮುಗಳಿಯವರ ಮಾರ್ಗದರ್ಶನದಲ್ಲಿ ಪ್ರೌಢಪ್ರಬಂಧ ಬರೆದು ಪೂನಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದು ನಿಪ್ಪಾಣಿ, ಹುಬ್ಬಳ್ಳಿ-ಧಾರವಾಡದ ಕಾಲೇಜುಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಕನ್ನಡ ಎಂ ಎ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಲೇ ವಿಶ್ವವಿದ್ಯಾಲಯದ ವಿದೇಶಿ ಭಾಷೆಗಳ ಅಧ್ಯಯನ ವಿಭಾಗದಲ್ಲಿ ರಷ್ಯನ್ ಭಾಷೆ-ಸಾಹಿತ್ಯದಲ್ಲಿ ಸ್ವತಃ ತಾವೂ ಎಂ.ಎ ಮಾಡಿದರು. ಮಾಸ್ಕೋನಗರದ ಪುಷ್ಕಿನ್ ಪ್ರತಿಮೆಯ ಬಳಿ ಸಾರ್ವಜನಿಕವಾಗಿ ಕವನವಾಚನ ಮಾಡುವವರೆಗೆ ಚಾಚಿಕೊಂಡ ಸುದೀರ್ಘ ಪಯಣವದು.

ವರಸೆಯಲ್ಲಿ ನನ್ನ ಭಾವ (ಚಿಕ್ಕಮ್ಮನ ಮಗಳ ಗಂಡ) ಆದರೂ 1964ರಲ್ಲಿ ನಾನು ಪ್ರಾಥಮಿಕ ಎರಡನೆಯ ತರಗತಿಯಲ್ಲಿದ್ದಾಗ ಯಡೂರಿನಲ್ಲಿ ನಡೆದ ಅವರ ಮದುವೆಯ ಅಸ್ಪಷ್ಟ ನೆನಪುಗಳನ್ನು ಹೊರತುಪಡಿಸಿದರೆ ಹಿಂಗಮಿರೆ ಎಂಬ ವ್ಯಕ್ತಿತ್ವದ ನಿಕಟ ಪರಿಚಯ ನನಗೆ ಇರಲೇ ಇಲ್ಲ. ಅವರ ನಿಕಟ ಸಂಪರ್ಕ ಬಂದದ್ದು ನಾನು ಧಾರವಾಡದ ಕರ್ನಾಟಕ ಕಾಲೇಜಿಗೆ ಪದವಿ ವಿದ್ಯಾಭ್ಯಾಸಕ್ಕೆ ಪ್ರವೇಶ ಕೋರಿ ಹೋದ ನಂತರವೇ.

ಆಗ ಅವರಲ್ಲಿ ಅಧ್ಯಾಪಕರು. ಅಲ್ಪ ಸ್ವಲ್ಪ ಸಾಹಿತ್ಯದ ಆಸಕ್ತಿ ಇದ್ದ ನನಗೆ ಹಿಂಗಮಿರೆ ಅವರೊಂದಿಗೆ ಸಂಪರ್ಕ ಬೆಳೆಯಿತು. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸಾಹಿತ್ಯಾಸಕ್ತಿಗೆ ನೀರೆರೆಯುವ ಅವರ ಆಸಕ್ತಿಯ ಫಲವಾಗಿ ವಿ.ಕೃ.ಗೋಕಾಕರ ಕಾಲದಿಂದ ಕರ್ನಾಟಕ ಕಾಲೇಜಿನ ಕನ್ನಡ ಸಂಘದ ಭಾಗವಾಗಿದ್ದ `ಕಮಲ ಮಂಡಲ` ಪ್ರಕಾಶನವನ್ನು ಮರುಜೀವಗೊಳಿಸಿದ ಅವರು, `ಸ್ಪಂದನ` ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳ ಕವನಸಂಗ್ರಹ ಹೊರತಂದರು. ಅದರಲ್ಲಿ ನನ್ನ ಕವಿತೆಗಳೂ ಸೇರಿದ್ದವು.

ಅದಕ್ಕೆ ಮೊದಲು, ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗಲೂ `ಸಾಹಿತ್ಯ ಮಂಟಪ` ಎಂಬ ವೇದಿಕೆ ರೂಪಿಸಿ ಸರಜೂ ಕಾಟಕರ, ಸತೀಶ ಕುಲಕರ್ಣಿ, ಗವಿಸಿದ್ಧ ಬಳ್ಳಾರಿಯಂಥ ಕವಿಗಳು ಕಾವ್ಯಲೋಕವನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದರು.

ಇಂದಿರಾಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಪರಿಣಾಮವಾಗಿ ನೆಲೆಸಿದ್ದ ವಿಲಕ್ಷಣ ಮೌನದ ನಡುವೆಯೇ ಬಂಡಾಯ, ಸಮುದಾಯ, ರೈತ, ದಲಿತ ಮತ್ತಿತರ ಜನಪರ ಚಳವಳಿಗಳು ಧಾರವಾಡದಲ್ಲಿ ತಲೆ ಎತ್ತತೊಡಗಿದ್ದ ದಿನಗಳವು. ಮಾರ್ಕ್ಸಿಸ್ಟ್ ಚಿಂತನೆಯ ಪ್ರಭಾವಕ್ಕೊಳಗಾಗಿದ್ದ ನಾವು ಕೆಲವರು ಅದೇ ಒಲವಿನ ಹಿಂಗಮಿರೆ ಅವರೊಂದಿಗೆ ಒಡನಾಡುವದು ಸಹಜವಾಗಿತ್ತು.

ಒಂದೆಡೆ ಚಂದ್ರಶೇಖರ್ ಪಾಟೀಲರಂಥ ಸೋಷಲಿಸ್ಟರು ತುರ್ತುಸ್ಥಿತಿಯ ವಿರುದ್ಧ ದನಿ ಎತ್ತತೊಡಗಿದ್ದರೆ ಇನ್ನೊಂದೆಡೆ ಕಾದಂಬರಿಕಾರ ಬಸವರಾಜ ಕಟ್ಟೀಮನಿ, ವಿಮರ್ಶಕ ಶಂಕರ ಮೊಕಾಶಿ ಪುಣೇಕರ್ ಅಂಥವರು ತುರ್ತುಸ್ಥಿತಿಯನ್ನು ಸಮರ್ಥಿಸಿ ಇಂದಿರಾ ಭಜನೆ ಶುರು ಹಚ್ಚಿಕೊಂಡಿದ್ದರು.

