Thursday, October 27, 2011

ನಾಗರಿಕತೆಯ ನವಿರು ಉದಿಸಿ ಹರಡಿದ ಕಥನ...

(ಇದು ಬೆಂಗಳೂರಿನ ಚಿಂತನ ಪುಸ್ತಕ ಇಷ್ಟರಲ್ಲೇ ಪ್ರಕಟಿಸಲಿರುವ ಪ್ರೊ. ಇರ್ಫಾನ್ ಹಬೀಬ್ ಅವರ The Indus Civilization ನ ಕನ್ನಡ ಅನುವಾದ ಕೃತಿಗೆ ನಾನು ಬರೆದ ಪ್ರಸ್ತಾವನೆ.)



ಕಲಿಕೆಯ ಆರಂಭಿಕ ಹಂತದಿಂದ ಉನ್ನತ ಹಂತದ ವರೆಗೆ ಶಿಕ್ಷಣವು ದೇಶಭಾಷೆಗಳ ಮಾಧ್ಯಮದಲ್ಲಿ ಆಗಬೇಕು ಮೊದಲಾದ ಆಗ್ರಹಗಳನ್ನು ನಾವು ಕೇಳುತ್ತಿರುತ್ತೇವೆ. ಅದು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಆಗಬೇಕೆಂದರೆ ಎಲ್ಲ ವಿಷಯಗಳ ಕುರಿತಾಗಿರುವ ಮೌಲಿಕ ಗ್ರಂಥಗಳನ್ನು ಮಾತೃಭಾಷೆಗಳಿಗೆ ಅನುವಾದಿಸುವ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯಬೇಕಾಗುತ್ತದೆ. ವಿಶ್ವವಿದ್ಯಾಲಯಗಳು, ಸ್ವಾಯತ್ತ ಉನ್ನತ ಶಿಕ್ಷಣ ಸಂಸ್ಥೆಗಳು, ಖಾಸಗಿ ಪ್ರಕಾಶನ ಸಂಸ್ಥೆಗಳು ಆದ್ಯತೆಯೊಂದಿಗೆ ಮಾಡಬೇಕಾದ ಕೆಲಸವಿದು. ಆದರೆ ಆ ಕೆಲಸ ಆಗಬೇಕಾದ ಪ್ರಮಾಣದಲ್ಲಿ ಆಗುತ್ತಿಲ್ಲ. ಚರಿತ್ರೆಯ ಉತ್ಕೃಷ್ಟ ಪುಸ್ತಕಗಳು ಕನ್ನಡದಲ್ಲಿ ಬಂದದ್ದು ಕಡಿಮೆಯೇ. ಪದವಿ ಮಟ್ಟದ, ಪ್ರಧಾನವಾಗಿ ಪರೀಕ್ಷೆಗಳ ಅಗತ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದ ಪುಸ್ತಕಗಳಿಗೇನೂ ಕೊರತೆ ಇಲ್ಲ. ಆದರೆ ವಿಷಯಗಳನ್ನು ಸ್ವಲ್ಪ ಆಳದಲ್ಲಿ ಗ್ರಹಿಸಬೇಕೆನ್ನುವ ಜಿಜ್ಞಾಸುಗಳಿಗೆ ಅಂಥ ಪುಸ್ತಕಗಳಿಂದ ಹೆಚ್ಚಿನ ಪ್ರಯೋಜನವಿಲ್ಲ. ಇತಿಹಾಸದ ಕುರಿತು ಪ್ರೌಢವಾದ ಪುಸ್ತಕಗಳನ್ನು ಕೊಡಮಾಡುವ ನಿಟ್ಟಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗ ಒಂದಷ್ಟು ಕೆಲಸ ಮಾಡಿದೆ. ಇನ್ನುಳಿದಂತೆ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ( ಐ.ಸಿ.ಹೆಚ್.ಆರ್) ನ ಅನುವಾದ ಯೋಜನೆಯಡಿ ಕೆಲವು ಖ್ಯಾತ ಇತಿಹಾಸಕಾರರ ( ಆರ್.ಎಸ್.ಶರ್ಮಾ, ರೊಮಿಲಾ ಥಾಪರ್ ಮುಂ.) ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾಗಿದ್ದು ಇನ್ನು ಕೆಲವು ಇತ್ತೀಚೆ ಅದರ ಬೆಂಗಳೂರಿನ ದಕ್ಷಿಣ ಪ್ರಾದೇಶಿಕ ಕೇಂದ್ರ ವಹಿಸಿದ ಆಸಕ್ತಿಯಿಂದಾಗಿ ಪ್ರಕಟಣೆಯ ಹಂತದಲ್ಲಿವೆ.. ಈ ನಿಟ್ಟಿನಲ್ಲಿ "ಚಿಂತನ ಪುಸ್ತಕ"ದವರು ಕನ್ನಡದಲ್ಲಿ ಚರಿತ್ರೆಯ ಪುಸ್ತಕಗಳನ್ನು ಪ್ರಕಟಿಸುತ್ತಿರುವದು ಸ್ವಾಗತಾರ್ಹ. ಅಲಿಗಢ್ ಇತಿಹಾಸಕಾರರ ಸಮಾಜ (ದಿ ಅಲಿಗಢ್ ಹಿಸ್ಟೋರಿಯನ್ಸ್ ಸೊಸೈಟಿ) ಹಮ್ಮಿಕೊಂಡಿರುವ ಭಾರತದ ಜನ ಇತಿಹಾಸ ( ಏ ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯ) ಸರಣಿಯ ಎರಡನೆಯ ಸಂಪುಟವಾಗಿ ಇಂಗ್ಲಿಷ್ ನಲ್ಲಿ ಪ್ರಕಟವಾಗಿರುವ ದಿ ಇಂಡಸ್ ಸಿವಿಲೈಝೇಶನ್ ಎಂಬ ಕೃತಿಯ ಕನ್ನಡ ಅನುವಾದ ಈಗ ನಿಮ್ಮ ಕೈಯ್ಯಲ್ಲಿದೆ. ಮಧ್ಯಯುಗೀನ ಭಾರತೀಯ ಚರಿತ್ರೆಯ ಕುರಿತು ದಿ ಅಗ್ರೇರಿಯನ್ ಸಿಸ್ಟಮ್ ಆಫ್ ಮುಘಲ್ ಇಂಡಿಯ, ಎನ್ ಅಟ್ಲಾಸ್ ಆಫ್ ದಿ ಮುಘಲ್ ಎಂಪೈರ್, ಮಿಡೀವಲ್ ಇಂಡಿಯ:ದಿ ಸ್ಟಡೀ ಆಫ್ ಏ ಸಿವಿಲೈಝೇಶನ್ ಮೊದಲಾದ ಕೃತಿಗಳ ಕರ್ತೃ, ಪ್ರಸಿದ್ಧ ಇತಿಹಾಸಕಾರ ಪ್ರೊ. ಇರ್ಫಾನ್ ಹಬೀಬ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ಈ ಸರಣಿಯಲ್ಲಿ ಪ್ರಿಹಿಸ್ಟರಿ ಎಂಬ ಮೊದಲ ಸಂಪುಟ ಪ್ರಕಟವಾಗಿದ್ದು ಪೂರ್ವೇತಿಹಾಸ ಎಂಬ ಶೀರ್ಷಿಕೆಯಡಿ ಅದರ ಕನ್ನಡ ಅನುವಾದವನ್ನು "ಚಿಂತನ ಪುಸ್ತಕ"ದವರು ಈಗಾಗಲೇ ಪ್ರಕಟಿಸಿದ್ದಾರೆ. ಮಾನವನು ಆಹಾರ ಸಂಗ್ರಾಹಕನಾಗಿದ್ದು ಆ ಕಾರಣಕ್ಕೆ ಅಲೆಮಾರಿಯಾಗಿದ್ದ, ಇನ್ನೂ ನಂತರದಲ್ಲಿ ತಾತ್ಕಾಲಿಕ ವಸತಿಗಳನ್ನು ಕಂಡುಕೊಂಡ ಮತ್ತು ಆನಂತರದ ನವಶಿಲಾಯುಗದ ಹಂತದಲ್ಲಿ ಬೇಸಾಯದ ಆರಂಭದೊಂದಿಗೆ ಶಾಶ್ವತವಾಗಿ ತಾನು ಉತ್ತಿ ಬಿತ್ತಿ ಬೆಳೆದು ಮಾಡುತ್ತಿದ್ದ ಭೂಮಿ-ಕಾಣಿಗಳಿಗೆ ಸಮೀಪವರ್ತಿಯಾಗಿ ನೆಲೆನಿಂತ ಪರಿಣಾಮವಾಗಿ ಗ್ರಾಮೀಣ ಸಮಾಜಗಳು ತಲೆಯೆತ್ತಿದ ಪ್ರಕ್ರಿಯೆಯನ್ನು ಆ ಕೃತಿ ಜಾಗತಿಕ ಭಿತ್ತಿಯಲ್ಲಿ ಚಿತ್ರಿಸಿದ್ದರೆ ಪ್ರಸ್ತುತ ಸಿಂಧೂ ನಾಗರಿಕತೆ ಎಂಬ ಪುಸ್ತಕ ಭಾರತೀಯ ಉಪಖಂಡಕ್ಕೆ ಸಂಬಂಧಿಸಿದಂತೆ ಆ ಕಥನದ ಮುಂದುವರಿಕೆಯಾಗಿದೆ.

