Sunday, December 26, 2010

ನೀಲು

ಗೌರಿ ಲಂಕೇಶ್ ಅವರು ಲಂಕೇಶ್ ರ "ನೀಲು ಕಾವ್ಯ"ದ ಕೆಲವು ಪದ್ಯಗಳನ್ನು ಯಾರೋ ವಿಡಿಯೋ ತಾಣ you tube ನಲ್ಲಿ ಹಾಕಿದ್ದಾರೆ  ಎಂದು ಫೇಸ್ ಬುಕ್ ನ ತಮ್ಮ್ ಸ್ಟೇಟಸ್ ನಲ್ಲಿ ಕಾಣಿಸಿ ಲಿಂಕ್ ಕೊಟ್ಟಿದ್ದರು.ಅಲ್ಲಿ ಹೋಗಿ ನೋಡಿದರೆ ಅಪ್ಲೋಡ್ ಮಾಡಿದವರು ತಮ್ಮ ಖಾತೆಯನ್ನು ಮುಚ್ಚಿದ್ದಾರೆ, ಹೀಗಾಗಿ ಅದು ಲಭ್ಯವಿಲ್ಲ,ವಿಷಾದಿಸುತ್ತೇವೆ ಎಂಬ ಒಕ್ಕಣೆ. ಆ ಪುಟ್ಟ ಪುಟ್ಟ ನೀಲು ಪದ್ಯಗಳ ಯೋಚನೆ ತಲೆ ತುಂಬಿದಾಗ ಹದಿನೆಂಟು ವರ್ಷಗಳ ಹಿಂದೆ ಪ್ರಕಟವಾಗಿದ್ದ ನನ್ನ ಮೊದಲ ಕವನ ಸಂಕಲನ ಹುಡುಕಿ ತೆಗೆದು ಅದರಲ್ಲಿಯ ಕವಿತೆಯೊಂದನ್ನು ಓದಿದೆ. ಇಲ್ಲಿದೆ ಆ ಕವಿತೆ.


ಈ ನೀಲು,
ಕಾವ್ಯಕ್ಷೇತ್ರದ ಈ ಬ್ಲ್ಯೂ,
ಫಿಲ್ಮೀ ಹುಡುಗಿಯರಿಗೆ ಮಿಗಿಲಾದ ನಿಗೂಢೆ
ಹಲವರ ಕಾಡುವ ಕನ್ಯಾಮಣಿ
ಆಹಾ ಏನಾಕೆಯ ಕಾವ್ಯಸರಣಿ!

ಬೇರಾರೂ ಕಾಣದ್ದನ್ನು ಕಾಣುತ್ತಾಳೆ
ಕಂಡದ್ದು ಕಂಡ ಹಾಗೆ ಹೇಳುತ್ತಾಳೆ
ಎಲ್ಲೆಡೆಯಿಂದ ಬರುವ ಸುದ್ದಿ ಶಬ್ದ ಲಯ ಆಟ ಹೂಟಗಳಿಗೆ
ಕಿವಿ ತೆರೆದು ಕೂತಿರುತ್ತಾಳೆ
ಮೂಡ್ ಬಂದರೆ ಒಮ್ಮೊಮ್ಮೆ
ಪ್ರೇಮ,ಕಾಮ,ಕಾವ್ಯದ ಅ ಆ ಇ ಈ ಹೇಳತೊಡಗುತ್ತಾಳೆ.

ಗಂಡನ ಸೋಮಾರಿತನದ ಬಗ್ಗೆ ಗೊಣಗದ
ಮಕ್ಕಳ ಸ್ಕೂಲು, ಫೀಸು, ಪ್ರೊಗ್ರೇಸ್ ರಿಪೋರ್ಟ್ ಇತ್ಯಾದಿ ಕೊರೆಯದ
ಏರುತ್ತಿರುವ ಬೆಲೆ, ಗ್ಯಾಸ್ ಸಿಲಿಂಡರ್ ವಿಳಂಬ
ಕಾಂಪೌಂಡಿನೊಳಗೆ ಹಂದಿ ನುಗ್ಗುವದೇ ಮೊದಲಾದ
ಲೌಕಿಕದ ಮಾತಾಡದ
ಈ ಪಾರಮಾರ್ಥೆ ಬರೆಯದಿದ್ದರೆ
ಕೊರಡು ಕೊನರದಿರುವದೇ ಬರಡು ಚಿಗುರದಿರುವದೇ
ಕ್ರಾಂತಿ ಘಟಿಸದಿರುವದೇ.. ಅರಿಯೆ

ಆದರೆ
ಹುಲ್ಲುಗರಿಕೆ ಹೂವು ಗಿಡ ಮರ ಬಳ್ಳಿಗಳ ಔನ್ನತ್ಯಕ್ಕೇರಿಸುವ
ದಿನನಿತ್ಯದ ನೋಟಗಳಿಗಸಂಖ್ಯ ಅರ್ಥ ಹೊಮ್ಮಿಸುವ
ಗರತಿಯರಿಗೆ ಕಚಗುಳಿ ಇಡುವ
ಹುಡುಗಿಯ ತುಂಟತನ ತತ್ವಜ್ಞಾನಿಯ ಗಾಂಭೀರ್ಯ ಮೆರೆವ
ಮಾನವಸ್ವಭಾವದ ಆಳಕ್ಕೆ ಇಳಿವ ಈ ರಮಣಿ ಬರೆದರೆ
ಕಪ್ಪುಮಸಿಯ ಬಾಟಲ್ ನಲ್ಲಿ ಕಟ್ಟಿರುವೆಯ ಅದ್ದಿ
ಬಿಳಿಯ ಹಾಳೆಯ ಮೇಲೆ ಓಡಿಸಿದಂತಿರುತ್ತದೆ.

ಪಾಳೆಗಾರಿಕೆ ಯಜಮಾನಿಕೆಗಳ ದಿಟ್ಟತನದ ಬಗ್ಗೆ
ಈ ಕೋಮಲೆ ಇತ್ತೀಚೆಗೆ ಮಾತಾಡತೊಡಗಿದ ಧಿಮಾಕಿಗೆ
ಅಸುಖ ಪಟ್ಟವರ ಮಾತು ಬಿಡಿ
ಅಕ್ಷರವಿಟ್ಟಳುಪದೊಂದಗ್ಗಳಿಕೆಯೇನೂ ಇಲ್ಲದ ಈಕೆ
ಅಕ್ಷರಗಳ ಹೊಡೆದುಹಾಕುವ ಚಂದಕ್ಕೇ ಮಾರು ಹೋಗಿದ್ದಾನೆ ಇಲ್ಲೊಬ್ಬ
ಹೀಗೆ ಕಚಗುಳಿ ಇಟ್ಟಂತೆ ಕವಿತೆ ಬರೆಯುವ ಈಕೆ ಪ್ರತಿಕ್ರಾಂತಿಕಾರಿಣಿಯಾದರೂ ಸರಿಯೇ
ನಾನವಳ ವರಿಸುವೆ ಎನ್ನುತ್ತಾನೆ ಇನ್ನೊಬ್ಬ

ಇನ್ನುಳಿದಂತೆ ಇವಳನ್ನು ಹಲವಾರು ಡ್ರೆಸ್ ಗಳಲ್ಲಿ ಕಲ್ಪಿಸಿಕೊಂಡಿರುವ
ಕನ್ನಡದ ತರುಣ ಕವಿಗಣ ಈಗ ಇವಳ ಅಡ್ರೆಸ್ ಅಷ್ಟು ಸಿಕ್ಕರೆ ಸಾಕು
ಇವಳಾರಾಕೆ ಇವಳಾರಾಕೆ ಇವಳಾರಾಕೆ ಎಂದೆಣಿಸದೇ
ಈಕೆ ನಮ್ಮಾಕೆ ಈಕೆ ನಮ್ಮಾಕೆ ಈಕೆ ನಮ್ಮಾಕೆ ಎಂದೆಣಿಸಿ
ಪ್ರೇಮಪತ್ರಗಳ ಮಹಾಪೂರವನ್ನೇ ಹರಿಸಿ
"ಚಲ್ ಮೇರೆ ನೀಲೂ" ಎಂದು ಹೆಗಲ ಮೇಲೆ ಕೈಹಾಕಿ ಹೊರಡಲು ಸಿದ್ಧವಿದೆ

"ಈ ಹೆಣ್ಣುಗಳೇ ಹೀಗೆ", "ನಾವು ಹುಡುಗಿಯರೇ ಹೀಗೆ", "ಅತ್ತು ಬಿಡೇ ಗೆಳತಿ"
ಎಂದು ಸೊರಸೊರಗುಟ್ಟುವ ಕವಯಿತ್ರಿಸ್ತೋಮದ ನಡುವೆ
ನೀಲುನಂಥ ಹತ್ತಾರು ಪಗದ್ಯ ಅಥವ ಗಪದ್ಯ ಪ್ರತಿಭೆಗಳೇನಾದರೂ ಪುಟಿದೆದ್ದರೆ
ನಾನು ಗಂಡಸರ ಕಾವ್ಯ ಓದುವದನ್ನೂ ಬಿಡಬೇಕೆಂದಿದ್ದೇನೆ.... ....!