ಹಿಂಗಮಿರೆಯವರು ತುರ್ತುಪರಿಸ್ಥಿತಿಯನ್ನು ಸಮರ್ಥಿಸಿದ್ದರು ಎಂಬುದಕ್ಕಿಂತ ಅವರು ಕಮ್ಯುನಿಜಂನಲ್ಲಿ ಆಸ್ಥೆಯುಳ್ಳವರಾಗಿದ್ದಕ್ಕೂ ಮತ್ತು ರಾಷ್ಟ್ರಮಟ್ಟದಲ್ಲಿ ಸಿಪಿಐ (ಭಾರತ ಕಮ್ಯುನಿಸ್ಟ್ ಪಕ್ಷ ) ಇಂದಿರಾಗಾಂಧಿ ವಿಧಿಸಿದ್ದ ತುರ್ತುಸ್ಥಿತಿಯನ್ನು ಬೆಂಬಲಿಸಿದ್ದಕ್ಕೂ ತಳಕು ಹಾಕಿ, ಹಿಂಗಮಿರೆಯವರನ್ನು ತುರ್ತುಸ್ಥಿತಿಯ ತಾತ್ವಿಕ ಬೆಂಬಲಿಗರೆಂಬಂತೆ ಬಿಂಬಿಸುವ ಲೋಹಿಯಾವಾದಿ ಸೋಷಲಿಸ್ಟರ ರೆಟರಿಕ್ಕೇ ಹೆಚ್ಚಾಗಿತ್ತು.

ತಮ್ಮ ಕುರಿತು ತಾವೇ ದೊಡ್ಡದಾಗಿ ಮಾತನಾಡಿಕೊಳ್ಳುವ ಜಾಯಮಾನದವರಲ್ಲದ ಹಿಂಗಮಿರೆ ತಮ್ಮಷ್ಟಕ್ಕೆ ತಾವು ಮೌನವಾಗಿ ಹಲವು ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದರು. ಅಂತಸ್ಸತ್ವದಲ್ಲಿ ನಿಜಕ್ಕೂ ಬಂಡಾಯಗಾರನಾದ ಮತ್ತು ಆ ಆಶಯದ ಕಾವ್ಯದ ಉತ್ತಮ ಪ್ರತಿನಿಧಿಯಾದ ಅವರು ಬಂಡಾಯ ಸಾಹಿತ್ಯ ಸಂಘಟಣೆಯ ವ್ಯಾಪ್ತಿಯೊಳಗೂ ಬರಲು ಬಯಸದೇ ತಮ್ಮ ಪಾಡಿಗೆ ತಾವಿದ್ದರು.

ದಲಿತ ಹೋರಾಟವೆಂಬುದು ಕರ್ನಾಟಕದಲ್ಲಿ ಸಂಘಟಿತವಾಗಿ ರೂಪಗೊಳ್ಳುವ ಮೊದಲೇ ಹಿಂಗಮಿರೆಯವರು ಚೆನ್ನಣ್ಣ ವಾಲೀಕಾರ್ ಮತ್ತು ಸೋಮಶೇಖರ್ ಇಮ್ರಾಪೂರ ಅವರನ್ನು ಜೊತೆ ಮಾಡಿಕೊಂಡು `ದಲಿತ` ಎಂಬ ನಿಯತಕಾಲಿಕೆಯ ಹಲವು ಸಂಚಿಕೆಗಳನ್ನು 1974ರಿಂದಲೇ ಹೊರತಂದಿದ್ದರು. ತೆಲುಗಿನ ದಿಗಂಬರ ಕಾವ್ಯ, ಮರಾಠಿ ದಲಿತಕಾವ್ಯ ಮತ್ತು ನಾಮದೇವ ಢಸಾಳರಂಥ ಪ್ರಖರ ದಲಿತ ಕವಿಗಳು ಕನ್ನಡಕ್ಕೆ ಪರಿಚಯವಾದದ್ದೇ ಅದರ ಮೂಲಕ.

1977ರಲ್ಲಿ ಅವರ ಮೂರನೇ ಕವನ ಸಂಗ್ರಹ `ಹದ್ದುಗಳ ಹಾಡು` ಬಿಡುಗಡೆಯಾಯಿತು. ಆ ಮೊದಲು `ಹುಲ್ಲುಗೆಜ್ಜೆ` (1962) ಹಾಗೂ `ಶಬ್ದ ರಕ್ತ ಮತ್ತು ಮಾಂಸ` ( 1968) ಪ್ರಕಟವಾಗಿದ್ದವು. `ಹುಲ್ಲುಗೆಜ್ಜೆ`ಯಲ್ಲಿ `ಕಿವುಡು ಭೂಮಿ ಕುರುಡು ಗಾಳಿ/ ಹುಲ್ಲು- ಗೆಜ್ಜೆ ನಿನದ/ ಒಮ್ಮೆ ಹಸಿರು ಒಮ್ಮೆ ಬರಡು/ ಸುಖ ದುಃಖದ ಮೋದ` ಎಂಬಂಥ ರೂಪಕಗಳು, `ಅಗ್ನಿ-ಬಂಡೆ ಸುತ್ತುವರಿವ/ಇದೊ ಬದುಕಿನ ಭ್ರಮಣ/ ಸರಸ-ವಿರಸ ಸ್ವಪ್ನ ನೆಯ್ದು/ ಹಾಡುತ್ತಿಹ ಹರಣ` ಎಂಬಂಥ ಸಾಲುಗಳು ಶಕ್ತ ಕವಿಯೊಬ್ಬನ ಆಗಮನವನ್ನು ನಿಸ್ಸಂದೇಹವಾಗಿ ಸಾರಿದ್ದವು. `ಶಬ್ದ ರಕ್ತ ಮತ್ತು ಮಾಂಸ`ದಲ್ಲಿ ನಿಗಿ ನಿಗಿ ಉರಿಯುವ ಗುಣವುಳ್ಳ ರೂಪಕ- ಪ್ರತಿಮೆಗಳು, ಬಂಡುಕೋರ ಆಶಯಗಳು, ವಾಸ್ತವದ ಕ್ರೌರ್ಯಗಳು, ವಿಲಕ್ಷಣ ವ್ಯಂಗ್ಯ, ಸ್ಫೋಟಕ ಸತ್ವ ದಟ್ಟವಾಗಿ ಮೇಳೈಸಿವೆ.

