ಒಂದೇ ಹೆಸರು ಕವಲೊಡೆದಂತೆ, ನನ್ನ
ಅವ್ವ ಈರವ್ವ, ಅಪ್ಪ ಈರಪ್ಪ., ಇಬ್ಬರಿಗೂ ಮಧ್ಯೆ ಹತ್ತು ವರ್ಷಗಳ ವ್ಯತ್ಯಾಸ. ಸ್ವಭಾವ
ವ್ಯತ್ಯಾಸಗಳೋ ಹಲವಾರು. ಮೂಲತ: ಇಬ್ಬರೂ ಸಾತ್ವಿಕರು. ಅಪ್ಪನ ಊರು ಬೆಳಗಾವಿ ಜಿಲ್ಲೆಯ
ಗೋಕಾಕ ತಾಲೂಕಿನ ಕೌಜಲಗಿ. ಅಲ್ಲಿಯ ಪರಶೆಟ್ಟೆಪ್ಪ ಶೆಟ್ಟರ ಪುತ್ರನಾಗಿ ನನ್ನ ತಂದೆ
ಜನಿಸಿದ್ದು ೨೮ ಡಿಸೆಂಬರ್ ೧೯೦೯ರಲ್ಲಿ. ಪರಶೆಟ್ಟೆಪ್ಪ ಶೆಟ್ಟರು ನನ್ನ ತಂದೆಯ
ಎಳವೆಯಲ್ಲೇ ಮುಂಬಯಿಗೆ ಹೋಗಿ ಅಲ್ಲಿ ತೇಜಿ-ಮಂದಿ ವ್ಯಾಪಾರ ಮಾಡುತ್ತಿದ್ದರು. ಅದು ಸರಕು
ಸಾಮಗ್ರಿಗಳನ್ನು ಕೊಂಡಿಟ್ಟು ಹೆಚ್ಚು ಬೆಲೆ ಬಂದಾಗ ಮಾರುವ ವ್ಯಾಪಾರವಿದ್ದೀತು. ನನ್ನ
ತಂದೆ ಮುಂಬಯಿಯಲ್ಲಿನ ತಮ್ಮ ಬಾಲ್ಯದ ಕುರಿತು ಹೇಳಿಕೊಳ್ಳುವಾಗ ಭಯ್ಯಾಗಳ ಅಂಗಡಿಗಳಲ್ಲಿ
ಹಣ ಕೊಟ್ಟು ಮನಸೋ ಇಚ್ಛೆ ಹಾಲು ಕುಡಿಯುತ್ತಿದ್ದುದು, ಕುದುರೆ ಸವಾರಿ
ಮಾಡುತ್ತಿದ್ದುದು-ಇಂಥ ಪ್ರಸಂಗಗಳು ಕೆಲಕಾಲ ನನ್ನ ಅಜ್ಜನ ಆರ್ಥಿಕ ಸ್ಥಿತಿ
ಚೆನ್ನಾಗಿತ್ತೆಂಬುದಕ್ಕಿಂತ ಹೆಚ್ಚಿಗೆ ಹೇಳುವದಿಲ್ಲ. ನನ್ನ ತಂದೆ ಅಲ್ಲಿ ಮರಾಠಿ
ಪ್ರಾಥಮಿಕ ಶಿಕ್ಷಣ ಪಡೆದರು. ನನ್ನ ತಂದೆಯ ಮರಾಠಿ ಓದು, ಬರಹ, ಮಾತು ಅವರ ಕನ್ನಡದಷ್ಟೇ
ನಿರರ್ಗಳ. ತಮ್ಮ ಕಾರ್ಯನಿಮಿತ್ತ ಅವರು ಮಿರಜ್, ಸಾಂಗ್ಲಿ, ಗಡ್ ಹಿಂಗ್ಲಜ್, ನಿಪ್ಪಾಣಿಗೆ
ಹೋದಾಗೆಲ್ಲ ಲೋಕಸತ್ತಾ, ಸಕಾಳ, ತರುಣ ಭಾರತ್ ಇತ್ಯಾದಿ ಒಂದು ಸಿವುಡು ಮರಾಠಿ
ಪತ್ರಿಕೆಗಳನ್ನು ತೆಗೆದುಕೊಂಡು ಬಂದು ಅರೆಪದ್ಮಾಸನದಲ್ಲಿ ಕುಳಿತು ರಾತ್ರಿ
ಹನ್ನೆರಡು-ಒಂದು ಗಂಟೆಯವರೆಗೆ ಓದುತ್ತಿದ್ದುದು, "ಟಾಯಮ್ ಬಾಳ ಆತ, ಮಕ್ಕೊರ್ರೀ ಇನ್ನs"
ಎಂದು ನಮ್ಮವ್ವ ಪದೇ ಪದೇ ಹೇಳುವದು ನಮಗೆ ಸಾಮಾನ್ಯ ದೃಶ್ಯವಾಗಿರುತ್ತಿತ್ತು.