Thursday, December 9, 2010

ಮೌನಿ

ಶಬ್ದಗಳ ಸಂತೆಯಲ್ಲಿ ನಿಂತು
ಮಾತುಗಳ ಖಾಲಿತನ ಮನದಟ್ಟಾದಂತೆ ಮೌನಿಯಾದ
ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಿದ್ದವರು
ಮೂಕ ಎಂದರು
ಮತ್ತಷ್ಟು ಜನ ಬಂದರು
ಮೂಕ ಎಂದ ಮೇಲೆ ಕಿವುಡನೂ ಇರಬಹುದೆಂದು ಕಣ್ಸನ್ನೆ ಕೈಸನ್ನೆ ಮಾತಾಡಿದರು

ಆಕಾಶ ನೋಡಿದ ಕಣ್ಣರಳಿಸಿ
ತಂಗಾಳಿಯ ಸ್ಪರ್ಶಕ್ಕೆ ಮೈ ಒಡ್ಡಿದ
ದೂರದಲ್ಲೆಲ್ಲೋ ಕೂಗಿದ ಹಕ್ಕಿಯ ಅನುಕರಿಸಿ ಕೂ ಎಂದ, ಮುಗುಳ್ನಕ್ಕ

ದೂರದಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದ ಯಾರದೋ ಮನೆಗಳು
ಕೆಂಪುಹಳದಿ ಜ್ವಾಲೆಗಳ ಹಿoಬೆಳಕಲ್ಲಿ ಕಪ್ಪು ಆಕೃತಿ ಮೂಡಿದಂತೆ
ಅವಸರವಸರವಾಗಿ ಬಂದನೊಬ್ಬ
ವ್ಯರ್ಥ ಕಾಲಹರಣ ಬೇಡ
ಮನೆ ಉರಿಯತೊಡಗಿ ಈಗ ತುಂಬ ಹೊತ್ತು
ಎಲ್ಲ ಸುಟ್ಟು ಹೋಗುವ ಮುನ್ನ ಬನ್ನಿ
ಒಂದಿಷ್ಟು ಗಳ ಹಿರಿಯೋಣ ...
ಹಿಂಬಾಲಿಸಿ ಒಬ್ಬೊಬ್ಬರೇ ತೆರಳಿದರು

ಬೆಂಕಿ ಆರಿಸುವ ಮಾತೇ ಇಲ್ಲ
ಎಲ್ಲಿಗೆ ಬಂತು! ನಿಶ್ಯಬ್ದವಾಗಿ ಅತ್ತ, ಅಳುತ್ತಲೇ ಇದ್ದ
ಇನ್ನಷ್ಟು ಜನ ಬಂದರು, ಭ್ರಮಿಷ್ಟ ಎಂದರು
ಸಂಪನ್ನನ ಸಿಟ್ಟು ಮಾತಾಗತೊಡಗಿತು,ತಾಗತೊಡಗಿತು
ಓ ಇವನಿನ್ನೂ ಲಜ್ಜೆ ಸಮ್ಮಾನ ಸಂಕೋಚ ಉಳ್ಳವನು
ನಾವೆಲ್ಲಾ- ಇಷ್ಟು ಜನ - ಎಲ್ಲ ಕಳಚಿ ನಿಂತಿದ್ದರೆ
ಇವ ನೋಡಿ ಇನ್ನೂ ಬಟ್ಟೆ ತೊಟ್ಟಿದ್ದಾನೆ
ಕಳಚಿ ಹಾಕಿರಿ ಇವನ ಅಂಗಿ
ಚೊಣ್ಣ ಚಡ್ಡಿ ಬನೀನು
ಸಿಳ್ಳೆ ಹೊಡೆದು ಸುತ್ತ ಹೆಜ್ಜೆ ಹಾಕಿ ವಿಕಟ ನಕ್ಕರು

ದಿಗಂಬರನಾಗಿ ನಡೆದ ಒಬ್ಬಂಟಿಯಾಗಿ
ಮುಸ್ಸಂಜೆ ಸಮಯದಲಿ ಬೆಟ್ಟ ದಾರಿಯ ಬದಿಗೆ
ಕುಪ್ಪಳಿಸುತ್ತಿತ್ತೊಂದು ಪುಟ್ಟ ಸುಂದರ ಹಕ್ಕಿ
ಬಳಿಸಾರಿ ಹೇಳಿದ 'ಬಾ, ಎದೆಗವಚಿಕೊಳ್ಳುವೆ'
ಬೆದರಿ ಹಾರಿತು ಹಕ್ಕಿ

ನಿಲ್ಲು, ನಾನು ನಿರುಪದ್ರವಿ ಎಂದ
ಹಕ್ಕಿ ನಂಬಲಿಲ್ಲ
ತನಗೆ ತಾನೇ ಎಂಬಂತೆ ಹೇಳಿಕೊಂಡ :ಫೇರ್ ಇನಫ್ ....
.

Tuesday, November 30, 2010

ಕೂಗಳತೆಯ ವಿಸ್ಮಯಗಳ ದಾಟದೇ...

ವಿಸ್ಮಯಗಳ ಲೋಕಕ್ಕೆ ಲಗ್ಗೆ ಇಟ್ಟ ಮಿಂಚು ಕಣ್ಣಲ್ಲಿ ಮಿನುಗಿಸಿ
ತಾರೆ ನೀಹಾರಿಕೆ ತೋರಿ ಅಂಗೈಯ್ಯಲ್ಲಿ, ಬ್ರಹ್ಮಾಂಡ ಹರಡಿ ಎದುರು ಹೇಳಿದಾ ಹೇಳಿದಾ
ಎಷ್ಟು ದೂರ ಗೊತ್ತೇ ಆ ಸೂರ್ಯ?
ನಮ್ಮ ತಲುಪಲವನ ಬೆಳಕು ಎಂಟು ನಿಮಿಷ ಬೇಕು
ಬೆಳಕು ಪ್ರವಹಿಸುವ ವೇಗವೆಂಥದು ಗೊತ್ತೇ?
ಕ್ಷಣವೊಂದಕೆ ಲಕ್ಷದೆoಬತ್ತಾರು ಸಾವಿರ ಮೈಲು...

ಒಣಹುಲ್ಲು ತಿನ್ನುತ್ತ ನಿಂತ ಎತ್ತಿನ ಮೈಯ್ಯ ಮೇಲೆಲ್ಲಾ ಬಾಸುಂಡೆ ಎಬ್ಬಿಸಿದ ಕೈಯ್ಯ
ನರಗಳಲಿ ನರಹೊಟ್ಟೆಗಳ ಹಸಿವ ಬೆಂಕಿ, ಕಾಣುತ್ತಿತ್ತು ಅಲ್ಲೇ, ಕೊಂಚ ದೂರ ಎದುರಿಗೇ
ಗೊತ್ತೇ? ಗೊತ್ತೇ? ಕೇಳುತಲಿದ್ದ ವಿ-
ಜ್ಞಾನದ ಗದಡಿ ಬಿಚ್ಚುತ್ತಲೇ ಹೋದ
ಗೊತ್ತೆಂದೆ, ಪ್ರಶ್ನಾರ್ಥಕ ನೋಟ ಎಸೆದ
ಊರ್ಧ್ವಗಮನಕ್ಕೆ ಕೊನೆಯಿಲ್ಲವೆಂತೋ ಅಂತೇ ಅಧ:
ಪತನಕ್ಕೂ ಕೊನೆಯಿಲ್ಲ, ಅದೇ ಭಯ
ಮಾತಾಡುತ್ತಿದ್ದೆವು ಎರಡು ಬೇರೆ ಭಾಷೆಗಳಲ್ಲಿ ನಾವು- ನಾನೂ ಅವನೂ