`ಸರಸ್ವತಿಯ ನಗ್ನಪುತ್ಥಳಿ ಸುತ್ತ ಹೂ ಸುರಿದು/ಸ್ವಚ್ಛಂದ ತುಳಿಯುತ್ತಿದ್ದೇವೆ ಹೊಸ ಲಯ,/ ಭಯ, ಶಂಕೆ, ಬಿರುಗಾಳಿ ಹೊರೆಕಟ್ಟಿ ತಂದು/ ಲಿಲಾವು ಮಾಡುತ್ತೇವೆ/ ರಕ್ತದಂಗಡಿ ಹೊಕ್ಕು ಲೂಟಿ ಮಾಡುತ್ತೇವೆ ಪ್ರತಿಮೆಗಳ` ಮುಂತಾದ ಸಾಲುಗಳು ಅಥವಾ `ಶ್ರದ್ಧೆ ಬಚ್ಚಲಲ್ಲಿ ತೊಯ್ದ ಭ್ರಮಿಷ್ಟರು ನಾವಲ್ಲ/... ... .../ ಅಂಧೇರನಗರಿಯಾಳ್ವ ಅಪ್ರಾಮಾಣಿಕ ಗಣಕ್ಕೆ/ ಇದೋ ಎತ್ತಿದ್ದೇವೆ ಕಪ್ಪುಧ್ವಜ`ದಂಥ ಸಾಲುಗಳು ಹಿಂಗಮಿರೆಯೆಂಬ ಕವಿಯೊಳಗೆ ಕುದಿಯುತ್ತಿದ್ದ ಅನುಭವ ಹಾಗೂ ಅದರ ಅಭಿವ್ಯಕ್ತಿಯ ಒತ್ತಡವನ್ನು ಸೂಚಿಸುತ್ತವೆ.

`ಹದ್ದುಗಳ ಹಾಡು` ನವ್ಯತೆಯಿಂದ ಕಳಚಿಕೊಂಡು ಆನಂತರ ಎಂಬತ್ತರ ದಶಕದುದ್ದಕ್ಕೂ ಕನ್ನಡ ಕಾವ್ಯಲೋಕದಲ್ಲಿ ಸ್ವಲ್ಪ ವಾಚ್ಯವಾಗಿ ರಾರಾಜಿಸಿದ ದಲಿತ, ಬಂಡಾಯ ಇತ್ಯಾದಿ ನಾಮಾಂಕಿತ ಪ್ರವೃತ್ತಿಗಳ ಮುನ್ಸೂಚನೆಯಂಥ ಪದ್ಯಗಳನ್ನು ಒಳಗೊಂಡು ಪ್ರಕಟವಾಯಿತು. ಇಲ್ಲಿಯ ಪದ್ಯಗಳಲ್ಲಿ `ನೆಲದ ಹಾಡು` ಎಂಬುದು ಮುಖ್ಯವಾದುದು. ಅಡಿಗರ ಭೂಮಿಗೀತಕ್ಕಿಂತ ತೀರ ಭಿನ್ನವಾದ ನೆಲೆಯ ದರ್ಶನವನ್ನು ಈ ಕವಿತೆ ಪ್ರಕಟಿಸಿತು.

70-80ರ ದಶಕಗಳಲ್ಲಿ ಹಿಂಗಮಿರೆಯವರು ಬಹಳಷ್ಟು ಕಾವ್ಯ ಹಾಗೂ ವಿಮರ್ಶೆಯ ಕೃಷಿಯನ್ನು ಮಾಡಿದರು. ಪುಣೆ ವಿಶ್ವವಿದ್ಯಾಲಯದಿಂದ ಅವರಿಗೆ ಡಾಕ್ಟರೇಟ್ ಪದವಿ ದೊರಕಿಸಿ ಕೊಟ್ಟ ಅವರ ಮಹಾಪ್ರಬಂಧ `ಕನ್ನಡದಲ್ಲಿ ಶೋಕಕಾವ್ಯ` 1976ರಲ್ಲಿ ಮೈಸೂರು ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟವಾಯಿತು. ನವ್ಯಕಾವ್ಯ ವಿಮರ್ಶೆಯ ಕುರಿತಾದ ಇವರ ಕೃತಿ `ಹೊಸಕಾವ್ಯ ಹೊಸದಿಕ್ಕು`.

ಹಿಂಗಮಿರೆಯವರ ಸಂಪಾದಿತ ಕಾವ್ಯಕೃತಿಗಳೂ ಹಲವಾರಿವೆ. ಅವರು ಸಂಪಾದಿಸಿದ ಕಾವ್ಯಕೃತಿಗಳಲ್ಲಿ ಬಹುಮುಖ್ಯವಾದುದು `ಹೊಸ ಜನಾಂಗದ ಕವಿತೆಗಳು` ಎಂಬ ಪ್ರಾತಿನಿಧಿಕ ಅಂಥಾಲಾಜಿ. ಇದು 1970ರಲ್ಲಿ ಪಿ.ಲಂಕೇಶ್ ಸಂಪಾದಿಸಿದ `ಅಕ್ಷರ ಹೊಸ ಕಾವ್ಯ`ಕ್ಕೆ ಪ್ರತ್ಯುತ್ತರವಾಗಿ ಪ್ರಕಟವಾದದ್ದು.

ಲಂಕೇಶ್ ಸಂಪಾದಿತ ಕೃತಿಯಲ್ಲಿ ಅಡಕವಾದ ಕವಿತೆಗಳು ಸಂಪಾದಕರ ವೈಯಕ್ತಿಕ ಇಷ್ಟಾನಿಷ್ಟಗಳ ನೆಲೆಯಲ್ಲಿ ಆಯ್ಕೆಯಾದ ಕವಿಗಳ ಕವಿತೆಗಳೆಂಬುದು ಸ್ಪಷ್ಟವಿತ್ತು. ಅಲ್ಲಿದ್ದುದು ಆಯಾ ಕವಿಗಳ ಪ್ರಾತಿನಿಧಿಕ ಕವಿತೆಗಳಲ್ಲ ಮತ್ತು ಉತ್ತರ ಕರ್ನಾಟಕ ಭಾಗದ ಹಲವು ಸಶಕ್ತ ಕವಿಗಳಿಗೆ ಅದರಲ್ಲಿ ಪ್ರಾತಿನಿಧ್ಯ ದೊರೆತಿಲ್ಲವೆಂಬ ಕಾರಣಕ್ಕೆ ಹಿಂಗಮಿರೆಯವರು ಪಿ.ಲಂಕೇಶ್ ಅಕಾರಣವಾಗಿಯೋ ಸಕಾರಣವಾಗಿಯೋ ಹೊರಗಿಟ್ಟ ಕವಿಗಳ ಪೈಕಿ 29 ಕವಿಗಳ ಪ್ರಾತಿನಿಧಿಕವೆನ್ನಬಹುದಾದ ಕವಿತೆಗಳನ್ನು ಅದರ ಮರುವರ್ಷವೇ (1971) ಪ್ರಕಟಿಸಿದರು.

