Friday, January 7, 2011

ಆಟ

ವಾಹನವ ಅದರ ಜಾಗದಲ್ಲಿ ನಿಲ್ಲಿಸಿ
ಹೊರಕೋಣೆಯ ಖುರ್ಚಿಯಲ್ಲಿ ಕುಸಿದು
ಬ್ಯಾಗಿಟ್ಟು ಶೂ ಬಿಚ್ಚಿ
ಎರಡೆರಡು ಸಲ ಕೈ ತಟ್ಟಿ ಗತ್ತಿನಲಿ ಕೂಗಿದೆ, "ಯಾರಲ್ಲಿ?"

ರಾಜರ ಕರೆಗೆ ಯಾರೂ ಓಗೊಡಲಿಲ್ಲ!
ದಾಟಿ ಒಳ ಬಂದೆ
ಇವಳು ನಿಟಾರಾಗಿ ಕಾಲು ಚಾಚಿ ದಿಂಬಿಗೊರಗಿ
ಸ್ಟಾರ್ ಮೂವಿಸ್ ನಲ್ಲಿ ಸಿನಿಮ ನೋಡುತ್ತಿದ್ದಳು
ಮಗ ಕೋಣೆಯಲ್ಲಿ ಲೆಕ್ಕ ಬಿಡಿಸುತ್ತಿದ್ದ
ಅವನನ್ನೂ ಹೊರಕರೆದೆ

"ಈ ಮನೆ ನನ್ನ ರಾಜ್ಯ, ನಾನಿದರ ರಾಜ
ನೀವು ನನ್ನ ಪ್ರಜೆಗಳು
ಪ್ರಜಾಕ್ಷೇಮ ರಾಜಧರ್ಮ; ನೀವೆಲ್ಲ ಕ್ಷೇಮವೋ?.."

"ಎಂಥಾ ಕ್ಷೇಮವೋ...
ಚಪಾತಿ ಲಟ್ಟಿಸಿ ಮುಗಿಸುವ ಹೊತ್ತಿಗೆ
ಇಂದು ರಟ್ಟೆಯೆಲ್ಲ ನೋವು..."ಮೊದಲ ಪ್ರಜೆಯ ದುಮ್ಮಾನ
"ಪೆಟ್ರೋಲ್ ಗೆ ನೀವು ದುಡ್ಡು ಕೊಟ್ಟದ್ದು ನಾಲ್ಕು ದಿನಗಳ ಹಿಂದೆ
ಮೇನ್ ರೋಡಿಂದ ಇಂದು ತಳ್ಳಿಕೊಂಡು ಬಂದೆ.." ಎರಡನೆಯ ಪ್ರಜೆಯ ದೂರು

"ಒಂದು ತಿದ್ದುಪಡಿ ರಾಜರೇ" ಎಂದಳು ಹೆಂಡತಿ
"ಸರಿ, ಅರುಹು" ಎಂದೆ
"ನೀವು ಮಹರಾಜರಾದರೆ ನಾನು ಮಹರಾಣಿ
ಅವನು ರಾಜಕುಮಾರ... ..."

ಹೌದಲ್ಲ..! ಹಾಗಾದರೆ ಪ್ರಜೆಗಳು ಯಾರು?
ಮಂಚದ ಕೆಳಗೆ ಕೈ ತೋರಿದ ಮಗ
ಅಲ್ಲಿ.., ನನ್ನ ಸುಖೀರಾಜ್ಯದ ಏಕ್ ದಂ ನೆಮ್ಮದಿಯ ಏಕಮಾತ್ರ ಪ್ರಜೆ!
ಒಮ್ಮೆ ತಲೆಯೆತ್ತಿ ಬಾಲ ಅಳ್ಳಾಡಿಸಿ
ಮುಂಗಾಲ ಮೇಲೆ ಮುಖ ಊರಿ ನನ್ನನ್ನೇ ನೋಡುತ್ತ
"ಕುಂಯ್" ಅಂದಿತು

5 comments:

  1. Very comic and very true!

    ReplyDelete
  2. ವಾಸ್ತವದ ವ್ಯಂಗ್ಯ .. ಚೆನ್ನಾಗಿದೆ ಸರ್ ..ಈ ಮೊದಲ ಪ್ರಜೆ ಯಾರು ಅನ್ನುವುದೇ ಒಂದು ಸಂದೇಹ ?

    ReplyDelete
  3. ಸರ್ ತುಂಭಾ ಚೆನ್ನಾಗಿದೆ.

    ReplyDelete
  4. ತುಂಬಾ ಚೆನ್ನಾಗಿದೆ ಸರ್..

    ReplyDelete