ವಿಸ್ಮಯಗಳ ಕುರಿತ ಕುತೂಹಲಕೆ ಬರವಿಲ್ಲ ಇಲ್ಲ ಬೇಸರವೆನಗೆ
ಇನ್ನು ಹಲ ತಾರೆಗಳು ಅತಿದೂರ ಬಲುಸಾಂದ್ರ
ಅವು ಬಿಟ್ಟ ಬೆಳಕೆಲ್ಲ ಮುಟ್ಟಿದೆಯೋ ಭುವಿಯನ್ನು? ಗೊತ್ತಿಲ್ಲ.
ಗೊತ್ತು, ಬಾ ವಿಸ್ಮಯಗಳ ಮಾತಿವೆ ಇಲ್ಲಿಯೂ, ನೋಡು
ರಸ್ತೆಯಾಚೆ
ತಿಂಗಳಬೆಳಕಂಥ ನೆಲ ಅಲ್ಲಿ ಕಂಬಸಾಲು ಆ ತಂತಿಗಳೊಳಗೆ ಹರಿವ ಬೆಳಕು
ಆರು ದಶಕ ಸಂದವು, ರಸ್ತೆಯೀಚೆ ಈ ಕೇರಿಯ ಕತ್ತಲೆಗಿನ್ನೂ ತಲುಪಿಲ್ಲ
ಇಂದೂ ಬೆಳಗಿಲ್ಲ.

ನೆಲದ ವಾಸ್ತವದ ಹಂಗಿರಲಿಲ್ಲ
ಬ್ರಹ್ಮಾಂಡ ರಹಸ್ಯ ಬಿಚ್ಚುತ್ತಿದ್ದವ ಹೇಳಿದ:
"ಎಲ್ಲರ ಮನೆಗಳ ದೋಸೆಯೂ ತೂತೇ"..
ಅದೂ ಸುಳ್ಳು ಮಿತ್ರ, ಕೇಳು ಪೂರ್ಣಸತ್ಯ ಇಲ್ಲಿದೆ, ಇಲ್ಲಿ
ಹೆಚ್ಚಿನ ಮನೆಗಳ ಹೆಂಚಿಗೇ ತೂತು
ವಿಸ್ಮಯಗಳ ಮಾತಾಡುತ್ತ ಹೋದರೆ ಕೊನೆಯಿಲ್ಲವಯ್ಯ, ವಿಸ್ಮಯಕ್ಕೇನು
ಸಾಲು ಹೊಜೈರಿ ಅಂಗಡಿಗಾಜುಗಳಲ್ಲಿ ನೇತ ಮೊಲೆ
ಇಲ್ಲದ ಮೊಲೆಕಟ್ಟುಗಳೂ ಉದ್ರೇಕಿಸುತ್ತವೆ, ವಿಷಾದಕ್ಕೆ
ನಾಗರಿಕತೆಯ ಹಿತ್ತಲಲ್ಲೆಷ್ಟೊಂದು ಕಸ
ಭೂಮಿಯ ಮೇಲೇ ಎಷ್ಟು ಕಪ್ಪುರಂಧ್ರಗಳು... ...!!

Sunday, November 21, 2010

ಕ್ಷಮಿಸು ತಂದೆ

ಕೆಳಗೆ, ಹಲವು ತಿಂಗಳ ಕೆಳಗೆ ಮಂದ್ರ ಬೆಳಕುಗಳಲ್ಲಿ
ಕಾಮ ಉಕ್ಕಿದ ರಾತ್ರಿ ಅಂಡ ಸೇರಿದ ಅಣು ಒಂದಾಗಿ ಎರಡಾಗಿ 
ಕಣ್ಣಾಗಿ ತುಟಿಮೂಡಿ, ಗಂಡೋ ಹೆಣ್ಣೋ ಇಂದು ಕಣ್ತೆರೆವ ಕೋಣೆ ; ಹುಟ್ಟು ಹೊರಬರುವ ಮುಂಚಿನ ಕ್ಷಣಗಳು 
ಕಾತರ ಆತುರ ಶತಪಥ ಮೊಗಸಾಲೆ

ದಾಟಿ ಮೆಟ್ಟಲೇರಿ
ರೋಗಿಗಳ ರೋಗಗಳೇ ಸಡಗರದ ಮೂಲ- ದಾದಿ ವೈದ್ಯರು
ಮುಖಕ್ಕೆ ಹಸಿರು ಗವಸು
ಹಾಕಿ ಕತ್ತರಿ
ಯಾಡಿಸಿ ತೊಗಲು ಕೊಯ್ದು ಮಾಂಸ ಹೆಕ್ಕುವ ಕೋಣೆ
ಸಾವು ಸುಳಿದಾಡುತ್ತಿದೆ ನಿಶ್ಯಬ್ದ ..ಅಗೋಚರ...

ಅಪ್ಪ ಮಲಗಿದ್ದಾನೆ-ಬೆಳ್ಳಿ ಗಡ್ಡ ಹಣ್ಣು ಮೈ ಕಣ್ಣು ಆಳದ ಬಾವಿ
ಎಂಬತ್ತೈದು ಬೇಸಗೆಗಳ ನೆನಪ ಮೂಟೆಯ ಭಾರ ಹೊತ್ತು ಬಸವಳಿದಂತೆ
ಧೋತರದ ಉಡಿಯಲ್ಲಿ ಒಮ್ಮೆ ಬಾಳೆ ಒಮ್ಮೆ ಮಾವು -ಹಲಸು ಕಲ್ಲಂಗಡಿ 
ಕಾಲಕಾಲಕೆ ತಂದು ತಿನ್ನಿಸಿದ ತಂದೆ
ಕುರಿಯಂತೆ ಹೊತ್ತು ಹೆಗಲಲ್ಲಿ ದಡದಡ ನಡೆದು
ಶಾಲೆಯಲ್ಲೆಸೆದು ಬರುತ್ತಿದ್ದ ಅಪ್ಪ- ಕಾಲ ಸ್ಥಂಭಿಸಿದಂತೆ
ಶಬ್ದಗಳಿಗೊಳಪಡದ ಭಾವ ಕಣ್ಣಲ್ಲಿ -ನೋಡುತ್ತಾನೆ , ನಿಸ್ತೇಜ
ರಕ್ತದಂಗಡಿಯಲ್ಲಿ ಕೊಂಡ ಬಾಟಲಿ ರಕ್ತ
ಜೀವಂತಿಕೆ ಹನಿಹನಿ ಒಳಗಿಳಿಯುತಿದೆಯೆಂದು ಭ್ರಮಿಸಿದಕ್ಕಂದಿರು ಬಂಧು-ಬಳಗ 
ಅಪ್ಪ ನೋಡುತ್ತಾನೆ ಎಲ್ಲ ಕಸರತ್ತುಗಳ, ಬಗೆಗಣ್ಣು  ಕಾಣುತ್ತಿರುವುದೇನೋ

ಅವಸ್ಥಾಂತರವೆಲ್ಲ ಸಂಗಮಿಸಿದಂತೆ 
ಅಲ್ಲಿ ಮಂಚದ ಮೇಲೆ ಅಪ್ಪ -ಮಗ್ಗುಲಿನಲ್ಲಿ ಇಲ್ಲಿ ಕುಳಿತಿದ್ದಾನೆ ನನ್ನ ಕುವರ; ಅವನಲ್ಲಿ ಮುಪ್ಪಿನ ನಾನು
ಇವನ ಕೇಕೆಗಳಲ್ಲಿ ಜೀವನದಲೆಗಳು 
ಇವನಲ್ಲಿ ಬಾಲ್ಯದ ನಾನು - ಅವನ ನಿಸ್ತೇಜದಲ್ಲಿ ನೋವಿನ ಸೆಲೆಗಳು
ಹಡೆವ ಬೆಳೆಸುವ ಜೊತೆಗೊಳಿಸುವ ಕರ್ಮ ಮುಗಿಸಿ ಹೋಗುವದು ಸತ್ತು 
ಬೆಳೆದಾತ ಹಡೆವ ಬೆಳೆಸುವ ಸಂಭ್ರಮ ಹೊತ್ತು 
ಚಕ್ರ ಸುತ್ತುವದು 
ಮೈಕ್ರೊಲೆವಲ್ಲಿನಲಿ ಬದುಕ ನೋಡುವ ತಪ್ಪ ಮತ್ತೆ ಎಸಗಿದ  ಫಲಿತ
ಭಯಂಕರ ಏಕತಾನತೆಯಪ್ಪ, ಇದ ಬಿಡು
ನರೆತ ಕೂದಲು ಮೈಯ್ಯ ಸುಕ್ಕುಗಳಲ್ಲವಿತಿರುವ
ಕತೆವ್ಯಥೆಗಳಲ್ಲಿ ನಿನ್ನಾತ್ಮವೆಲ್ಲಿ
ಸುಖೇದು:ಖೇ ಸಮೆಕೃತ್ವಾ ಲಾಭಾಲಾಭೌ ಜಯಾಜಯೌ..
ಪರಮಾತ್ಮ ಕೃಷ್ಣ  ಉಕ್ತ  ಸ್ಥಿತಪ್ರಜ್ನನ ಲಕ್ಷಣಗಳ 
ಮುಂದೆ ಕುಳ್ಳಿರಿಸಿಕೊಂಡು ವಿವರಿಸುತ್ತಿದ್ದ ತಂದೆ
ನಿನ್ನ ಕಣ್ಣಂಚಿನಲಿ ಈ ಕ್ಷಣ ಜಿನುಗಿದ ಈ ಹನಿ ನೀರಿನ ಅರ್ಥ
ಹೊಳೆಯುತ್ತಿಲ್ಲ ನಿನ್ನ ಒಳಗಣ್ಣ ನೋಟ

