Sunday, November 11, 2012

ಸ್ವಂತದ ಬದುಕಿನ ಬಿಡಿ ಚಿತ್ರಗಳು-೨

ಶೇಂಗಾ ಸುಗ್ಗಿಯ ಸಂಭ್ರಮ:ಅವರ ಪಾಡಿಗೆ ಬಿಟ್ಟಿದ್ದರೆ ನಮ್ಮ ತಂದೆಯವರು ಸ್ವಂತದ್ದೆನ್ನುವ ಒಂದು ಜಾಗ, ಮನೆ ಇವುಗಳನ್ನು ಯಾವಾಗ ಮಾಡಿಕೊಳ್ಳುತ್ತಿದ್ದರೋ. ಈ ವಿಷಯದಲ್ಲಿ ನನ್ನ ಅವ್ವನ ಪ್ರಯತ್ನಶೀಲತೆಯನ್ನು ಮೆಚ್ಚಬೇಕು. ಕೃಷಿ ಸಂಶೋಧನಾ ಘಟಕದ ಹೊಲಗಳಿಗೆ ಹೋಗುವ ಮಾರ್ಗದ ಬಳಿ ಒಂದೆರಡು ಪ್ಲಾಟುಗಳು ಮಾರಾಟಕ್ಕಿದ್ದುದು ನಮ್ಮ ತಾಯಿಯ ಗಮನಕ್ಕೆ ಬಂದು ಅಷ್ಟಿಷ್ಟು ದುಡ್ಡು ಕೂಡಿಡತೊಡಗಿದಳು. ಇನ್ನೂ ಸ್ವಲ್ಪ ಹಣ ಕಡಿಮೆ ಬಿದ್ದಾಗ ತನ್ನ ಕೆಲವು ಹಳೆಯ ಬೆಲೆಬಾಳುವ ಸೀರೆಗಳ ಅಂಚಿನಲ್ಲಿದ್ದ ಬಂಗಾರದ ಅಂಶವಿದ್ದ ಜರಿಗಳನ್ನು ಬೇರ್ಪಡಿಸಿ ಅದನ್ನು ಒಟ್ಟುಮಾಡಿ ಮಾರಿ ಅಂತೂ ಒಂದೂಕಾಲು ಗುಂಟೆಯಷ್ಟು ಜಮೀನು ಕೊಳ್ಳಲು ಅಗತ್ಯವಿರುವ ಹಣ ಸಂಗ್ರಹ ಮಾಡಿದಳು. ಹಾಗೆ ಖರೀದಿಸಿದ ಜಾಗೆಯಲ್ಲಿ ತಟ್ಟೀಗೋಡೆ, ನಾಡ ಹೆಂಚಿನ ಸಾಮಾನ್ಯ ಮನೆಯೊಂದನ್ನು ಕಟ್ಟಿಸಿ ನಾವು ಸ್ಥಳಾಂತರಗೊಂಡೆವು. ಆಗ ಅಲ್ಲಿ ನಮ್ಮದೇ ಒಂದೆರಡು ಮನೆಗಳು. ಅನತಿ ದೂರ ಮೇಲೆ ಹೋದರೆ ಒಡ್ಡರ ಓಣಿ. ವಿದ್ದ್ಯುದ್ದೀಪ ಇರಲಿಲ್ಲವಾಗಿ ರಾತ್ರಿ ಇಡೀ ಪ್ರದೇಶ ಕತ್ತಲು. ನಮ್ಮ ಮನೆಗೆದುರಾಗಿದ್ದ ದೊಡ್ಡ ಮನೆಗೆ ಸ್ಥಳೀಯ ನ್ಯಾಯಾಲಯದ ಜಡ್ಜ್ ಒಬ್ಬರು ವಾಸಕ್ಕೆ ಬಂದ ಮೇಲೆ ಪುರಸಭೆಯ ಆಳೊಬ್ಬ ಪ್ರತಿನಿತ್ಯ ಸಂಜೆ ಬಂದು ಕಂಬಕ್ಕೆ ಕಟ್ಟಿದ್ದ ಲಾಂದ್ರದ ದೀಪಕ್ಕೆ ಸೀಮೆಣ್ಣೆ  ಸುರಿದು ಬೆಳಕು ಹಚ್ಚಿ ಹೋಗುತಿದ್ದ. ಅದು ಅಲ್ಲಿನ ದಟ್ಟ ಕತ್ತಲೆಯೊಂದಿಗೆ ಕ್ಷೀಣವಾಗಿ ಹೋರಾಡುತ್ತಿತ್ತು.