ನನ್ನ
ಅಜ್ಜನ ಸುಭಿಕ್ಷದ ಕಾಲ ಮುಗಿದು ಅವರು ತಮ್ಮ ವ್ಯವಹಾರದಲ್ಲಿ ಸಂಪೂರ್ಣ ನೆಲ
ಕಚ್ಚಿದ್ದರು. ಈ ಅಜ್ಜನ ನೆನಪು ನನಗೆ ಮಸಕು ಮಸಕಾಗಿ ಇದೆ. ಬೈಲಹೊಂಗಲದಲ್ಲಿ ನಾವು
ಬಾಡಿಗೆಗಿದ್ದ ಮನೆಯೊಂದರ ಹೊರಕೋಣೆಯಲ್ಲಿ ಆತನ ವಾಸ. ಜೋಳದ ಒಣ ದಂಟು ಸುಲಿದು ಅದರ ಬೆಂಡು
ಮತ್ತು ಸಿಬರುಗಳಿಂದ ಆತ ತಾಸುಗಟ್ಟಲೆ ಶ್ರದ್ಧೆ ವಹಿಸಿ ಮಾಡಿಕೊಟ್ಟ ಆಟದ ಬಂಡಿಯನ್ನು
ನಾನು ಮುದ್ದಾಂ ಕೆಡಿಸಿ ಅವನ ಕೋಪಕ್ಕೆ ಕಾರಣನಾಗುತ್ತಿದ್ದುದು, ನನ್ನವ್ವ ನನ್ನನ್ನು
ಬೈಯ್ಯುತ್ತಿದ್ದುದು ಸ್ಪಷ್ಟವಾಗಿ ನೆನಪಿವೆ. ಮತ್ತೊಂದು ಸ್ಪಷ್ಟ ನೆನಪು ಬಿಳಿ
ರುಮಾಲು,ಧೋತ್ರ, ಬಗಲಗಸಿ ಅಂಗಿಯಿಂದಲಂಕೃತವಾದ ಆ ನನ್ನ ಅಜ್ಜನ ಪಾರ್ಥಿವ ಶರೀರವನ್ನು ಅದೇ
ಮಂದ ಬೆಳಕಿನ ಹೊರಕೋಣೆಯಲ್ಲಿ ಗೋಡೆಗೊರಗಿಸಿ ಕುಳ್ಳಿರಿಸಿದ್ದು. ನನ್ನವ್ವ ಸಂಪೂರ್ಣ
ಶ್ರದ್ಧೆಯಿಂದ ಅಜ್ಜನ ಸ್ವಚ್ಛತೆ ಸುಶ್ರೂಷೆ ಮಾಡುತ್ತಿದ್ದಳು. ನನ್ನ ತಂದೆಯ ತಾಯಿಯನ್ನು
ನಾನು ನೋಡಿಲ್ಲ. ಆಕೆ ಮೊದಲೇ ಗತಿಸಿದ್ದಳೆಂದು ತೋರುತ್ತದೆ. ಆಕೆ ಮತ್ತು ಖ್ಯಾತ ಜಾನಪದ
ಗಾಯಕರಾಗಿದ್ದ ಹುಕ್ಕೇರಿ ಬಾಳಪ್ಪನವರ ತಾಯಿ ಅಕ್ಕ-ತಂಗಿಯರು. ಸವದತ್ತಿ ತಾಲೂಕಿನ
ಆಲದಕಟ್ಟಿ ಅವರ ತವರುಮನೆ. ಆ ಮನೆಯ ಹಿರಿಯರು ತಲ್ಲೂರು ದೇಸಾಯರ ಬಳಿ ಕಾರಭಾರಿಗಳಾಗಿ
ಕಾರ್ಯ ನಿರ್ವಹಿಸುತ್ತಿದ್ದುದರಿಂದ ತಲ್ಲೂರ ಶೆಟ್ಟರು ಎಂದೇ ಕರೆಸಿಕೊಳ್ಳುತ್ತಿದ್ದರು.
ಮುಂಬಯಿಯಿಂದ
ಮರಳಿದ ನಂತರ ಅಲ್ಲಿ ತಾವು ಅದುವರೆಗೆ ಪಡೆದ ಹಂತದ ಶಿಕ್ಷಣವನ್ನು ನನ್ನ ತಂದೆ ಪುನ:
ಕನ್ನಡದಲ್ಲಿ ಪಡೆಯಬೇಕಾಯಿತು.ಆಗಿನ ಮುಲ್ಕಿ (೭ನೇ ಇಯತ್ತೆ) ಮುಗಿಸಿ ಅವರು ಶಿಕ್ಷಣ
ಕೊನೆಗೊಳಿಸಿದ್ದರು. ಬೈಲಹೊಂಗಲಕ್ಕೆ ಬಂದು ನೆಲೆಗೊಳ್ಳುವ ಮುನ್ನ ಅಪ್ಪ ಒಂದಷ್ಟು ವರ್ಷ
ಗೋಕಾಕದಲ್ಲಿ, ಒಂದೆರಡು ವರ್ಷ ಮುನವಳ್ಳಿಯಲ್ಲಿ ಇದ್ದರು. ಮತ್ತೊಬ್ಬನ ಪಾಲುದಾರಿಕೆಯಲ್ಲಿ
ವ್ಯವಹಾರವೊಂದನ್ನು ಪ್ರಾರಂಭಿಸಿದ್ದರಾದರೂ ಪಾಲುದಾರನ ವಂಚಕ ಬುದ್ಧಿಯಿಂದಾಗಿ ಅದನ್ನೂ
ಕೈ ಬಿಟ್ಟಿದ್ದರು. ಕೊನೆಗೆ ತಲ್ಲೂರ ಶೆಟ್ಟರು ಎಂದು ಕರೆಸಿಕೊಳ್ಳುತ್ತಿದ್ದ ತನ್ನ
ಸೋದರಮಾವಂದಿರ ಆಶ್ರಯಕ್ಕೆ ಬೈಲಹೊಂಗಲಕ್ಕೆ ಬಂದರು. ಆಮೇಲೆ ಬೈಲಹೊಂಗಲದ ಪ್ರತಿಷ್ಠಿತ
ಜಿ.ಎಸ್.ಮೆಟಗುಡ್ ಅವರ ವಿಜಯ ಕಾಟನ್ ಮತ್ತು ಆಯಿಲ್ ಮಿಲ್ ನಲ್ಲಿ ಕಾರಕೂನ ಅಥವಾ
ಅಕೌಂಟಂಟ್ ನೌಕರಿ ಸೇರಿ ಪ್ರತ್ಯೇಕವಾಗಿ ಬದುಕಿದರು.