ಒಂದು ನಾಗರಿಕತೆ ಉಗಮಿಸಿ ವಿಕಸಿಸುವ ಪ್ರಕ್ರಿಯೆ ತುಂಬ ಕುತೂಹಲಕಾರಿಯಾದುದು. ಸಿಂಧೂ ನದಿಬಯಲಿನ ಅಥವಾ ಸಿಂಧೂ ಕೊಳ್ಳದ ನಾಗರಿಕತೆ ಎಂಬುದಾಗಿ ಹಾಗೂ ಈಚೆಗೆ ಪ್ರಾಕ್ತನಶಾಸ್ತ್ರ ಅಧ್ಯಯನ ವರ್ತುಲಗಳಲ್ಲಿ ಹರಪ್ಪ ಸಂಸ್ಕೃತಿ ಎಂದೋ ಅಥವ ಹರಪ್ಪನ್ ನಾಗರಿಕತೆ ಎಂದೋ ಕರೆಯಲ್ಪಡುವ ಒಂದು ಸಂಕೀರ್ಣ ಸಾಮಾಜಿಕ ಅಭಿವ್ಯಕ್ತಿಯ ಕುರಿತು ಕಳೆದ ಶತಮಾನದ ಇಪ್ಪತ್ತರ ದಶಕದಿಂದ ಮೊದಲ್ಗೊಂಡು ಅಧ್ಯಯನ, ಉತ್ಖನನ, ಸಂಶೋಧನೆ, ಪ್ರಕಟನೆ ನಡೆಯುತ್ತಲೇ ಬಂದಿವೆ. ಸಿಂಧೂ ನಾಗರಿಕತೆಯು ಒಂದು ಹಂತದಿಂದ ಮೊದಲ್ಗೊಂಡು ನಗರ-ಪಟ್ಟಣಗಳು ಮತ್ತು ಅವುಗಳಿಗೇ ವಿಶಿಷ್ಟವಾದ ಜೀವನಕ್ರಮಗಳ ಪ್ರಾರಂಭವನ್ನೂ ಪ್ರತಿನಿಧಿಸುತ್ತದೆ. ಆ ನಾಗರಿಕತೆಯ ಕುರಿತ ಅಧ್ಯಯನ ಪ್ರಾರಂಭವಾದ ನಂತರದ ಬಹು ದೀರ್ಘ ಕಾಲದ ವರೆಗೆ ಪ್ರಾಕ್ತನಶಾಸ್ತ್ರಜ್ಞರ ಗಮನ ಪ್ರಧಾನವಾಗಿ ಅದರ ಎರಡು ಸುಪ್ರಸಿದ್ಧ ನಗರನೆಲೆಗಳಾದ ಹರಪ್ಪ ಹಾಗೂ ಮೊಹೆಂಜೊದಾರೊಗಳ ಮೇಲೇ ಕೇಂದ್ರೀಕೃತವಾಗಿತ್ತು. ಆ ನೆಲೆಗಳಲ್ಲಿ ಅಪಾರ ಪ್ರಮಾಣದ ಹಾಗೂ ವೈವಿಧ್ಯಪೂರ್ಣವಾದ ಪ್ರಾಕ್ತನವಸ್ತುಗಳು, ಪ್ರಾಚ್ಯಾವಶೇಷಗಳು ಲಭ್ಯವಾದುದು ಇದಕ್ಕೆ ಒಂದು ಕಾರಣವಾಗಿದ್ದರೆ ಒಂದು ಸಂಸ್ಕೃತಿ ಅಥವಾ ನಾಗರಿಕತೆಯನ್ನು ಗ್ರಹಿಸುವ ಚಿಂತನೆ ಆಗ ಅಷ್ಟು ಪ್ರೌಢವಾಗಿರಲಿಲ್ಲ ಎನ್ನುವದು ಇನ್ನೊಂದು ಕಾರಣ. ಈಗ ಸಿಂಧೂ ನಾಗರಿಕತೆ ಎಂಬುದು ಅದರ ಪಕ್ವಾವಸ್ಥೆಯನ್ನು ಏಕಾಏಕಿ ತಲುಪಲಿಲ್ಲ, ಆ ಅವಸ್ಥೆ ಪ್ರತಿನಿಧಿಸುವ ಸ್ವರೂಪಕ್ಕೆ ತಲುಪುವ ಮುನ್ನ ಅದು ಹಲವು ರೂಪುಗೊಳ್ಳುವಿಕೆಯ ಹಂತಗಳನ್ನು (evolving stages) ದಾಟಿ ಬಂದಿತ್ತು ಎಂಬ ಹಾಗೂ ಅದರ ಸಮರ್ಪಕ ಗ್ರಹಿಕೆಗೆ ಅದರ ಪೂರ್ವಾಪರಗಳ ಅನುಸಂಧಾನ ಅಗತ್ಯವೆಂಬ ತಿಳುವಳಿಕೆಯಿಂದಾಗಿ ಈಗ ನಾವದನ್ನು ನೋಡುವ ಕ್ರಮವೇ ಭಿನ್ನವಾಗಿದೆ. ಸಿಂಧೂ ನಾಗರಿಕತೆ ಮತ್ತು ನಗರೀಕರಣಕ್ಕೆ ಪೂರ್ವಭಾವಿಯಾಗಿದ್ದ ನೂರಾರು ಕೃಷಿಪ್ರಧಾನ ಗ್ರಾಮೀಣ ನೆಲೆಗಳು ( Pre-Harappan and Early Harappan) ಪ್ರತಿನಿಧಿಸುವ ಒಂದರಿಂದೊಂದು ಪ್ರತ್ಯೇಕವೂ ವಿಭಿನ್ನವೂ ಆದ ಸಂಸ್ಕೃತಿಗಳ ಅಧ್ಯಯನ ಹಾಗೂ ಹರಪ್ಪ ನಗರೀಕರಣದ ಕೊನೆಕೊನೆಯ ಹಂತ ಹಾಗೂ ಅದರ ಅವನತಿಯ ನಂತರದ ಸಂಸ್ಕೃತಿಗಳ (Late Harappan and Post-Harappan) ಅಧ್ಯಯನ ಈಗ ಪಡೆದುಕೊಂಡ ಆದ್ಯತೆಯ ಒಂದು ನೋಟ ನಮಗೆ ಪ್ರಸ್ತುತ ಇರ್ಫಾನ್ ಹಬೀಬ್ ಅವರ ಈ ಪುಸ್ತಕದಲ್ಲಿ ದೊರೆಯುತ್ತದೆ. ಸಿಂಧೂ ಹಾಗೂ ಅದರ ಉಪನದಿಗಳ ಪ್ರದೇಶದಲ್ಲಿ ಹಾಗೂ ಅದರ ಅಂಚಿನ ಪ್ರದೇಶಗಳಲ್ಲಿನ ಆರಂಭಿಕ ಹಂತದ ಕಂಚು ಸಂಸ್ಕೃತಿಗಳ (Early Bronze Age Cultures) ಒಡಲೊಳಗಿಂದ ನಗರ ಕ್ರಾಂತಿಯೆಂಬುದೊಂದು ಸಂಭವಿಸಿದ ಪ್ರಕ್ರಿಯೆಯ ಹಿನ್ನೆಲೆಯನ್ನು ಈ ಕೃತಿಯ ಮೊದಲ ಅಧ್ಯಾಯದಲ್ಲಿ ಕಾಣುತ್ತೇವೆ. ಮಾನವ ಸಮುದಾಯಗಳ ಜೀವನಕ್ರಮ ನಾಗರಿಕ ಸ್ವರೂಪ ಪಡೆದುಕೊಂಡು ನಗರ ಸಮಾಜಗಳು ಉಗಮಿಸಿದ ಒಟ್ಟಾರೆ ಪ್ರಕ್ರಿಯೆಯನ್ನು ಒಂದು ವಿವರಣಾತ್ಮಕ ಚೌಕಟ್ಟಿನಲ್ಲಿಟ್ಟು ತಮ್ಮ The Man Makes Himself ಎಂಬ ಗ್ರಂಥದಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದ್ದವರು ವಿ. ಗೊರ್ಡನ್ ಚೈಲ್ಡ್ ಅವರು. ಸುಮಾರು ಕ್ರಿಸ್ತಶಕ ಪೂರ್ವದ ೩೫೦೦ರಿಂದ ೨೫೦೦ರ ವರೆಗಿನ ಒಂದು ಸಾವಿರ ವರ್ಷಗಳ ಅವಧಿಯಲ್ಲಿ ಪ್ರಾಚೀನ ಪಶ್ಚಿಮ ಏಷ್ಯದ ಮೆಸೊಪೊಟೆಮಿಯ ಅಥವಾ ಈಗಿನ ಇರಾಕ್ ನಿಂದ ದಕ್ಷಿಣ ಏಷ್ಯದ ಸಿಂಧೂ ನದಿಬಯಲಿನವರೆಗಿನ ಪ್ರದೇಶದಲ್ಲಿ ಹಾಗೂ ಇನ್ನೊಂದು ನಿಟ್ಟಿನಲ್ಲಿ ಉತ್ತರ ಆಫ್ರಿಕೆಯ ಈಜಿಪ್ಟ್ ನಲ್ಲಿ ಜರುಗಿದ ಈ ಸಂಕೀರ್ಣ ಪ್ರಕ್ರಿಯೆಯನ್ನು, ಒಟ್ಟಾರೆ ಮಾನವೇತಿಹಾಸದಲ್ಲಿ ಈ ಬೆಳವಣಿಗೆ ಉಂಟು ಮಾಡಿದ ದೂರಗಾಮಿ ಪರಿಣಾಮಗಳ ಹಿನ್ನೆಲೆಯಲ್ಲಿ, "ನಗರ ಕ್ರಾಂತಿ" ಎಂಬುದಾಗಿ ವ್ಯಾಖ್ಯಾನಿಸಿದ ಗೊರ್ಡನ್ ಚೈಲ್ಡ್ ಅವರ ಸ್ಥೂಲ ನಿರೂಪಣೆಯನ್ನನುಸರಿಸಿ ಮತ್ತು ಕಳೆದ ಹಲವು ದಶಕಗಳ ಅವಧಿಯಲ್ಲಿ ನಡೆದ ಪ್ರಾಕ್ತನ ಅಧ್ಯಯನಗಳ ಫಲಿತಗಳ ಬೆಳಕಿನಲ್ಲಿ ಈ ಅಧ್ಯಾಯ ವಿವರವಾಗಿ ಬಿಡಿಸಿಡುತ್ತದೆ. ಕೃಷಿಪ್ರಧಾನ ಸಮುದಾಯಗಳಿಂದ ನಗರ ಸಮಾಜವೊಂದು ಹೇಗೆ ಬೆಳೆಯಬಲ್ಲದೆಂಬುದನ್ನು ಕ್ರಿ.ಶ.ಪೂ.೪ನೇ ಸಹಸ್ರಮಾನದ ಆರಂಭದ ಹೊತ್ತಿಗೆ ಇಂದಿನ ಅಫಘಾನಿಸ್ತಾನದ ಹೆಲ್ಮಂಡ್ ನದಿ ಕಣಿವೆಯ ಮುಂಡಿಗಾಕ್, ಶಹರ್-ಇ- ಸೋಕ್ತ್ ಮತ್ತಿತರ ತಾಮ್ರಶಿಲಾಯುಗದ ನೆಲೆಗಳಲ್ಲಿನ ಬೆಳವಣಿಗೆ- ಬದಲಾವಣೆಗಳ ಉದಾಹರಣೆಯೊಂದಿಗೆ ತೀರ ಸಂಕ್ಷಿಪ್ತವಾಗಿ ಇಲ್ಲಿ ಚರ್ಚಿಸಲಾಗಿದೆಯಾದರೂ ಲೇಖಕರೇ ಗುರುತಿಸಿರುವಂತೆ ಹೆಲ್ಮಂಡ್ ಹಾಗೂ ಸಿಂಧೂ ನಾಗರಿಕತೆಗಳ ನಡುವೆ ನೇರ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಗಟ್ಟಿ ಪುರಾವೆಗಳಿಲ್ಲ.