ವರ್ತಮಾನದ ಕಾವ್ಯದ ಕುರಿತ ಸಂಪಾದಕರ ನಿರ್ದಿಷ್ಟ ಪ್ರಶ್ನೆಗಳಿಗೆ ಈ ಎಲ್ಲ ಕವಿಗಳ ಅನಿಸಿಕೆಗಳನ್ನು ಪ್ರತಿನಿಧಿಸುವ ಉತ್ತರಗಳು ಮತ್ತು ಸಂಪಾದಕೀಯ ಪ್ರಸ್ತಾವನೆಯೊಂದಿಗೆ ಪ್ರಕಟವಾದ ಈ ಸಂಕಲನದ ಕವಿಗಳಲ್ಲಿ ಹಲವರು ಇಂದಿಗೂ ಸೃಜನಶೀಲ ಜೀವಂತಿಕೆ ಉಳಿಸಿಕೊಂಡಿದ್ದಾರೆ.

ನಾಟಕ ಹಿಂಗಮಿರೆಯವರು ಸಾಕಷ್ಟು ಕೃಷಿಗೈದ ಇನ್ನೊಂದು ಕ್ಷೇತ್ರ. ತೀರ್ಪು, ನೀಲಾಂಜನೆ, ಅಹಲ್ಯೆ, ಸಂಗೊಳ್ಳಿ ರಾಯಣ್ಣ ಅವರ ರಂಗಕೃತಿಗಳು. ಕಲಘಟಗಿ ಪರಿಸರದ ಗ್ರಾಮೀಣರ ಬದುಕಿನಲ್ಲಿ ಬದಲಾವಣೆ ತರುವ ಕಾರ್ಯಗೈದ, ಕರ್ನಾಟಕ ಶಾಸನಸಭೆಗೂ ಆಯ್ಕೆಯಾಗಿದ್ದ ಫಾದರ್ ಜೇಕಬ್ ಅವರನ್ನು ಆದರ್ಶೀಕರಿಸಿ `ದೀನದಲಿತರ ನಾಯಕ` ಎಂಬ ನಾಟಕವನ್ನು ಬರೆದರು.

ರಷ್ಯನ್ ಭಾಷೆಯ ಕಾವ್ಯದ ಅನುವಾದ ಮತ್ತು ರೂಪಾಂತರ ಹಿಂಗಮಿರೆ ಅವರ ಇನ್ನೊಂದು ಕೊಡುಗೆ. ಅಕ್ಷರ ಪ್ರಕಾಶನದಿಂದ ಹಿಂಗಮಿರೆಯವರ `ರಷ್ಯನ್ ಹೊಸ ಕವಿತೆಗಳು` (1973) ಪ್ರಕಟವಾಯಿತು. ಪುಷ್ಕಿನ್ ಅವರು ಜಿಪ್ಸಿಗಳ ಕುರಿತು ಬರೆದ ಖಂಡಕಾವ್ಯವೊಂದನ್ನು ನಾಟಕಕ್ಕೆ ರೂಪಾಂತರಿಸಿ `ಅಲೆಮಾರಿಗಳು` ಶೀರ್ಷಿಕೆಯಡಿ ಪ್ರಕಟಿಸಿದರು.

ಅವರ ಸೃಜನಶೀಲ ತುಡಿತಗಳ ಶಿಖರಪ್ರಾಯ ಕೃತಿಯಾಗಿ `ಬುದ್ಧ ಕಾವ್ಯ ದರ್ಶನ` ಮಹಾಕಾವ್ಯ (2003) ಪ್ರಕಟವಾಯಿತು. ಹಿಂಗಮಿರೆ ಆ ಕಾವ್ಯದ ಉದ್ದೇಶವನ್ನು ಹೇಳಿದ್ದು ಹೀಗೆ: `ಕಾಳು ತುಂಬಿ ಹೊಡೆಯೆತ್ತಿ ನಿಂತ ಹೊಳಿಸಾಲ ಭೂಮಿಯಂತೆ/ ತುಂಬಿ ಹರಿಯುವಾ ಕೃಷ್ಣೆ-ತುಂಗೆಯರ ತುಂಬು ಪಾತ್ರದಂತೆ/ ಬುದ್ಧಕಾವ್ಯ ರುಚಿ ಕಲ್ಲುಸಕ್ಕರೆಯ ಅಚ್ಚ ಹರಳಿನಂತೆ/ ಕೊರಡ ಕೊನರಿಸುವ ಭಾವ ಚಿಮ್ಮಿಸುವ ಜೀವಸತ್ವದಂತೆ...`.

ಸಾವಿರದೈನೂರು ಚತುಷ್ಪದಿಗಳಿಂದ ಕೂಡಿ ಅರವತ್ತು ಅಧ್ಯಾಯಗಳಲ್ಲಿ ಬುದ್ಧನ ಬದುಕು ಸಂದೇಶದ ದರ್ಶನ ಮಾಡಿಸುವ ಈ ಛಂದೋಬದ್ಧ ಕೃತಿ ಎಚ್.ಆರ್. ಅಮರನಾಥ ಗುರುತಿಸಿದಂತೆ- `ಮತಪ್ರಚಾರದ ಆವೇಶವಿಲ್ಲದ, ತತ್ಕಾಲೀನತೆಯ ತೆವಲಿಲ್ಲದ, ಜಾನಪದೀಯ ಸತ್ವವನ್ನೂ, ಭಾವಗೀತಾತ್ಮಕತೆಯನ್ನೂ ಹೊಂದಿದ, ಪೌರಾಣಿಕತೆಯನ್ನು ಕಳಚಿ ಇತಿಹಾಸ ಪ್ರಜ್ಞೆಯಿಂದ ನಿರ್ವಹಿಸಲ್ಪಟ್ಟ ಕಾವ್ಯ`.