ಹಾಗೆ ಬೈಲಹೊಗಲದಲ್ಲಿ ನನ್ನ
ನೆನಪುಗಳು ನಿಚ್ಚಳವಾಗಿ ಹಿಂದಕ್ಕೆ ಹೋಗುವಷ್ಟು ಅವಧಿಯಲ್ಲಿ ನಾವು ಬದುಕಿದ್ದು ಒಂದು ತೀರ
ಸಾಮಾನ್ಯ ಮನೆಯಲ್ಲಿ. ಅದಕ್ಕೆ ನಾನಾಗಲೇ ಪ್ರಸ್ತಾಪಿಸಿದ ಪ್ರತ್ಯೇಕವಾಗಿದ್ದ ಒಂದು
ಹೊರಕೋಣೆ, ಅದನ್ನು ಬಿಟ್ಟರೆ ಎರಡೇ ಅಂಕಣ- ಒಂದು ಪಡಸಾಲೆ ಮತ್ತು ಒಂದು
ಅಡುಗೆಮನೆ.ದೊಡ್ಡದಾಗಿದ್ದ ಅಡುಗೆಮನೆಯ ಒಂದು ಮೂಲೆಯಲ್ಲಿ ಬಚ್ಚಲಿತ್ತು. ಹಿತ್ತಲಲ್ಲಿ
ಕಸಕಡ್ಡಿ ಸಗಣಿ-ಗಂಜಳಗಳ ತಿಪ್ಪೆ. ಏಕೆಂದರೆ ನಮ್ಮವ್ವ ಒಂದು ಆಕಳನ್ನು ಸಾಕಿಕೊಂಡಿದ್ದಳು.
ಇನ್ನುಳಿದಂತೆ ಸಾಧುವಾಗಿದ್ದ ಆ ಆಕಳಿಗೆ "ಕಾವಕೂಲಿ"ಗೆ ಹೊಡೆದುಕೊಂಡು ಹೋದವ ಸಂಜೆ
ಒಮ್ಮೊಮ್ಮೆ ಮನೆಯ ತಿರುವಿನಲ್ಲೇ ಅದನ್ನು ಬಿಟ್ಟು ಹೋದ ಮೇಲೆ ಮನೆಗೆ ಬರದೇ
ಸಮೀಪದಲ್ಲಿದ್ದ ಹೊಲ-ಗದ್ದೆಗಳಲ್ಲಿ ತುಡುಗು ಮೇಯುವ ಚಟವಿತ್ತು. ಅದನ್ನು ಕೊಂಡವಾಡಕ್ಕೆ
ಒಯ್ದು ಹಾಕಿದರೆ ದಂಡ ತೆರಬೇಕಾದೀತೆಂಬ ಕಾರಣಕ್ಕೆ ನನ್ನವ್ವ ಅದನ್ನು ಕರೆತರಲು ನನ್ನಣ್ಣ
ಬಸವರಾಜನನ್ನು-ಅವನಾಗ ಹೈಸ್ಕೂಲ್ ವಿದ್ಯಾರ್ಥಿ-ಕಳಿಸುತ್ತಿದ್ದಳು. ಅದರ ಬೆಂಬತ್ತಿ ಓಡಾಡಿ
ಕೋಲಿ ಹಾಯ್ದು ಕೆಸರು ತುಳಿದು ಅಣ್ಣ ಅದು ಹೇಗೋ ಕರೆತಂದಾದ ಮೇಲೆ ಅದನ್ನು ಕಟ್ಟಿಹಾಕಿ
"ದನಕ್ಕೆ ಬಡಿದಂತೆ" ಬಡಿದು ತನ್ನ ಕೋಪ ಶಮನಗೊಳಿಸಿಕೊಳ್ಳುತ್ತಿದ್ದ.
ಒಂಬತ್ತು
ಮಕ್ಕಳ ಪೈಕಿ ಚೊಚ್ಚಲು ಮಗುವಾಗಿ ಹುಟ್ಟಿ ಎಳವೆಯಲ್ಲೇ ತೀರಿಹೋದ ಒಂದು ಗಂಡು ಮತ್ತು
ಬಾಲ್ಯಾವಸ್ಥೆಗೆ ತಲುಪಿ ಕಣ್ಮುಚ್ಚಿದ ಒಂದು ಹೆಣ್ಣು ಬಿಟ್ಟು ಉಳಿದವರು ನಾವು ಏಳು ಜನ
ಇದ್ದೆವು. ಅಕ್ಕಂದಿರ ಪೈಕಿ ಶಾಂತಕ್ಕ ಎಂಬುವಳನ್ನು ನನ್ನ ಸೋದರಮಾವನಿಗೆ ಮದುವೆ
ಮಾಡಿಕೊಟ್ಟಿದ್ದು ಅವಳು ನನ್ನ ತಾಯಿಯ ತವರೂರಾಗಿದ್ದ ಸವದತ್ತಿ ತಾಲೂಕಿನ
ಸತ್ತೀಗೇರಿಯಲ್ಲಿದ್ದುದರಿಂದ ನಮ್ಮ ಮನೆಯಲ್ಲಿ ನಾವು ಆರು ಜನ ಮಕ್ಕಳು, ನನ್ನ ತಂದೆ,ತಾಯಿ
ಹಾಗೂ ನಮ್ಮ ಅಜ್ಜ ಹೀಗೆ ಒಂಬತ್ತು ಜನ ಇದ್ದೆವು. ಕೊನೆಯವನಾಗಿ ಹುಟ್ಟಿದ ನನ್ನ ತಮ್ಮ
ಆಗಿನ್ನೂ ಕೈಗೂಸು. ಅವನು ಹುಟ್ಟುವ ಹೊತ್ತಿಗೆ ನನ್ನ ತಂದೆಗೆ ೫೦ ವರ್ಷ, ನನ್ನ ತಾಯಿಗೆ
೪೦. ಆ ವಯಸ್ಸಿನಲ್ಲಿ ಮತ್ತೊಂದು ಹಡೆಯಬೇಕಾಗಿ ಬಂದುದು "ನಾಚಿಕಿ ಸಾವಾ"ಗಿತ್ತು ಎಂದು
ನನ್ನವ್ವ ಒಮ್ಮೆ ಅಂದಂತಿತ್ತು. ಅದು ಸಂಕೋಚವೋ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಂಬತ್ತು
ಮಕ್ಕಳನ್ನು ಹಡೆಯುವ ಸ್ಥಿತಿಯ ಕುರಿತ ಬೇಸರವೋ ಗೊತ್ತಿಲ್ಲ.
