Sunday, November 21, 2010

ಕ್ಷಮಿಸು ತಂದೆ

ಕೆಳಗೆ, ಹಲವು ತಿಂಗಳ ಕೆಳಗೆ ಮಂದ್ರ ಬೆಳಕುಗಳಲ್ಲಿ
ಕಾಮ ಉಕ್ಕಿದ ರಾತ್ರಿ ಅಂಡ ಸೇರಿದ ಅಣು ಒಂದಾಗಿ ಎರಡಾಗಿ 
ಕಣ್ಣಾಗಿ ತುಟಿಮೂಡಿ, ಗಂಡೋ ಹೆಣ್ಣೋ ಇಂದು ಕಣ್ತೆರೆವ ಕೋಣೆ ; ಹುಟ್ಟು ಹೊರಬರುವ ಮುಂಚಿನ ಕ್ಷಣಗಳು 
ಕಾತರ ಆತುರ ಶತಪಥ ಮೊಗಸಾಲೆ

ದಾಟಿ ಮೆಟ್ಟಲೇರಿ
ರೋಗಿಗಳ ರೋಗಗಳೇ ಸಡಗರದ ಮೂಲ- ದಾದಿ ವೈದ್ಯರು
ಮುಖಕ್ಕೆ ಹಸಿರು ಗವಸು
ಹಾಕಿ ಕತ್ತರಿ
ಯಾಡಿಸಿ ತೊಗಲು ಕೊಯ್ದು ಮಾಂಸ ಹೆಕ್ಕುವ ಕೋಣೆ
ಸಾವು ಸುಳಿದಾಡುತ್ತಿದೆ ನಿಶ್ಯಬ್ದ ..ಅಗೋಚರ...

ಅಪ್ಪ ಮಲಗಿದ್ದಾನೆ-ಬೆಳ್ಳಿ ಗಡ್ಡ ಹಣ್ಣು ಮೈ ಕಣ್ಣು ಆಳದ ಬಾವಿ
ಎಂಬತ್ತೈದು ಬೇಸಗೆಗಳ ನೆನಪ ಮೂಟೆಯ ಭಾರ ಹೊತ್ತು ಬಸವಳಿದಂತೆ
ಧೋತರದ ಉಡಿಯಲ್ಲಿ ಒಮ್ಮೆ ಬಾಳೆ ಒಮ್ಮೆ ಮಾವು -ಹಲಸು ಕಲ್ಲಂಗಡಿ 
ಕಾಲಕಾಲಕೆ ತಂದು ತಿನ್ನಿಸಿದ ತಂದೆ
ಕುರಿಯಂತೆ ಹೊತ್ತು ಹೆಗಲಲ್ಲಿ ದಡದಡ ನಡೆದು
ಶಾಲೆಯಲ್ಲೆಸೆದು ಬರುತ್ತಿದ್ದ ಅಪ್ಪ- ಕಾಲ ಸ್ಥಂಭಿಸಿದಂತೆ
ಶಬ್ದಗಳಿಗೊಳಪಡದ ಭಾವ ಕಣ್ಣಲ್ಲಿ -ನೋಡುತ್ತಾನೆ , ನಿಸ್ತೇಜ
ರಕ್ತದಂಗಡಿಯಲ್ಲಿ ಕೊಂಡ ಬಾಟಲಿ ರಕ್ತ
ಜೀವಂತಿಕೆ ಹನಿಹನಿ ಒಳಗಿಳಿಯುತಿದೆಯೆಂದು ಭ್ರಮಿಸಿದಕ್ಕಂದಿರು ಬಂಧು-ಬಳಗ 
ಅಪ್ಪ ನೋಡುತ್ತಾನೆ ಎಲ್ಲ ಕಸರತ್ತುಗಳ, ಬಗೆಗಣ್ಣು  ಕಾಣುತ್ತಿರುವುದೇನೋ

ಅವಸ್ಥಾಂತರವೆಲ್ಲ ಸಂಗಮಿಸಿದಂತೆ 
ಅಲ್ಲಿ ಮಂಚದ ಮೇಲೆ ಅಪ್ಪ -ಮಗ್ಗುಲಿನಲ್ಲಿ ಇಲ್ಲಿ ಕುಳಿತಿದ್ದಾನೆ ನನ್ನ ಕುವರ; ಅವನಲ್ಲಿ ಮುಪ್ಪಿನ ನಾನು
ಇವನ ಕೇಕೆಗಳಲ್ಲಿ ಜೀವನದಲೆಗಳು 
ಇವನಲ್ಲಿ ಬಾಲ್ಯದ ನಾನು - ಅವನ ನಿಸ್ತೇಜದಲ್ಲಿ ನೋವಿನ ಸೆಲೆಗಳು
ಹಡೆವ ಬೆಳೆಸುವ ಜೊತೆಗೊಳಿಸುವ ಕರ್ಮ ಮುಗಿಸಿ ಹೋಗುವದು ಸತ್ತು 
ಬೆಳೆದಾತ ಹಡೆವ ಬೆಳೆಸುವ ಸಂಭ್ರಮ ಹೊತ್ತು 
ಚಕ್ರ ಸುತ್ತುವದು 
ಮೈಕ್ರೊಲೆವಲ್ಲಿನಲಿ ಬದುಕ ನೋಡುವ ತಪ್ಪ ಮತ್ತೆ ಎಸಗಿದ  ಫಲಿತ
ಭಯಂಕರ ಏಕತಾನತೆಯಪ್ಪ, ಇದ ಬಿಡು
ನರೆತ ಕೂದಲು ಮೈಯ್ಯ ಸುಕ್ಕುಗಳಲ್ಲವಿತಿರುವ
ಕತೆವ್ಯಥೆಗಳಲ್ಲಿ ನಿನ್ನಾತ್ಮವೆಲ್ಲಿ
ಸುಖೇದು:ಖೇ ಸಮೆಕೃತ್ವಾ ಲಾಭಾಲಾಭೌ ಜಯಾಜಯೌ..
ಪರಮಾತ್ಮ ಕೃಷ್ಣ  ಉಕ್ತ  ಸ್ಥಿತಪ್ರಜ್ನನ ಲಕ್ಷಣಗಳ 
ಮುಂದೆ ಕುಳ್ಳಿರಿಸಿಕೊಂಡು ವಿವರಿಸುತ್ತಿದ್ದ ತಂದೆ
ನಿನ್ನ ಕಣ್ಣಂಚಿನಲಿ ಈ ಕ್ಷಣ ಜಿನುಗಿದ ಈ ಹನಿ ನೀರಿನ ಅರ್ಥ
ಹೊಳೆಯುತ್ತಿಲ್ಲ ನಿನ್ನ ಒಳಗಣ್ಣ ನೋಟ

ಕ್ಷಮಿಸು ನನ್ನನ್ನು 
ಕ್ಷಮಿಸು- ಜೀವಂತಿಕೆ ಇಲ್ಲದ ಜೀವಾವಸ್ಥೆಯ ನಿನ್ನ
ನೋವು ದಕ್ಕದ ಕಾವ್ಯವಿಫಲವನ್ನು

4 comments: