Sunday, December 26, 2010

ನೀಲು

ಗೌರಿ ಲಂಕೇಶ್ ಅವರು ಲಂಕೇಶ್ ರ "ನೀಲು ಕಾವ್ಯ"ದ ಕೆಲವು ಪದ್ಯಗಳನ್ನು ಯಾರೋ ವಿಡಿಯೋ ತಾಣ you tube ನಲ್ಲಿ ಹಾಕಿದ್ದಾರೆ  ಎಂದು ಫೇಸ್ ಬುಕ್ ನ ತಮ್ಮ್ ಸ್ಟೇಟಸ್ ನಲ್ಲಿ ಕಾಣಿಸಿ ಲಿಂಕ್ ಕೊಟ್ಟಿದ್ದರು.ಅಲ್ಲಿ ಹೋಗಿ ನೋಡಿದರೆ ಅಪ್ಲೋಡ್ ಮಾಡಿದವರು ತಮ್ಮ ಖಾತೆಯನ್ನು ಮುಚ್ಚಿದ್ದಾರೆ, ಹೀಗಾಗಿ ಅದು ಲಭ್ಯವಿಲ್ಲ,ವಿಷಾದಿಸುತ್ತೇವೆ ಎಂಬ ಒಕ್ಕಣೆ. ಆ ಪುಟ್ಟ ಪುಟ್ಟ ನೀಲು ಪದ್ಯಗಳ ಯೋಚನೆ ತಲೆ ತುಂಬಿದಾಗ ಹದಿನೆಂಟು ವರ್ಷಗಳ ಹಿಂದೆ ಪ್ರಕಟವಾಗಿದ್ದ ನನ್ನ ಮೊದಲ ಕವನ ಸಂಕಲನ ಹುಡುಕಿ ತೆಗೆದು ಅದರಲ್ಲಿಯ ಕವಿತೆಯೊಂದನ್ನು ಓದಿದೆ. ಇಲ್ಲಿದೆ ಆ ಕವಿತೆ.


ಈ ನೀಲು,
ಕಾವ್ಯಕ್ಷೇತ್ರದ ಈ ಬ್ಲ್ಯೂ,
ಫಿಲ್ಮೀ ಹುಡುಗಿಯರಿಗೆ ಮಿಗಿಲಾದ ನಿಗೂಢೆ
ಹಲವರ ಕಾಡುವ ಕನ್ಯಾಮಣಿ
ಆಹಾ ಏನಾಕೆಯ ಕಾವ್ಯಸರಣಿ!

ಬೇರಾರೂ ಕಾಣದ್ದನ್ನು ಕಾಣುತ್ತಾಳೆ
ಕಂಡದ್ದು ಕಂಡ ಹಾಗೆ ಹೇಳುತ್ತಾಳೆ
ಎಲ್ಲೆಡೆಯಿಂದ ಬರುವ ಸುದ್ದಿ ಶಬ್ದ ಲಯ ಆಟ ಹೂಟಗಳಿಗೆ
ಕಿವಿ ತೆರೆದು ಕೂತಿರುತ್ತಾಳೆ
ಮೂಡ್ ಬಂದರೆ ಒಮ್ಮೊಮ್ಮೆ
ಪ್ರೇಮ,ಕಾಮ,ಕಾವ್ಯದ ಅ ಆ ಇ ಈ ಹೇಳತೊಡಗುತ್ತಾಳೆ.

ಗಂಡನ ಸೋಮಾರಿತನದ ಬಗ್ಗೆ ಗೊಣಗದ
ಮಕ್ಕಳ ಸ್ಕೂಲು, ಫೀಸು, ಪ್ರೊಗ್ರೇಸ್ ರಿಪೋರ್ಟ್ ಇತ್ಯಾದಿ ಕೊರೆಯದ
ಏರುತ್ತಿರುವ ಬೆಲೆ, ಗ್ಯಾಸ್ ಸಿಲಿಂಡರ್ ವಿಳಂಬ
ಕಾಂಪೌಂಡಿನೊಳಗೆ ಹಂದಿ ನುಗ್ಗುವದೇ ಮೊದಲಾದ
ಲೌಕಿಕದ ಮಾತಾಡದ
ಈ ಪಾರಮಾರ್ಥೆ ಬರೆಯದಿದ್ದರೆ
ಕೊರಡು ಕೊನರದಿರುವದೇ ಬರಡು ಚಿಗುರದಿರುವದೇ
ಕ್ರಾಂತಿ ಘಟಿಸದಿರುವದೇ.. ಅರಿಯೆ

