ನಿಲ್ಲಿ ಮೋಡಗಳೇ
ತಂಪಿನ ರಂಗೋಲಿ ಬಿಡಿಸಿ
ಅವಸರಕೆ ಹುಟ್ಟಿದಂತೆ ಓಡುತ್ತೀರೆಲ್ಲಿಗೆ
ಕಣ್ಣು ನೆಟ್ಟಿವೆ ಒಣಗಿ ಬಿರಿದ ಭೂಮಿಯ ಮೇಲೆ
ಕಣ್ಣು ನೆಟ್ಟಿವೆ ಮೇಲೆ ಆಕಾಶದತ್ತ
ಉಳುಮೆಯಾಗಿದೆ ಹರಗಿ ಸಿದ್ಧವಾಗಿದೆ ಮಣ್ಣು
ಹನಿಯೊಡೆಯಬಹುದೆಂದು ಮುಗಿಲ ಕಡೆ ಕಣ್ಣು
ಗಾಳಿ ತಂಪೆರಚಿ ಗುಡುಗು ಗದ್ದರಿಸಿ
ಸಿಡಿಸಿಡಿಲ್ ಸಿಡಿದು ಸಿಡಿಲು
ಕೋಲ್ಮಿಂಚು ಫಳಫಳಿಸಿ ಬಿದ್ದ ಬೆಳಕಲ್ಲಿ ಹನಿಯೂ ಇತ್ತೆ?
ಇರಲಿಲ್ಲ ಮೋಡ
ಬೇಸರ ಬೇಡ,ಒಪ್ಪಿದೆ
ಸುಣ್ಣಾ ಕೊಡತೇನ ಸುರಿಯಲೇ ಮಳೆಯೇ
ಎಂದು ಈಗ ಮಕ್ಕಳು ಕುಣಿದು ಕುಪ್ಪಳಿಸುವದಿಲ್ಲ
ಜಾಕ್ ಅಂಡ್ ಜಿಲ್ ರನ್ನು ನೀರು ತರಲು ಬೆಟ್ಟಕ್ಕಟ್ಟಿ ಬಂದು
ಇಗೋ ಈಗ ಕಂಪ್ಯೂಟರ್ ಮುಂದೆ ಧ್ಯಾನದಲ್ಲಿವೆ
ಇಳಿಬಿದ್ದ ಕಿವಿಯೋಲೆ ಮೂಗುತಿಯ ಥಳಕಿನಲೆ
ಉಟ್ಟಿರುವ ಉಡುಗೆಯಲಿ ನೂರು ಕನ್ನಡಿ ಚೂರು
ಲಂಬಾಣಿ ಹೆಣ್ಣುಗಳು ಗುಂಪಾಗಿ ತಿರುಗುತ್ತ ಬಾಗುತ್ತ ಏಳುತ್ತ
ಚಪ್ಪಾಳೆ ತಟ್ಟುತ್ತ ಕರೆಯುತ್ತಿದ್ದರು ಆಗ
ಸೋನೇರೇ ಸುರೀ ಮಳೀ ರಾಜಾ
ಅವರ ಬದುಕೂ ಈಗ ಮಗ್ಗಲು ಬದಲಿಸಿದೆ
ಇಳಿದು ಬಾ ತಾಯಿ ಇಳಿದು ಬಾ ಎಂದು
ಕೊರಳೆತ್ತಿ ಕರೆವವನು ಅವನೊಬ್ಬನಿದ್ದ ಅಂಬಿಕಾತನಯ
ಅವನೀಗ ಇಲ್ಲ
ಜನ ಅಹಂಕಾರದಲ್ಲಿ ಮುಳುಗಿದ್ದಾರೆ
ಅದನ್ನೇ ಹಾಸಿ ಹೊರುತ್ತಿದ್ದಾರೆ
ನೀರು ಗಾಳಿ ಬೆಳಕು ಗಿಡ ಕಲ್ಲು ಗುಡ್ಡ ಕಾಡು
ಎಲ್ಲಾನೂ ಭೋಗಿಸಲು ಗುತ್ತಿಗೆ ಹಿಡಿದು ಬೋಳಿಸುತ್ತಿದ್ದಾರೆ
ರೊಕ್ಕದ ಸಪ್ಪಳದಲ್ಲಿ ಲೀನವಾಗಿದ್ದಾರೆ
ಯಾರ ಬೇಸರ ಯಾರ ಮೇಲೆ,ಮೋಡಗಳೇ
ನೆಲದ ಮಕ್ಕಳ ಮುಖ ನೋಡಿ
ಓಡದಿರಿ ಮೋಡಗಳೇ ದಟ್ಟೈಸಿ ನಿಲ್ಲಿ
ಈ ಸೀಮೆಯಲಿ ಸ್ವಲ್ಪ ಮಳೆ ಸುರಿಸಿ ಹೋಗಿ