Sunday, January 1, 2012

ಹೊಸ ವರ್ಷದ ಹೊಸ್ತಿಲಲಿ..,ಕ್ಷಮಿಸಿ..!


ಹಾಡು ನರ್ತನ ಕುಣಿತ ಕುಡಿತ
ಕಿವಿಗಡಚಿಕ್ಕುವ ಸದ್ದು ಸಂಗೀತ, ನಡುವೆ
ಸುದ್ದಿಮಾಧ್ಯಮ.. ಅಲ್ಲಿ,

ಎಂತೆಂಥವೋ ಸಾವು

ಉತ್ತರ ಹಿಂದುಸ್ತಾನದಲ್ಲಿ ಮೈ ಕೊರೆವ ಚಳಿಗೆ
ನಿನ್ನೆ ವರೆಗೆ
ಸತ್ತವರು ನೂರಿಪ್ಪತ್ತು ,ಅತ್ತವರ
ಲೆಕ್ಕ ಇಲ್ಲ ಯಾವ ಸರಕಾರಿ ಆಡಿಟ್ ನಲ್ಲೂ
ಮನುಷ್ಯದೇಹಗಳು ಅಂಕಿಗಳಾಗುತ್ತ ಸಂಖ್ಯೆಗಳಾಗುತ್ತ
ಇಂದು ಸಂಖ್ಯೆ ನೂರೈವತ್ತು.,ದಯವಿಟ್ಟು

ಅವು ಚಳಿಗಾಳಿಯ ಸಾವುಗಳೆನ್ನದಿರಿ

ಸತ್ಯವಾಗಿ
ಬಡತನದ ಸಾವುಗಳೆನ್ನಿ
ಸುಂದರ ಸುಸಂಸ್ಕೃತ ಭಾರತಕ್ಕೆ ಬೇಡದ ಕಿರಿಕಿರಿಗಳ ಸಾವುಗಳೆನ್ನಿ
ಕರುಳ ತುಂಬ ವಿದೇಶಿ ಮದ್ಯ ಹನಿಸಿಕೊಂಡು
ಹತ್ತಿಪ್ಪತ್ತು ಚಪಾತಿ ತಿಂದು
ಹಾಸಿಗೆ ತುಂಬ
ಹೊರಳಿ ಕಾಮದಾಟ ಆಡಿ ತಣಿದು ಮೈ ತುಂಬ
ರಜಾಯಿ ಹೊದ್ದು ಮಲಗುವವರು ಚಳಿಗೆ ಸಾಯರು,


ಅದಕ್ಕೆ
ದಿಟವಾಗಿ ಅವುಗಳ ಗಟ್ಟಿ ಹೊದ್ದಿಕೆ ಇಲ್ಲದೆ ಸೆಟೆದ ದೇಹಗಳ ಸಾವೆನ್ನಿ
ಸ್ವತಂತ್ರ ಭಾರತದ ನಿರೀಕ್ಷೆಗಳ ಸಾವೆನ್ನಿ
ಮನುಷ್ಯರ ನಮ್ರ ಕನಸುಗಳ ಸಾವು, ಸಣ್ಣ-ಪುಟ್ಟ ಆಶೆಗಳ ಸಾವು
ಕೊನೆಗೆ ಯಾರಿಗೂ ಏನನ್ನೂ ಹೇಳಿಕೊಳ್ಳಲಸಾಧ್ಯವಾದ ಸ್ಥಿತಿಯ
ಮುಖ ಮುಚ್ಚಿ ಅತ್ತ ಭಾಷೆಯ ಸಾವೆನ್ನಿ, ದಯವಿಟ್ಟು...

ಹಸಿವಿನ ಸಾವೆನ್ನಿ

ಕೇಳಿಸಿಕೊಳ್ಳಿ ಕ್ಷೀಣವಾಗಿ ಬಹಳ ಧ್ವನಿಗಳಿವೆ
ಕೊನೆಯುಸಿರೆಳೆಯುತ್ತ ಅವು ಹಾರೈಸುತ್ತಿರಬಹುದು.., ಕೇಳಿಸಿಕೊಳ್ಳೋಣ,
"ಹೊಸ ವರ್ಷ ನಿಮಗೆ ಹರುಷ ತರಲಿ.. .. ..".

7 comments:

 1. "ದಿಟವಾಗಿ ಅವುಗಳ ಗಟ್ಟಿ ಹೊದ್ದಿಕೆ ಇಲ್ಲದೆ ಸೆಟೆದ ದೇಹಗಳ ಸಾವೆನ್ನಿ"

  "ಕೊನೆಗೆ ಯಾರಿಗೂ ಏನನ್ನೂ ಹೇಳಿಕೊಳ್ಳಲಸಾಧ್ಯವಾದ ಸ್ಥಿತಿಯ
  ಮುಖ ಮುಚ್ಚಿ ಅತ್ತ ಭಾಷೆಯ ಸಾವೆನ್ನಿ..."

  -ಹೇಳಿಕೊಳ್ಳಲಸಾಧ್ಯವಾದ, ಭಾಷೆಗೂ ನಿಲುಕದ ಸ್ಥಿತಿಯ ಅಭಿವ್ಯಕ್ತಿಯನ್ನು
  ಮೆಚ್ಚಿಕೊಳ್ಳುತ್ತಿದ್ದೇನೆ...ಹಾಗೆ ಮುಖ ಮುಚ್ಚಿ ಅತ್ತವರು ನನ್ನನ್ನು ಕ್ಷಮಿಸಲಿ...