ಕ್ಷಮಿಸು ನನ್ನನ್ನು 
ಕ್ಷಮಿಸು- ಜೀವಂತಿಕೆ ಇಲ್ಲದ ಜೀವಾವಸ್ಥೆಯ ನಿನ್ನ
ನೋವು ದಕ್ಕದ ಕಾವ್ಯವಿಫಲವನ್ನು

Sunday, November 7, 2010

ಕಿ.ರಂ.ನೆನಪಿನ ನೆಪದಲ್ಲಿ..

ಪ್ರೀತಿ, ಹೃದಯವಂತಿಕೆ, ಸಹನಶೀಲತೆಯಂಥ ಗುಣಗಳು ಕ್ರಮೇಣ ನಶಿಸುತ್ತಿರುವಂತೆ , ಜಾತಿ ಎಂಬುದು ಸಾಮಾಜಿಕ ವಾಸ್ತವ ಮಾತ್ರವೋ
ಅಥವಾ ಒಂದು ಮನಸ್ಥಿತಿ ಕೂಡ ಆಗಿದೆಯೋ ಎಂದೆನ್ನಿಸುವಂತೆ ನಮ್ಮಲ್ಲಿಂದು ಚರ್ಚೆಗಳು ನಡೆಯುತ್ತಿರುವಂತಿದೆ. ಯಾವುದೋ ಒಂದು ವಿಷಯದ ಕುರಿತು ಚರ್ಚೆ ನಡೆದಿರುವಾಗ ಸಂಬಂಧ ಸೂತ್ರವಿಲ್ಲದ ಇನ್ನಾವುದೋ ವಿಷಯವನ್ನು ಎಳೆದು ತಂದು ವಿತಂಡವೆನ್ನಿಸುವಂಥ ವಾದ ಹೂಡುವದು, ಅಗತ್ಯವೋ ಅನಗತ್ಯವೋ ಬುದ್ಧಿಮತ್ತೆಯನ್ನು, ಬೌದ್ಧಿಕ ಅಹಂಕಾರವನ್ನು ಪ್ರದರ್ಶಿಸುವದು, ಚರ್ಚೆ - ಚಿಂತನೆಗಳ ಮುಖ್ಯ ಆಶಯಗಳ ದಾರಿ ತಪ್ಪಿಸುವದು......ಇದೇಕೆ ಹೀಗೆ? ಒಂದು ವಿಷಯದ ಕುರಿತು ಸ್ವಲ್ಪ ಆಳಕ್ಕೆ ಹೋಗಿ ಯೋಚಿಸಿದ ಯಾರಾದರೊಬ್ಬರು ಒಂದು ವಿವರಣೆಯನ್ನೋ, ವಿಶ್ಲೇಷಣೆಯನ್ನೋ ಒದಗಿಸಿದರೆ ಅದರ ಕುರಿತು ಯೋಚಿಸುವ ವ್ಯವಧಾನ ಕೂಡ ತೋರದೇ ಹಗುರವಾಗಿ ಪ್ರತಿಕ್ರಿಯೆ ತೋರುವುದು, ಪ್ರತಿಕ್ರಿಯೆ ತೋರಲೆಂದೇ ಪ್ರತಿಕ್ರಿಯೆ ತೋರುವುದು, ಸೈದ್ಧಾಂತಿಕವೋ, ರಾಜಕೀಯವೋ ಇನ್ನಾವುದೋ ಹಿತಾಸಕ್ತಿಯನ್ನು ಆರೋಪಿಸುವದು ಇಂಥ ಪ್ರವೃತ್ತಿಗಳು ನಮ್ಮ ಸಾಂಸ್ಕೃತಿಕ ಚರ್ಚೆಗಳಲ್ಲಿ, ಬೌದ್ಧಿಕ ಪರಿಸರದಲ್ಲಿ ಕಾರಣರಹಿತ ಒರಟುತನದ ವಾತಾವರಣವನ್ನುಂಟು ಮಾಡುತ್ತಿರುವಂತಿದೆ.

**************

ಕಾಶ್ಮೀರ್ ಬಗ್ಗೆ ಬೂಕರ್ ಪ್ರಶಸ್ತಿ ವಿಜೇತೆ ಆರುಂಧತಿ ರಾಯ್ ಇತ್ತೀಚೆ ಮಾತಾಡಿದ್ದರ ಕುರಿತು "ಕೆಂಡಸಂಪಿಗೆ"ಯಲ್ಲಿ ಪ್ರೇಮಶೇಖರ್ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಇದ್ದಕ್ಕಿದ್ದಂತೆ ಜಾತಿ ನುಸುಳಿತು. ಶ್ರೀನಗರದಿಂದ ಒಂದು ಹೇಳಿಕೆ ಬಿಡುಗಡೆ ಮಾಡಿ, ಲಕ್ಷಾಂತರ ಜನ ಕಾಶ್ಮೀರದಲ್ಲಿ ದಿನನಿತ್ಯ ಹೇಳುವದನ್ನೇ ತಾನು ಹೇಳುತ್ತಿರುವದಾಗಿ ನಿವೇದಿಸಿಕೊಂಡದ್ದರಲ್ಲಿ ಆಕೆ ಹೇಳಿದ್ದಳಲ್ಲ:" ಜಗತ್ತಿನ ಒಂದು ಅತ್ಯಂತ ದಮನಕಾರಿ ಮಿಲಿಟರಿ ಆಕ್ರಮಣಕ್ಕೊಳಗಾಗಿರುವ ಕಾಶ್ಮೀರಿ ಜನತೆ, ತಮ್ಮದೇ ನೆಲದಿಂದ ಹೊರದೂಡಲ್ಪಡುವ ದುರಂತಕ್ಕೊಳಗಾಗಿರುವ ಕಾಶ್ಮೀರಿ ಪಂಡಿತರು, ಕಾಶ್ಮೀರದಲ್ಲಿ ಪ್ರಾಣ ತೆತ್ತ ದಲಿತ ಸೈನಿಕರು, ಮತ್ತು ಈ ಆಕ್ರಮಣಕ್ಕಾಗಿ ಬೆಲೆ ತೆರುತ್ತಿರುವ ಬಡ ಭಾರತೀಯರ ಪರ ನ್ಯಾಯಕ್ಕಾಗಿ ತಾನು ಮಾತಾಡುತ್ತಿರುವದಾಗಿ! ಸರಿ, ಚರ್ಚೆ ಕಾಶ್ಮೀರಿ ಪಂಡಿತರು, ದಲಿತರು ಎಂಬ ಹಾಗೂ, ಈ ಸಮಸ್ಯೆಗೆ ಸೀಮಿತವಾಗಿ ಕೆಲಸಕ್ಕೆ ಬಾರದ, ಎಡ-ಬಲ ಎಂಬ ವರ್ತುಲಗಳಲ್ಲಿ ಸುಳಿ ತಿರುಗತೊಡಗಿತು. ಕಾಶ್ಮೀರ ಸಮಸ್ಯೆಯ ವಾಸ್ತವಗಳೇನು? ಅದಕ್ಕಿರುವ ಸಂಕೀರ್ಣ ಆಯಾಮಗಳೇನು? ಅದರ ಜಿಯೋ-ಪೊಲಿಟಿಕಲ್ ಇರುವಿಕೆ ಸೃಷ್ಟಿಸಿರುವ ಕಗ್ಗಂಟುಗಳೆಂಥವು?... ಯಾರಿಗೆ ಬೇಕು? ಪ್ರೇಮ್ ಶೇಖರ್ ಪ್ರಭುತ್ವಪರ, ಬಿಜೆಪಿ ಬೆಂಬಲಿಗ...ಫಿನಿಶ್!.