ಹೀಗಾಗಿ ಆರಂಭಿಕ ಕೃಷಿಕ ಸಮುದಾಯಗಳ ಉದಯ, ಗ್ರಾಮೀಣ ಸಮಾಜಗಳ ಮಧ್ಯದಿಂದ ನಗರ ಸಮಾಜವೊಂದರ ಪ್ರಾದುರ್ಭಾವ ಇವುಗಳಿಗೆ ಸಂಬಂಧಿಸಿದಂತೆ ಬಲೂಚಿಸ್ತಾನದ ಬೆಟ್ಟ ಪ್ರದೇಶಗಳು,ಭಾರತ ಮತ್ತು ಪಾಕಿಸ್ತಾನಗಳ ಪಂಜಾಬ್ ಪ್ರಾಂತಗಳು, ಸಿಂಧ್ ಪ್ರಾಂತದ ಉತ್ತರ ಹಾಗೂ ದಕ್ಷಿಣ ಭಾಗಗಳು ಹಾಗೂ ರಾಜಸ್ತಾನದ ಉತ್ತರ ಭಾಗಗಳು ಮತ್ತು ಹರಿಯಾಣದ ಕೆಲ ಪ್ರದೇಶಗಳು ಇವೇ ಗಮನಾರ್ಹ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಸಿಂಧೂ ನದಿಬಯಲಿನ ಪ್ರದೇಶ ಮತ್ತು ಬಲೂಚಿಸ್ತಾನ ಇವುಗಳ ಗಡಿಭಾಗಗಳಲ್ಲಿದ್ದ ಆರಂಭಿಕ ಮಾನವ ವಸತಿ ನೆಲೆಗಳ ಕುರಿತಾದ ತಿಳುವಳಿಕೆಯಲ್ಲಿ ಮೂಲಭೂತ ಪ್ರಗತಿಯಾದದ್ದು ೨೦ನೇಶತಮಾನದ ಕೊನೆಯ ದಶಕಗಳಲ್ಲಿ ನಡೆದ ಮೆಹರಗಢ್ ಮತ್ತಿತರ ನೆಲೆಗಳ ಉತ್ಖನನಗಳಿಂದ ಎಂಬುದು ನಿಜವಾದರೂ ಸಿಂಧೂ ಪರಿಸರದ ಉತ್ತರ ಭಾಗಗಳಲ್ಲಿ ನಮಗೆ ಕಂಡು ಬರುವ ಅತ್ಯಂತ ಆರಂಭಿಕ ಮಾನವವಸತಿನೆಲೆಗಳು ( ಉದಾ: ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ತಕ್ಷಿಲಾ ಬಳಿ ಇರುವ ಸರೈ ಖೋಲಾ ಇತ್ಯಾದಿ) ಮೆಹರಗಢ್ ಗಿಂತ ಬಹಳ ಕಾಲಾನಂತರದವು. ಹೀಗಾಗಿ ಪ್ರೊ.ಹಬೀಬ್ ಅವರು ಆರಂಭಿಕ ಸಿಂಧೂ ಸಂಸ್ಕೃತಿಗಳನ್ನು ಇಂಡೋ-ಇರಾನಿಯನ್ ಗಡಿಯ ಭೌಗೋಲಿಕ ಹಾಗೂ ಪ್ರಾಗೈತಿಹಾಸಿಕ-ಸಾಂಸ್ಕೃತಿಕ ಸಂದರ್ಭದಿಂದ ಪ್ರತ್ಯೇಕವಾಗಿ ಸ್ವತಂತ್ರವಾಗಿಯೇ ಚರ್ಚಿಸಿದ್ದಾರೆ. Ceramic tradition (ಗಡಿಗೆ- ಮಡಿಕೆಗಳ ತಯಾರಿಕೆಯ ವಿಧಾನವೈಶಿಷ್ಟ್ಯ)ಗಳನ್ನನುಸರಿಸಿ ೧) ಕೋಟ್ ದಿಜಿ ಸಂಸ್ಕೃತಿ ( ಈಗಿನ ಪಾಕಿಸ್ತಾನದ ನಾರ್ಥ್ ವೆಸ್ಟರ್ನ್ ಫ್ರಾಂಟಿಯರ್ ಪ್ರೊವಿನ್ಸ್ [NWFP] ಎಂದು ಕರೆಯಲ್ಪಡುವ ಪ್ರದೇಶ, ಅದೇ ಪಾಕಿಸ್ತಾನದ ಪಂಜಾಬ್ ಪ್ರದೇಶ ಹಾಗೂ ಸಿಂಧ್ ಪ್ರಾಂತದ ಉತ್ತರದ ಭಾಗಗಳನ್ನೊಳಗೊಂಡ ವಿಶಾಲ ಪ್ರದೇಶದ ಉದ್ದಗಲಕ್ಕೆ ಹರಡಿದಂಥದು), ೨) ಸೋಥಿ-ಸಿಸ್ವಾಲ್ ಸಂಸ್ಕೃತಿ,( ಭಾರತದ ಪಂಜಾಬ್, ಹರಿಯಾಣ ಹಾಗೂ ರಾಜಸ್ಥಾನದ ಉತ್ತರ ಭಾಗಗಳಲ್ಲಿದ್ದ ವಸತಿನೆಲೆಗಳಿಂದ ಪ್ರತಿನಿಧಿತವಾದಂಥದು), ಹಾಗೂ ೩) ಆಮ್ರಿ-ನಾಲ್ ಸಂಸ್ಕೃತಿ ( ಬಲೂಚಿಸ್ತಾನ್, ಸಿಂಧ್ ನ ಮಧ್ಯಭಾಗ ಹಾಗೂ ದಕ್ಷಿಣದ ಭಾಗಗಳಿಂದ ಭಾರತದ ಗುಜರಾತನಲ್ಲೂ ಹರಡಿದಂಥದು)ಎಂಬ ಮೂರು ಆರಂಭಿಕ ಸಿಂಧೂ ಸಂಸ್ಕೃತಿ ನೆಲೆಗಳ ವಿವರಗಳೊಂದಿಗೆ ಈ ಕಥನ ಪ್ರಾರಂಭವಾಗುತ್ತದೆ. ಈ ಆರಂಭಿಕ ಸಂಸ್ಕೃತಿಗಳ ಕಾಲಾನುಕ್ರಮದ ಕುರಿತು ಇತ್ತೀಚಿನ ದಶಕಗಳಲ್ಲಿ ಗಮನಾರ್ಹ ಪುನರ್ವಿಮರ್ಶೆ ನಡೆದಿದೆ. ಈ ಮೂರೂ ಆರಂಭಿಕ ಸಂಸ್ಕೃತಿಗಳ ಕಾಲಮಾನವನ್ನು ಕ್ರಿ.ಶ.ಪೂ ೩೨೦೦-೨೬೦೦ಎಂದು ಅಭಿಪ್ರಾಯ ಪಡುವ ಲೇಖಕರು ಈ ಸಂಸ್ಕೃತಿಗಳ ಕುಂಬಾರಿಕೆ ವಿಧಾನಗಳ ಭಿನ್ನತೆಗಳ ಹೊರತಾಗಿ ಅವು ಹಂಚಿಕೊಂಡಿದ್ದ ಸಾಮಾನ್ಯ ಲಕ್ಷಣಗಳ -ಉದಾ: ಬೇಸಾಯದಲ್ಲಿ ಅವರು ಸಾಧಿಸಿದ ಮುನ್ನಡೆ, (ಬಂಡಿ ಹಾಗೂ ನೇಗಿಲನ್ನು) ಎಳೆಯುವ ಪ್ರಾಣಿಗಳಾಗಿ ಎತ್ತುಗಳ ಬಳಕೆ, ಬೆಳೆಯುತ್ತಿದ್ದ ಬೆಳೆಗಳು,ಕರಕುಶಲ ಉತ್ಪಾದನೆ, ಬೆಲೆಬಾಳುವ ಲೋಹಗಳಿಂದ ಆಭರಣ ತಯಾರಿಕೆ, ಕರ್ನೇಲಿಯನ್, ಅಗೇಟ್, ಲ್ಯಾಪಿಸ್ ಲಝಲಿ, ಸ್ಟೀಟೈಟ್ ಮುಂತಾದವುಗಳನ್ನು ಬಳಸಿ ಮಣಿಗಳ ತಯಾರಿಕೆ, ಕಲೆಯ ಕ್ಷೇತ್ರದಲ್ಲಿ ದಂತಗಳಿಂದ ಮಾಡಿದ ಪದಕಗಳು ಮಾನವಾಕೃತಿಗಳು ಇತ್ಯಾದಿಗಳು ಪ್ರತಿಫಲಿಸುವ ಅವರ ಕಲಾಸಕ್ತಿ, ಪ್ರಧಾನ ಕಟ್ಟಡ ಸಾಮಗ್ರಿಯಾಗಿ ಮಣ್ಣಿನ ಇಟ್ಟಿಗೆಗಳ ಬಳಕೆ, ಧಾರ್ಮಿಕ ನಂಬುಗೆಗಳ ಅಭಿವ್ಯಕ್ತಿ ಎನ್ನಬಹುದಾದ ಶವಸಂಸ್ಕಾರಪದ್ಧತಿಯ ಪ್ರಭೇದಗಳು,ಮಡಕೆಗಳ ಮೇಲಿನ ಅಲಂಕರಣ, ಚಿಕ್ಕ ಬೊಂಬೆಗಳಲ್ಲಿ ಸೂಚಿತವಾಗುವ ಅವರ ನಂಬಿಕೆಗಳು ಹಾಗೂ ಆ ಹಂತದಲ್ಲಿ ಬರವಣಿಗೆ ಇನ್ನೂ ಗೈರುಹಾಜರಾಗಿರುವದೇ ಮೊದಲಾದವುಗಳ-ವಿವರಗಳನ್ನು ನಿರೂಪಿಸಿದ್ದಾರೆ.