ಆಗ
ನನ್ನ ತಂದೆಗೆ ಸಿಗುತ್ತಿದ್ದುದು ವಾರಕ್ಕೆ ೨೫ ಅಂದರೆ ತಿಂಗಳಿಗೆ ೧೦೦ ರೂಪಾಯಿಯ ವೇತನ.
ಅದರಲ್ಲಿ ಮನೆ ಬಾಡಿಗೆ ಎಂದು ೧೦ ರೂಪಾಯಿ ಕಳೆದು ಉಳಿದ ೯೦ ರೂಪಾಯಿಯಲ್ಲಿ ಒಂಬತ್ತು ಜನರ
ಬದುಕು ನಡೆಯಬೇಕಿತ್ತು. ಈಗ ನಾನು ಹೇಳುತ್ತಿರುವುದು ೧೯೬೨-೬೩ರ ಮಾತು. ಬಾಡಿಗೆಯ ಹತ್ತು
ರೂಪಾಯಿ ಕೊಡುವಲ್ಲಿ ವಿಳಂಬವಾದರೆ ಮನೆಯ ಮಾಲಿಕ ಯಡಳ್ಳಿ ಬಸವಣ್ಣೆಪ್ಪನೆಂಬ ವೃದ್ಧ ಬಂದು
ಮನೆಯಂಗಳದಲ್ಲಿ ನಿಂತು ಕೂಗಾಡುವದು ಶತಸ್ಸಿದ್ಧವಿತ್ತು. ಬ್ರಿಟಿಷರಂಥ ಸ್ವಚ್ಛ ಮೈಬಣ್ಣದ ಆ
ಸ್ಫುರದ್ರೂಪಿ ಮುದುಕ ತಲೆಯ ಮೇಲೊಂದು ಹಳದಿ ರುಮಾಲು ಸುತ್ತಿ, ಬಿಳಿ ಅಂಗಿ,ಕೋಟು,ಧೋತರ
ಉಟ್ಟು, ಕೈಲೊಂದು ಛತ್ರಿ ಹಿಡಿದು ಬರುತ್ತಿದ್ದ. ತಲೆಯ ಮೇಲಿನ ರುಮಾಲು ತೆಗೆದು ಮೈಸೂರು
ಪೇಟ ತೊಡಿಸಿದರೆ ಸಾಕ್ಷಾತ್ ಮುದ್ದೇನಹಳ್ಳಿಯ ಮೋಕ್ಷಗುಂಡಂ ವಿಶ್ವೇಶ್ವರಯ್ಯ! "ಕೊಡತೀವ್
ತೊಗೊರ್ರಿ, ಮುಂದಿನ ವಾರ ಕೊಡತೀವ್ ತೊಗೊರ್ರಿ" ಎಂದು ನನ್ನ ಅವ್ವ- ಅಕ್ಕ ವಿನಂತಿಸಿ
ಅವನನ್ನು ಸಾಗಹಾಕಿದ ಮೇಲೆ ಅವನು ಹೇಗೆ ಮುಖವೆತ್ತಿ ಮಾತಾಡಿದ, ಒಂದು ಕಾಲು ಮುಂದಿಟ್ಟು
ಛತ್ರಿಯ ಸಮೇತ ಹೇಗೆ ಕೈ ಮೇಲೆತ್ತೆತ್ತಿ ಕೂಗಾಡಿದ ಎಂದು ನಾನು ನನ್ನ ಅಕ್ಕಂದಿರು
ನಗಾಡುತ್ತಿದ್ದೆವು. ನನ್ನವ್ವ ಅಪ್ಪನಿಗೂ ಇದು ಸಮ್ಮತವೇ ಇರುತ್ತಿತ್ತು. ಏಕೆಂದರೆ ಅವರೂ
ನಗೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ವಾಸ್ತವವಾಗಿ ಬದುಕು ಕಷ್ಟಸಾಧ್ಯವಾಗಿತ್ತು.
ಪಡಸಾಲೆಯ ನೆಲದ ಮೇಲೆ ಜಮಖಾನ ಹಾಸಿ ಎಲ್ಲರೂ ಒಬ್ಬರ ಪಕ್ಕದಲ್ಲೊಬ್ಬರು ಮಲಗುತ್ತಿದ್ದೆವು.
ಆ ಮನೆಯಲ್ಲಿ ತುಂಬಿಕೊಳ್ಳುತ್ತಿದ್ದ ಹೊಗೆ ನಮ್ಮ ಅತಿ ದೊಡ್ಡ ಸಮಸ್ಯೆಯಾಗಿತ್ತು. ಚಿಕ್ಕ
ಕಿಟಕಿಯೊಂದರ ಹೊರತು ಅದಕ್ಕೊಂದು ಔಟ್ ಲೆಟ್ ಅಂತ ಇರಲಿಲ್ಲ. ಅದು ಅಲ್ಲೇ ಸುತ್ತಿ
ಮನೆಗೋಡೆಗಳು ಮಸಿಹಿಡಿದಿದ್ದವು. ನನ್ನವ್ವ ಪ್ರತಿನಿತ್ಯ ಅದನ್ನು ಶಪಿಸುತ್ತಿದ್ದಳು.