ಹಿರಿಯ ಮಗಳ ಬದುಕಿನ ಏರುಪೇರುಗಳ ದುಃಖ, ಇದ್ದ ಎರಡೂ ಗಂಡುಮಕ್ಕಳ ಅಕಾಲಿಕ ಮರಣದಂಥ ದುಃಖ ದುಮ್ಮಾನಗಳ ನಡುವೆಯೂ ತಮ್ಮ ಕ್ರಿಯಾಶೀಲತೆಯನ್ನು ಸತತವಾಗಿ ಉಳಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆಯನ್ನು ಹಿಂಗಮಿರೆ ಅವರು ಕೊಟ್ಟಿದ್ದಾರೆ. ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

`ಪುಷ್ಕಿನ್ ಕವಿತೆಗಳು` ಕೃತಿಗೆ ಸೋವಿಯೆಟ್ ಲ್ಯಾಂಡ್ ನೆಹರೂ ಪಾರಿತೋಷಕ, `ಹೊಸಕಾವ್ಯ ಹೊಸದಿಕ್ಕು` ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಮತ್ತು ಮೈಸೂರು ವಿಶ್ವವಿದ್ಯಾಲಯ ಸ್ವರ್ಣಮಹೋತ್ಸವ ಪ್ರಶಸ್ತಿ ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.

ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ ಹಿಂಗಮಿರೆಯವರ ಚಿಂತನೆ, ಬರವಣಿಗೆ ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಎಷ್ಟರ ಮಟ್ಟದಲ್ಲಿ ಚರ್ಚೆಯಾಯಿತು ಎಂಬುದನ್ನು ನೋಡಿದರೆ ನಿರಾಶೆಯಾಗುತ್ತದೆ.

ಕನಿಷ್ಠ ಪಕ್ಷ, ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ-ಸಾಹಿತ್ಯ ಪರಿಷತ್ತಿನಂಥ ಸಾರ್ವಜನಿಕ ಸಂಸ್ಥೆಗಳು ಹಿಂಗಮಿರೆಯವರು ತಮ್ಮ ಹಣ ಹಾಕಿ ತಮ್ಮದೇ `ಯುಗಧ್ವನಿ ಪ್ರಕಾಶನ`ದಿಂದ ಹೊರತಂದ ಸಹಸ್ರಾರು ಪುಟಗಳಷ್ಟಿರುವ ಸಾಹಿತ್ಯವನ್ನು ಸಮಗ್ರವಾಗಿ ಪ್ರಕಟಿಸುವ, ಅವರ ಸಾಹಿತ್ಯದ ಕುರಿತ ವಿಚಾರ-ವಿಮರ್ಶೆಗೆ ಚಾಲನೆಕೊಡುವ, ಅವರ `ಬುದ್ಧಕಾವ್ಯದರ್ಶನ` ಮಹಾಕಾವ್ಯದ ಜನಪ್ರಿಯ ಆವೃತ್ತಿಯನ್ನು ಪ್ರಕಟಿಸಿ ವಿತರಿಸುವ ಕೆಲಸಗಳನ್ನು ಕರ್ತವ್ಯಪ್ರಜ್ಞೆಯಿಂದ ಮಾಡಬೇಕಿದೆ.
 (ಪ್ರಜಾವಾಣಿ,  Sunday, 16 September, 2012)

Sunday, July 15, 2012

ಓಡದಿರಿ ಮೋಡಗಳೆ



ನಿಲ್ಲಿ ಮೋಡಗಳೇ
ತಂಪಿನ ರಂಗೋಲಿ ಬಿಡಿಸಿ
ಅವಸರಕೆ ಹುಟ್ಟಿದಂತೆ ಓಡುತ್ತೀರೆಲ್ಲಿಗೆ

ಕಣ್ಣು ನೆಟ್ಟಿವೆ ಒಣಗಿ ಬಿರಿದ ಭೂಮಿಯ ಮೇಲೆ
ಕಣ್ಣು ನೆಟ್ಟಿವೆ ಮೇಲೆ ಆಕಾಶದತ್ತ
ಉಳುಮೆಯಾಗಿದೆ ಹರಗಿ ಸಿದ್ಧವಾಗಿದೆ ಮಣ್ಣು
ಹನಿಯೊಡೆಯಬಹುದೆಂದು ಮುಗಿಲ ಕಡೆ ಕಣ್ಣು

ಗಾಳಿ ತಂಪೆರಚಿ ಗುಡುಗು ಗದ್ದರಿಸಿ
ಸಿಡಿಸಿಡಿಲ್ ಸಿಡಿದು  ಸಿಡಿಲು
ಕೋಲ್ಮಿಂಚು ಫಳಫಳಿಸಿ ಬಿದ್ದ ಬೆಳಕಲ್ಲಿ ಹನಿಯೂ ಇತ್ತೆ?
ಇರಲಿಲ್ಲ ಮೋಡ

ಬೇಸರ ಬೇಡ,ಒಪ್ಪಿದೆ
ಸುಣ್ಣಾ ಕೊಡತೇನ ಸುರಿಯಲೇ ಮಳೆಯೇ
ಎಂದು ಈಗ ಮಕ್ಕಳು ಕುಣಿದು ಕುಪ್ಪಳಿಸುವದಿಲ್ಲ
ಜಾಕ್ ಅಂಡ್ ಜಿಲ್ ರನ್ನು ನೀರು ತರಲು ಬೆಟ್ಟಕ್ಕಟ್ಟಿ ಬಂದು
ಇಗೋ ಈಗ ಕಂಪ್ಯೂಟರ್ ಮುಂದೆ ಧ್ಯಾನದಲ್ಲಿವೆ
ಇಳಿಬಿದ್ದ ಕಿವಿಯೋಲೆ ಮೂಗುತಿಯ ಥಳಕಿನಲೆ
ಉಟ್ಟಿರುವ ಉಡುಗೆಯಲಿ ನೂರು ಕನ್ನಡಿ ಚೂರು
ಲಂಬಾಣಿ ಹೆಣ್ಣುಗಳು ಗುಂಪಾಗಿ ತಿರುಗುತ್ತ ಬಾಗುತ್ತ ಏಳುತ್ತ
ಚಪ್ಪಾಳೆ ತಟ್ಟುತ್ತ ಕರೆಯುತ್ತಿದ್ದರು ಆಗ
ಸೋನೇರೇ ಸುರೀ ಮಳೀ ರಾಜಾ
ಅವರ ಬದುಕೂ ಈಗ ಮಗ್ಗಲು ಬದಲಿಸಿದೆ
ಇಳಿದು ಬಾ ತಾಯಿ ಇಳಿದು ಬಾ ಎಂದು
ಕೊರಳೆತ್ತಿ ಕರೆವವನು ಅವನೊಬ್ಬನಿದ್ದ ಅಂಬಿಕಾತನಯ
ಅವನೀಗ ಇಲ್ಲ