ಸಿಂಧೂ ನಾಗರಿಕತೆಯ ಭೌಗೋಳಿಕ ವ್ಯಾಪ್ತಿ ತುಂಬ ವಿಶಾಲವಾದುದು.ಅದು ಸಿಂಧೂ ನದಿವ್ಯವಸ್ಥೆಯ ಪ್ರದೇಶಕ್ಕೆ ಸೀಮಿತಗೊಂಡು ನಿಲ್ಲದೇ ಅದರಾಚೆ ಕೂಡ ವಿಸ್ತರಿಸಿತ್ತು ಎಂಬ ಕಾರಣದ ಹಿನ್ನೆಲೆಯಲ್ಲಿಯೇ ಅದನ್ನು ಸಿಂಧೂ ನಾಗರಿಕತೆ ಎಂಬುದಕ್ಕಿಂತ ಹೆಚ್ಚಾಗಿ ಅದರ ಪ್ರೌಢಾವಸ್ಥೆಯ ಪ್ರಾತಿನಿಧಿಕ ನೆಲೆಯೊಂದರ ಹೆಸರಿನಲ್ಲೇ ಈಗ "ಹರಪ್ಪನ್ ಸಂಸ್ಕೃತಿ ಅಥವ ನಾಗರಿಕತೆ" ಎಂದು ಕರೆಯಲಾಗುತ್ತಿದೆ. ಆ ಸಂಸ್ಕೃತಿಯ ಆರಂಭಿಕ ನೆಲೆಗಳು ದಕ್ಷಿಣದಲ್ಲಿ ಸಿಂಧೂ ನದಿಮುಖಜ ಭೂಮಿ, ಪೂರ್ವಾಭಿಮುಖವಾಗಿ ಸೌರಾಷ್ಟ್ರ, ವಾಯವ್ಯದಲ್ಲಿ ಸಿಂಧೂನದಿಕಣಿವೆಯ ಮೇಲ್ಭಾಗ, ಪಶ್ಚಿಮ ಪಂಜಾಬ್ ,ಆಗ್ನೇಯದಲ್ಲಿ ಹರಪ್ಪವನ್ನು ದಾಟಿಕೊಂಡು ಪಾಕಿಸ್ತಾನದ ಬಹಾವಲಪುರ್ ಪ್ರದೇಶ ಮತ್ತು ಈಚೆ ಭಾರತದೊಳಗೆ ಪೂರ್ವ ಪಂಜಾಬ್ ಹಾಗೂ ಹರಿಯಾಣದಲ್ಲೆಲ್ಲ ಹರಡಿದ್ದವು. ಆರಂಭಿಕ ಹರಪ್ಪನ್ ಸಂಸ್ಕೃತಿಯ ಪ್ರದೇಶದ ವ್ಯಾಪ್ತಿ ಹೆಚ್ಚೂ ಕಡಿಮೆ ನಂತರದ ಪ್ರೌಢಾವಸ್ಥೆಯ ಹರಪ್ಪನ್ ಸಂಸ್ಕೃತಿ ಪ್ರದೇಶದ ವ್ಯಾಪ್ತಿಗೆ ಸರಿಸಮವೇ ಆಗಿತ್ತು. ಒಂದು ಅಂದಾಜಿನ ಪ್ರಕಾರ ಈ ನಾಗರಿಕತೆ ಹರಡಿಹೋಗಿದ್ದ ಒಟ್ಟು ಪ್ರದೇಶದ ವಿಸ್ತಾರ ಸುಮಾರು ೭ ಲಕ್ಷ ಚದರ ಕಿಲೋಮೀಟರ್. ಅ ವಿಸ್ತಾರದಲ್ಲಿ ಹರಡಿದ ಹಲವಾರು ನೆಲೆಗಳು ಉತ್ಖನನಕ್ಕೆ ಒಳಪಟ್ಟಿವೆ. ಆದರೆ ಹೀಗೆ ಉತ್ಖನನಕ್ಕೆ ಒಳಗಾದ ನೆಲೆಗಳನ್ನು ಅಲ್ಲಿ ಬೆಳಕಿಗೆ ಬಂದ ಸಾಮಗ್ರಿಯನ್ನು ಎಲ್ಲ ಮಗ್ಗುಲಗಳಿಂದ ನೋಡಿ ವಿಶ್ಲೇಷಿಸುವ ಕೆಲಸ ಪೂರ್ಣ ಪ್ರಮಾಣದಲ್ಲಿ ಇನ್ನೂ ಆಗಬೇಕಿದೆ, ಅಲ್ಲಿಯ ಶೋಧಗಳ ವಿವರಗಳು ಇಡಿಯಾಗಿ ಪ್ರಕಾಶಿತಗೊಳ್ಳಬೇಕಿದೆ, ಅಲ್ಲಿ ನೆಲೆನಿಂತ ನಿವಾಸಿಗಳ ಬದುಕು ಹಾಗೂ ಆರ್ಥಿಕ ರಚನೆಯ ಲಕ್ಷಣಗಳ ಕುರಿತ ನಮ್ಮ ತಿಳುವಳಿಕೆ ಸಮಗ್ರವೆಂದಾಗಲಿ ಸಂದೇಹಾತೀತವೆಂದಾಗಲಿ ಇನ್ನೂ ಹೇಳಲಾಗದು. ಹಲವಾರು ವಿಷಯಗಳು ಇನ್ನೂ ಸಮಸ್ಯಾತ್ಮಕವಾಗೇ ಇವೆ. ಅಂಥವುಗಳ ಪೈಕಿ ಒಂದು ಸಮಸ್ಯೆಯ ಕುರಿತು ನಮ್ಮಗಮನ ಸೆಳೆಯುತ್ತ ಲೇಖಕರು ಹೇಳುವಂತೆ ಬಹುತೇಕ ಏಕಕಾಲದಲ್ಲಿ ಸಿಂಧೂ ಸಂಸ್ಕೃತಿ ದೊಡ್ಡ ಪ್ರದೇಶದಲ್ಲಿ ಹರಡಿರುವದು ಮತ್ತು ಅದರ ಸಾಂಸ್ಕೃತಿಕ ಲಕ್ಷಣಗಳ ಎದ್ದು ಕಾಣುವ ಏಕರೂಪತೆ ಈ ನಾಗರಿಕತೆ ತನಗೆ ತಾನೇ ಬೇರೆ ಬೇರೆ ಪ್ರದೇಶಗಳಲ್ಲಿ ಹುಟ್ಟಲಿಲ್ಲ ಬದಲಾಗಿ ಒಂದು ಸಣ್ಣ ಕೇಂದ್ರ ಪ್ರದೇಶದಲ್ಲಿ ಹುಟ್ಟಿ ಬೇರೆ ಕಡೆ ಹರಡಿತು ಎಂದು ತೋರಿಸುತ್ತದೆ. ಈ ಕೇಂದ್ರ ಪ್ರದೇಶ ಯಾವುದೆಂದು ನಿರ್ಧರಿಸಲು ಇಂದು ಸಾಧ್ಯವಾಗುತ್ತಿಲ್ಲ. ಹರಪ್ಪ ಮತ್ತು ನೌಶಾರೊಗಳಲ್ಲಿ ಹರಪ್ಪ ಪೂರ್ವದ ಸ್ಥಾನಿಕ ಸಂಸ್ಕೃತಿಗಳಲ್ಲೊಂದಾದ ಕೋಟ್ ದಿಜಿ ಮತ್ತು ನಂತರದ ಹರಪ್ಪನ್ ಸಂಸ್ಕೃತಿಗಳು ಒಂದರಮೇಲೊಂದು ಇದ್ದ ಹಿನ್ನೆಲೆಯಲ್ಲಿ ಸಿಂಧೂ ಸಂಸ್ಕೃತಿಯ ಕೇಂದ್ರವು ಬಹುಶ: ಕೋಟ್ ದಿಜಿ ಸಾಂಸ್ಕೃತಿಕ ನೆಲೆಯು ಸ್ಥಿತವಾಗಿರುವ ಪಂಜಾಬಿನ ಪ್ರದೇಶ ಅಥವಾ ಸಿಂಧ್ ಪ್ರದೇಶದ ಉತ್ತರ ಹಾಗೂ ಕೇಂದ್ರ ಭಾಗಗಳಲ್ಲಿಯೇ ಇದ್ದಿರಬೇಕು. (ಕನ್ನಡ ಅನುವಾದದಲ್ಲಿ ಇದು ಕೊಂಚ ಅಸಮಂಜಸವಾಗಿ "ಪಂಜಾಬ್ ಮತ್ತು ಉತ್ತರ ಹಾಗೂ ಕೇಂದ್ರ ಬಲೂಚಿಸ್ಥಾನದ ಕೋಟ್ ದಿಜಿ ಸಂಸ್ಕೃತಿಯ ಪ್ರದೇಶ ಎಂದು ಉಲ್ಲೇಖಿತವಾಗಿದೆ)") ಇದು ಈ ಕುರಿತು ಇರುವ ಒಂದು ವಾದ ಮಾತ್ರ. ಬೇರೆ ವಾದಗಳೂ ಸಾಧ್ಯ. ಅದ್ದರಿಂದ ಇರ್ಫಾನ್ ಹಬೀಬ್ ಅವರು ಆ ವಾದವನ್ನು ಬಹಳ ಹಿಗ್ಗಿಸುವದಿಲ್ಲ. ಬದಲಾಗಿ ಅದರ ಉಗಮ ಪ್ರದೇಶ ಯಾವುದೇ ಆಗಿರಲಿ ಸಿಂಧೂ ಸಂಸ್ಕೃತಿಯ ಹರಡುವಿಕೆ ಮಾತ್ರ ರಾಜಕೀಯ ವಿಸ್ತರಣೆಯಿಂದ ಮಾತ್ರ ಸಾಧ್ಯವಾಗಿರಬಹುದು ಎನ್ನುತ್ತಾರೆ. ಆದರೆ ಇಂದಿಗೂ ಹರಪ್ಪನ್ ನಾಗರಿಕತೆಯ ರಾಜಕೀಯ ವ್ಯವಸ್ಥೆಯ ಕುರಿತು ನಿಖರವಾಗಿ ಏನನ್ನೂ ಹೇಳಲಾಗಿಲ್ಲ.