ಮನೆಯಲ್ಲಿ ಕತ್ತಲೆ ಸದಾ ಡೇರೆ ಹಾಕಿರುತಿತ್ತು.
ನನ್ನ ತಂದೆಯ ಸೋದರಮಾವಂದಿರಿಗೆ
ಪೇಟೆಯ ಉಪಬೀದಿಯಲ್ಲಿ ಸ್ವಂತ ಮನೆಗಳಿದ್ದವು, ಕಮೀಶನ್ ಏಜನ್ಸಿ ಇತ್ತು, ಸ್ಥಿತಿವಂತಿಕೆ
ಇತ್ತು. ಚನಬಸಪ್ಪ ಮತ್ತು ಅಪ್ಪಯ್ಯಪ್ಪ ಎಂಬ ಆ ಸೋದರಮಾವಂದಿರ ಪೈಕಿ ಹಿರಿಯವನಾದ
ಚನಬಸಪ್ಪ-ಅದಾಗಲೇ ಹಣ್ಣು ಹಣ್ಣು ಮುದುಕನಾಗಿದ್ದವ-ಹೊರಕೋಣೆಯಲ್ಲಿ ಒಬ್ಬನೇ ಇಸ್ಪೀಟ್
ಎಲೆಗಳನ್ನು ಹರವಿಕೊಂಡು ಅದೇನೋ ಆಡುತ್ತ ಕುಳಿತಿರುತ್ತಿದ್ದ. ಯಲಿಗಾರ್ ಮನೆತನದ
ಬಾಲಕನೊಬ್ಬ ತನ್ನ ತಾಯಿಯ ತವರೂರಾದ ಹುಣಸಿಕಟ್ಟೆಯಿಂದ ಬಂದು ಹಾಗೊಮ್ಮೆ ಭೆಟ್ಟಿಯಾದ
ಸಂದರ್ಭದಲ್ಲಿ ಚನಬಸಪ್ಪ ಅವನಿಗೆ ಹೇಳಿದ್ದು, "ತಮ್ಮಾ ನಿನಗೆ ವಿದೇಶಯೋಗವಿದೆ ಎಂಬ ಮಾತು.
ಅದು ಸತ್ಯವಾಯಿತು. ಮುಂದೆ ಕುಮಾರಸ್ವಾಮಿಗಳೆಂದು ಖ್ಯಾತರಾದ ಆ ಯೋಗಿ ದೇಶ ವಿದೇಶ
ಸುತ್ತಿ, ಪೋಪ್ ಜಾನ್ ಪಾಲ್ ರನ್ನು ವ್ಯಾಟಿಕನ್ ಸಿಟಿಯಲ್ಲಿ ಕಂಡು ಇಷ್ಟಲಿಂಗವನ್ನು
ಕೊಟ್ಟು ಬಂದರು. ಧಾರವಾಡದಲ್ಲಿ ತಪೋವನ ಸ್ಥಾಪಿಸಿದರು. ಇದನ್ನೆಲ್ಲ ನನ್ನ ತಂದೆ
ಹೇಳುತ್ತಿದ್ದರು. ಆದರೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ತಲ್ಲೂರ ಶೆಟ್ಟರ ಮನೆಯಲ್ಲಿ
ನಮಗೆ ನಿಯಮಿತವಾಗಿ ಆಮಂತ್ರಣವಿರುತ್ತಿದ್ದು ಆಗ ಊಟಕ್ಕೆ ನಮ್ಮ ತಂದೆ ನನ್ನನ್ನು
ಕರೆದುಕೊಂಡು ಹೋಗುತ್ತಿದ್ದುದು ಬಿಟ್ಟರೆ ಇನ್ನುಳಿದಂತೆ ಸಹಾಯ ಯಾಚಿಸಿಯಾಗಲಿ ಸುಮ್ಮನೇ
ಆಗಲಿ ಅವರಲ್ಲಿ ಹೋಗುತ್ತಿರಲಿಲ್ಲ.
ನಮ್ಮ ತಂದೆ ಬದುಕನ್ನು ಸ್ವೀಕರಿಸಿದ ರೀತಿಯೇ
ಅದ್ಭುತವಾಗಿತ್ತು. ಬೈಲಹೊಂಗಲಕ್ಕೆ ಬಂದು ನೆಲೆಗೊಳ್ಳುವ ಮುನ್ನ ಗೋಕಾಕದಲ್ಲಿ ಇದ್ದಾಗಲೇ
ನನ್ನ ತಂದೆ ಮತ್ತು ಅವರ ತಮ್ಮ ಮಹಾಲಿಂಗಪ್ಪ ಶೆಟ್ಟರ್ ಇಬ್ಬರೂ ಪೂರ್ಣಪ್ರಮಾಣದಲ್ಲಿ
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು. ರಾಷ್ಟ್ರೀಯವಾದ ನನ್ನ ತಂದೆಯ
ಆದರ್ಶವಾಗಿತ್ತು. ಅನಿಶ್ಚಿತತೆ, ಸಂಸಾರದ ತೊತ್ತಳದುಳಿತಗಳು ಅದಕ್ಕೆ ತಡೆಯಾಗಲಿಲ್ಲ.