ಜನ ಅಹಂಕಾರದಲ್ಲಿ ಮುಳುಗಿದ್ದಾರೆ
ಅದನ್ನೇ ಹಾಸಿ ಹೊರುತ್ತಿದ್ದಾರೆ
ನೀರು ಗಾಳಿ ಬೆಳಕು ಗಿಡ ಕಲ್ಲು ಗುಡ್ಡ ಕಾಡು
ಎಲ್ಲಾನೂ ಭೋಗಿಸಲು ಗುತ್ತಿಗೆ ಹಿಡಿದು ಬೋಳಿಸುತ್ತಿದ್ದಾರೆ
ರೊಕ್ಕದ ಸಪ್ಪಳದಲ್ಲಿ ಲೀನವಾಗಿದ್ದಾರೆ

ಯಾರ ಬೇಸರ ಯಾರ ಮೇಲೆ,ಮೋಡಗಳೇ
ನೆಲದ ಮಕ್ಕಳ ಮುಖ ನೋಡಿ
ಓಡದಿರಿ ಮೋಡಗಳೇ ದಟ್ಟೈಸಿ ನಿಲ್ಲಿ
ಈ ಸೀಮೆಯಲಿ ಸ್ವಲ್ಪ ಮಳೆ ಸುರಿಸಿ ಹೋಗಿ

Saturday, April 14, 2012

ಟೈಟಾನಿಕ್ ಟೈಟಾನಿಕ್

( ಜೇಮ್ಸ್ ಕೆಮರೂನ್ ನಿರ್ದೇಶಿತ ಟೈಟಾನಿಕ್ ಚಲನಚಿತ್ರ ತೆರೆಕಂಡ ಹೊಸತರಲ್ಲಿ ನಾನು ಬರೆದ ಈ ನನ್ನ ಕವಿತೆ ಮೊದಲು ೧೯೯೮ ಅಗಸ್ಟ್ ೨ರಂದು "ಪ್ರಜಾವಾಣಿ"ಯಲ್ಲಿ ಪ್ರಕಟಗೊಂಡಿತ್ತು. ನಂತರ ೨೦೦೭ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ನನ್ನ "ಕ್ಷಮಿಸು ತಂದೆ" ಸಂಕಲನದಲ್ಲಿ ಸೇರಿತ್ತು. ಟೈಟಾನಿಕ್ ಎಂಬ ಹಡಗು ಮುಳುಗಿ ಇಂದಿಗೆ ನೂರು ವರ್ಷವಂತೆ..ಹಾಗಾಗಿ .., ಓದಿಕೊಳ್ಳಿ.)

 



ಪ್ರೇಮದೇವತೆ ಎಷ್ಟು ಬ್ರಹ್ಮವರ್ಷ ಬಚ್ಚಿಟ್ಟು
ಪ್ರಣಯೋನ್ಮಾದಕ್ಕೊಪ್ಪಿಸಿದ ಏಂಜೆಲ್
ಹೊಳೆವ ಹೊಂಗೂದಲ ಮುಗ್ಧ ಉದ್ಧಟ ರೋಸ್
ಅವಳಂತರಂಗದ ನೆರಳುಗಳಲ್ಲಿ
ಮೈಯ್ಯ ಹೊರಳುಗಳಲ್ಲಿ ಜಾಕ್
ಕಿತ್ತೆಸೆದ ಐಸಿರಿಯ ನೊಗಗಳ ಧಡಕಿಯಲ್ಲಿ
ಲಂಗ ನಸು ಮೇಲೆತ್ತಿ ಕುಣಿದ ಹೆಜ್ಜೆಯ ಲಯ ಜಾಕ್ ಓ ಜಾಕ್..

ಹುರಿದು ಮುಕ್ಕುವ ಪೋಲಿ ಕಂಗಳ ಜಾಕ್
ಉಸಿರ ಬಿಸಿ ತಾಗಬೇಕು, ಮೈಯ್ಯ
ಮಂಜುಗಡ್ಡೆಗಳು ಕರಗಿ ತೊಡುಗೆ ತೋಯ್ದು
ಅಂಗೈ ತುಂಬಿ ಹೊನ್ನ ಹೊಳಪಿನ ಬೆತ್ತಲೆ
ಬೆರಳುಗಳ ನಡುವೆ ಉಬ್ಬಿ
ತೊಟ್ಟು ಬಿಗಿಗೊಳ್ಳಬೇಕು; ಮೊಗ ಸಣ್ಣಗೆ ಬೆವರಿ ಹೊರಳೆ ಹಿಗ್ಗಿ
ಚೆಂದುಟಿಗಳರೆ ಬಿರಿದು
ಬಾಯ್ದೆರೆದ ಸೀಳು ಬಿರುಸ ಹಂಬಲಿಸುತ್ತ
ಕಣ್ಣಪಾಪೆಗಳಲ್ಲಿ ರಾಗರತಿ ಹೊಯ್ದಾಡಿ
ಲಜ್ಜೆಗೆಟ್ಟು ತುಂಬುವಲ್ಲಿ ತುಳುಕುವಲ್ಲಿ
ಜಲಗಾನ ಹಿಮ್ಮೇಳದಲ್ಲಿ
ವಿಧಿಯೇ! ಘಟನೆ ಘಟಿಸಿದೆ..


ಶಾಪಗ್ರಸ್ತ ಕೋಮಲ ಕೆಳೆತನದ ಜಲಸಮಾಧಿಯ ರಾತ್ರಿ
ನೀರೂ ಮಿಂಚದ ನಿಶಾಂಧಕಾರ
ಎಲ್ಲರೂ ಕೂಗುತ್ತಿರುವಲ್ಲಿ ಯಾರ ಕೂಗಿಗೂ ಆಕಾರವಿಲ್ಲ
ಸಾರ್ಥಕಗೊಳ್ಳುತ್ತಿರುವ ಎರಡು ಹರೆಯಗಳ ಸುತ್ತ
ಸಾವಿನ ಭಾರ ಹೊತ್ತ ಶಬ್ದಗಳ ಹುತ್ತಗಟ್ಟಿ ದಿಕ್ಕೆಟ್ಟು ಚಲಿಸುತ್ತಿವೆ
ಮಾನವಾಕೃತಿಗಳೆ? ಸಾವಿನ ನೆರಳುಗಳೆ?
ಚೀತ್ಕಾರಗಳಿಗೆ ಆಕ್ರಂದನಗಳ ಸಾಂತ್ವನ ನಿರ್ದಯೆಯ ಸಾಕ್ಷಿ
ಚಂದ್ರ ಹೇಡಿ ತಾರೆಗಳ ಬೆಳಕಿಗೆ ತಾಕತ್ತಿಲ್ಲ
ಕಾವಳದಲ್ಲಿ ಕಣ್ಣು ಹಿಗ್ಗಿದಷ್ಟೂ ಆಶೆ ಕುಗ್ಗಿ
ದೇವರೇ, ದಿಗ್ದೆಸೆಗಳಲ್ಲೆಲ್ಲೂ ಸಾವಿಗೂ ಬದುಕಿಗೂ ದಡಗಳೇ ಇಲ್ಲ
ಮೊನ್ನೆ ನಿನ್ನೆಯ ಚಂದ ನೀಲಜಲ ವಿಸ್ತಾರ
ಸಾವಿನ ಜಲಶಯ್ಯೆ ಅಟ್ಲಾಂಟಿಕ್
ನುಂಗಿ ನೊಣೆಯಲು ಹೊಂಚಿ ಶಕ್ತಿಗಳು ಕುಳಿತಂತೆ
ತಳದಿಂದ ಕೇಕೆಗಳು..ಟೈಟಾನಿಕ್ ಟೈಟಾನಿಕ್