ನನ್ನ ತಾಯಿ ಸತ್ತಿಗೇರಿಯಲ್ಲಿ ದೊಡ್ಡ ವಿಸ್ತಾರದ ಹಲವು ಜಮೀನುಗಳನ್ನು ಹೊಂದಿದ್ದ ಬಸವಂತಪ್ಪ ಮರಡಿ ಹಾಗೂ ಬಸವ್ವ ಎಂಬ ದಂಪತಿಗಳ ಚೊಚ್ಚಲ ಮಗಳಾಗಿ ೧೯೨೦ ರಲ್ಲಿ ಜನಿಸಿದವಳು.ನನ್ನ ತಂದೆ ಮದುವೆಗಾಗಿ ಹೆಣ್ಣು ಅಂತ ನೋಡಿದ್ದು ಅವಳೊಬ್ಬಳನ್ನೇ. ಮದುವೆಯಾಗುವದಾದರೆ ಅವಳನ್ನೇ ಆಗುತ್ತೇನೆಂದು ಹಿರಿಯರಿಗೆ ಹೇಳಿ ಅವಳನ್ನೇ ಆದವರು. ಅವಳೂ ಪರಿಸ್ಥಿತಿಗೆ ಹೊಂದಿಕೊಂಡು ಬಾಳಿದಳು. ನನ್ನ ತಂದೆಯ ಆದರ್ಶಗಳನ್ನು ಗೌರವಿಸಿದಳು. ಒಮ್ಮೊಮ್ಮೆ ನನ್ನ ತಂದೆಯ ಜೊತೆಗೆ ಅವಳಿಗೆ ಕೆಲಸಕ್ಕೆ ಬಾರದ ತಕರಾರುಗಳಿರುತ್ತಿದ್ದವು. ಅವುಗಳಲ್ಲೊಂದೆಂದರೆ ನಮ್ಮ ತಂದೆಗೆ ಯಾವುದಾದರೂ ಕ್ಯಾಲೆಂಡರ್ ಚಿತ್ರ ಇಷ್ಟವಾದರೆ ಅದಕ್ಕೆ ಫ್ರೇಮ್ ಹಾಕಿಸಿಕೊಂಡು ಬಂದು ಗೋಡೆಗೆ ತೂಗುಹಾಕುವ ಅಭ್ಯಾಸ. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ನೆಹರೂ ,ರಾಧಾಕೃಷ್ಣನ್, ದೇವದೇವತೆಗಳು, ಸಿನಿಮಾ ನಟಿ ಜಮುನಾ..., ಯಾವುದಾದರೂ ಆದೀತು. Gaudy ವರ್ಣಗಳ ಆ ಫೋಟೋಗಳು ಎರಡು ಮೂರು ಸಾಲುಗಳಲ್ಲಿ ಪಡಸಾಲೆ-ನಡುಮನೆಯ ಗೋಡೆಗಳೆಲ್ಲವನ್ನಲಂಕರಿಸಿದ್ದವು. ಅವುಗಳ ಹಿಂದೆ ತಿಗಣೆಗಳು ಸಂಸಾರ ಹೂಡಿರುತ್ತಿದ್ದವು. ಅವುಗಳಿಗೆ ನಮ್ಮ ತಂದೆ ಹಣ ವ್ಯಯಿಸುವದು ನಮ್ಮವ್ವನಿಗೆ ಇಷ್ಟವಾಗುತ್ತಿರಲಿಲ್ಲ. ನನ್ನ ತಂದೆಗೆ ಅರವತ್ತು ವರ್ಷಗಳಾದ ಮೇಲೆ ನಶ್ಯ ಏರಿಸುವ ಚಟ ಅಂಟಿಕೊಂಡಿತು. ಅದೂ ತಕರಾರಿನ ವಿಷಯವಾಗಿತ್ತು. ಅವಳ ಟೀಕೆಗಳಿಗೆ ಬೇಸತ್ತು ಒಮ್ಮೆ ಪಂಢರಪುರಕ್ಕೆ ಹೋದಾಗ ಆ ಚಟವನ್ನು ಶಾಶ್ವತವಾಗಿ ತ್ಯಜಿಸಿ ಬಂದ ನಮ್ಮ ತಂದೆ ಅ ಮೇಲೆ ಕೆಲ ವರ್ಷ ಬಿಟ್ಟು (ಮನೆಯಲ್ಲಿನವರಿಗೆ ಗೊತ್ತಾಗದಂತೆ)ಬೀಡಿ ಸೇದತೊಡಗಿದರು. ನಂತರ ಸಿಗರೇಟಿಗೆ ಬಡ್ತಿ ಹೊಂದಿದರು. ಆಮೇಲೆ ನಮಗೆ ಗೊತ್ತಾದಂತೆ ಅದು "ಸಿಗರೇಟ್ ಅಥವಾ ಬೀಡಿ ಸೇದ್ರೀ ಶೆಟ್ರ ಎದ್ಯಾಗಿನ ಕಫಾ ಕರಗತೈತಿ" ಎಂದು ಅವರ ಸಹೋದ್ಯೋಗಿಯೊಬ್ಬ ಕೊಟ್ಟ ಉಪದೇಶಾಮೃತದ ಫಲವಾಗಿ ಅಂಟಿಕೊಂಡ ಚಟವಾಗಿತ್ತು. ಅದನ್ನು ನಮ್ಮ ತಂದೆ ಹೆಚ್ಚೂ ಕಡಿಮೆ ಬದುಕಿನ ಕೊನೆಯ ವರ್ಷಗಳ ವರೆಗೆ ಜಾರಿಯಲ್ಲಿಟ್ಟರು. ನಮ್ಮವ್ವ ಭರ್ತ್ಸನೆಯ ಮೂಡ್ ನಲ್ಲಿದ್ದಾಗ ಬಳಸಿಕೊಳ್ಳುತ್ತಿದ್ದ ವಿಷಯಗಳಲ್ಲಿ ಅದಕ್ಕೆ ಪ್ರಮುಖ ಸ್ಥಾನವಿತ್ತು.
