Wednesday, October 19, 2011

ಕಪಿಲವಸ್ತುವಿಗೆ ಬುದ್ಧ ಬಂದ



ಇರುವಿಕೆಯ ಶೂನ್ಯ
ಮಗನ ಚೆಲುವಿಗೆ ಮಾತು ಆಟ ಪಾಠದ ಮುದಕೆ ಒಗ್ಗಿಕೊಂಡಂತಿತ್ತು
ನೆನಪುಗಳ ಮರೆತಿರುವೆನೆಂದು ನಂಬಿಸಿಕೊಂಡು
ನೆನಸುತ್ತಲೇ ಮತ್ತೆ ಹಳೆಯ ದಿನಗಳ ಸುಖವ
ಮೈತೊಳೆವ ಉಡುವ ಉಣ್ಣುವ
ಅಂತ:ಪುರ ಛಾವಣಿಯ ಚಿತ್ತಾರ ನೋಡುತ್ತ ಬಿಸುಸುಯ್ವ ಬಿದ್ದುಕೊಳುವ
ದಿನಮಾಸವರ್ಷಗಳ ಚಕ್ರಚಲನೆ
ಒಂದು ದಿನ
ಚಲಿಸುವ ಚಕ್ರ ನಿಂತೇ ಹೋಯ್ತು ಆ ಕ್ಷಣ
ನೆನಪಗವಿ ಶಾಖದಲಿ ತಂಬೆಲರು ಸುಳಿದಂತೆ
ಗೋರಿಯಡಿ ಮೆಲ್ಲನೆ ಉಸಿರಾಟ ನಡೆದಂತೆ
ಮುಚ್ಚಿದ ತಲೆಬಾಗಿಲ ಹೊರಗೆ ಭಿಕ್ಷಾಲಾಪದ ಧ್ವನಿ

ಯಶೋಧರೆ ತೆರೆದ ಬಾಗಿಲ ಬಳಿ-ಸಂದೇಹವೇ ಇಲ್ಲ,
ಅವನೇ, ಸಿದ್ಧ ಅರ್ಥಗಳಿಗೆ ತೃಪ್ತನಾಗದೇ ಹೋದ ಪ್ರಶ್ನೆಗಳ ವ್ಯಾಮೋಹಿ
ಉತ್ತರಗಳ ಹುಡುಕಾಟದ ವೀರಾಗ್ರಣಿ
ಜಗದ ದು:ಖಕೆ ಬಿಕ್ಕಿ ಸ್ವಂತದ ಗೂಡಲ್ಲಿ ಬಿಕ್ಕಳಿಕೆಯ ಮಿಣುಕು ದೀಪವನಿಕ್ಕಿ
ಮಲಗಿದ್ದ ತನ್ನ ತನುವಿಂದ ತಾ ಬೇರ್ಪಟ್ಟು
ಹಡೆದ ಕಂದನ ಹಾಲುಗಲ್ಲ ತಡೆದಾವೆಂದು ದೂರದಿಂದಲೇ ಒಮ್ಮೆ ದೃಷ್ಟಿ ನೆಟ್ಟು
ನಡುರಾತ್ರಿ ಕತ್ತಲಲಿ ಬೆಳಕ ಕಿರಣವ ಹುಡುಕಿ ತೊರೆದು ಹೋದಾತ
(ಮಹಾಭಿನಿಷ್ಕ್ರಮಣವೆಂದರದಕೆ ಮುಂದೆ)
ಹೋದವನು ಹೋಗಿದ್ದ ಇಂದೇಕೆ ಮತ್ತೆ
ಕಪಿಲವಸ್ತುವಿನತ್ತ ಮುಖ ಮಾಡಿ ಬಂದ.. ...

ಕಣ್ಮುಂದೆ ಸಾಲಾಗಿ ಚಿತ್ರಯಾತ್ರೆ, ಒಂದೊಂದೇ
ಮರಳಿ ಬಂದಿದ್ದವು ಅರಮನೆಗೆ
ಊರಾಚೆ ಸಾಗಿ ಸಿದ್ದಾರ್ಥ ಕಳಚಿದ ವಸ್ತ್ರ
ಉಡುಗೆ ವಜ್ರಾಭರಣ ಬಂದಿದ್ದವು
ಕಣ್ತುಂಬಿ ಒಡೆಯನನು ಬೀಳ್ಕೊಟ್ಟು ಎದೆಭಾರ ತಾಳದೆ
ಕುಸಿಯುತ್ತ ಬಂದಿದ್ದ ಚೆನ್ನ
ಬೆನ್ನೇರಿದಾತ ಸಾಕಿನ್ನು ಎನ್ನುತ ಇಳಿದು ದಾರಿ ನಡೆದುದ ನೋಡಿ
ಕಣ್ಣಾಲಿಯಲಿ ನೀರು ಜಿನುಗಿ ಒಣಗಿದ ಮುಖವ
ಹೊತ್ತು ಬಂದಿತ್ತವನ ಅಚ್ಚುಮೆಚ್ಚಿನ ಕುದುರೆ
ಉಧ್ವಸ್ಥವಾದಂತೆ ಇತ್ತು ಅರಮನೆ ಅಂದು
ವಿಷಕಿಂತ ತ್ಯಾಜ್ಯವಾಗಿತ್ತು ಅನ್ನ