ಅಂತಸ್ತಿನ ಅಗೋಚರ ಗೋಡೆಗಳ ಕುಸಿತದಲ್ಲಿ ಪ್ರೇಮ ಚಿಗುರಬೇಕು
ಸಾವಿಂದ ಬದುಕ ಬೇರ್ಪಡಿಸುವ ಗೋಡೆಗಳೊಡೆಯುತ್ತಿವೆ
ನೀರಿನ್ನೂ ನುಗ್ಗಿರದ ಇಂಚಿಂಚು ಸ್ಥಳ ಸ್ವರ್ಗ
ಇನ್ನರೆಗಳಿಗೆ ಬದುಕ ಬರಸೆಳೆದು ಬಿಗಿದಪ್ಪಿ ಎದೆಗವಚಿ
ಇನ್ನೊಂದರೆಗಳಿಗೆ ಸಾವನೊದ್ದು ಬದಿಗೆ ತಳ್ಳಿ ಹಿಂದೆ ನೂಕಿ
ನನ್ನ ಸಂಕಟ
ಚಲನಚಿತ್ರವೆ? ಜೀವನದರ್ಶನವೆ?
ಘಟಿಸಿದವಘಡ ಅರಿವಿಗೆ ದಕ್ಕುವ ನಡುವಿನವಧಿಯ ಅಂತರ
ಕಾಲದ್ದೆ? ಭ್ರಮೆ-ವಾಸ್ತವಗಳದ್ದೆ?
ಅಮಾನುಷ ವೈಶಾಲ್ಯದಲ್ಲಿ
ಮಕ್ಕಳಾಟದ ದೋಣಿಗೆ ಸಮ ಕ್ಷುದ್ರಗೊಂಡು
ಮುಳುಗಿದ್ದು ಹಡಗೆ?
ಅಥವ.. ... ....




Thursday, March 8, 2012

ಸ್ಥಗಿತ

ಹಲವಾರು ವೈವಿಧ್ಯಮಯ ಕಂಪನಿಗಳ ಆಫೀಸ್ ಗಳು ಕೇಂದ್ರೀಕೃತಗೊಂಡಿದ್ದ ಬಹುಮಹಡಿ ಕಟ್ಟಡವೊಂದರಲ್ಲಿ ತನ್ನ ಬಾಸ್ ಹೇಳಿದ್ದ ಕೆಲಸ ಮುಗಿಸಿಕೊಂಡು ಹೊರಬಿದ್ದು ಲಿಫ್ಟ್ ಬಳಿ ಸಾರಿ ಸ್ವಿಚ್ ಅದುಮಿ ಅದು ಮೇಲಂತಿಸ್ತಿನಿಂದ ಬರುವದನ್ನು ಮೊಬೈಲ್ ನಲ್ಲಿ ಮಾತಾಡುತ್ತಲೇ ಕಾಯುತ್ತಿದ್ದವಳಿಗೆ ಲಿಫ್ಟ್ ಬಂದದ್ದು, ಅದರ ಬಾಗಿಲು ತೆರೆದುಕೊಂಡದ್ದು ಅಷ್ಟೇ ಗೊತ್ತು..ಫೋನ್ ನಲ್ಲಿ ಮಾತಾಡುತ್ತಲೇ ಒಳಪ್ರವೇಶಿಸಿದ್ದಳು. ಒಳಗೆ ಆಗಲೇ ಒಂದು ವ್ಯಕ್ತಿ ಇದೆ ಎಂಬುದು ಅರಿವಿಗೇನೋ ಬಂದಿತ್ತು, ಅವನ ಮುಖವನ್ನು ಅವಳಿನ್ನೂ ನೋಡನೋಡುತ್ತಿರುವಂತೆಯೇ ಒಂದೆರಡು ಅಂತಸ್ತು ಕೆಳಮುಖ ಚಲಿಸಿದ ಲಿಫ್ಟ್ ಸಣ್ಣದಾಗಿ ಜೆರ್ಕ್ ಆಗಿ ಒಳಗಿನ ಬೆಳಕು ನಂದಿ ನಸುಕತ್ತಲಾಗಿ ನಿಂತು ಬಿಟ್ಟಿತು. ನಿಂತೇ ಬಿಟ್ಟಿತು. ಮೇಲೂ ಇಲ್ಲ, ಕೆಳಗೂ ಇಲ್ಲ. ಎರಡು ಅಂತಸ್ತುಗಳ ಮಧ್ಯೆ..ಎರಡು ನಿಮಿಷ, ಐದು ನಿಮಿಷ, ಹತ್ತು ನಿಮಿಷ.. ನಡು ಮಧ್ಯಾಹ್ನದ ಶಕೆ. ಬೆಳಕಿಲ್ಲ, ಗಾಳಿಯಿಲ್ಲ. ಅವನ ಉಸಿರು ಬಂದು ತನಗೇ ತಾಗುತ್ತಿದೆ ಎನ್ನಿಸಿ ಹಿಂಸೆಯಾಗತೊಡಗಿತು., ಅವನೂ ಚಡಪಡಿಸುತ್ತಿದ್ದ. ಅವನು ಮೇಲೆ ನೋಡುವ, ಅವಳು ಎಡಕ್ಕೆ ನೋಡುವಳು, ಅವನು ಉಫ್ ಎನ್ನುತ್ತ ಕೆಳಗೆ ನೋಡುವ ಅವಳು ಮೇಲೆ ನೋಡುವಳು. "ಉಫ್ ಇಟ್ ಇಸ್ ಸೋ ಸಫೋಕೇಟಿಂಗ್.."ಅವನೆಂದ. ಲಿಫ್ಟ್ ಸ್ಥಗಿತವಾಗಿ ನಿಂತು ಆಗಲೇ ಇಪ್ಪತ್ತು ನಿಮಿಷ ಕಳೆದಿತ್ತು. ಪರ್ಯಾಯ ವಿದ್ಯುತ್ ಪೂರೈಕೆ ವ್ಯವಸ್ಥೆಗೇನಾಗಿದೆ ರೋಗ ಎಂದು ಯೋಚಿಸಿದ ಅವಳು ಆ ಕತ್ತಲೆ,ನಿರ್ವಾತ ಹಾಗೂ ಶಾಖದಿಂದ ಕುದ್ದು ಹೋಗುತ್ತೇನೆನ್ನಿಸಿ "ಇಟ್ ಇಸ್ ಸಫೋಕೇಟಿಂಗ್" ಎಂದಳು. ಮತ್ತೆ ಸಮಯ ಕಳೆಯಿತು.