ಆದರೆ
ಹುಲ್ಲುಗರಿಕೆ ಹೂವು ಗಿಡ ಮರ ಬಳ್ಳಿಗಳ ಔನ್ನತ್ಯಕ್ಕೇರಿಸುವ
ದಿನನಿತ್ಯದ ನೋಟಗಳಿಗಸಂಖ್ಯ ಅರ್ಥ ಹೊಮ್ಮಿಸುವ
ಗರತಿಯರಿಗೆ ಕಚಗುಳಿ ಇಡುವ
ಹುಡುಗಿಯ ತುಂಟತನ ತತ್ವಜ್ಞಾನಿಯ ಗಾಂಭೀರ್ಯ ಮೆರೆವ
ಮಾನವಸ್ವಭಾವದ ಆಳಕ್ಕೆ ಇಳಿವ ಈ ರಮಣಿ ಬರೆದರೆ
ಕಪ್ಪುಮಸಿಯ ಬಾಟಲ್ ನಲ್ಲಿ ಕಟ್ಟಿರುವೆಯ ಅದ್ದಿ
ಬಿಳಿಯ ಹಾಳೆಯ ಮೇಲೆ ಓಡಿಸಿದಂತಿರುತ್ತದೆ.

ಪಾಳೆಗಾರಿಕೆ ಯಜಮಾನಿಕೆಗಳ ದಿಟ್ಟತನದ ಬಗ್ಗೆ
ಈ ಕೋಮಲೆ ಇತ್ತೀಚೆಗೆ ಮಾತಾಡತೊಡಗಿದ ಧಿಮಾಕಿಗೆ
ಅಸುಖ ಪಟ್ಟವರ ಮಾತು ಬಿಡಿ
ಅಕ್ಷರವಿಟ್ಟಳುಪದೊಂದಗ್ಗಳಿಕೆಯೇನೂ ಇಲ್ಲದ ಈಕೆ
ಅಕ್ಷರಗಳ ಹೊಡೆದುಹಾಕುವ ಚಂದಕ್ಕೇ ಮಾರು ಹೋಗಿದ್ದಾನೆ ಇಲ್ಲೊಬ್ಬ
ಹೀಗೆ ಕಚಗುಳಿ ಇಟ್ಟಂತೆ ಕವಿತೆ ಬರೆಯುವ ಈಕೆ ಪ್ರತಿಕ್ರಾಂತಿಕಾರಿಣಿಯಾದರೂ ಸರಿಯೇ
ನಾನವಳ ವರಿಸುವೆ ಎನ್ನುತ್ತಾನೆ ಇನ್ನೊಬ್ಬ

ಇನ್ನುಳಿದಂತೆ ಇವಳನ್ನು ಹಲವಾರು ಡ್ರೆಸ್ ಗಳಲ್ಲಿ ಕಲ್ಪಿಸಿಕೊಂಡಿರುವ
ಕನ್ನಡದ ತರುಣ ಕವಿಗಣ ಈಗ ಇವಳ ಅಡ್ರೆಸ್ ಅಷ್ಟು ಸಿಕ್ಕರೆ ಸಾಕು
ಇವಳಾರಾಕೆ ಇವಳಾರಾಕೆ ಇವಳಾರಾಕೆ ಎಂದೆಣಿಸದೇ
ಈಕೆ ನಮ್ಮಾಕೆ ಈಕೆ ನಮ್ಮಾಕೆ ಈಕೆ ನಮ್ಮಾಕೆ ಎಂದೆಣಿಸಿ
ಪ್ರೇಮಪತ್ರಗಳ ಮಹಾಪೂರವನ್ನೇ ಹರಿಸಿ
"ಚಲ್ ಮೇರೆ ನೀಲೂ" ಎಂದು ಹೆಗಲ ಮೇಲೆ ಕೈಹಾಕಿ ಹೊರಡಲು ಸಿದ್ಧವಿದೆ

"ಈ ಹೆಣ್ಣುಗಳೇ ಹೀಗೆ", "ನಾವು ಹುಡುಗಿಯರೇ ಹೀಗೆ", "ಅತ್ತು ಬಿಡೇ ಗೆಳತಿ"
ಎಂದು ಸೊರಸೊರಗುಟ್ಟುವ ಕವಯಿತ್ರಿಸ್ತೋಮದ ನಡುವೆ
ನೀಲುನಂಥ ಹತ್ತಾರು ಪಗದ್ಯ ಅಥವ ಗಪದ್ಯ ಪ್ರತಿಭೆಗಳೇನಾದರೂ ಪುಟಿದೆದ್ದರೆ
ನಾನು ಗಂಡಸರ ಕಾವ್ಯ ಓದುವದನ್ನೂ ಬಿಡಬೇಕೆಂದಿದ್ದೇನೆ.... ....!