ಎರಡನೆಯದಾಗಿ ಸಿಂಧೂ ಸಂಸ್ಕೃತಿಗೆ ಮೊದಲೇ ಇದ್ದ ಮೆಸೊಪೊಟೆಮಿಯದ (ಇರಾಕ್) ನಾಗರಿಕತೆಯಲ್ಲಿ ರಾಜ್ಯ, ಮುದ್ರೆಗಳು, ಬರವಣಿಗೆ, ಸುಟ್ಟ ಇಟ್ಟಿಗೆ,ಎತ್ತುಗಳ ಬಳಕೆಯೇ ಮೊದಲಾದ ಹಲವು ಅಂಶಗಳು ಆಗಲೇ ಇದ್ದು ಅವೆಲ್ಲ ಸಿಂಧೂ ನಾಗರಿಕತೆಯಲ್ಲಿಯೂ ಮೇಳೈಸಿದ್ದು ಹೇಗೆ ಎಂಬ ಚರ್ಚೆಯ ಸಂದರ್ಭದಲ್ಲಿ ಈ ಪ್ರಭಾವ ಮೆಸೊಪೊಟೆಮಿಯದಿಂದ ಬಂದಿರುವ ಸಾಧ್ಯತೆಯ ಕುರಿತು ಎತ್ತಲಾಗಿರುವ ಪ್ರಶ್ನೆಯನ್ನು ಇಲ್ಲಿ ಲೇಖಕರು ನಿರಾಕರಿಸಿದ್ದು ಗಮನಾರ್ಹ. ಮೆಸಪೋಟೆಮಿಯದ ಪರೋಕ್ಷ ಪ್ರಭಾವವನ್ನು ಅವರು ಅಲ್ಲಗಳೆಯುವದಿಲ್ಲವಾದರೂ ಸಿಂಧೂ ಸಂಸ್ಕೃತಿಯ ಲಕ್ಷಣಗಳ ಪ್ರಮುಖ ಅಂಶಗಳು ರೂಪುಗೊಂಡುದರ ಆಕರ ಸ್ಥಳೀಯ ಮೂಲದ್ದೇ ಆಗಿತ್ತು ಎನ್ನುತ್ತಾರೆ. ಬಹುಪಾಲು ಮೊದಲಿನ ಎಲ್ಲ ವಿದ್ವಾಂಸರ ಅಭಿಪ್ರಾಯವೂ ಇದೇ ಆಗಿರುವದು ನಮಗೆ ಕಂಡು ಬರುತ್ತದೆ. ಉದಾಹರಣೆಗೆ ವಿ. ಗೊರ್ಡನ್ ಚೈಲ್ಡ್ ಅವರು New Light on the Most Ancient East, (4th edition, 1952) ನಲ್ಲಿ ಬರೆದ ಈ ಮಾತುಗಳು:

"India confronts Egypt and Babylonia in the 3rd millennium with a thoroughly individual and independent civilization of her own, technically the peer of the rest. And plainly it is deeply rooted in Indian soil. The Indian civilization represents a very perfect adjustment of human life to a specific environment. And it has endured. It is already specifically Indian and forms the basis of modern Indian culture."

ಭಾರತದಲ್ಲಿ ನಾವು ಇಂದಿಗೂ ಕಾಣುವ ಎತ್ತಿನ ಬಂಡಿಗಳು, ಒಂಟಿ ಎತ್ತಿನಿಂದ ಎಳೆಯಲ್ಪಡುವ "ಎಕ್ಕಾ" ಗಾಡಿಗಳು ನಾವೆ ಅಥವಾ ದೋಣಿಗಳು ಅವುಗಳ ಆ ಅಂದಿನ ಪುರಾತನ ರೂಪಗಳಿಂದ ಬಹಳ ಭಿನ್ನವೇನೂ ಆಗಿಲ್ಲ. ಹರಪ್ಪನ್ ಸಂಸ್ಕೃತಿ ನೆಲೆಯ ಸುಡಾವೆ ಮಣ್ಣಿನ, ಶಿಲೆಯ(ಲೈಮ್ ಸ್ಟೋನ್) ಹಾಗೂ ಕಂಚಿನ ಶಿಲ್ಪಗಳಲ್ಲಿ ಮತ್ತು ಮುದ್ರೆಗಳ ಮೇಲಿನ ಚಿತ್ರಗಳಲ್ಲಿ ಚಿತ್ರಿತವಾಗಿರುವ ಆಕೃತಿಗಳಲ್ಲಿ ಕಾಣುವ ಕೈಬಳೆಗಳು ಮೂಗುತಿಯಂಥ ಆಭರಣಗಳ ಕುರಿತ ವ್ಯಾಮೋಹ ಭಾರತಕ್ಕೇ ವಿಶಿಷ್ಟವಾದುದು.ನಂತರದ ಕಾಲದ ಭಾರತೀಯ ಸಮಾಜದಲ್ಲಿ ಕಾಣುವ ಧಾರ್ಮಿಕ ಸ್ವರೂಪದ ಮೂರ್ತಕಲ್ಪನೆಗಳು, ನಂಬಿಕೆ-ರಿವಾಜುಗಳ ಆರಂಭಿಕ ರೂಪಗಳು ದೊರೆಯುವದು ಕೂಡ ಸಿಂಧು ಸಂಸ್ಕೃತಿ ನೆಲೆಗಳ ಪ್ರಾಕ್ತನಸಾಮಗ್ರಿಯಲ್ಲೇ. ಮಿಗಿಲಾಗಿ, ಇರ್ಫಾನ್ ಹಬೀಬ್ ಅವರು ಹೇಳುವಂತೆ ಸಿಂಧೂ ಕಣಿವೆ ಮತ್ತು ಮೆಸೊಪೊಟೆಮಿಯ ಪ್ರಾಂತಗಳ ನಡುವೆ,(ಗ್ರೆಗೊರಿ ಪೊಷೆಲ್ ಅವರ ಕೋಷ್ಟಕವನ್ನಾಧರಿಸಿ ಸಿಂಧೂ ನಾಗರಿಕತೆಯ ಉಗಮಕಾಲವೆಂದು ಭಾವಿಸಲಾಗಿರುವ) ಕ್ರಿ.ಶ.ಪೂ. ೨೬೦೦ಕ್ಕಿಂತ ಮುಂಚಿನ ಅವಧಿಯಲ್ಲಿ ಸಂಬಂಧಗಳಿರುವ ಪುರಾವೆ ಇಲ್ಲ. ಹಾಗೆಯೇ ಸಿಂಧೂ ಲಿಪಿ ಮತ್ತು ಇರಾಕ್ ಲಿಪಿಗಳ ನಡುವೆ ಸಾಮ್ಯದ ಲಕ್ಷಣಗಳೂ ಇಲ್ಲ..

ಭಾರತದ ಜನ ಇತಿಹಾಸದ ಈ ಸಂಪುಟ ಸರಣಿಯನ್ನು ಆಯೋಜಿಸಿರುವ ಆಲಿಗಢ್ ಇತಿಹಾಸಕಾರರ ಸಮಾಜವು ಚರಿತ್ರೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಬೆಳೆಸುವ ಹಾಗೂ ಸಂಕುಚಿತ ಮತ್ತು ಮತೀಯ ನಿರೂಪಣೆಗಳನ್ನು ತಡೆಗಟ್ಟುವ ಉದ್ದೇಶಕ್ಕೆ ಸಮರ್ಪಿತ ಎಂದು ಘೋಷಿಸಿಕೊಂಡಿದೆ.ಭಾರತದ ಚರಿತ್ರಲೇಖನದಲ್ಲಿ ಭಾಷಿಕ, ಮತೀಯ ಹಾಗೂ ಪ್ರಾದೇಶಿಕ ಸ್ವರೂಪದ ಸಂಕುಚಿತ ಉದ್ದೇಶಗಳು ಬೇರೆ ಬೇರೆ ರೂಪದಲ್ಲಿ ಬೆಳೆದುಕೊಂಡು ಬಂದಿವೆ. ವರ್ತಮಾನದ ಸಾಮಾಜಿಕ, ರಾಜಕೀಯ ಸ್ವಾಸ್ಥ್ಯವನ್ನು ಬಹುವಾಗಿ ಕದಡಿದ ಪ್ರವೃತ್ತಿಗಳಲ್ಲಿ ಚರಿತ್ರೆಯ ಕೋಮುನೆಲೆಯ ನಿರೂಪಣೆ ಮುಖ್ಯವಾದುದು. ವಸಾಹತು ಆಡಳಿತಗಾರರು, ವಸಾಹತು ಆಳ್ವಿಕೆಯ ಮುಂದುವರಿಕೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹುಟ್ಟು ಹಾಕಿದ ಭಾರತೀಯ ಚರಿತ್ರೆಯ ಕೋಮುವಾದಿ ಗ್ರಹಿಕೆಯ ಚೌಕಟ್ಟು ಈಗಲೂ ಮುಂದುವರಿದಿದ್ದು ಅಂಥ ಪ್ರವೃತ್ತಿಗಳು ಕೆಲವೊಮ್ಮೆ ಇತಿಹಾಸ ಸಂಶೋಧನೆ ಹಾಗೂ ಬರವಣಿಗೆಯ ನೀತಿ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ವರ್ತಮಾನದ ರಾಜಕೀಯ ಚದುರಂಗದ ಆಡುಂಬೊಲವಾಗಿ ಕೂಡ ಮಾರ್ಪಟ್ಟ ಉದಾಹರಣೆಗಳಿವೆ. ಹಾಗೇ ವೃತ್ತಿಪರ ಇತಿಹಾಸಕಾರರು, ಪ್ರಾಕ್ತನಶಾಸ್ತ್ರಜ್ಞರೆಲ್ಲ ಸವ್ಯಸಾಚಿಗಳೇನಲ್ಲ ಎಂದಾಗಿದೆ. ಸಿಂಧೂ ನಾಗರಿಕತೆಯ ಅಧ್ಯಯನ ಕ್ಷೇತ್ರದಲ್ಲಿರುವ ಇಂಥ ಪ್ರವೃತ್ತಿಗಳ ಕೆಲವು ಉದಾಹರಣೆಗಳನ್ನು ಪ್ರೊ. ಹಬೀಬ್ ವಿಮರ್ಶಿಸಿದ್ದಾರೆ. ಅದರಲ್ಲಿ ಒಂದು: ಇತ್ತೀಚೆಗೆ ಈ ಈ ಸಂಸ್ಕೃತಿಗೆ ವೈದಿಕ ಬಣ್ಣ ಕೊಡುವ ರೀತಿಯಲ್ಲಿ ಈ ನಾಗರಿಕತೆಯನ್ನು ಸೂಚಿಸಲು "ಸರಸ್ವತಿ-ಸಿಂಧೂ ನಾಗರಿಕತೆ" ಎಂಬ ಶಬ್ದದ ಬಳಕೆ. (೧.೪). . ಹಬೀಬ್ ಅವರು ಸಿಂಧೂ ಜಲಾನಯನ ಪ್ರದೇಶವು ಕೆಲ ಋತುಗಳಲ್ಲಷ್ಟೇ ಹರಿಯುವ ಸಣ್ಣ ನದಿಯಾದ ಸರಸ್ವತಿ ಪ್ರದೇಶವನ್ನೂ ಒಳಗೊಳ್ಳುತ್ತದೆಯಾದರೂ ಈ ಎರಡಕ್ಕೂ ತಳಕು ಹಾಕಲು ಬಲವಾದ ಭೌಗೋಳಿಕ ಸಮರ್ಥನೆ ಇಲ್ಲವೆನ್ನುತ್ತಾರೆ. ಹಾಕ್ಡಾ-ಘಗ್ಗಡ್ (ಸರಸ್ವತಿಯು ಇದರ ಒಂದು ಉಪನದಿ) ಕಣಿವೆ ಅತ್ಯಂತ ಜನಸಮ್ಮರ್ದದಿಂದ ಕೂಡಿದ ಪ್ರದೇಶವಾಗಿತ್ತೆಂದೋ ಸಿಂಧೂ ನಾಗರಿಕತೆಯ ಕೇಂದ್ರ ವಲಯವಾಗಿತ್ತೆಂದೋ ಹೇಳಲು ವಾಸ್ತವ ಸಾಕ್ಷ್ಯಗಳಿಲ್ಲವೇಕೆಂದರೆ ಈಗ ಬತ್ತಿ ಹೋದ ಹಾಕ್ಡಾ, ಘಗ್ಗಡ್ ಮತ್ತು ಚೌತಾಂಗ್ ಗಳು ಅವು ಹರಿಯುತ್ತಿದ್ದ ಕಾಲದಲ್ಲೂ ಸಣ್ಣ ನದಿಗಳಾಗಿದ್ದು ಪ್ರವಾಹದಿಂದ ಮುಕ್ತವಾಗಿದ್ದ ಕಾರಣ ಮತ್ತು ನಂತರದ ಕೃಷಿ ಚಟುವಟಿಕೆಗಳ ಕಾರಣದಿಂದ ಅ ನದಿಪಾತ್ರಗಳ ಸಮೀಪ ಸಾಪೇಕ್ಷವಾಗಿ ಹೆಚ್ಚು ಜನವಸತಿಗಳಿದ್ದವು. ಆದರೆ ಕಾಲಾಂತರದಲ್ಲಿ ಆ ನದಿಗಳು ಬತ್ತಿದ ನಂತರ ಅಲ್ಲಿ ಕೃಷಿಯೂ ಕುಗ್ಗಿದ ಕಾರಣ ಅವು ವಾಸರಹಿತ ನೆಲೆ ಮಾತ್ರವಾಗಿ ಉಳಿದವು.