ನನ್ನವ್ವನಿಗೆ ಮಧ್ಯವಯಸ್ಸಿನಿಂದಲೇ ರಕ್ತದೊತ್ತಡವಿತ್ತು. ಕೆಲ ವರ್ಷಗಳ ನಂತರ ಒಂದು ಪ್ರವೃತ್ತಿ ಶುರುವಾಯಿತು. ಮುಂಜಾನೆ ಹಾಸಿಗೆಯಿಂದೇಳುತ್ತಲೇ ಅದೇನು ಪಿತ್ತೋದ್ರೇಕವೋ ಯಾರಾದರೊಬ್ಬರನ್ನು ಟಾರ್ಗೆಟ್ ಮಾಡುತ್ತಿದ್ದಳು. ಹಾಗೆ ಟಾರ್ಗೆಟ್ ಆದವರ ತಪ್ಪು ಗುರುತರವಾದದ್ದಾಗಿರಬೇಕೆಂಬ ನಿಯಮವೇನೂ ಅವಳಿಗೆ ಇರಲಿಲ್ಲ. ನನ್ನಕ್ಕಂದಿರ ಪೈಕಿ ಒಬ್ಬಳು ಒಂದು ಕಪ್ ಒಡೆದದ್ದಾಗಿರಬಹುದು, ನಾನು ಕೈ ತೊಳೆಯದೆ ಒಂದು ಪಾತ್ರೆ ಮುಟ್ಟಿದ್ದಾಗಿರಬಹುದು, ನನ್ನವ್ವ ಪರಿಪರಿಯಾಗಿ ಟೀಕೆ-ದೂಷಣೆಗೆ ತೊಡಗುತ್ತಿದ್ದಳು. ನನ್ನ ತಂದೆ ಅಪಾರ ತಾಳ್ಮೆಯ ಮನುಷ್ಯ. "ಇರ್ಲಿ ಬಿಡ ಇನ್", "ಛೇ ಸುಮ್ ಆಗಿನ್ನs", "ಮುಗಿಸಿ ಬಿಡ ಇನ್ನs" ಹೀಗೆ ಅವನು ನಲ್ವತ್ತು-ಐವತ್ತು ಸಲ ಹೇಳುತ್ತಿದ್ದನೆಂದರೆ ನನ್ನವ್ವ ಎಂಥ ಕೆಲಸಕ್ಕೆ ಬಾರದ ವಿಷಯಗಳಿಗೆ ಎಷ್ಟು ಹೊತ್ತು ಟೆನ್ಸ್ ಆಗಿರುತಿದ್ದಳೆಂಬ ಅಂದಾಜು ಸಿಕ್ಕೀತು. ಅಂಥ ಅದ್ಭುತ ತಾಳ್ಮೆಯ ನನ್ನ ತಂದೆಯೂ ಅಪರೂಪಕ್ಕೊಮ್ಮೆ ಸಹನೆ ಕಳೆದುಕೊಂಡು ಅಂತಿಮ ಅಸ್ತ್ರವಾಗಿ ಕೆಳಗೆ ಕುಳಿತಿದ್ದ ಅವಳಿಗೆದುರಾಗಿ ನಿಂತು ಎಡಗೈಯಿಂದ ಅವಳ ಹಿಂದಲೆ ಹಿಡಿದು ಮುಂಬಾಗಿಸಿ ಬಲಗೈ ಮುಷ್ಟಿ ಮಾಡಿ ವ್ಯವಸ್ಥಿತವಾಗಿ ಬೆನ್ನಿಗೆ ನಾಲ್ಕಾರು ಗುದ್ದು ಕೊಡುತ್ತಿದ್ದ. "ಅಯ್ಯಯ್ಯವ್ವಾ ಕೊಲ್ತಾನs ನನ್ನs" ಎಂದು ಅವಳನ್ನುತ್ತಿದ್ದರೆ ನಾವು ಏನೂ ಹೇಳುತ್ತಿರಲಿಲ್ಲ. ಬಿಡಿಸಲೂ ಹೋಗುತ್ತಿರಲಿಲ್ಲ. ನಾಲ್ಕು ಗುದ್ದು ಕೊಟ್ಟು ಅವನೂ ಸುಮ್ಮನಾಗುತ್ತಿದ್ದ. ಗುದ್ದಿಸಿಕೊಂಡು ಅವಳೂ ಸುಮ್ಮನಾಗುತಿದ್ದಳು. ಇದು ಆ ಪ್ರಸಂಗಗಳ ಒಟ್ಟು ಸಾರವೆಂಬುದು ನಮಗೆ ಪರಿಚಿತವೇ ಇರುತ್ತಿತ್ತು. ಮೂರೋ ನಾಲ್ಕೋ ವರ್ಷಗಳಲ್ಲೊಮ್ಮೆ ಈ ದೃಶ್ಯ ನಮಗೆ ನೋಡಸಿಗುತ್ತಿತ್ತು. ಮುದ್ದಣ ಮನೋರಮೆಯರ ಮಾದರಿಯ ಅವರ ಸಲ್ಲಾಪ ಆಗಾಗ ನೋಡಸಿಗುತ್ತಿತ್ತು.