ಒಬ್ಬರು ಬರೆದರು: ಹಿಂದೂ ಪ್ರಾಬಲ್ಯದಡಿಯ ಸಮಾಜದಲ್ಲಿ ಶತಶತಮಾನಗಳಿಂದ ದಲಿತರು ಹಾಗೂ ಕೆಳಜಾತಿಯವರು ಚಿತ್ರಹಿಂಸೆಗೆ ಈಡಾಗಿದ್ದಾರೆ. ಮುಸ್ಲಿಮರು ಅದರಿಂದ ತಪ್ಪಿಸಿಕೊಂಡರು ಏಕೆಂದರೆ ಅವರು ಆಳುವವರಾಗಿದ್ದರು. ಈಗ ಅವರು ಆಳುವವರಾಗಿ ಉಳಿದಿಲ್ಲ, ಆದ್ದರಿಂದ ಅವರು ಬಹುಸಂಖ್ಯಾತರ ಮರ್ಜಿಯಡಿ ಇರಬೇಕಾಗಿದೆ ಮತ್ತು ಅವರ ಪರವಾಗಿ "ಆರು" ಧ್ವನಿ ಎತ್ತುತ್ತಿದ್ದಾಳೆ, ತಪ್ಪೇನಿದೆ? ! ಮತ್ತೊಬ್ಬರು ಬರೆದರು: "ಓಕೆ, ದಲಿತ ಸೈನಿಕರು! ಯಥಾಪ್ರಕಾರ ಮೆಲ್ಜಾತಿಗಳು ನಿಂದನಾಯೋಗ್ಯ! ಒಳ್ಳೇದೇ, ಸೈನ್ಯದಲ್ಲಿರುವ ಮೆಲ್ಜಾತಿಗಳನ್ನು ಆಯ್ದು ಗುರಿಯಾಗಿಟ್ಟುಕೊಂಡು ಬಡ ದಲಿತ ಸೈನಿಕರನ್ನು ಉಳಿಸುವಂತೆ ಕಾಶ್ಮೀರದ ಧೀರ ಹಾಗೂ ದಯಾಳು ಭಯೋತ್ಪಾದಕ ನಾಯಕರನ್ನು ವಿನಂತಿಸಬಹುದಲ್ಲ? ಹೇಗೂ ನೀವು ಆ "ಪ್ರಗತಿಪರ" ಶಕ್ತಿಗಳ ಸೋದರ-ಬಂಧುಗಳು, ಅವರು ವಿನಂತಿಯನ್ನು ಮನ್ನಿಸದಿರುತ್ತಾರೆಯೆ?" -ಚರ್ಚೆ ಹಳ್ಳ ಹಿಡಿಯಲು ಇನ್ನೇನು ಬೇಕು?

***********

ಈ ವರ್ಷದ ಅಗಷ್ಟ್ ನಲ್ಲಿ ಕನ್ನಡದ ಖ್ಯಾತ ವಿಮರ್ಶಕ ಕಿ.ರಂ. ನಾಗರಾಜ ತೀರಿ ಹೋದಾಗ ಅದೇ " ಕೆಂಡಸಂಪಿಗೆ"ಯಲ್ಲಿ ಕೆಲ ಕಾಲ ಕಿ.ರಂ ಕುರಿತು ಆರೆಂಟು ಲೇಖನಗಳು ಪ್ರಕಟವಾದವು.ಕಿ. ರಂ ಜೊತೆ ಹಲವಾರು ವರ್ಷಗಳ ಸಂಪರ್ಕ, ಸ್ನೇಹ ಇದ್ದವರು, ಅಷ್ಟು ಗಾಢವಾಗಿ ಅಲ್ಲದಿದ್ದರೂ ಕಿ. ರಂ ಅವರ ವ್ಯಕ್ತಿತ್ವವಿಶೇಷಗಳನ್ನು ಮೆಚ್ಚಿದವರು ಸರಳವಾಗಿ ಆತ್ಮೀಯವಾಗಿ ಆ ಅದ್ಭುತ ವ್ಯಕ್ತಿಯನ್ನು ನೆನಪಿಸಿಕೊಂಡ ಬರಹಗಳವು. ಆ ಎಲ್ಲ ಬರಹಗಳನ್ನು, ಅವುಗಳ ಕುರಿತು ಬಂದ ಪ್ರತಿಕ್ರಿಯೆಗಳನ್ನು ಓದುತ್ತಿದ್ದೆ. ಅಗಷ್ಟ್ ನಲ್ಲಿ ಕಿ. ರಂ. ತೀರಿಹೋದ ಬೆನ್ನಲ್ಲೇ , ಡಿ.ವ್ಹಿ. ಪ್ರಹ್ಲಾದ್, ಸತ್ಯಮೂರ್ತಿ, ಸಂಧ್ಯಾದೇವಿ ಮುಂತಾದವರು ಅವರ ಕುರಿತು ಬರೆದದ್ದರಲ್ಲಿ, ಅವುಗಳನ್ನು ಸಂಪಾದಕರು ಸಾಲಾಗಿ ಪ್ರಕಟಿಸಿದ್ದರಲ್ಲಿ ಅಸಹಜವಾದುದೇನೂ ಇರಲಿಲ್ಲ. ಅಂಥ ವೈಯಕ್ತಿಕವಾದ, ಆಪ್ತವಾದ ಅನಿಸಿಕೆ-ಅನುಭವಗಳನ್ನು ಹಂಚಿಕೊಂಡವರ ಬರಹಗಳನ್ನು ಇನ್ನಷ್ಟು ಓದಬೇಕೆಂದು ನನ್ನಂತೆ ಹಲವಾರು ಜನರಿಗೆ ಅನ್ನಿಸಿರಬಹುದು.ಪ್ರತಿಕ್ರಿಯೆಗಳಲ್ಲಿ ಕೆಲವರು ತಮ್ಮ ಆ ಬಯಕೆಯನ್ನು ವ್ಯಕ್ತಗೊಳಿಸಿಯೂ ಇದ್ದರು..ಆದರೆ ಕೆಲವರಿಗೆ ಹಾಗೆ ಅನ್ನಿಸಲಿಲ್ಲ.! ಕಿ.ರಂ. ಬಗ್ಗೆ ಬಂದ ನಾಲ್ಕೆಂಟು ಲೇಖನ ಓದುತ್ತಲೇ ಅವರಲ್ಲಿ ಇದ್ದಿರಬಹುದಾದ ಸಹನೆಯ,ಹೃದಯವಂತಿಕೆಯ ಅಲ್ಪಸ್ವಲ್ಪ ಸ್ಟಾಕ್ ಮುಗಿದುಹೋಯಿತು. ಆಕಾಶ ಕಳಚಿಕೊಂಡು ಬಿದ್ದಿತ್ತು. ಕಿ.ರಂ ಕುರಿತ ಲೇಖನಗಳನ್ನು ಹೊರತುಪಡಿಸಿಯೂ ರಾಶಿ ಸಾಮಗ್ರಿ ಕೆಂಡಸಂಪಿಗೆಯಲ್ಲಿತ್ತು. ಊಹೂಂ. ಅದೆಲ್ಲ ಅವರಿಗೆ ಬೇಡ. ಒಬ್ಬರಿಗೆ ಕಿ.ರಂ ಲಂಕೇಶ್ ಬಳಗದ ವ್ಯಕ್ತಿಯಾಗಿಯೂ, ಕೆಂಡಸಂಪಿಗೆ ಲಂಕೇಶ್ ಬಳಗದ ಲೇಖಕರಿಗಾಗಿ ಇರುವಂಥ ಪತ್ರಿಕೆಯಾಗಿಯೂ ಕಂಡಿತು.ಒಬ್ಬರು ಕಿ.ರಂ.ಕುರಿತ ಬರಹಗಳು ಸಾಕಷ್ಟಾಯ್ತು. ದಯವಿಟ್ಟು ಅದನ್ನು ನಿಲ್ಲಿಸಿ ಬೇರೆ "ಸ್ಟೋರೀಸ್" ಪ್ರಕಟಿಸಿ ಎಂದು ಆದೇಶಿಸಿ ಇದೇನು ಕೆಂಡಸಂಪಿಗೆಯೋ ಕಿರಂಸಂಪಿಗೆಯೋ ಎಂದು ಕೇಳಿದರೆ ಇನ್ನೊಬ್ಬರು ವಿಜ್ಞಾನ ತಂತ್ರಜ್ಞಾನಕ್ಕಿಂತ ಸಾಹಿತ್ಯ ಹೇಗೆ ಮಿಗಿಲು? ಆದ್ದರಿಂದ ಸಂಪಾದಕರು "ಇನ್ನು ಹತ್ತು ವರ್ಷ" ಕಿ.ರಂ ಕುರಿತ ಲೇಖನ ಪ್ರಕಟಿಸುತ್ತ ಹೋಗದೇ ಸಮಕಾಲೀನ ಜಗತ್ತಿನ ಇತರೆ ಆಸಕ್ತಿಕರ ವಿಷಯಗಳ ಕುರಿತ ಲೇಖನಗಳನ್ನು ಆಹ್ವಾನಿಸುತ್ತಾರೆಂದು ಆಶಿಸುವೆ ಎಂದರು..ಮತ್ತೊಬ್ಬರಿಗೆ ಈ ಆತ್ಮೀಯ ಒಡನಾಟದ ಸ್ಮರಣೆಗಳು "ಸ್ವಾಮಿಭಕ್ತಿ"ಯ ವೈಭವೀಕರಣದಂತೆ ಕಂಡರೆ ಮತ್ತೂ ಒಬ್ಬರಿಗೆ ಸಂಧ್ಯಾದೇವಿಯ ಲೇಖನದ ಆರಂಭದಲ್ಲಿರುವ ಸಂಭ್ರಮ ಆಕೆ ತಮ್ಮ ಲವ್ಹ್ ಅಫೇರ್ ವಿವರಿಸುತ್ತಿದ್ದಂತೆ ಕಂಡಿತಂತೆ! ಇದೆಂಥ ಪ್ರತಿಕ್ರಿಯೆಗಳಿವು? ಕೆಂಡಸಂಪಿಗೆಯಲ್ಲಿ ಕಿ.ರಂ ಕುರಿತ ಬರಹಗಳು ಜಾಸ್ತಿಯಾದವು ಎಂಬ ಒಬ್ಬಿಬ್ಬರ ಆಕ್ಷೇಪಕ್ಕೆ ಬೆಲೆಕೊಟ್ಟು ಪಾಪ ಅಬ್ದುಲ್ ರಶೀದ್ ಅವರು, ಇನ್ನು ಕೆಲವರು ಬರೆದ ಬರಹಗಳು ಇದ್ದಾಗ್ಯೂ, ರಹಮತ್ ತರೀಕೆರೆಯವರ ಲೇಖನದೊಂದಿಗೆ ಕಿ.ರಂ ಕುರಿತ ಲೇಖನಸರಣಿಯ ಪ್ರಕಟಣೆಯನ್ನು ಮನಸಿಲ್ಲದ ಮನಸಿನಿಂದ ಕೊನೆಗೊಳಿಸಿದರು.ಮೇಲ್ಕಾಣಿಸಿದ ಹಗುರ ಪ್ರತಿಕ್ರಿಯೆಗಳನ್ನು ಬರೆದವರಿಗೆ ಕಿ.ರಂ. ಏನೆಂದು ಗೊತ್ತಿಲ್ಲವೆಂಬುದಂತೂ ಸ್ಪಷ್ಟವಾಯಿತು.