ಗಾಳಿಗುಂಟ ವರ್ತಮಾನ
ಎಲ್ಲೋ ದೂರ ಗಯೆಯೆಂಬ ಪಟ್ಟಣದ ಹೊರವಲಯದಲ್ಲಿ
ಸೇನಾನಿಯ ಮಗಳು ಸುಜಾತ ಬಡಿಸಿದ ಕ್ಷೀರಾನ್ನ ಉಂಡ
ಮೈತೊಳೆದುಕೊಂಡ, ವೃಕ್ಷದಡಿ
ಇನ್ನು ಏಳೆನು ಎಂದು ಕುಳಿತುಕೊಂಡ; ಹಗಲು ರಾತ್ರಿ ಎನ್ನಲಿಲ್ಲ
ಎಲೆಯ ಮರ್ಮರ ಹೊರತು ಇನ್ನೇನೂ ಇರದಲ್ಲಿ
ಒಂದಲ್ಲ ಎರಡಲ್ಲ ನಲವತ್ತೊಂಬತ್ತು ದಿನ ದಿವ್ಯಧ್ವನಿ ದಿವ್ಯಜ್ಞಾನಕ್ಕೆ ಹಂಬಲಿಸುತ್ತ
ಆಶೆ ಆಮಿಷ ನಂಟು ಕಂಟಕವ ಧಿಕ್ಕರಿಸಿ ನೆಲಕೆ ಬೇರಿಳಿದಂತೆ ಧ್ಯಾನ ಕುಳಿತ
ಕೊನೆಗೂ ರಾತ್ರಿ ಕರಗಿ ಬೆಳಕು ಹರಿಯುವ ಹೊತ್ತು ಮೇಲೆದ್ದ, ಎದ್ದವನು
ಬುದ್ಧನಾಗಿದ್ದ
ಗಾಳಿಗುಂಟ ವರ್ತಮಾನ
ಸಾರಾನಾಥಕೆ ನಡೆದ ಧಮ್ಮಚಕ್ರ ಪ್ರವರ್ತಿಸಿದ
ಹಳದಿ ಉಡುಗೆಯನುಟ್ಟು ಊರು ಪಟ್ಟಣ ಅಲೆದ
ಆಶೆಯೇ ದು:ಖಕ್ಕೆ ಮೂಲವೆಂದ.. ....

ದು:ಖಿಸುತ್ತಿದ್ದಳು ತಾನಿಲ್ಲಿ
ಗಂಡನಿರದ ಊರಲ್ಲಿ
ಪ್ರಜ್ವಲಿಸುವಂಗಾಂಗ ಬಳಲದೇ ಬಸವಳಿದು
ಕೆನ್ನೆ ತುಟಿ ಕಣ್ಣುಗಳು ರಂಗು ಕಳಕೊಂಡವು
ಸೈರಿಸಿದ್ದಳು ತಾನು ತಡೆದಿದ್ದಳು ತುಟಿಕಚ್ಚಿ
ದು:ಖಿತರೆದೆಗಳ ಸಂತೈಕೆ ಯಾತ್ರೆಯಲಿ ಒಂದು ಹುತ ಆತ್ಮ ಬಿಸುಸುಯ್ಯದಂತೆ

ಪೂರ್ವಾಶ್ರಮದ ಗಂಡ
ತನಗೆ ಮಾತ್ರ ಮೀಸಲೆನುವ ನೋಟವಿಲ್ಲ ಭಾವವಿಲ್ಲ
ಗಂಡ ಮರಳಿ ಮನೆಗೆ ಬಂದ ಸಂಭ್ರಮಕ್ಕೆಲ್ಲಿ ಎಡೆ
ಕೈಲಿ ಭಿಕ್ಷಾಪಾತ್ರೆ ಅರೆನಿಮೀಲಿತ ನೇತ್ರ ಪ್ರಶಾಂತ ಮುಖಮುದ್ರೆ ವಾತ್ಸಲ್ಯಮೂರ್ತಿ
ಜಗದ ಸೊತ್ತು ಈಗ ಆತ ತಥಾಗತ
ಎಷ್ಟು ಸಲ ಕೊರಳ ಸೆರೆ ಉಬ್ಬಿ ಬಂದವು; ನಿನ್ನ
ಕಣ್ಣೀರ ಸೆಲೆ ಹೇಗೆ ಬತ್ತಿ ಹೋದವು ಎಂದು
ಲೆಕ್ಕ ಕೇಳಲು ಅಲ್ಲ ದು:ಖ ಕೇಳಲು ಅಲ್ಲ
ಅಪ್ಪ ಎಂಬುದ ಬರಿಯ ಶಬ್ದವಾಗಿಯೇ ಬಲ್ಲ ಬಾಲ ರಾಹುಲನನ್ನು ತಬ್ಬಿಕೊಳ್ಳಲು ಅಲ್ಲ
ತಂದೆ ಗುರು ಸೋದರರು ಪತ್ನಿ ಪುತ್ರರನೆಲ್ಲ
ತಾ ಕಂಡ ಮಾರ್ಗಕ್ಕೆ ಕೊಂಡೊಯ್ಯ ಬಂದ
ಬಂದಾತ ಹೊಸ್ತಿಲಿನ ಹೊರಗಡೆಯೇ ನಿಂದ
ಜಗದ ದು:ಖಕೆ ಕರಗಿ ಕೊರಗಿ ಹೋಗಿದ್ದಾನೆ(ಎಷ್ಟು
ಸೊರಗಿ ಹೋಗಿದ್ದಾನೆ)