ನನ್ನ ತಂದೆಯ ಶಿಕ್ಷಣದ ಬಗ್ಗೆ ಹೇಳಿರುವೆ. ನನ್ನವ್ವ ಮೂರನೇ ಇಯತ್ತೆ ವರೆಗೆ ಕಲಿತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಳು. ಅದನ್ನು ಸಾಬೀತು ಮಾಡಲು ಸಂಯುಕ್ತ ಕರ್ನಾಟಕ ಪತ್ರಿಕೆಯ ಶೀರ್ಷಿಕೆಯ ದೊಡ್ಡಕ್ಷರಗಳನ್ನು ಕಷ್ಟಪಟ್ಟು ಓದಿ, ಇಲ್ಲವೆ ಸೊಟ್ಟಕ್ಷರಗಳಲ್ಲಿ ಈರವ್ವ ಎಂದು ಬರೆದು ತೋರಿಸುತ್ತಿದ್ದಳು, ಎಲ್ಲ ಸಮಸ್ಯೆಗಳ ನಡುವೆಯೂ ಎಲ್ಲ ಮಕ್ಕಳಿಗೂ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆಯನ್ನು ನನ್ನ ತಂದೆ ಮಾಡಿದ್ದರು. ನನ್ನಣ್ಣ ಬೈಲಹೊಂಗಲದಲ್ಲಿ ಹೈಸ್ಕೂಲ್ ಮುಗಿಸಿ ಅಲ್ಲಿ ಆಗ ಕಾಲೇಜು ಇರಲಿಲ್ಲವಾದ್ದರಿಂದ ೬೦ ರ ದಶಕದ ಮಧ್ಯದ ಸುಮಾರಿಗೆ ಬೆಳಗಾವಿಯ ಲಿಂಗರಾಜ ಕಾಲೇಜಿಗೆ ಹೋದ. ಅಲ್ಲಿ ಒಂದು ಕೋಣೆಯನ್ನು ಬಾಡಿಗೆ ಪಡೆದು ಇದ್ದ. ನನ್ನವ್ವ-ಅಕ್ಕ ಬೆಳಗ್ಗೆ ಎದ್ದು ಅಡಿಗೆ ಮಾಡುತ್ತಿದ್ದರು. ಮುಂಜಾನೆ ಬೆಳಗಾವಿಗೆ ಹೋಗುವ ಬಸ್ಸಿನಲ್ಲಿ ಅವನಿಗೆ ಊಟದ ಡಬ್ಬಿ ಇಟ್ಟು ಕಳಿಸುತ್ತಿದ್ದೆವು. ನನ್ನ ತಂದೆ, ನಾನು ಅಥವ ನನ್ನ ಅಕ್ಕಂದಿರು ಹಾಗೆ ಡಬ್ಬಿ ಕೊಟ್ಟು ಬರುವದು ರಾತ್ರಿ ಬೈಲಹೊಂಗಲಕ್ಕೆ ಬರುವ ಬಸ್ಸಿನಲ್ಲಿ ನನ್ನಣ್ಣ ಇಟ್ಟು ಕಳಿಸಿದ ಖಾಲಿ ಡಬ್ಬಿಯನ್ನು ಬಸ್ ಸ್ಟ್ಯಾಂಡಿಗೆ ಹೋಗಿ ತೆಗೆದುಕೊಂಡು ಬರುವದು ದೈನಂದಿನ ಚಟುವಟಿಕೆಯಾಯಿತು. ಅವನ ರೂಂ ಬಾಡಿಗೆ,ಫೀ,ಪುಸ್ತಕ,ಬಟ್ಟೆ-ಬರೆ ಹೀಗೆ ಹೆಚ್ಚುವರಿ ಖರ್ಚಿನ ಬಾಬತ್ತುಗಳಿರುತ್ತಿದ್ದವು. ಸಂಪಾದನೆಯ ಅನ್ಯ ಮಾರ್ಗ ಅಗತ್ಯವಿತ್ತು. ನಾವು ಮನೆಯ ಭಾಗವನ್ನೇ ಕೊಂಚ ಪರಿವರ್ತಿಸಿ ಒಂದು ಸಣ್ಣ ಕಿರಾಣಿ ಅಂಗಡಿ ಸುರು ಮಾಡಿದೆವು. ಉದ್ರಿ ಗಿರಾಕಿಗಳೇ ಜಾಸ್ತಿ. ದೀರ್ಘ ಕಾಲದ ವರೆಗೆ ಹಣ ಕೊಡದೇ ತಪ್ಪಿಸುತ್ತಿದ್ದ ಆ ಉದ್ರಿ ಮಂದಿ ಅಕಸ್ಮಾತ್ ದಾಟಿ ಹೋಗುವದು ಕಂಡರೆ ನನ್ನಕ್ಕ ಅವರನ್ನು ತಡೆದು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. ಅವರು- ಸಾಮಾನ್ಯವಾಗಿ ಒಡ್ಡರು,ಝಾಡಮಾಲಿ-ಭಂಗಿಗಳು,ರೈತಾಪಿಗಳು- ತಮ್ಮ ಅಡಚಣಿ, ಅನಾನುಕೂಲಗಳನ್ನು ಪರಿಪರಿಯಾಗಿ ಹೇಳಿಕೊಳ್ಳುತ್ತಿದ್ದರು. ನನ್ನ ಅವ್ವ ತುಂಬ ಕರುಣಾಮಯಿ. ಬಡಬಗ್ಗರ ಕುರಿತು ಅವಳಿಗೆ ತುಂಬ ಪ್ರಾಮಾಣಿಕವಾದ ಒಂದು ಅಂತ:ಕರಣವಿತ್ತು. ಆ ಮಂದಿ ಉದ್ರಿ ಹಣ ಕೊಡುವದು ದೂರ ಉಳಿಯಿತು, ನಮ್ಮವ್ವನೇ ಅವರಿಗೆ ತಿನ್ನಲು-ಉಣ್ಣಲು ಕೊಟ್ಟು ಮತ್ತೊಂದಿಷ್ಟು ಅವರ ಕೂಸು ಕುನ್ನಿಗಳಿಗೂ ಕೊಟ್ಟು ಕಳಿಸುತ್ತಿದ್ದಳು. ಅಂಗಡಿಯ ವ್ಯಾಪಾರ ಊರ್ಜಿತವಾಲಿಲ್ಲವೆಂದು ಬೇರೆ ಹೇಳಬೇಕಿಲ್ಲ. ಆದರೆ ವ್ಯಾಪಾರಕ್ಕಿಂತ ಅತ್ತೆಗೆ ಗೊತ್ತಾಗದಂತೆ ಸೊಸೆಯಂದಿರು, ರೈತಾಪಿಗಳು, ಚಿಕ್ಕ ಪುಟ್ಟ ತುಡುಗರು ಸೋವಿ ದರಕ್ಕೆ ನಮಗೆ ಮಾರುತಿದ್ದ ಕಾಳುಕಡ್ಡಿಗಳು ನಮ್ಮ ಕುಟುಂಬದ ಆಹಾರ ನಿರ್ವಹಣೆಯ ಭಾರವನ್ನು ಕೊಂಚ ತಗ್ಗಿಸುತ್ತಿದ್ದವು.