***********

ಕಿ.ರಂ ನನಗೂ ಬಹು ಕಾಲ ಗೊತ್ತಿರಲಿಲ್ಲ. ಆ ವ್ಯಕ್ತಿತ್ವಕ್ಕಿದ್ದ ಮೋಹಕತೆ ಎಂಥದೆಂದೂ ತಿಳಿದಿರಲಿಲ್ಲ. ಬಹಳ ವರ್ಷಗಳ ಹಿಂದೆ ಧಾರವಾಡದಲ್ಲಿ ಶಿ.ಶಿ. ಬಸವನಾಳರ ಕುರಿತು ಅವರ ವಿಚಾರಗಳ ಮಂಡನೆಯನ್ನು ಕೇಳಿದ ಸಂದರ್ಭದಲ್ಲಿ ನಾನು ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿರಲಿಲ್ಲ. ನನ್ನ ಮೊದಲ ಕವನ ಸಂಕಲನದ ಕುರಿತು ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ೧೯೯೨ರ "ಕನ್ನಡ ವಾರ್ಷಿಕ"ದಲ್ಲಿ ಒಳ್ಳೆಯ ಕೆಲವು ಮಾತುಗಳನ್ನು ಬರೆದಿದ್ದರು. ಆಗಲೂ ನನಗೆ ಅವರು ವೈಯಕ್ತಿಕವಾಗಿ ಪರಿಚಿತರಿರಲಿಲ್ಲ. ಆ ಮೇಲೆ ಕೆಲವು ಸಂದರ್ಭಗಳಲ್ಲಿ ನಾವು ಭೇಟಿಯಾದೆವಾದರೂ ೧೯೯೮ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಡಾ. ಎಂ. ಜಮುನ ಅವರು Nationalism and Literature ಎಂಬ ವಿಚಾರ ಸಂಕಿರಣವೊಂದನ್ನು ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನ ಆಶ್ರಯದಲ್ಲಿ ಏರ್ಪಡಿಸಿದ್ದ ಸಂದರ್ಭದಲ್ಲಿ ನನಗವರು ಹೆಚ್ಚು ನಿಕಟವಾಗಿ ಅರ್ಥವಾದರು, ಕನ್ನಡದ ಬಹುಪಾಲು ಸಾಹಿತ್ಯಾಸಕ್ತರಿಗೆ ಅವರು ಸರಿಯಾದ ರೀತಿಯಲ್ಲಿಯೇ ಅರ್ಥವಾಗಿದ್ದಾರೆ. ಅವರ ಕುರಿತ ಬರಹಗಳಲ್ಲಿ ಅವರ ಕುಡಿತದ ಪ್ರಸ್ತಾಪಗಳಿದ್ದದ್ದನ್ನೇ ಕೆಲವರು ತಮ್ಮ ಪ್ರತಿಕ್ರಿಯೆಗಳ ಅತಿ ಪ್ರಶಸ್ತ ಅಂಶವಾಗಿಟ್ಟುಕೊಂಡಿದ್ದಾರೆ. ಕಿ.ರಂ ಅವರನ್ನು ಬಲ್ಲವರಿಗೆ ಅದು ವೈಯಕ್ತಿಕವಾದ ಅವರ ಒಂದು ಬಲಹೀನತೆ ಎಂಬುದಕ್ಕೆ ಹೊರತಾಗಿ ಬಹಳ ಮಹತ್ವವಿಲ್ಲ. ಕುಡಿದಾಗಲೂ ಕುಡಿಯದಿದ್ದಾಗಲೂ ಮುಖ್ಯವಾಗುತ್ತಿದ್ದುದು ಅವರ ಸರಳ ವರ್ತನೆ, ಮಾನವೀಯ ಸಂವೇದನೆಗಳು,ಜೀವನೋತ್ಸಾಹ, ಕಾವ್ಯಪ್ರೀತಿ ಇವೇ. ಸ್ವಲ್ಪ ಖ್ಯಾತಿ ಹೆಗಲೇರುತ್ತಿದ್ದಂತೆ ಸೆಲೆಬ್ರಿಟಿ ಚಹರೆ, ಸೆಲೆಬ್ರಿಟಿ ದಿರಿಸು, ಸೆಲೆಬ್ರಿಟಿ ಮ್ಯಾನರಿಸಂಗಳನ್ನು ಧರಿಸಿ ಜನವಿದೂರವಾಗುವವರ ನಡುವೆ ಕಿ.ರಂ ಒಬ್ಬ ಅಪ್ಪಟ ಮನುಷ್ಯರಾಗಿದ್ದರು. ದೊಡ್ಡಬಳ್ಳಾಪುರದ ಸೆಮಿನಾರ್ ಕುರಿತು ಪ್ರಸ್ತಾಪಿಸಿದೆನಷ್ಟೆ. ನಿಜ ಹೇಳಬೇಕೆಂದರೆ ಕಿ.ರಂ ಅವರ ವ್ಯಕ್ತಿತ್ವ-ವಿಚಾರಗಳೆರಡರ ಪರಿಚಯ ಮೊಟ್ಟಮೊದಲು ನನಗಾದದ್ದು ಕೂಡ ಎರಡನೆಯ ದಿನದ ಎಲ್ಲ ಗೋಷ್ಠಿಗಳು ಮುಗಿದಾದ ಮೇಲೆ ಡಾ.ಜಮುನ ಹಾಗೂ ಕೊಂಗಾಡಿಯಪ್ಪ ಕಾಲೇಜಿನಲ್ಲೇ ಅಧ್ಯಾಪಕರಾಗಿರುವ ಅವರ ಪತಿ ಪ್ರೊ.ಮುನಿರಾಜು ಅವರ ನಿವಾಸದ ತಾರಸಿಯ ಮೇಲೆ ನಡೆದ ಪಾನಗೋಷ್ಠಿಯಲ್ಲೇ. ಒಂದು ತಮಾಷೆಯೂ ನಡೆಯಿತು. ಆ ರಾತ್ರಿ ಕಿ.