ಹಬೀಬ್ ಅವರು ಆಕ್ಷೇಪಾರ್ಹವೆಂಬುದಾಗಿ ತೋರಿಸುವ ಎರಡನೆಯ ಪ್ರಶ್ನೆ ಸಿಂಧೂ ಸಂಸ್ಕೃತಿ ಮತ್ತು ಋಗ್ವೇದಗಳ ಕುರಿತಾದದ್ದು. ೧೯೯೦ರ ದಶಕದಲ್ಲಿ ಸಿಂಧು ನಾಗರಿಕತೆಯು ಆರ್ಯರದು, ಅಷ್ಟೇ ಅಲ್ಲ, ಅದು ವೈದಿಕ ಯುಗದ್ದು ಅಥವಾ ವೇದಕಾಲಾನಂತರದ್ದು ಎಂದು ಗಟ್ಟಿಯಾಗಿ ಪ್ರತಿಪಾದಿಸುವಕ್ಕೆ ಮೊದಲಾಯಿತು ಕೆಲವು ವೃತ್ತಿನಿರತ ಪುರಾತತ್ವ ನಿಪುಣರು ತಾವು ಹಿಂದೆ ತೆಗೆದುಕೊಂಡ ನಿಲುವಿಗಿಂತ ಭಿನ್ನವಾದ ಈ ನಿಲುವನ್ನು ತಮ್ಮದಾಗಿಸಿಕೊಂಡರು ಎಂದು ಇಲ್ಲಿ ಹಬೀಬ್ ಅವರು ಹೇಳುವದು ಬಿ. ಬಿ. ಲಾಲ್ ಅವರ ಕುರಿತಾಗಿರಬಹುದು. (ಹರಪ್ಪನ್ ಸಂಸ್ಕೃತಿ ಋಗ್ವೇದಜನರ ಸೃಷ್ಟಿ ಎಂಬ ಕೆಲವು ಪುರಾತತ್ವವಿದರ ಯೋಚನೆಯ ಕುರಿತು ಬರೆಯುತ್ತ ಆರ್. ಎಸ್. ಶರ್ಮಾ ಅವರು ಇಂಥ ಪ್ರತಿಪಾದನೆಗಳನ್ನು ಕಾಲಾನುಕ್ರಮದ, ಭೌಗೋಲಿಕತೆಯ ಹಾಗೂ ಋಗ್ವೈದಿಕ ಮತ್ತು ಹರಪ್ಪಗಳ ಸಾಂಸ್ಕೃತಿಕ ಸಂದರ್ಭಗಳ ನೆಲೆಯಲ್ಲಿ ೧೯೭೮ರಲ್ಲಿ ಮನಮುಟ್ಟುವಂತೆ ನಿರಾಕರಿಸಿದ್ದ ಬಿ.ಬಿ. ಲಾಲ್ ಅವರು ತಾವು ವಿರೋಧ ವ್ಯಕ್ತ ಪಡಿಸಿದ್ದ ಪ್ರತಿಪಾದನೆಗಳನ್ನು ಹಾಗೂ ದೃಷ್ಟಿಕೋನವನ್ನು ೧೯೯೭ರಲ್ಲಿ ತಾವೇ ಅಪ್ಪಿಕೊಂಡ ಬಗ್ಗೆ ಹೇಳುತ್ತ ಲಾಲ್ ಅವರು ಹರಪ್ಪ ಮತ್ತು ವೈದಿಕ ಪಠ್ಯಗಳ ನಡುವಿನ ಕಾಲದ ಕಂದಕವನ್ನು ಒಪ್ಪದಿರುವ ಬಗ್ಗೆ, ಹರಪ್ಪ ಸಂಸ್ಕೃತಿಯಲ್ಲಿ ಕುದುರೆಯ ಇರುವನ್ನು ಸೂಚಿಸುವ ಬಗ್ಗೆ ಮತ್ತು ಹರಪ್ಪನ್ ಅವಶೇಷಗಳು ಹಾಗೂ ವೈದಿಕ ಪಠ್ಯಗಳು ಪ್ರತಿನಿಧಿಸುವ ಸಂಸ್ಕೃತಿಗಳ ನಡುವಿನ ಎದ್ದು ಕಾಣುವ ಭಿನ್ನತೆಗಳನ್ನು ನಿರಾಕರಿಸುವ ಬಗ್ಗೆ ತಮ್ಮ ಒಂದು ಉಪನ್ಯಾಸದಲ್ಲಿ ದೀರ್ಘವಾಗಿ ಚರ್ಚಿಸಿದ್ದಾರೆ. ಮುಖ್ಯವಾಗಿ ಹರಪ್ಪನ್ ಸಂಸ್ಕೃತಿಯ ಹೆಗ್ಗುರುತುಗಳು ಋಗ್ವೇದದಲ್ಲಾಗಲಿ ಋಗ್ವೇದಕಾಲೀನ ಸಂಸ್ಕೃತಿಯ ಸೂಚಕಗಳು ಹರಪ್ಪನ್ ಸಂಸ್ಕೃತಿಯಲ್ಲಾಗಲಿ ಇಲ್ಲ. ನಗರೀಕರಣ, ಕುಶಲಕರ್ಮಗಳು, ವಾಣಿಜ್ಯ ಹಾಗೂ ಬೃಹತ್ಪ್ರಮಾಣದ ಕಟ್ಟಡಗಳು ಹರಪ್ಪ ಸಂಸ್ಕೃತಿಯ ವಿಶಿಷ್ಟ ಲಕ್ಷಣಗಳಾಗಿದ್ದರೆ ಋಗ್ವೇದಿಕ ಸಂಸ್ಕೃತಿ ಗ್ರಾಮಪ್ರಧಾನ ಹಾಗೂ ಪಶುಸಂಗೋಪನೆಯದಾಗಿತ್ತು, ಕುದುರೆಗೆ ಋಗ್ವೇದದಲ್ಲಿ ಪ್ರಮುಖ ಪಾತ್ರವಿದ್ದರೆ ಪ್ರೌಢಾವಸ್ಥೆಯ ಹರಪ್ಪನ್ ಸಂಸ್ಕೃತಿಯಲ್ಲಿ ಅದಕ್ಕೆ ಸ್ಥಾನವಿರಲಿಲ್ಲ ಹಾಗೂ ಉಪಖಂಡದ ವಾಯವ್ಯ ಭಾಗದಲ್ಲಿದ್ದ ಕೆಲವು ಋಗ್ವೈದಿಕ ನದಿಗಳ ಹೆಸರುಗಳು ಇಂಡೋ-ಆರ್ಯೇತರ ಭಾಷೆಯಲ್ಲಿವೆ ಹಾಗೂ ಮುಂಡಾ, ದ್ರಾವಿಡ ಮತ್ತಿತರ ಇಂಡೊಆರ್ಯೇತರ ಭಾಷೆಗಳ ಶಬ್ದಗಳು ಋಗ್ವೇದದಲ್ಲಿವೆ ಎಂಬ ಹಿನ್ನೆಲೆಯಲ್ಲಿ ವೇದಕಾಲೀನರು ಕುಂಬಾರಿಕೆ ಮತ್ತು ಕೃಷಿಯ ಅಂಶಗಳನ್ನು ನಂತರದ ಹರಪ್ಪನ್ ಜನರಿಂದ (Later Harappans) ಕಲಿತರು ಇತ್ಯಾದಿ ಅಂಶಗಳನ್ನು ಅವರು ಚರ್ಚಿಸಿದ್ದಾರೆ. ಅವರ ಪ್ರಕಾರ ಪ್ರೌಢಾವಸ್ಥೆಯ ಹರಪ್ಪನ್ ಸಂಸ್ಕೃತಿಯ ಎದ್ದು ಕಾಣುವ ಲಕ್ಷಣಗಳು ಕ್ರಿ.ಪೂ. ೨೦೦೦ದ ಹೊತ್ತಿಗೆ ಕಣ್ಮರೆಯಾಗಿದ್ದವು ಹಾಗೂ ಉತ್ತರವೇದಕಾಲದಲ್ಲಿ ಗೈರು ಹಾಜರಾಗಿದ್ದವು. (ಸಿಂಧೂ ನಾಗರಿಕತೆ ವೈದಿಕ ಮೂಲದ್ದೆಂಬ ದುರ್ಬಲ ವಾದಸರಣಿಯ ಸಮಚಿತ್ತದ ವಿಮರ್ಶೆಗೆ ನೋಡಿ: Ram Sharan Sharma, "Was the Harappan Culture Vedic?" , Fourth Foundation Day Lecture of the Indian Council of Historical Research delivered on March 27, 2005, Journal of Interdisciplinary Studies in History and Archaeology Vol. 1, No. 2, pp. 135–144) ಋಗ್ವೇದ ಮತ್ತು ಸಿಂಧೂ ನಾಗರಿಕತೆಯ ಬಗೆಗೆ ನಮಗೆ ತಿಳಿದಿರುವದನ್ನು ಪರಸ್ಪರ ಪೂರಕವೆಂದು ಹೊಂದಿಸುವ ಪ್ರಯತ್ನಗಳ ತೊಂದರೆಗಳನ್ನು ಈ ಪುಸ್ತಕದಲ್ಲಿ ಇರ್ಫಾನ್ ಹಬೀಬ್ ಅವರು ಧಾರ್ಮಿಕ ನಂಬಿಕೆ- ಆಚರಣೆಗಳು, ಭಾಷಿಕ ಅಂಶಗಳು, ಕಾಲಾನುಕ್ರಮದ ಕುರಿತ ಸಾಕ್ಷ್ಯಗಳು, ಖಗೋಳ ವಿದ್ಯಮಾನಗಳು ಮುಂತಾದವುಗಳ ನೆಲೆಯಲ್ಲಿ ಮೇಲೆ ನಾವು ಆಗಲೇ ನೋಡಿದ ಪ್ರೊ.ಆರ್.ಎಸ್.ಶರ್ಮಾ ಅವರು ಎತ್ತಿದ ಪ್ರಶ್ನೆಗಳ ಸಮೇತ ಇತರ ವಿದ್ವಾಂಸರು ಎತ್ತಿದ ಪ್ರಶ್ನೆಗಳು ಹಾಗೂ ವ್ಯಕ್ತಗೊಳಿಸಿದ ಅನುಮಾನಗಳ ಹಿನ್ನೆಲೆಯಲ್ಲಿ ಎರಡನೆಯ ಅಧ್ಯಾಯದ ಟಿಪ್ಪಣಿ ೨.೨ರಲ್ಲಿ ವಿವೇಚಿಸಿದ್ದಾರೆ.