  -ಪ್ರಜ್ಞಾ

  ReplyDelete
 2. ಹೊಸ ವರುಷವು ಶುಭವನ್ನು ತಂದೀತು ಎನ್ನುವ ಕನಸು, ಹಳೆಯ ವರುಷದ ದುಃಸ್ವಪ್ನಗಳನ್ನು ಮರೆಯುವ ಪ್ರಯತ್ನವಿದ್ದೀತು. ಮುಖ ಮುಚ್ಚಿ ಅತ್ತವರು ನಮ್ಮೆಲ್ಲರನ್ನೂ ಕ್ಷಮಿಸಲಿ. ಹೊಸ ವರುಷವು ಎಲ್ಲರಿಗೂ ಮಂಗಲಕರವಾಗಲಿ.

  ReplyDelete
 3. ಹೊಸ ವರ್ಷಾಚರಣೆಯ ಕೆಟ್ಟ ಸಂಪ್ರದಾಯಕ್ಕೆ ಛಡಿ ಏಟಿನಂತಹ ಕವನ ಗುರುವರ್ಯ.

  ಚಳಿಯ ಸಾವಲ್ಲ ಅದು ಬಡತನದ ಸಾವು ಎನ್ನುವಲ್ಲಿ ಮನಸ್ಸು ಆರ್ಧ್ರವಾಯಿತು.

  ಕೆಟ್ಟ ಆಚರಣೆಯ ನೆಪದಲ್ಲಿ, ಬರೀ ಕ್ಯಾಲೆಂಡರ್ ಬದಲಾವಣೆಯ ಪ್ರಕ್ರಿಯೆಯಲ್ಲಿ ಕುಡಿದು, ಕುಣಿದು, ಕೆಟ್ಟ ಕೆಲಸಕ್ಕೆ ಇಳಿದು ಮತ್ತು ಎಲ್ಲರಿಗೂ ತೊಂದರೆ ಮಾದುವವರಿಗೆ ಈ ಕವನ ಪಾಠವಾಗಲಿ.

  ಮನಸ್ಸು ಭಾರವಾಯಿತು.

  ನನ್ನ ಬ್ಲಾಗಿಗೂ ನಿಮಗೆ ಸ್ವಾಗತ.

  ReplyDelete
 4. ಹಳೆ ಮರದ ಬೇರು, ಸೂರ್ಯನ ಸುಡು ಬಿಸಿಲಿಗೆ ಪಕ್ಕದ ಮರ ಸುರಿಸಿದ ಬೆವರ ಕುಡಿದು ನರ ಬಿಗಿದು ಸೆಟೆದುಕೊಂಡಂತಿದೆ ಇಲ್ಲಿಯ ಕವಿತೆಯ ಪ್ರತಿಮೆ. ಒಂದಕ್ಕೊಂದು ಬೆಸೆದ ಸಾಲು ಸೂಕ್ಷ್ಮವನ್ನು ಬಿಟ್ಟು ಬಿಡದಂತೆ ಅವುಚಿಕೊಳ್ಳುತ್ತವೆ. ಕವಿತೆ ಖುಷಿ ಆಯಿತು. ಹೊಸ ವರುಷದ ನಗುವಿನ ಚಿಗುರು ದಾಖಲೆಯಾಗಿ ಬೆಳೆದು ನಿಂತಿದೆ. ಧನ್ಯವಾದಗಳು.

  ReplyDelete
 5. ಅಂಕಿ ಬದಲಾದಾಗಲೆಲ್ಲ ಇಡೀ ಪರಿಸರ, ಜನ, ಭಾವನೆ, ನಂಬಿಕೆಗಳೆಲ್ಲ ಬದಲಾಗುತ್ತವೆ ಎಂದು ನಾನು ನಂಬೋದಿಲ್ಲ ಸರ್. ಹತ್ತು ಹನ್ನೊಂದು ಆಗುತ್ತದೆ ; ಹನ್ನೊಂದು ಹನ್ನೆರಡು ಹದಿಮೂರು ಆಗುತ್ತದೆ..... ಮುಂದೆ ಹದಿನಾಲ್ಕೂ ಆಗುತ್ತೆ ! ನಾವೇನಾದ್ರೂ ಭಾವನೆಗಳನ್ನು, ನಂಬಿಕೆಗಳನ್ನು ಬಿಟ್ಟು ಬಿಡುತ್ತೇವೆಯೇ ! ಇಲ್ಲ ಸರ್, ಹೊಸ ವರ್ಷ ಆಚರಣೆ ಅನ್ನೋದು ಒಂದು ದಿನದ ತೆವಲು ಅಷ್ಟೆ !

  ReplyDelete
 6. ಸುಧಾ ಚಿದಾನಂದಗೌಡ.January 14, 2012 at 9:22 AM

  ಹೊಸವರ್ಷದಲ್ಲೊಂದು ಹೊಸದೃಷ್ಟಿಕೋನದ ಕವನ ಓದಲು ಕೊಟ್ಟಿದ್ದಕ್ಕಾಗಿ ಧನ್ಯವಾದ ಸರ್.ನಿಜ ಅರ್ಥದ ಹೊಸವರುಷದ ಶುಭಾಶಯಗಳು ನಿಮಗೆ.

  ReplyDelete