ರಂ ಭೌತವಿಜ್ಞಾನದ ಯಾವ್ಯಾವುದೋ ಸಿದ್ಧಾಂತಗಳ ಕುರಿತು ಮಾತಾಡುತ್ತಿದ್ದಾರೆ. ಅಲ್ಲಿ ಗುಂಪು ಸೇರಿದವರಲ್ಲಿ ನಾಲ್ಕೆಂಟು ಜನ ವಿಜ್ಞಾನದ ಅಧ್ಯಾಪಕರೂ ಇದ್ದಾರೆ. ಕಿ.ರಂ ಮಾತುಗಳನ್ನು ಕೇಳುತ್ತ ಬೆಕ್ಕಸ ಬೆರಗಾಗಿದ್ದಾರೆ."...ಇದು ಸರಿ ತಾನೆ? ನೀವು ವಿಜ್ಞಾನದ ಅಧ್ಯಾಪಕರು, ನೀವು ಸರಿ ಎಂದರೇನೇ ನಾನು ಮುಂದುವರಿಯುವದು.." ಎಂದು ಅವರು ವಿಜ್ಞಾನದ ಅಧ್ಯಾಪಕರನ್ನು ಕೇಳುವದು, ಅವರು ತಲೆದೂಗುವದು.. ಇವರು ಮತ್ತೆ ಆಕಾಶದತ್ತ ಮೊಗ ಮಾಡಿ ಮಾತನಾಡುವದು,ಮಧ್ಯೆ ಮಧ್ಯೆ ಮದ್ಯ,ಅಡಿಗ, ಬೇಂದ್ರೆ, ಲಂಕೇಶ್... ... ರಾತ್ರಿ ಹತ್ತಾಯಿತು, ಹನ್ನೊಂದಾಯಿತು.. ಪ್ರೊ. ಎಸ್. ಚಂದ್ರಶೇಖರ್ ಅವರು ಕಿ.ರಂ. ನಾಗರಾಜರನ್ನು "ಆಧುನಿಕ ಕರ್ನಾಟಕದ ಅಲ್ಲಮ" ಎಂದು ಹೆಸರಿಸಿ ಎಲ್ಲರೂ ಅದನ್ನು ಸರ್ವಾನುಮತದಿಂದ ಅನುಮತಿಸಿದ್ದೂ ಆಯಿತು. ನನಗೆ ಒಂದು ಟೆನ್ಶನ್ ಶುರುವಾಗಿ ಹೋಗಿತ್ತು. ಇನ್ನು ಊಟ ಮುಗಿಸಿಕೊಂಡು ಈ ಕಿ.ರಂ ಮತ್ತು ಪ್ರೊ.ಚಂದ್ರಶೇಖರ್ ಜೊತೆ ಬೆಂಗಳೂರು ತಲುಪಿ ಅಲ್ಲಿ ಇವರಿಂದ ಬೇರ್ಪಟ್ಟು ನಾನು ಕೋಣನಕುಂಟೆಗೆ ಹೋಗುವದೆಂತು? ಕನಕಪುರ ಮುಖ್ಯರಸ್ತೆಯಿಂದ ಚುಂಚಗಟ್ಟಾ ರಸ್ತೆಯಲ್ಲಿ ಸಾಗಿ ಉದ್ದೋಉದ್ದ ನಡೆದು ನನ್ನ ಸಂಬಂಧಿಯ ಮನೆ ಸೇರುವುದ್ಯಾವಾಗ ಮತ್ತು ಹೇಗೆ? ಬೀದಿ ನಾಯಿಗಳು?... ಕಳ್ಳರು?... ಮಧ್ಯೆ ಒಮ್ಮೆ ನನ್ನ ಪೇಚಾಟ ಅವರ ಗಮನಕ್ಕೆ ಬಂದು ಅವರ ಯಾವುದೋ ಆಲೋಚನಾ ಲಹರಿ ತುಂಡಾದಂತಾಗಿ "ಶೆಟ್ಟರ್ ಸಮಸ್ಯೆ ಏನಂತೆ?" ಎಂದು ಅವರು ಕೇಳಿದ್ದರು. ಅದನ್ನ್ಯಾರೂ ಅವರಿಗೆ ವಿವರಿಸದೇ ಅವರು ಮುಂದುವರಿದಿರಬೇಕಾದರೆ ನನ್ನ ಸಮಸ್ಯೆಯೂ ಮುಂದುವರಿದೇ ಇತ್ತಲ್ಲ? ಕೊನೆಗೆ ನನ್ನನ್ನೇ ಕೇಳಿದರು, ನಾನು ನಿವೇದಿಸಿಕೊಂಡೆ. ಅವರು ನನ್ನನ್ನೇ ನೋಡುತ್ತ ಹೇಳಿದ್ದು ಈಗಲೂ ನೆನಪಿದೆ: "ಕವಿ ಕಣಯ್ಯಾ ನೀನು, ಬೇಂದ್ರೆಯ ಧಾರವಾಡದಿಂದ ಬೇರೆ ಬಂದಿದೀಯ. ಕವಿಯಾದವನು ಅನುಭವಗಳಿಗೆ ಅಂಜಬಾರದು. ನಡೀ ಬೆಂಗಳೂರಿಗೆ ಹೋಗೋಣ. ನಾನೂ ನಿನ್ನೊಂದಿಗೆ ಇರುತ್ತೇನೆ. ಬಸ್ ಸ್ಟ್ಯಾಂಡಿನಲ್ಲಿ ಮಲಗಿ ರಾತ್ರಿ ಕಳೆಯೋಣ. ಬೆಳಗಾದ ಮೇಲೆ ನೀನು ಕೋಣನಕುಂಟೆಗೆ ಹೋಗು, ನಾನು ನನ್ನ ಮನೆಗೆ ಹೋಗ್ತೇನೆ ಆಯ್ತಾ..." ಕೊನೆಗೆ ಜಮುನ ನನಗೆ "ಅಯ್ಯೋ ಬಿಟ್ ಹಾಕಿ ಸರ್, ಮೇಲೆ ಗೆಸ್ಟ್ ರೂಮ್ ಇದೆ. ಆರಾಮಾಗಿ ಮಲಗಿ, ಬೆಳಿಗ್ಗೆ ತಿಂಡಿ ಮಾಡಿಕೊಂಡು ಹೋಗಿ" ಎಂದು ನನ್ನ ಸಮಸ್ಯೆಯನ್ನು ಪರಿಹರಿಸಿದರು. ಅದಾದ ಬಹುದಿನಗಳ ವರೆಗೆ " ಕವಿಯಾದವನು ಅನುಭವಗಳಿಗೆ ಅಂಜಬಾರದು" ಎಂದ ಕಿ.ರಂ ಮಾತು ಮನಸ್ಸಿನಲ್ಲಿ ನೆಲೆ ಊರಿದ್ದು ಮಾತ್ರ ನಿಜ.