ಇರ್ಫಾನ್ ಹಬೀಬ್ ಅವರ ಈ ಕೃತಿ ಈ ವಿಷಯದ ಕುರಿತು ಈಗಾಗಲೇ ಪ್ರಕಟವಾದ ಹಲವಾರು ಉತ್ಕೃಷ್ಟ, ವಿದ್ವತ್ಪೂರ್ಣ ಬರಹಗಳಿಂದ ಮಾಹಿತಿಯನ್ನು ಕ್ರೋಢೀಕರಿಸಿ ಅದನ್ನು ವಿರೋಧಾಭಾಸಗಳಿಲ್ಲದ ಒಂದು ಸುಸಂಗತ ವಿವರಣಾತ್ಮಕ ಚೌಕಟ್ಟಿನಲ್ಲಿ ಇಟ್ಟು ಪ್ರಸ್ತುತ ಪಡಿಸಿದೆ. ಸಿಂಧೂ ಜಲಾನಯನ ಹಾಗೂ ಅದರ ಅಂಚಿನ ಪ್ರದೇಶಗಳ ಪ್ರಾರಂಭಿಕ ಕಂಚು ಸಂಸ್ಕೃತಿಗಳ ವಿವರಣೆ ಮೊದಲ ಅಧ್ಯಾಯದ ವಸ್ತುವಾಗಿದ್ದರೆ ಸಿಂಧೂ ನಾಗರಿಕತೆ ಎಂಬ ಎರಡನೆಯ ಅಧ್ಯಾಯದಲ್ಲಿ ಆ ಜನರ ಜೀವನದ ಹಲವಾರು ಆಯಾಮಗಳನ್ನು ಚಿತ್ರಿಸಲಾಗಿದೆ. ಈ ಎರಡನೆಯ ಅಧ್ಯಾಯವು ಚರಿತ್ರೆಯಲ್ಲಿ ಒಂದು ಮಟ್ಟದ ಆಸಕ್ತಿಯನ್ನು ಹೊಂದಿದ ಸಾಮಾನ್ಯರಿಗೂ, ಸ್ನಾತಕ, ಸ್ನಾತಕೋತ್ತರ ಮಟ್ಟದ ಚರಿತ್ರೆಯ ವಿದ್ಯಾರ್ಥಿಗಳಿಗೂ ಸಮಾನವಾಗಿಯೇ ಉಪಯುಕ್ತವಾಗಿದೆ. ಸಿಂಧೂ ಸಂಸ್ಕೃತಿಯ ವ್ಯಾಪ್ತಿ ಹಾಗೂ ಜನಸಂಖ್ಯೆ, ವ್ಯವಸಾಯವನ್ನೊಳಗೊಂಡ ಜೀವನೋಪಾಯಗಳು, ವಿವಿಧ ಕರಕುಶಲ ಉತ್ಪಾದನೆಗಳು, ನಗರ-ಪಟ್ಟಣಗಳು, ಮೊಹೆಂಜೊದಾರೋ, ಹರಪ್ಪ, ಕಾಲಿಬಂಗನ್, ಲೋಥಲ್ ನಂಥ ನೆಲೆಗಳು ಸೂಚಿಸುವಂತೆ ಅವುಗಳ ಯೋಜಿತ ಸ್ವರೂಪ, ವ್ಯಾಪಾರ-ವಾಣಿಜ್ಯ, ಸಂಸ್ಕೃತಿ, ಬರವಣಿಗೆ, ಕಲೆ, ಧರ್ಮ, ಜನ, ಸಮಾಜ, ರಾಜ್ಯ, ಹಾಗೂ ಅಂತಿಮವಾಗಿ ಸಿಂಧೂ ನಾಗರಿಕತೆಯ ಕೊನೆ ಈ ವೈವಿಧ್ಯಮಯ ವಿಷಯಗಳ ಕುರಿತಾದ ವಿವರಗಳನ್ನು ಸಾಂದ್ರವಾಗಿ ಹೇಳಲಾಗಿದೆ. ಮೂರನೆಯ ಅಧ್ಯಾಯದಲ್ಲಿ ಸಿಂಧೂ ನಾಗರಿಕತೆಯ ನಗರಗಳು ಕಣ್ಮರೆಯಾದ ನಂತರದ ಐನೂರು ವರ್ಷಗಳ ವರೆಗಿನ ಅವಧಿಯಲ್ಲಿ (ಕ್ರಿ..ಪೂ ೨೦೦೦-೧೫೦೦) ನಗರಗಳಲ್ಲದ ನೆಲೆಗಳನ್ನು ಪ್ರತಿನಿಧಿಸುವ ತಾಮ್ರಶಿಲಾ ಸಂಸ್ಕೃತಿ ( Chalcolithic cultures)ಗಳ ಒಂದು ವಿವರಣೆಯನ್ನು ಕಾಣುತ್ತೇವೆ. ಅಲ್ಲಿ ಈ ಸುಮಾರು ಐದು ನೂರು ವರ್ಷಗಳ ಅವಧಿಯಲ್ಲಿ ಆದ ಬದಲಾವಣೆಗಳ ಕುರಿತು ಹೇಳಲಾಗಿದೆ. ಒಂದು ನಿಟ್ಟಿನಲ್ಲಿ ರಾಜಸ್ತಾನದ ಬಣಾಸ್ ,ಮಧ್ಯಪ್ರದೇಶದ ಕಾಯಥಾ ,ಮತ್ತು ಮಹಾರಾಷ್ಟ್ರದ ಮಾಳ್ವ ಸಂಸ್ಕೃತಿಗಳು ಹಾಗೂ ಇನ್ನೊಂದು ನಿಟ್ಟಿನಲ್ಲಿ (ಸಿಂಧೂ ಜಲಾನಯನ ಮತ್ತು ಮೊದಲಿನ ಸಿಂಧೂ ನಾಗರಿಕತೆಯ ಕೇಂದ್ರ ಪ್ರದೇಶ ಇತ್ಯಾದಿ) ಸ್ವಾತ್ , ಝುಕಾರ್, ಬರ್ಜ್ಹೊಮ್ ಮೊದಲಾದ ಸಂಸ್ಕೃತಿಗಳ ಭೌತಿಕ ಸಾಮಗ್ರಿಗಳ ಅಭ್ಯಾಸವನ್ನಾಧರಿಸಿದ ಫಲಿತಾಂಶಗಳು ಯಾವ ಬದಲಾವಣೆಗಳನ್ನು ಸೂಚಿಸುತ್ತವೆಂಬುದನ್ನು ಸಂಗ್ರಹವಾಗಿ ಹೇಳಲಾಗಿದೆ. ಮುಖ್ಯವಾಗಿ ಈ ಅಧ್ಯಾಯ ಭಾಷಿಕ ನೆಲೆಯ ಬದಲಾವಣೆಗಳ ನಿರೂಪಣೆಯನ್ನೂ ಒಳಗೊಂಡಿದೆ (೩.೪, ಹಾಗೂ ಟಿಪ್ಪಣಿ ೩.೧).ವಿವಿಧ ಭಾಷಾ ಕುಟುಂಬಗಳಿಗೆ ಸೇರಿದ ಭಾಷೆಗಳ ಬೆಳವಣಿಗೆಯ ಕುರಿತ ವಿವರಗಳು ಇಲ್ಲಿವೆ. ಹಾಗೆಯೇ ಎರಡನೆಯ ಅಧ್ಯಾಯದಲ್ಲಿ ಒಂದು ಟಿಪ್ಪಣಿಯ ರೂಪದಲ್ಲಿ (೨.೧) ಸಿಂಧು ಲಿಪಿಯ ಕುರಿತಾದ ಚರ್ಚೆಯೂ ಆ ಕುರಿತ ಅಧ್ಯಯನಗಳ ಫಲಿತಗಳನ್ನು ನಮ್ಮ ಗಮನಕ್ಕೆ ತರುತ್ತದೆ.

