Sunday, October 31, 2010

ಕಾಣದ ನದಿಯೊಂದರ ಕಣಿವೆಯಲಿ ಕುಳಿತು..
ಶಾಲ್ಮಲಾ ಎಂಬ ಅಗೋಚರ ಹೊಳೆಯಂತೆ
ಒಳಗೊಳಗೆ ಹರಿದಿರುವ ನೂರೆಂಟು ಸೆಳವುಗಳ 
ಹೊಯ್ದಾಟ ತುಯ್ದಾಟ ನನ್ನೊಳಗೆ ಇಂದು, ಕುಳಿತಿರುವೆ 
ಅದೇ ಗುಪ್ತಗಾಮಿನಿ ನದಿಯ ಕಂಗಾವಲಿಗೆ ನಿಂತಂತೆ ಹಬ್ಬಿರುವ ಬೆಟ್ಟಗಳ ಕಣಿವೆಯೊಳಗೆ 

ವರ್ಷದ ಕೊನೇ ತಿಂಗಳು ಕೊನೆಯುಸಿರೆಳೆಯುತ್ತಿದೆ, ಇದು ಮಧ್ಯಾಹ್ನ
ಬೆಟ್ಟನೆತ್ತಿಯ ಒಂದು ಓರೆ, ನೆತ್ತಿಯ ಮೇಲೆ ತೂಗುತ್ತಿದೆ ಕೆಂಡಮಂಡಲ
ಸುತ್ತ ಕುರುಚಲು ನಡುವೆ ಹಾಸುಗಲ್ಲು ಅದರ ಮೇಲೆ ಈ ನಾನು 

ತೆರೆತೆರೆತೆರೆ ತೇಲಿಬಂದು ಮೈಯ್ಯನಮರಿ ಮುಖವ ಸವರಿ ಓಡುತಿರುವ ಮಂದಗಾಳಿ
ದ್ಯಾವಾ ಪೃಥ್ವಿ ಪವಡಿಸಿದ್ದಾಳೆ, ದಿಟ್ಟಿ ಹರಿದಲ್ಲೆಲ್ಲ
ಹೊಸತಾರುಣ್ಯದ ಹಮ್ಮಿನ ಹುಡುಗಿಯ ಏರುಎದೆಯ೦ತೆ  ಅಲ್ಲಿ
ಹಸಿರುಟ್ಟ ಹೆಂಗಸಿನ ಮೈ ನುಣುಪು ಕಿಬ್ಬೊಟ್ಟೆಯಾಗಿ ಕೆಳಗಿಳಿದಂತೆ ಇಲ್ಲಿ 
ದಿಣ್ಣೆ-ದಿಬ್ಬಗಳು 

ಕೆಳಗೆ, ದೂರದ ಹಾಸುಬಯಲಿನಲ್ಲಿ 

ಹದಿನೈದು ಎಮ್ಮೆ ಮೇಯುತ್ತಿವೆ
ಬಾಯಿ ನೆಲಕೆ ಹಚ್ಚಿಕೊಂಡೇ ನಿಂತಿವೆ, ಒಂದೂ ತಲೆಯೆತ್ತಿಲ್ಲ

ಕ್ಷಿತಿಜವೊಂದು ಗಿರಿಶ್ರೇಣಿ ಘನೀಭೂತ ಮೋಡದಂತೆ ಧೂಮ್ರಛಾಯೆಯಂತೆ
ಅಡ್ಡಡ್ಡ ಮಂಜುಪರದೆ ,ಈಗ
ಗಾಳಿ ಬೀಸುತ್ತಿಲ್ಲ ದನಗಾಹಿ ಹಾಡುತ್ತಿದ್ದಾನೆ
ಬಿಸಿಲು ಚುಚ್ಚತೊಡಗಿದೆ 
ಎಲ್ಲೋ ದೂರ ಪ್ರಪಾತದಿಂದೆ೦ಬ೦ತೆ
ಇಟ್ಟಿಗೆಯ ಬಟ್ಟಿಯಿಂದ ಟಕ್ ಟಕ್ ಟಕ ಸದ್ದು 