ಶೇಂಗಾ ಸುಗ್ಗಿಯಲ್ಲಿ ನಮ್ಮ ಮನೆಯ ಚಿತ್ರವೇ ಬದಲಾಗುತಿತ್ತು. ಬೆಳೆದು ನಿಂತ ಶೇಂಗಾಬಳ್ಳಿ ಕಿತ್ತು ಕಾಯಿ ಹರಿದು ಕೂಲಿಗಳು ಒಟ್ಟು ಹಾಕಿದ ಕಾಯಿಗಳನ್ನು ಹೊಲದೊಡೆಯ ಒಂದು ನಿಶ್ಚಿತ ಸಂಖ್ಯೆಯ ಸಮಪ್ರಮಾಣದ ಗುಂಪುಗಳಾಗಿ ವಿಂಗಡಿಸಿ ಅದರಲ್ಲೊಂದು ಗುಂಪನ್ನು ಆ ಕೂಲಿಗಳಿಗೆ ಅವರ ಕೆಲಸದ ಪ್ರತಿಫಲವಾಗಿ ಕೊಡುತ್ತಿದ್ದರು. ಅವುಗಳನ್ನು ಆ ಕೃಷಿಕೂಲಿಗಳು-ಸಾಮಾನ್ಯವಾಗಿ ಒಡ್ಡರು- ತಂದು ನಮಗೆ  ಮಾರುತ್ತಿದ್ದರು.ದೊಡ್ಡ ಪ್ರಮಾಣದ ಸಂಗ್ರಹವಿದ್ದರೆ ಒಡ್ಡರ ಓಣಿಗೇ ಹೋಗಿ ಅವ್ವ-ಅಕ್ಕ ಚೀಲಗಳನ್ನು ಹೊತ್ತು ರೊಜ್ಜು ರಾಡಿ ದಾಟಿಕೊಂಡು ಮನೆಗೆ ತರುತ್ತಿದ್ದರು. ಆ ಕೃಷಿಕೂಲಿಗಳಿಗೆ  ಕೊಡಬೇಕಾದ ಮೊತ್ತವನ್ನು ೩ ಅಥವಾ ೪ ಸೇರಿಗೊಂದು ರೂಪಾಯಿಯ ಲೆಕ್ಕದಲ್ಲಿ ಗುಣಿಸಿ ನನ್ನ ತಂದೆ ಬರೆಯುವದು, ಕಮೀಶನ್ ಏಜಂಟರಿಂದ ಮುಂಗಡವಾಗಿ ತಂದ ೧, ೨, ೫ ರ ಗರಿಗರಿ ನೋಟುಗಳನ್ನು ಎಣಿಸಿ ನಾನು ಆ ಕೂಲಿಗಳಿಗೆ ವಿತರಿಸುವದು, ಇದು ಪ್ರತಿವರ್ಷ ಕೆಲವು ತಿಂಗಳು ನಮ್ಮ ಮನೆಯ ಮುಖ್ಯ ಚಟುವಟಿಕೆಯಾಯಿತು. ಹಾಗೆ ಸಂಗ್ರಹವಾದ ಮಣ್ಣುಮೆತ್ತಿದ ಶೇಂಗಾಕಾಯಿಗಳು ನಮ್ಮ ಮನೆಯಲ್ಲಿ ಸ್ಥಳಾವಕಾಶ ಕೊರತೆಯಾಗುವಂತೆ ಎಲ್ಲೆಂದರಲ್ಲಿ ರಾಶಿ ಬೀಳುತ್ತಿದ್ದವು, ನಮ್ಮನ್ನೆಲ್ಲ ಕರೆದುಕೊಂಡು ನಮ್ಮ ತಾಯಿ ಪ್ರತಿನಿತ್ಯ ಅವುಗಳನ್ನು ಮನೆಯೆದುರು ಹರಡಿ, ಬಿಸಿಲಿಗೆ ಒಣಗಿಸಿ, ಮಣ್ಣು ಬಡಿದು, ತೂರಿ ಖರೀದಿಗಾರರಿಂದ ಒಳ್ಳೆಯ ರೇಟು ಪಡೆಯಲು ಅವು ಅರ್ಹವಾಗುವಂತೆ ಚೆಂದಗೊಳಿಸುತ್ತಿದ್ದಳು. ಸಂಗ್ರಹವಾದ ಕಾಯಿಗಳನ್ನು ಪ್ರತಿನಿತ್ಯ ನಾಲ್ಕೋ ಆರೋ ಗೋಣಿಚೀಲಗಳಲ್ಲಿ ತುಂಬಿ ಬಾಯಿ ಹೊಲಿದು ನಮ್ಮಕ್ಕ ಅವುಗಳ ಮೇಲೆ ಬಣ್ಣದ ಇಂಕಿನಿಂದ ನಮ್ಮ ಹೆಸರು ಬರೆದಾದ ಮೇಲೆ ರೈತನೊಬ್ಬನ ಚಕ್ಕಡಿಗೆ ಹೇರಿ ಕೃಷಿ ಹುಟ್ಟುವಳಿ ಮಾರುಕಟ್ಟೆಯ ದಲ್ಲಾಳಿಗಳ ಮಳಿಗೆಗಳಿಗೆ ನಾನು ಕೊಂಡೊಯ್ಯುತ್ತಿದ್ದೆ. ಹೀಗೆ ಹೈಸ್ಕೂಲು