ಯರವಡಾ, ಹಿಂಡಲಗಾ ಜೇಲುಗಳಲ್ಲಿಯ ತಮ್ಮ ವಾಸದ ಅವಧಿಯ ನೆನಪುಗಳನ್ನು ನಮ್ಮ ತಂದೆ
ನನ್ನೊಂದಿಗೆ ಹಲವು ಸಲ ಬಿಚ್ಚುತ್ತಿದ್ದರು. ಅದರಲ್ಲಿ ಒಂದು ಘಟನೆ ನನಗೆ ನನ್ನ ತಂದೆಯ
ನಿರ್ಧಾರದ ದಿಟ್ಟತನವನ್ನು ತೋರಿತ್ತು. ಹಾಗೆ ಒಮ್ಮೆ ಅವರು ಬ್ರಿಟಿಷ್ ಸರಕಾರದಿಂದ
ಶಿಕ್ಷೆಗೊಳಗಾಗಿ ಜೇಲಿನಲ್ಲಿದ್ದಾಗ ನನ್ನ ತಾಯಿಗೆ ಅವಳ ತವರಿನಲ್ಲಿ ಹೆರಿಗೆಯಾಗಿ, ಆ
ಸಂದರ್ಭದಲ್ಲಿ ನಮ್ಮ ತಂದೆಯವರನ್ನು ನೋಡಬೇಕೆನ್ನಿಸಿ ಪತ್ರ ಬರೆಸಿದ್ದರಂತೆ. ಜೇಲಿನ
ಆಡಳಿತ ಅವರನ್ನು ಪೆರೋಲ್ ಮೇಲೆ ಬಿಡಲು ಸಿದ್ಧವೂ ಆಯಿತು. ಆದರೆ ಅದಕ್ಕೊಂದು
ಪೂರ್ವಶರತ್ತು ಇತ್ತು. ಸತ್ಯಾಗ್ರಹದಲ್ಲಿ ತಾನು ಪಾಲ್ಗೊಂಡಿದ್ದು ತಪ್ಪು ಎಂದು ನನ್ನ
ತಂದೆ ಲಿಖಿತವಾಗಿ ಕ್ಷಮಾಪಣೆ ಕೋರಬೇಕಿತ್ತು. ನನ್ನ ತಂದೆ ಅದಕ್ಕೆ ಸಿದ್ಧರಾಗಲಿಲ್ಲ. ಅವರ
ಮನದಲ್ಲಿದ್ದ ಆಲೋಚನೆಗಳು ಬಹುಶ: ಎರಡು- ಮೊದಲನೆಯದು ಆದರ್ಶದ ಮಾತು. ನನ್ನ ತಂದೆ ಸ್ವತ:
ಗಾಂಧೀಜಿಯವರನ್ನು ಕಂಡು ಸತ್ಯಾಗ್ರಹದಲ್ಲಿ ಭಾಗವಹಿಸುವ ಇಚ್ಚೆಯನ್ನು ವ್ಯಕ್ತಗೊಳಿಸಿ
ಧುಮುಕಿದ್ದ ಆಂದೋಲನವಾಗಿತ್ತದು. (ಗಾಂಧೀಜಿಯನ್ನು ಮುಖತ: ಕಂಡು ವೈಯಕ್ತಿಕ
ಸತ್ಯಾಗ್ರಹದಲ್ಲಿ ಭಾಗವಹಿಸುವದಾಗಿ ಹೇಳಿ ಅವರ ಸಮ್ಮತಿ ಪಡೆದು ಬಂದದ್ದು ನನ್ನ ತಂದೆಯ
ಮಟ್ಟಿಗೆ ತಮ್ಮ ಬದುಕಿನ ಅತ್ಯಂತ ಸ್ಮರಣಾರ್ಹ ಘಟನೆಯಾಗಿತ್ತು). ಎರಡನೆಯದು ಸರಳ ತರ್ಕದ
ಮಾತು. ಹೇಗೂ ಕೂಸು ಬಾಣಂತಿ ಆರಾಮವಾಗಿದ್ದಾರೆ ಎಂದಿತ್ತು ಪತ್ರ. ಹಾಗಿದ್ದ ಮೇಲೆ ಹೋಗುವ
ಅಗತ್ಯವೇನು?
ಸ್ವಾತಂತ್ರ್ಯ
ಹೋರಾಟದ ಅವಧಿಯಲ್ಲಿ ಚಿಂತನೆಯನ್ನು ವ್ಯಕ್ತಿತ್ವವನ್ನು ತೀವ್ರವಾಗಿ ಪ್ರಭಾವಿಸಿದ
ವಿಚಾರಗಳು ತತ್ತ್ವಗಳು ಸ್ವಾತಂತ್ರ್ಯಾನಂತರ ನನ್ನ ತಂದೆಯ ಬದುಕಿನ ಆದರ್ಶಗಳಾದವು. ನನ್ನ
ತಂದೆಯ ವ್ಯಕ್ತಿತ್ವಕ್ಕೊಂದು ಸರಳತೆ ಇತ್ತು, ಸಜ್ಜನಿಕೆ ಇತ್ತು. ಬಿಳಿಯ ಉದ್ದ ತೋಳಿನ
ಶರ್ಟು,ಕೋಟು,ಧೋತರ ಹಾಗೂ ಗಾಂಧೀ ಟೋಪಿ ಇವು ಜೀವನದುದ್ದಕ್ಕೂ ಅವರ ಉಡುಗೆಗಳು. ಸಭ್ಯತೆ
ಅವರ ವ್ಯಕ್ತಿತ್ವದ ಒಟ್ಟು ಸಾರ. ಯಾರೊಂದಿಗೂ ಅವರು ಕಲಹ ಮಾಡಿದ್ದಾಗಲಿ, ತಮಗೆ
ಸಂಬಂಧವಿರದ ವಿಷಯಗಳಲ್ಲಿ ತಲೆ ಹಾಕಿದ್ದಾಗಲಿ, ಅವರಿವರ ಬಗ್ಗೆ ಸಲ್ಲದ ಮಾತಾಡಿದ್ದಾಗಲಿ
ನಾನೆಂದೂ ನೋಡಲಿಲ್ಲ. ಯಾವ ವ್ಯಸನಗಳೂ ಇರಲಿಲ್ಲವಾಗಿ ಸ್ವಂತದ್ದೆನ್ನುವ ಖರ್ಚುಗಳೂ
ಇರಲಿಲ್ಲ. ವೇತನದ ಹಣವೆಲ್ಲವನ್ನೂ ಮನೆಗೆ ಕೊಡುತ್ತಿದ್ದರು. ಅವ್ವ ಮತ್ತು ನಮ್ಮ
ಹಿರಿಯಕ್ಕ, ಗೌರಕ್ಕ, ಹೇಗೋ ನಿಭಾಯಿಸುತ್ತಿದ್ದರು.
ಅಂಥ ದುರ್ಭರ ದಿನಗಳಲ್ಲೇ
ನನ್ನ ಹಿರಿಯ ಸೋದರಮಾವ ವೀರಣ್ಣ ಬಸವಂತಪ್ಪ ಮರಡಿಯನ್ನು ಸತ್ತೀಗೇರಿಯಲ್ಲಿ ಗುಂಡಿಟ್ಟು
ಕೊಲ್ಲಲಾಯಿತು. ತನ್ನ ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಆತ ನನ್ನ
ಹಿರಿಯಕ್ಕ ಗೌರಕ್ಕನನ್ನು ಮದುವೆಯಾಗಿದ್ದ. ಈ ಮದುವೆಯಾದ ಕೆಲವೇ ತಿಂಗಳಲ್ಲಿ ಈ ಕೊಲೆ
ನಡೆದುಹೋಗಿತ್ತು. ರಸಿಕತನ, ಆತ್ಮವಿಶ್ವಾಸ, ಅಚ್ಚುಕಟ್ಟಾದ ವೇಷಭೂಷಣ, ಹಾಗೂ ಸುಶಿಕ್ಷಿತ
ನಡಾವಳಿಗಳಿಂದ ಕೂಡಿದ ಆಕರ್ಷಕ ವ್ಯಕ್ತಿತ್ವದಿಂದಾಗಿ ಆತ ಸುತ್ತ ಫಾಸಲೆಯಲ್ಲಿ ಎದ್ದು
ಕಾಣುವ ಗರಿಮೆಯೊಂದನ್ನು ಹೊಂದಿದ್ದ. ಆತನ ವರ್ಚಸ್ಸು ಸಹಿಸದೇ ಆತನ ಗೆಳೆಯನೇ ಆಗಿದ್ದ ಊರ
ಗೌಡ ಆತನಿಗೆ ಗುಂಡಿಕ್ಕಿದ್ದ. ಆ ನನ್ನ ಸೋದರಮಾವ ಬೈಲಹೊಂಗಲಕ್ಕೆ ಬಂದಾಗ ಪಡಸಾಲೆಯ
ಗೋಡೆಯಲ್ಲಿದ್ದ ಗೂಟಕ್ಕೆ ತೂಗುಹಾಕಿರುತಿದ್ದ ಜೋಡುನಳಿಗೆಯ ಬಂದೂಕು ನಮಗೆ ಅಚ್ಚರಿಯ ಭಯದ
ವಸ್ತುವಾಗಿ ಕಾಣುತ್ತಿತ್ತು. ತನ್ನ ಅಣ್ಣನನ್ನು ಕೊಂದ ಪಾಟೀಲನನ್ನು ಗುಂಡಿಕ್ಕಿ ಕೊಂದು
ಸೇಡು ತೀರಿಸಿಕೊಳ್ಳಲೆಂದು ಈಗ ಧಾರವಾಡದಲ್ಲಿ ನೆಲೆಸಿರುವ ನನ್ನ ಕಿರಿಯ ಸೋದರಮಾವ
ಗುರುಸಿದ್ದಪ್ಪ ಮರಡಿ ಅದು ಹೇಗೋ ಒಂದು ಕಂಟ್ರಿ ಪಿಸ್ತೂಲು ಸಂಪಾದಿಸಿ ಅದು ಜಪ್ತಿಯಾಗಿ
ಪೋಲೀಸರು ಹುಡುಕತೊಡಗಿದಾಗ ತನ್ನ ಹೆಂಡತಿ (ನನ್ನ ಇನ್ನೊಬ್ಬ ಅಕ್ಕ ಶಾಂತಕ್ಕ) ಹಾಗೂ
ಮಗನನ್ನು ತಂದು ನಮ್ಮ ಮನೆಯಲ್ಲೇ ಇರಿಸಿ ತಾನು ತಲೆಮರೆಸಿಕೊಂಡ. ಈ ಹೆಚ್ಚುವರಿ
ಸದಸ್ಯರಿಂದಾಗಿ ಪರಿಸ್ಥಿತಿ ಮತ್ತಷ್ಟು ದುರ್ಭರವಾಗಿರಬೇಕು.
ಆದರೆ ನನ್ನ ತಂದೆ
ಚಿಂತಾಕ್ರಾಂತರಾಗಿ ತಲೆ ಮೇಲೆ ಕೈಹೊತ್ತು ಕುಳಿತದ್ದಾಗಲೀ, ಕೈಲಾಗದವರಂತೆ
ಸಿಡುಕಿದ್ದಾಗಲೀ, ಅಸಹನೆಯಿಂದ ವರ್ತಿಸಿದ್ದಾಗಲೀ,ಸಾಲ-ಸೋಲ ಮಾಡಿದ್ದಾಗಲೀ ನಮಗೆ
ಅನುಭವಕ್ಕೆ ಬರಲಿಲ್ಲ. ನಾನು ಈಗ ಯೋಚಿಸುವಂತೆ ನಾವಾಗ ಬದುಕಿದ್ದ ಪರಿಸರ ನಮ್ಮ ತಂದೆಯ
ಸುಸಂಸ್ಕೃತ ವ್ಯಕ್ತಿತ್ವಕ್ಕಾಗಲೀ ನಮ್ಮ ಕುಟುಂಬದ ಹಿನ್ನೆಲೆಗಾಗಲಿ
ಪ್ರಶಸ್ತವಾದುದಾಗಿರಲಿಲ್ಲ. ಬಸ್ ಸ್ಟ್ಯಾಂಡಿನ ಪಾರ್ಶ್ವದಲ್ಲಿ ಎರಡು ತೋಟಗಳ ನಡುವೆ
ನೇರವಾಗಿ ಸಾಗುವ ಬೀದಿಯ ಕೊನೆಯೇ ನಮ್ಮ ಓಣಿಯಾಗಿತ್ತು. ಅದನ್ನು ತಾಸೇದಾರ ಓಣಿ
ಎನ್ನುತ್ತಿದ್ದರು. ಅಲ್ಲಿಯ ಮನೆಗಳಲ್ಲಿ ಬಾಡಿಗೆಗೆ ಇದ್ದುದು ಬಹುಪಾಲು ಸಭ್ಯ ಜನರೇ.
ನಮ್ಮ, ಒಬ್ಬ ಉಡುಪಿ ಹೊಟೆಲ್ ಮಾಲೀಕನ, ಕೆಎಸ್ಸಾರ್ಟಿಸಿಯ ಒಬ್ಬ ಡ್ರೈವರನ, ಮತ್ತೊಬ್ಬ
ಕಂಡಕ್ಟರನ ಮನೆಗಳು, ಮತ್ತೆ ಕೆಲವು ಮುಸ್ಲಿಮರ ಮನೆಗಳು ಒಂದು ಸಾಲಿನಲ್ಲಿದ್ದವು.
ಕಿರಿದಾದ ರಸ್ತೆಯಾಚೆ ನಮಗೆದುರಾಗಿದ್ದ ಗಿರೆಣ್ಣವರ ಎಂಬುವರ ಮನೆಯ ಬಾಗಿಲು ವಾಸ್ತವವಾಗಿ
ಅವರ ಹಿತ್ತಿಲು ಬಾಗಿಲಾಗಿದ್ದು ಅಲ್ಲಿ ಪ್ರವೇಶಿಸಿ ತಲೆಬಾಗಿಲಿನಿಂದ ಹೊರಬಿದ್ದರೆ ಅದು
ರಾಣಿ ಕಿತ್ತೂರು ಚೆನ್ನಮ್ಮನನ್ನು ಬಂಧಿಸಿಟ್ಟ ಸೆರೆಮನೆಯ ಶಿಥಿಲ ಅವಶೇಷಗಳಿಗೆ ಮುಖ ಮಾಡಿ
ತೆರೆದುಕೊಳ್ಳುತ್ತಿತ್ತು. ಅದಕ್ಕೆ ಹೂಡೆ ಎನ್ನುತ್ತಿದ್ದರು. ಹೀಗಾಗಿ ಅದು
ಹೂಡೇದ ಓಣಿ. ಆ ಒಟ್ಟು ಪರಿಸರದಲ್ಲಿ ಕೆಲ ಮನೆಗಳಲ್ಲಿ ಬಟ್ಟಿ ಸಾರಾಯಿ
ತಯಾರಾಗುತ್ತಿತ್ತೆಂಬ ಕಾರಣಕ್ಕೆ ಆಗಾಗ ರೇಡ್ ಮಾಡುತ್ತಿದ್ದ ಪೋಲೀಸಿನವರು ಅಂಥವರ
ಮನೆಗಳನ್ನಷ್ಟೇ ಅಲ್ಲದೇ ನಮ್ಮ ಮನೆಯನ್ನು ಒಳಗೊಂಡು ಸಾಲು ಮನೆಗಳನ್ನು ಪ್ರವೇಶಿಸಿ
ಹಿತ್ತಲಿನ ತಿಪ್ಪೆಗಳನ್ನು ಕೋಲು ಚುಚ್ಚಿ ಪರೀಕ್ಷಿಸುತ್ತಿದ್ದರು. ಬಟ್ಟಿಸಾರಾಯಿಯನ್ನು
ಕದ್ದು ಮುಚ್ಚಿ ಕುಡಿಯಲು ಗಿರಾಕಿಗಳು ಅಲ್ಲಿಗೆ ಬರುತ್ತಿದ್ದುದು, ಕೆಲವರು ತಮ್ಮ
ಉಪಪತ್ನಿಯರನ್ನು ಅಲ್ಲಿಯ ಒಂದೆರಡು ಮನೆಗಳಲ್ಲಿ ನೆಲೆಗೊಳಿಸಿದ್ದು ಹೀಗೆ ಒಂದು ನಿಗೂಢತೆ
ಅಲ್ಲಿತ್ತೇನೋ. ಹಾಗೆ ನಮ್ಮ ಮನೆಯ ಹಿತ್ತಿಲನ್ನು ಪರೀಕ್ಷಿಸುತ್ತಿದ್ದ ಪೋಲಿಸರು ಕೊನೆಗೆ
ಅದು ಮೆಟಗುಡ್ ಅವರ ಮಿಲ್ಲಿನಲ್ಲಿ ಉದ್ಯೋಗಿಯಾಗಿದ್ದ ವೀರಪ್ಪ ಶೆಟ್ಟರೆಂಬ ಸಜ್ಜನನೊಬ್ಬನ
ಮನೆಯೆಂದು ಮನದಟ್ಟಾಗಿ ಹಾಗೆ ಮಾಡುವದನ್ನು ನಿಲ್ಲಿಸಿದರು. |
No comments:
Post a Comment