ಸಾಮಾನ್ಯವಾಗಿ ಪುರಾತತ್ವವಿದರ ಬರವಣಿಗೆಗಳಲ್ಲಿ ಉತ್ಖನನಕಾಲದಲ್ಲಿ ಅನಾವರಣಗೊಂಡ ಪ್ರಾಕ್ತನಸಾಮಗ್ರಿಯನ್ನು ವಿವರಿಸುವ ಹಾಗೂ ವಿಶ್ಲೇಷಿಸುವ (ಸಾಮಾನ್ಯ ಆಸಕ್ತರ ಮಟ್ಟಿಗೆ ಬಹುಪಾಲು ತಾಂತ್ರಿಕವೂ ಶುಷ್ಕವೂ ಎನ್ನಿಸುವ) ಕಸರತ್ತು ಅಧಿಕವಾಗಿರುತ್ತದೆ. ಈ ಕೃತಿಯ ಮೊದಲ ಅಧ್ಯಾಯದಲ್ಲಿ ಅನಿವಾರ್ಯವಾಗಿ ಸ್ವಲ್ಪ ಕ್ಲಿಷ್ಟವೆನ್ನಿಸುವ ಪ್ರತಿಪಾದನೆಗಳು ಹಾಗೂ ಈ ಸ್ವರೂಪದ ವಿವರಣೆಗಳು ಇವೆ. ಅದಕ್ಕೆ ಹೊರತಾಗಿಯೂ ಅಲ್ಲಿ ಮತ್ತು ವಿಶೇಷವಾಗಿ ಎರಡನೆಯ ಅಧ್ಯಾಯದಲ್ಲಿ ಜನಜೀವನದ ವಿನ್ಯಾಸವನ್ನು ಅರ್ಥಪೂರ್ಣವಾಗಿ ನಮ್ಮ ಗ್ರಹಿಕೆಗೆ ದಕ್ಕುವ ರೀತಿಯಲ್ಲಿ ನಿರೂಪಿಸಲಾಗಿದೆ. ಇತಿಹಾಸದ ಬೇರೊಂದು ಘಟ್ಟಕ್ಕೆ ಸಂಬಂಧಿಸಿದಂತೆ ಸಮಾಜ, ಸಾಮಾಜಿಕ ಸಂಬಂಧಗಳು, ಆರ್ಥಿಕ ರಚನೆ, ಮೇಲ್ನೋಟಕ್ಕೆ ಚದುರಿದಂತೆ ತೋರುವ ಸಂಗತಿಗಳಲ್ಲಿ ಅಂತರ್ಗತವಾಗಿ ಇರುವ ಪಾರಸ್ಪರಿಕ ಸಂಬಂಧಗಳೆಲ್ಲದರ ಗ್ರಹಿಕೆ ಪ್ರೊ. ಹಬೀಬ್ ಅವರಿಗೆ ದತ್ತವಾಗಿರುವ ಪರಿಣಾಮವಾಗಿ ಅದನ್ನು ಹಾಗೆ ಚಿತ್ರಿಸುವದು ಅವರಿಗೆ ಸಾಧ್ಯವಾಗಿದೆ.. "There are enough nuggets of information in this book that a historian like Irfan Habib, far more than many archaeologists, is able to uncover.." ಎಂದು ಜಯಾ ಮೆನನ್ ಈ ಪುಸ್ತಕದ ಕುರಿತು ( The Book Review, vol.XXVIII, No.1) ಹೇಳಿದ್ದು ಅತಿಶಯವೆನ್ನಿಸುವದಿಲ್ಲ.ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ಅವುಗಳಲ್ಲಿ ಚರ್ಚಿಸಲಾದ ವಿಷಯಗಳ ಇನ್ನೂ ಹೆಚ್ಚಿನ ಪ್ರೌಢ ಅಧ್ಯಯನಗೈಯ್ಯಬೇಕೆನ್ನುವವರಿಗೆ ಅನುಕೂಲವಾಗುವಂತೆ ಮೌಲಿಕ ಪುಸ್ತಕಗಳ ವಿವರಣಾತ್ಮಕ ಟಿಪ್ಪಣಿಗಳನ್ನು ಒದಗಿಸಲಾಗಿದೆ. ಹಾಗೆಯೇ ಕೆಲವು ವಿಶದವಾದ ನಿರೂಪಣೆಯನ್ನು ಬಯಸುವ ವಿಷಯಗಳನ್ನು ಅಧ್ಯಾಯಗಳಲ್ಲಿ ಪಾಠದ ಮಧ್ಯೆ ಟಿಪ್ಪಣಿಸಂಖ್ಯೆಯಾಗಿ ಸೂಚಿಸಿ ಅಧ್ಯಾಯದ ಕೊನೆಯಲ್ಲಿ ಅಗತ್ಯ ವಿವರಗಳನ್ನು ಟಿಪ್ಪಣಿಯ ರೂಪದಲ್ಲಿ ನೀಡಲಾಗಿದೆ. ಶಾಬ್ದಿಕವಾದ ವಿವರಗಳನ್ನು ಗ್ರಹಿಸಲು ಪೂರಕವಾಗಿ ವಿವಿಧ ಹಂತಗಳಲ್ಲಿ ಸಿಂಧೂ ನಾಗರಿಕತೆಯ ವ್ಯಾಪ್ತಿ, ನಗರ ಯೋಜನೆ, ಹರಪ್ಪ ಮೊಹೆಂಜೊದಾರೊಗಳಂಥ ದೊಡ್ಡ ನಗರಗಳ ತಲವಿನ್ಯಾಸ ಹಾಗೂ ನಗರ ವಿನ್ಯಾಸ (site plan, lay out), ಉತ್ಖನನದ ಕುಣಿಗಳ ಸ್ತರವಿಂಗಡಣೆ, ಕೃಷಿ ಕ್ರಮಗಳು, ಬೆಳೆಗಳುವಿವಿಧ ಭಾಷೆಗಳು, ಲಿಪಿಗಳು ಪ್ರಚಲಿತವಿದ್ದ ಪ್ರದೇಶಗಳು ಹಾಗೂ ಸ್ಥಿತಿಗತಿಗಳನ್ನು ಸೂಚಿಸುವ ನಕಾಶಗಳು ಹಾಗೂ ಕೋಷ್ಟಕಗಳು , ಸಿಂಧೂ ನದಿಬಯಲಿನ ಹಾಗೂ ಅದರ ಹೊರಗಿನ ಸಾಂಸ್ಕೃತಿಕ ನೆಲೆಗಳ ಭೌತಿಕ ಸಾಮಗ್ರಿಗಳು, ಕಟ್ಟಡಗಳು, ಮುದ್ರೆಗಳು, ಆಯುಧೋಪಕರಣಗಳು, ಕಲಾತ್ಮಕ ವಸ್ತುಗಳು, ಬಾವಿ, ಅರಮನೆ, ವಿಶಾಲ ಈಜುಗೊಳ ಮುಂತಾದವುಗಳ ಚಿತ್ರ ಹಾಗೂ ರೇಖಾಚಿತ್ರಗಳು ಈ ಪುಸ್ತಕದ ಮೌಲ್ಯವನ್ನು, ಉಪಯುಕ್ತತೆಯನ್ನು ದ್ವಿಗುಣಗೊಳಿಸಿವೆ.

ಈ ಅನುವಾದ ಕೆಲ ಸಂದರ್ಭಗಳಲ್ಲಿ ಅಕ್ಷರಶ: ಅನುವಾದದ ಕ್ರಮವನ್ನನುಸರಿಸಿದೆ. ಕೆಲವೆಡೆ ಕೃತಿಗಳ, ಕರ್ತೃಗಳ, ಸ್ಥಳಗಳ ಹೆಸರುಗಳ, ಪ್ರಾಕ್ತನಶಾಸ್ತ್ರಕ್ಕೇ ವಿಶಿಷ್ಟವಾದ ಕೆಲವು ಶಬ್ದಗಳ ಉಲ್ಲೇಖ ಅಸಮಂಜಸವಾಗಿದ್ದು (ನನ್ನ ಗಮನಕ್ಕೆ ಬಂದ ಅಂಥ ಪ್ರಯೋಗಗಳನ್ನು ನಾನು ಸರಿಪಡಿಸಿದ್ದೇ
ನಾದರೂ) ಸುಧಾರಣೆಗೆ ಅವಕಾಶವಿದೆ . ಈ ಮಿತಿಗಳ ನಡುವೆಯೂ ಈ ಸ್ವರೂಪದ, ತಾಂತ್ರಿಕ, ಪಾರಿಭಾಷಿಕ ಶಬ್ದ, ಕಲ್ಪನೆ, ವಿವರಣೆಗಳಿಂದ ಕೂಡಿದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವದು ಕಷ್ಟಸಾಧ್ಯವೇ ಆದ್ದರಿಂದ ಒಟ್ಟಾರೆಯಾಗಿ ಓದಿಸಿಕೊಂಡು ಹೋಗುವ ಗುಣವನ್ನು ಈ ಅನುವಾದ ಹೊಂದಿದ್ದು ಅಷ್ಟರಮಟ್ಟಿಗೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಹಾಗೂ ಇತಿಹಾಸದಲ್ಲಿ ಆಸ್ಥೆಯುಳ್ಳ ಜನಸಾಮಾನ್ಯರಿಗೆ ಪ್ರಯೋಜನಕಾರಿಯಾಗಿದೆ.

2 comments:

  1. ಇರ್ಫಾನ್ ಹಬೀಬರ ಕೃತಿಯ (ಅನುವಾದದ) ಬಗೆಗೆ ಸಂಗ್ರಹವಾಗಿ ತಿಳಿಸಿದ್ದೀರಿ. ತುಂಬ ಉಪಯುಕ್ತವಾದ ಪರಿಚಯ ಲೇಖನವಿದು. ಧನ್ಯವಾದಗಳು.

    ReplyDelete
  2. you have written very wonderful introduction sir, i hope this book will be very helpful for all students.

    ReplyDelete