ಕಾಲೇಜು ಓದುತ್ತಲೇ ನಮ್ಮ ಮನೆಯ ಅರ್ಥವ್ಯವಸ್ಥೆಯ ನಿರ್ವಹಣೆಯ ಕೆಲವು ಪಾತ್ರಗಳನ್ನು ನಾನು ಹೊತ್ತೆ. ಅದು ಅನಿವಾರ್ಯವೂ ಆಗಿತ್ತು. ಅದರಲ್ಲಿ ದೊಡ್ಡ ಪಾತ್ರ ನನ್ನ ಅವ್ವ ಮತ್ತು ಹಿರಿಯಕ್ಕನದು. ಮದುವೆಯಾದ ಹೊಸದರಲ್ಲೇ ವಿಧವೆಯಾಗಿ ಮರುಮದುವೆಯಾಗಲು ನಿರಾಕರಿಸಿ ಮನೆಯಲ್ಲಿಯೇ ಉಳಿದ ನಮ್ಮ ಗೌರಕ್ಕ ಗಂಡುಮಗನಂತೆ ದುಡಿದಳು. ಮನೆಯ ಪ್ರತಿಯೊಂದು ವ್ಯಾಪಾರ ವ್ಯವಹಾರ, ಖರ್ಚು-ವೆಚ್ಚ, ಸಂಬಂಧಿಕರೊಂದಿಗಿನ ಸಂಬಂಧದ ಸ್ವರೂಪ ಹೀಗೆ ಒಟ್ಟಾರೆ ಕುಟುಂಬದ ನೀತಿನಿರ್ಧಾರಕರು ನನ್ನ ಅವ್ವ ಅಕ್ಕ ಇವರೇ ಆಗಿದ್ದರು.
ಇದೆಲ್ಲದರ ನಡುವೆ ನಮ್ಮ ತಂದೆ ಮಿಲ್ ನ ಲೆಕ್ಕ ಪತ್ರ ಬರೆಯುವ ತಮ್ಮ ಕೆಲಸ ನೋಡಿಕೊಂಡು ಹೋಗುತ್ತಿದ್ದರು. ಈ ಮಧ್ಯೆ ಅವರ ವೇತನ ತಿಂಗಳಿಗೆ ೨೫೦ ರೂಪಾಯಿ ಆಗಿತ್ತು. ಅವರದು ನಿಯಮಿತವಾದ ದಿನಚರಿ. ಮುಂಜಾನೆ ಸ್ನಾನ ತಿಂಡಿ ಮುಗಿಸಿ ೯ ಗಂಟೆಗೆ ಮಿಲ್ ಗೆ ಹೋಗುವದು, ಮಧ್ಯಾಹ್ನ ಬಂದು ಊಟ ಮಾಡಿ ಸ್ವಲ್ಪ ವಿಶ್ರಮಿಸಿ ಮಿಲ್ ಗೆ ಹೋಗಿ ರಾತ್ರಿ ೮ ಗಂಟೆಗೆ ಮನೆಗೆ ಬರುವದು. ಹಿತಮಿತವಾದ ಊಟ. ನನ್ನ ತಾಯಿ ಮಹಾ ದೈವಭೀರು. ನನ್ನ ತಂದೆ ಆಸ್ತಿಕರೇ ಆಗಿದ್ದರೂ ಪೂಜೆ-ಪುನಸ್ಕಾರ ಎಂದು ಸಮಯ ವ್ಯಯಿಸಿದ್ದು ನಾನು ನೋಡಿಲ್ಲ. ಅಮಾವಾಸ್ಯೆ- ಹಬ್ಬದಂಥ ಸಂದರ್ಭಗಳಲ್ಲಿ ತಾವೇ ಪೂಜೆ ಮಾಡುತ್ತಿದ್ದರಾದರೂ ತಾಸುಗಟ್ಟಲೆ ಪೂಜೆ ಮಾಡುತ್ತ ಕುಳಿತಿರುವದು ಅವರ ದೃಷ್ಟಿಯಲ್ಲಿ ಅವ್ಯಾವಹಾರಿಕವಾಗಿತ್ತು. ಉಲ್ಲಅಸಿತರಾಗಿದ್ದಾಗ "ಪರಮಪ್ರಭುವೇ ನಿಮ್ಮ ಸ್ಮರಣೆಯೊಳೆನ್ನ ಮನ ಸ್ಥಿರವಾಗಿ ನಿಂತು ಧ್ಯಾನಿಸುತಿರಲಿ, ಕರಿಗೆ ಕೇಸರಿ ವೈರಿಯೆಂತೆನ್ನ ದುರಿತಕ್ಕೆ ಹರ ನಿಮ್ಮ ನಾಮವು ಹಗೆಯಾಗಲಿ" ಎಂಬ ಪದ್ಯವನ್ನು ಹಾಡಿಕೊಳುತ್ತಿದ್ದರು. ನಿಜಗುಣ ಶಿವಯೋಗಿಗಳ "ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ" ಎಂಬುದು ಅವರ ಇಷ್ಟದ ಇನ್ನೊಂದು ಗೀತೆಯಾಗಿತ್ತು.