ನಾಲ್ಕಾರು ಅಡಿಯ ಆ ವಿಸ್ತಾರದಲ್ಲೇ ದೃಷ್ಟಿಗೆ ದೃಷ್ಟಿ ತಾಗದ ಹಾಗೆ ಕಾಳಜಿ ವಹಿಸಿದಂತೆ ಅವನು ಅತ್ತ ನೋಡುವ ಇವಳು ಇನ್ನೆಲ್ಲೋ ನೋಡುವಳು.."ನನಗೆ ಉಸಿರು ಕಟ್ಟಿದಂತಾಗುತ್ತಿದೆ" ಅವಳೆಂದಳು. ಮತ್ತೆ ಸ್ವಲ್ಪ ಹೊತ್ತು ಕಳೆಯಿತು..."ಉಫ್, ಉಸಿರು ಕಟ್ಟಿದಂತಾಗುತ್ತಿದೆ ನನಗೆ.." ಎಂದನವ. ಪರಸ್ಪರ ಕಿತ್ತಾಡಿಕೊಂಡಾಗೆಲ್ಲ ಇದೇ ಮಾತನ್ನು ನೂರಾರು ಸಲ ಅಂದಿದ್ದರವರು ತಮ್ಮ ವಿವಾಹ ವಿಚ್ಛೇದನಕ್ಕೆ ಮುಂಚಿನ ಹತ್ತಾರು ತಿಂಗಳುಗಳ ಅವಧಿಯಲ್ಲಿ.

Sunday, January 1, 2012

ಹೊಸ ವರ್ಷದ ಹೊಸ್ತಿಲಲಿ..,ಕ್ಷಮಿಸಿ..!


ಹಾಡು ನರ್ತನ ಕುಣಿತ ಕುಡಿತ
ಕಿವಿಗಡಚಿಕ್ಕುವ ಸದ್ದು ಸಂಗೀತ, ನಡುವೆ
ಸುದ್ದಿಮಾಧ್ಯಮ.. ಅಲ್ಲಿ,

ಎಂತೆಂಥವೋ ಸಾವು

ಉತ್ತರ ಹಿಂದುಸ್ತಾನದಲ್ಲಿ ಮೈ ಕೊರೆವ ಚಳಿಗೆ
ನಿನ್ನೆ ವರೆಗೆ
ಸತ್ತವರು ನೂರಿಪ್ಪತ್ತು ,ಅತ್ತವರ
ಲೆಕ್ಕ ಇಲ್ಲ ಯಾವ ಸರಕಾರಿ ಆಡಿಟ್ ನಲ್ಲೂ
ಮನುಷ್ಯದೇಹಗಳು ಅಂಕಿಗಳಾಗುತ್ತ ಸಂಖ್ಯೆಗಳಾಗುತ್ತ
ಇಂದು ಸಂಖ್ಯೆ ನೂರೈವತ್ತು.,ದಯವಿಟ್ಟು

ಅವು ಚಳಿಗಾಳಿಯ ಸಾವುಗಳೆನ್ನದಿರಿ

ಸತ್ಯವಾಗಿ
ಬಡತನದ ಸಾವುಗಳೆನ್ನಿ
ಸುಂದರ ಸುಸಂಸ್ಕೃತ ಭಾರತಕ್ಕೆ ಬೇಡದ ಕಿರಿಕಿರಿಗಳ ಸಾವುಗಳೆನ್ನಿ
ಕರುಳ ತುಂಬ ವಿದೇಶಿ ಮದ್ಯ ಹನಿಸಿಕೊಂಡು
ಹತ್ತಿಪ್ಪತ್ತು ಚಪಾತಿ ತಿಂದು
ಹಾಸಿಗೆ ತುಂಬ
ಹೊರಳಿ ಕಾಮದಾಟ ಆಡಿ ತಣಿದು ಮೈ ತುಂಬ
ರಜಾಯಿ ಹೊದ್ದು ಮಲಗುವವರು ಚಳಿಗೆ ಸಾಯರು,


ಅದಕ್ಕೆ
ದಿಟವಾಗಿ ಅವುಗಳ ಗಟ್ಟಿ ಹೊದ್ದಿಕೆ ಇಲ್ಲದೆ ಸೆಟೆದ ದೇಹಗಳ ಸಾವೆನ್ನಿ
ಸ್ವತಂತ್ರ ಭಾರತದ ನಿರೀಕ್ಷೆಗಳ ಸಾವೆನ್ನಿ
ಮನುಷ್ಯರ ನಮ್ರ ಕನಸುಗಳ ಸಾವು, ಸಣ್ಣ-ಪುಟ್ಟ ಆಶೆಗಳ ಸಾವು
ಕೊನೆಗೆ ಯಾರಿಗೂ ಏನನ್ನೂ ಹೇಳಿಕೊಳ್ಳಲಸಾಧ್ಯವಾದ ಸ್ಥಿತಿಯ
ಮುಖ ಮುಚ್ಚಿ ಅತ್ತ ಭಾಷೆಯ ಸಾವೆನ್ನಿ, ದಯವಿಟ್ಟು...

ಹಸಿವಿನ ಸಾವೆನ್ನಿ

ಕೇಳಿಸಿಕೊಳ್ಳಿ ಕ್ಷೀಣವಾಗಿ ಬಹಳ ಧ್ವನಿಗಳಿವೆ
ಕೊನೆಯುಸಿರೆಳೆಯುತ್ತ ಅವು ಹಾರೈಸುತ್ತಿರಬಹುದು.., ಕೇಳಿಸಿಕೊಳ್ಳೋಣ,
"ಹೊಸ ವರ್ಷ ನಿಮಗೆ ಹರುಷ ತರಲಿ.. .. ..".