ಪೃಕೃತಿ ಮೌನವಾಗಿದ್ದಾಳೆ; ಆಗೊಮ್ಮೆ ಈಗೊಮ್ಮೆ 
ಒಕ್ಕಲ ಮಕ್ಕಳ ಮಾತಿನ ಕೂಗಿನ ಹಾ ಹೋ ದನಿಯನು ಮೀರಿ 
ಹರದಾರಿ ದೂರದ ಬೈಪಾಸ್ ಹೆದ್ದಾರಿವಾಹನಗಳ ಸದ್ದು ಗಾಳಿಗುಂಟ 
ಅಲ್ಲೊಂದು ಇಲ್ಲೊಂದು ಕೀಟಗಳ ಕಿರ್ರ್ ಗುಬ್ಬಿಗಳ ಚಿಂವ್ 
ಹಸಿರು ಸುಟ್ಟು ಕಂದು ಬಣ್ಣ  ತಳೆದು ನಿಂತ ಹುಲ್ಗಾವಲು
ಬೀಸಿಬಂದ ಗಾಳಿ ಸವರೆ ಜುಳುಜುಳೂ ಬಗ್ಗುವದು ಮತ್ತೆ ತಲೆ ಎತ್ತುವದು 
ಅದರಲೊಂದು ಲಯವಿದೆ 
ನಾಚಿಗ್ಗೇಡಿ ಎಮ್ಮೆಗಳು ಇನ್ನೂ ತಲೆಯೆತ್ತಿಲ್ಲ ;ನೆಲಕೆ ಹಚ್ಚಿ ಬಾಯಿ ಹೆಜ್ಜೆಯಷ್ಟೇ ಕೀಳುತ್ತಿವೆ 
ತೀರದಂಥ ಹಸಿವಿದೆ.

ಎಡಕ್ಕೊಂದು ದಿಬ್ಬ ಬಲಕ್ಕೊಂದು ಕೊರಕಲು
ನಡುವೆ ಇಳಿದು ಅಂಕುಡೊಂಕು ಮನಸೂರಿಗೆ ನಡೆದ ಹಾದಿ 
ದೂರ, ಎರಡು ಕರ್ರಗಿನ ಲಂಬರೇಖೆಗಳಂತೆ 
ಮಣ್ಣದಾರಿಯಲಿ ಹೆಜ್ಜೆ ನೂಕುತ್ತಿರುವ ಒಕ್ಕಲಗಿತ್ತಿಯರು
ಅವರು ಹಾದರಗಳ ಕುರಿತು ಮಾತಾಡುತ್ತಿರಬಹುದು 
ಗೌರವಾದರಗಳ ಕುರಿತೂ ಇರಬಹುದು ...

ದನಗಾಹಿ ಹುಡುಗ ಇತ್ತ ಬಂದ;ಹೆಗಲಮೇಲೆ ಅಡ್ಡಕೋಲು
ಹಕ್ಕಿರೆಕ್ಕೆ ಬಿಚ್ಚಿದಂತೆ ಕೋಲ ಬಳಸಿ  ಕೈಯ್ಯನೂರಿ 
ಕಣ್ಣಲ್ಲಿ ತಮಾಷೆ: 'ಏನ್ ಮಾಡಾಕ್ಹತ್ತೀರಿ?'
ಉತ್ತರ ಅವನ ಅಳವಿಗೆ ಮೀರಿತ್ತು,'ಕವಿತಾ ಬರಿಯಾಕ್ಹತ್ತೀನಿ'
ತಿರುತಿರುಗಿ ನೋಡುತ್ತ ಹೊರಟುಹೋದ

'ಇದು ಕವಿತೆಯಲ್ಲ...!', ಪ್ರತಿಭಟಿಸಿ, ಪರವಾಯಿಲ್ಲ 
ಇದು ಕವಿತೆಯಾಗಬೇಕೆಂಬ ಹಟ ನನಗೂ ಇಲ್ಲ 
ನೀವು ಪ್ರೌಢರಸಿಕರು
ರೂಪ ಆಕಾರವಿಲ್ಲದ ತಳಮಳಗಳ ಬಲ್ಲವರು ..

ಭಿನ್ನ ಧ್ವನಿ ಭಿನ್ನ ಲಯ ಬೇರೆಯದೇ ನೋಟ 
ಹೃದಯ ಹಗುರವಾಗಿದೆ 
ಮೇಲೇಳುವೆ, ಅಷ್ಟೇ... ...