ಭಿಕ್ಷಾಪಾತ್ರೆ ಹಿಡಿದು ನಿಂತವನ ನೋಡುತ್ತ "ಯಾರಮ್ಮ?" ಎಂದ
ರಾಹುಲನ ಮುಂದಕೆ ನೂಕಿ
"ನಿನ್ನಪ್ಪ, ಕೇಳವನ, ನಿನಗೇನು ಕೊಟ್ಟ,ಪಿತ್ರಾರ್ಜಿತವಾಗಿ
ನೀನೇನ ಪಡೆದೆ.. .. ...." ಕೊರಳ ಸೆರೆಗಳು ಉಬ್ಬಿ ಮಾತುಗಳ ನುಂಗಿದರೆ
ಏನೂ ಅರಿಯದೇ ನಿಂತ ನಿಷ್ಪಾಪಿ ಮಗನನ್ನು ಎದೆಗವಚಿ ಬಿಕ್ಕಿದಳು ಯಶೋಧರೆ
ತಡೆದ ಗಾಳಿ ತಂಪೆರಚಿ ಮೋಡ ಕರಗಿತ್ತು
ಉದುರಿತ್ತು ಮೊದಲ ಹನಿ ಮರುಕ್ಷಣವೇ ಧಾರೆ ಮಳೆ
ಮತ್ತೊಂದು ದು:ಖಿತ ಆತ್ಮದ ಅಶ್ರುಧಾರೆ
ಬುದ್ಧ ಭಿಕ್ಷಾಪಾತ್ರೆ ತುಂಬಿಹೋಗಿತ್ತು

5 comments:

  1. ಸೊಗಸಾದ ಮತ್ತು ಒಂದೇ ಓದಿಗೆ ದಕ್ಕದ ತುಸು ಕ್ಲಿಷ್ಟಕರ ಸಾಲುಗಳು...
    ಚೆನ್ನಾಗಿದೆ..

    ReplyDelete
  2. "ಮತ್ತೊಂದು ದು:ಖಿತ ಆತ್ಮದ ಅಶ್ರುಧಾರೆ
    ಬುದ್ಧ ಭಿಕ್ಷಾಪಾತ್ರೆ ತುಂಬಿಹೋಗಿತ್ತು"--wonderful!

    ReplyDelete
  3. ಶೆಟ್ಟರ್ ಸರ್ ಕಷ್ಟವಾಯ್ತು ! ಕವನ ಸೂಪರ್ ಆಗಿದೆ.. ತುಂಬಾ ಓದಿಗೆ ಸಾಮಗ್ರಿ.

    ReplyDelete
  4. ಮಾನ್ಯರೆ,
    ಒಂದು ಉತ್ತಮ ಕವನವನ್ನ ನೀಡಿದ್ದಕ್ಕೆ ಧನ್ಯವಾದಗಳು.
    ಬುದ್ದ ಎಂದಿಗೂ ನನಗೆ ಒಂದು ಪ್ರಶ್ನೆಯಾಗಿಯೇ ಉಳಿದಿದ್ದಾನೆ. ಯಶೋದರೆ, ರಾಹುಲ, ಬುದ್ದ, ಚೆನ್ನ, ನಿತ್ಯವೂ ನಮ್ಮೊಳಗಿನ ಒಂದು ರೂಪಾಕವಗಿ ನಡೆವ ಹೊಯ್ದಾಟ. ಹಲವು ಒಳನೋಟಗಳನ್ನು ಒಳಗೊಂಡಿರುವ ಈ ಕವನ ಅಪ್ತವಾಯಿತು.

    --

    ReplyDelete
  5. ಬುದ್ಧ ನ ಪತ್ರೆ ಗೆ ಯಾಕೆ ಅಶ್ರು .....
    ಅಶ್ರು ವಿಂದ ಹೊರ ಬಂದ ಮೇಲಸ್ಟೇ
    ಬುದ್ಧ ನಲ್ಲವ ...?

    ReplyDelete