Thursday, December 9, 2010

ಮೌನಿ

ಶಬ್ದಗಳ ಸಂತೆಯಲ್ಲಿ ನಿಂತು
ಮಾತುಗಳ ಖಾಲಿತನ ಮನದಟ್ಟಾದಂತೆ ಮೌನಿಯಾದ
ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಿದ್ದವರು
ಮೂಕ ಎಂದರು
ಮತ್ತಷ್ಟು ಜನ ಬಂದರು
ಮೂಕ ಎಂದ ಮೇಲೆ ಕಿವುಡನೂ ಇರಬಹುದೆಂದು ಕಣ್ಸನ್ನೆ ಕೈಸನ್ನೆ ಮಾತಾಡಿದರು

ಆಕಾಶ ನೋಡಿದ ಕಣ್ಣರಳಿಸಿ
ತಂಗಾಳಿಯ ಸ್ಪರ್ಶಕ್ಕೆ ಮೈ ಒಡ್ಡಿದ
ದೂರದಲ್ಲೆಲ್ಲೋ ಕೂಗಿದ ಹಕ್ಕಿಯ ಅನುಕರಿಸಿ ಕೂ ಎಂದ, ಮುಗುಳ್ನಕ್ಕ

ದೂರದಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದ ಯಾರದೋ ಮನೆಗಳು
ಕೆಂಪುಹಳದಿ ಜ್ವಾಲೆಗಳ ಹಿoಬೆಳಕಲ್ಲಿ ಕಪ್ಪು ಆಕೃತಿ ಮೂಡಿದಂತೆ
ಅವಸರವಸರವಾಗಿ ಬಂದನೊಬ್ಬ
ವ್ಯರ್ಥ ಕಾಲಹರಣ ಬೇಡ
ಮನೆ ಉರಿಯತೊಡಗಿ ಈಗ ತುಂಬ ಹೊತ್ತು
ಎಲ್ಲ ಸುಟ್ಟು ಹೋಗುವ ಮುನ್ನ ಬನ್ನಿ
ಒಂದಿಷ್ಟು ಗಳ ಹಿರಿಯೋಣ ...
ಹಿಂಬಾಲಿಸಿ ಒಬ್ಬೊಬ್ಬರೇ ತೆರಳಿದರು

ಬೆಂಕಿ ಆರಿಸುವ ಮಾತೇ ಇಲ್ಲ
ಎಲ್ಲಿಗೆ ಬಂತು! ನಿಶ್ಯಬ್ದವಾಗಿ ಅತ್ತ, ಅಳುತ್ತಲೇ ಇದ್ದ
ಇನ್ನಷ್ಟು ಜನ ಬಂದರು, ಭ್ರಮಿಷ್ಟ ಎಂದರು
ಸಂಪನ್ನನ ಸಿಟ್ಟು ಮಾತಾಗತೊಡಗಿತು,ತಾಗತೊಡಗಿತು
ಓ ಇವನಿನ್ನೂ ಲಜ್ಜೆ ಸಮ್ಮಾನ ಸಂಕೋಚ ಉಳ್ಳವನು
ನಾವೆಲ್ಲಾ- ಇಷ್ಟು ಜನ - ಎಲ್ಲ ಕಳಚಿ ನಿಂತಿದ್ದರೆ
ಇವ ನೋಡಿ ಇನ್ನೂ ಬಟ್ಟೆ ತೊಟ್ಟಿದ್ದಾನೆ
ಕಳಚಿ ಹಾಕಿರಿ ಇವನ ಅಂಗಿ
ಚೊಣ್ಣ ಚಡ್ಡಿ ಬನೀನು
ಸಿಳ್ಳೆ ಹೊಡೆದು ಸುತ್ತ ಹೆಜ್ಜೆ ಹಾಕಿ ವಿಕಟ ನಕ್ಕರು

ದಿಗಂಬರನಾಗಿ ನಡೆದ ಒಬ್ಬಂಟಿಯಾಗಿ
ಮುಸ್ಸಂಜೆ ಸಮಯದಲಿ ಬೆಟ್ಟ ದಾರಿಯ ಬದಿಗೆ
ಕುಪ್ಪಳಿಸುತ್ತಿತ್ತೊಂದು ಪುಟ್ಟ ಸುಂದರ ಹಕ್ಕಿ
ಬಳಿಸಾರಿ ಹೇಳಿದ 'ಬಾ, ಎದೆಗವಚಿಕೊಳ್ಳುವೆ'
ಬೆದರಿ ಹಾರಿತು ಹಕ್ಕಿ

ನಿಲ್ಲು, ನಾನು ನಿರುಪದ್ರವಿ ಎಂದ
ಹಕ್ಕಿ ನಂಬಲಿಲ್ಲ
ತನಗೆ ತಾನೇ ಎಂಬಂತೆ ಹೇಳಿಕೊಂಡ :ಫೇರ್ ಇನಫ್ ....
.