ಏನೇ ತೊಂದರೆ ತಾಪತ್ರಯಗಳಿದ್ದರೂ ಕುಟುಂಬದ ಅಸ್ತಿತ್ವಕ್ಕೊಂದು ನೆಮ್ಮದಿ ಇದ್ದೇ ಇತ್ತು. ಅಪ್ಪನಿಗೆ ಕುಟುಂಬದ ಬಗ್ಗೆಯೂ ಗಮನ ಇರುತ್ತಿತ್ತು. ಆಯಾಯ ಸೀಜನ್ನಿನಲ್ಲಿ ಬರುವ ಹಣ್ಣುಗಳನ್ನು ಧೋತರದ ಉಡಿಯಲ್ಲಿ ಇಟ್ಟುಕೊಂಡು ತರುತ್ತಿದ್ದರು. ಕಾರ್ಯನಿಮಿತ್ತ ಹೊರ ಊರುಗಳಿಗೆ ಹೋದಾಗ ಕುಂದಾ, ಗೋಕಾಕ ಕರದಂಟು ಇತ್ಯಾದಿ ತರುತ್ತಿದ್ದರು. ಅಪ್ರಾಮಾಣಿಕತೆ ಎಂಬುದು ಅವರ ಚಿಂತನೆಯಲ್ಲೇ ಇರಲಿಲ್ಲ. ಸದಾ ಕ್ರಿಯಾಶೀಲರಾಗಿರುತ್ತಿದ್ದರು. ಓದುವದು, ನಿಯಮಿತವಾಗಿ ಅಣ್ಣನಿಗೆ, ಅಕ್ಕಂದಿರಿಗೆ, ಅಳಿಯಂದಿರಿಗೆ ಪತ್ರಗಳನ್ನು ಬರೆಯುವದು, ಉದ್ದನೆಯ ಕೋಲಿಗೆ ಕಟ್ಟಿದ ಪೊರಕೆಯಿಂದ ಮನೆಯ ಮೂಲೆ ಮೂಲೆಯ ಜೇಡನ ಬಲೆಗಳನ್ನು ನಾಶಗೊಳಿಸುವದು, ಬಲೆಯಲಿ ಬಿದ್ದ ಇಲಿಗಳನ್ನು ದೂರ ಬಿಟ್ಟುಬರಲು ಕೊಂಡೊಯ್ಯುವದು, ಮಂಚದ ಕಬ್ಬಿಣದ ಕಾಲು, ಕಟ್ಟಿಗೆಯ ಹಲಗೆಗಳನ್ನು ಬಿಸಿಲಿಗೆ ಇಟ್ಟು ತಿಗಣೆ -ಚಿಕ್ಕಾಡುಗಳನ್ನು ನಿವಾರಿಸುವದು, ಏನೂ ಕೆಲಸವಿಲ್ಲವೆಂದರೆ ಕೊನೆಗೆ ನಾಲ್ಕು ಗೋಣಿಚೀಲಗಳ ಹೊಲಿಗೆಯನ್ನು ಬಿಚ್ಚಿ ಅವುಗಳ ಅಂಚುಗಳನ್ನು ಸೇರಿಸಿ ಡಬ್ಬಣ ಹುರಿ ತೆಗೆದುಕೊಂಡು ಮತ್ತೆ ಹೊಲಿದು ಹಾಸಿಕೊಳ್ಳಲು ತಟ್ಟುಗಳನ್ನು ತಯಾರಿಸುವದು..., ಒಟ್ಟಿನಲ್ಲಿ ಸದಾ ಏನಾದರೂ ಮಾಡುತ್ತಿದ್ದರು. ರಾತ್ರಿ ಊಟವಾದ ಮೇಲೆ ಮಕ್ಕಳೊಂದಿಗೆ ಕವಡೆ ಆಟ ಹೂಡುತ್ತಿದ್ದರು. ಮನೆಗೆ ದಿನಪತ್ರಿಕೆ ತರುತಿದ್ದರು. ಅವುಗಳಲ್ಲಿ ಬರುವ ಧಾರಾವಾಹಿಗಳನ್ನು ಗೌರಕ್ಕ ಗಟ್ಟಿಯಾಗಿ ಓದುತ್ತಿದ್ದಳು, ನಮ್ಮ ತಂದೆ ತಾಯಿ ನಾವು ಮಕ್ಕಳೆಲ್ಲ ಅಲ್ಲದೇ ಶ್ರೋತೃಗಣದಲ್ಲಿ ನೆರೆಹೊರೆಯವರೂ ಸೇರುತ್ತಿದ್ದರು. ನಮ್ಮವ್ವ ನಮ್ಮ ಬೇಡಿಕೆಗೆ ಸ್ಪಂದಿಸಿ ಒಂದು ರೇಡಿಯೊ ತರಿಸಿದ ಮೇಲೆ ಮನೆಯಲಿ ವಿವಿಧ ಭಾರತಿ, ಸಿಲೋನ್ ಕಾರ್ಯಕ್ರಮಗಳ ಧ್ವನಿ ಮೊಳಗತೊಡಗಿದವು. ನಮ್ಮ ಗೌರಕ್ಕ ಮತ್ತು ನೆರೆಮನೆಯಲ್ಲಿದ್ದ ನಮ್ಮ  ಚಿಕ್ಕಮ್ಮ ಗಂಗಕ್ಕ ಅಂಗಡಿಗೆ ವ್ಯಾಪಾರಕ್ಕೆ ಬರುತ್ತಿದ್ದ, ಬೀದಿಯಲ್ಲಿ ಹೋಗುವಾಗ ಸ್ವಲ್ಪ ನಿಂತು ಲೋಕಾಭಿರಾಮದ ನಾಲ್ಕು ಮಾತಾಡಿಹೋಗುತ್ತಿದ್ದ , ಓಣಿಯಲ್ಲಿ ಕೂಲಿ- ನಾಲಿ ಮಾಡುತ್ತಿದ್ದ ಜನರ ಥರಾವರಿ ಭಾಷೆ, ಉಚ್ಛಾರ,ಆಂಗಿಕ ಚಲನೆಗಳಲ್ಲಿನ ವಿಶಿಷ್ಟ ಲಕ್ಷಣಗಳನ್ನು ಥೇಟ್ ಹಾಗೆಹಾಗೇ ಪುನರುತ್ಪಾದಿಸುವದನ್ನು ದಿನಾರ್ಧದಲ್ಲಿ ಸಾಧಿಸಿ ಮಿಮಿಕ್ರಿ ಮಾಡಿ ರಂಜಿಸಿದಾಗ ನಮ್ಮ ಹೆತ್ತವರೂ ಆ ತಮಾಷೆಯಲ್ಲಿ ಪಾಲ್ಗೊಳ್ಳುತ್ತಿದ್ದರು.
ಓಣಿಯಲ್ಲಿ ಹಲವು ಥರದ ಜನರಿದ್ದರು. ಕಲಹಗಳಾಗುತ್ತಿದ್ದವು.ಕುಡುಕರು ಅಶ್ಲೀಲವಾಗಿ ಬಯ್ದುಕೊಳ್ಳುತ್ತ ತೂರಾಡುತ್ತ ಹೋಗುತ್ತಿದ್ದರು.ನಮ್ಮ ಕುಟುಂಬದವರು  ಯಾರ ಉಸಾಬರಿಗೂ ಹೋಗದೇ ತಮ್ಮ ಪಾಡಿಗೆ ತಾವಿರುತ್ತಿದ್ದರು.ಅತ್ತೆಯರು,ಸೊಸೆಯಂದಿರು,ಕೂಲಿ ನಾಲಿ ಮಾಡುವವರು ಹೀಗೆ ಬೀದಿಯಲ್ಲಿ ಸಾಗಿ ಹೋಗುವ ಹಲವರಿಗೆ ನಮ್ಮ ಮನೆ ಕಷ್ಟ ಸುಖ ಹೇಳಿಕೊಳ್ಳಲು ಸ್ವಲ್ಪ ಹೊತ್ತಿನ ನಿಲ್ದಾಣ. ನಮ್ಮವ್ವನಿಂದ ತಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆಂದಲ್ಲ. ಒಟ್ಟಿನಲ್ಲಿ "ಶೆಟ್ರ್ ಈರವ್ವಕ್ಕ"ನ ಮುಂದೆ ಹೇಳಿಕೊಂಡರೆ, ಅವಳಿಂದ ಸಾಂತ್ವನದ ನಾಲ್ಕು ಮಾತು ಕೇಳಿದರೆ ಅವರಿಗೆ ಸಮಾಧಾನ.

2 comments:

  1. ಒಂದು ಕಾಲವನ್ನು ನೆನಪಿಸುವ ಈ ಲೇಖನವನ್ನು ಓದುತ್ತಿದ್ದಂತೆ ಮನಸ್ಸಿಗೆ ವಿಚಿತ್ರ ಸಂತೋಷ ಹಾಗು ಸಮಾಧಾನ ಸಿಗುತ್ತಿದೆ. ಧನ್ಯವಾದಗಳು.

    ReplyDelete
  2. "ಶೆಟ್ರ್ ಈರವ್ವಕ್ಕ"ನವರಿ೦ದಲೆ,ಈಕಾಲದಲ್ಲು ಮಳೆ ಬೆಳೆ ಆಗುತ್ತಿರುವುದು.ಲೇಖನ ಓದಿದ ಮೇಲೂ ಒ೦ದು ರೀತಿ ಅನುಭೂತಿ ಭಾವದಲ್ಲಿ ಮುಳುಗಿದ್ದೆ.

    ReplyDelete