***********

ತುಂಬ ಜಾತ್ಯಾತೀತ ಕಾಳಜಿಗಳನ್ನು ಹೊಂದಿದ್ದ ಕಿ.ರಂ ಅವರ ಕುರಿತ ಲೇಖನಗಳಿಗೆ ಬಂದ ಪ್ರತಿಕ್ರಿಯೆಗಳಲ್ಲೂ ಜಾತಿ ನುಸುಳಿತು. ಶಶಿಕಲಾ ಚಂದ್ರಶೇಖರ್ ಎಂಬುವರು ಬರೆದ ಲೇಖನಕ್ಕೆ ಒಬ್ಬ ಮಹನೀಯರ ಪ್ರತಿಕ್ರಿಯೆ ನೋಡಿದರೆ ಬೇಸರವಾಗುತ್ತದೆ. ಪ್ರತಿಯೊಬ್ಬ ಬರಹಗಾರನೂ ಕಿ. ರಂ. ಒಬ್ಬ ಮದ್ಯವ್ಯಸನಿ ಎಂಬಂತೆ ಚಿತ್ರಿಸುತ್ತಿದ್ದಾರೆಂದು ವ್ಯಾಖ್ಯಾನಿಸಿ ಅದು "ಕಿ. ರಂ ಅವರ ಜಾತಿ ಕಾರಣವಾಗಿ ಅವರನ್ನು ಹಾಗೆ ಬಿಂಬಿಸುವ ವ್ಯವಸ್ಥಿತ ಪ್ರಚಾರವಾಗಿರಬಹುದೆ?" ಎಂದು ಅವರು ಓದುಗರನ್ನೇ ಕೇಳುತ್ತಾರೆ! ಇದಕ್ಕೆ ಪ್ರತಿಯಾಗಿ ಒಬ್ಬರು, "ಅವರ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ, ಆದರೆ ಕಿ.ರಂ.ಅವರ ಜಾತಿ ಯಾವುದೆಂದು ನನಗೆ ಗೊತ್ತಿಲ್ಲ.ಅದು ಮುಖ್ಯ ಎಂದೂ ಅನಿಸಿರಲಿಲ್ಲ" ಎಂದು ಸರಿಯಾಗಿಯೇ ಬರೆದರು. ಅವರ ಹೆಸರಿನಲ್ಲಿದ್ದ ಅಕ್ಷರಗಳ ದೀರ್ಘ ರೂಪ ಕಿತ್ತಾನೆ ರಂಗಪ್ಪ ಎಂಬುದೂ ಬಹಳ ಜನಕ್ಕೆ ಗೊತ್ತಿರಲಿಲ್ಲ. ಜಾತಿ ಯಾವುದು? ಅದ್ಯಾರಿಗೆ ಯಾತಕ್ಕೆ ಬೇಕು? ಅವರ ಮರಣಾನಂತರ ಪ್ರಕಟವಾದ ಬರಹಗಳಲ್ಲಿ ಅವರ ತಂದೆ ಶಾನುಬೋಗರಾಗಿದ್ದರು ಇತ್ಯಾದಿ ಓದಿ ಬ್ರಾಹ್ಮಣರಿದ್ದಾರು ಅನ್ನಿಸಿತು. ಅದು ಮುಖ್ಯವಾಗಲಿಲ್ಲ, ಅದರಿಂದ ಅವರ ಕುರಿತಾಗಿದ್ದ ಪ್ರೀತಿ ಮೆಚ್ಚುಗೆ ಆದರಗಳು ಮುಕ್ಕಾಗಲೂ ಇಲ್ಲ. ಕಿ.ರಂ ಇದ್ದುದೇ ಹಾಗೆ.

ಅಂತಿಮವಾಗಿ ಜುಲೈ ೧೬ನೇ ತಾರೀಖು, ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೆನೆಟ್ ಹಾಲ್ ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕ,ಈಗ ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ-ವೈಸ್ ಚಾನ್ಸಲರ್ ಆಗಿರುವ,ಡಾ. ಎಸ್. ಚಂದ್ರಶೇಖರ್ ಅವರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ನಾನವರನ್ನು ಕಂಡೆ..ಮಧ್ಯಾಹ್ನ ಊಟದ ವೇಳೆಯಲ್ಲಿ ಕಿ.ರಂ. ಸರತಿ ಸಾಲಿನಲ್ಲಿ ನಿಂತಿದ್ದರು. ಸಾರ್, ಅದೆಲ್ಲ ತುಂಬ ವಿಳಂಬವಾಗುತ್ತದೆ. ಬನ್ನಿ ಎಂದು ಪಕ್ಕಕ್ಕೆ ಕರೆದು ಒಬ್ಬ ವಿದ್ಯಾರ್ಥಿಗೆ ಹೇಳಿ ಅವರಿಗೆ ಊಟದ ವ್ಯವಸ್ಥೆ ಮಾಡಿಸಿದೆ. ಕಿ. ರಂ. ಯಥಾಪ್ರಕಾರದ ಹುರುಪಿನ ಕಿ.ರಂ ಆಗಿ ಕಾಣಲಿಲ್ಲ. ಬಳಲಿದಂತಿದ್ದರು. ಊಟದ ನಂತರ ಅವರದೇ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ನಾನು, ನಟರಾಜ್ ಹುಳಿಯಾರ್, ಅಶ್ವಥ್ ನಾರಾಯಣ ನಮ್ಮ ವಿಚಾರಗಳನ್ನು ಮಂಡಿಸಿಯಾದ ಮೇಲೆ ಅವರು ಅಧ್ಯಕ್ಷ ಭಾಷಣ ಮಾಡಿದ್ದೂ ಸೋತ ದನಿಯಲ್ಲೇ. ಹಿಂದೂ ಧರ್ಮ, ಭಾರತೀಯ ಸಂಸ್ಕೃತಿಗಳ ಕುರಿತ ಕುವೆಂಪು ಅವರ ತಾತ್ವಿಕತೆಯ ಬಗ್ಗೆ ನಮ್ಮ ಪೀಳಿಗೆಯ ಪ್ರಗತಿಪರರಲ್ಲಿ ಇರುವ ಗೊಂದಲಗಳ ಕುರಿತು ನಾನು ಮಾಡಿದ ವಿಶ್ಲೇಷಣೆಯನ್ನು ಮೆಚ್ಚಿ ಒಂದೆರಡು ಮಾತಾಡಿದರು. ರಾತ್ರಿ ಸೆಂಚುರಿ ಕ್ಲಬ್ ನಲ್ಲಿ ಬಹಳ ವರ್ಷಗಳ ನಂತರ ದೆಹಲಿಯ ಜೆ ಎನ್ ಯುನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ನನ್ನ ಅಧ್ಯಾಪಕರಾಗಿದ್ದ ಸವ್ಯಸಾಚಿ ಭಟ್ಟಾಚಾರ್ಯ, ಪಣಿಕ್ಕರ್ ಸಿಕ್ಕು ಅವರ ಜೊತೆ ನಾನು ಮಾತಾಡುತ್ತಿದ್ದರೂ ಕಣ್ಣುಗಳು ಕಿ.ರಂ ಅವರನ್ನು ಹುಡುಕುತ್ತಿದ್ದವು. ಅವರು ಬಂದಿಲ್ಲವೆಂದು ಯಾರೋ ಹೇಳಿದರು. ಆಗಷ್ಟ್ ೮ ರಂದು ಧಾರವಾಡದಲ್ಲಿ ಕುರ್ತಕೋಟಿ ಟ್ರಸ್ಟ್ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅವರು ಮುಖ್ಯ ಅತಿಥಿಯಾಗಿ ಬರುತ್ತಾರೆ ಎಂದು ಪತ್ರಿಕೆಗಳಲ್ಲಿ ಓದಿದಾಗ ಅವರ ಜೊತೆ ಮಾತನಾಡುವ ಒಂದು ಅವಕಾಶಕ್ಕಾಗಿ ಕಾಯ್ದಿದ್ದೆ. ಅದರ ಹಿಂದಿನ ದಿನವೇ ಸಂಜೆ ಅವರ ನಿಧನದ ವಾರ್ತೆ ಬಂತು.

ಕಿ.ರಂ. ಅಥವಾ ಅವರಂಥ ಉನ್ನತಿಕೆಯ ವ್ಯಕ್ತಿತ್ವಗಳ ಕುರಿತೂ ಎಂತೆಂಥ ವಿಲಕ್ಷಣ ಗ್ರಹಿಕೆಗಳು, ಕುಹಕಗಳು,ತೆಳುವಾದ ಅನಿಸಿಕೆಗಳು ಎಗ್ಗಿಲ್ಲದೇ ವ್ಯಕ್ತಗೊಳ್ಳುತ್ತವಲ್ಲ ಅಂತ ಬೇಸರವಾಗುತ್ತದೆ. ಸುಶಿಕ್ಷಿತ ವ್ಯಕ್ತಿಗಳ ಮನಸುಗಳೂ ಎಲ್ಲದರಲ್ಲಿ ಜಾತಿ ಹುಡುಕುತ್ತ ಕುಳಿತರೆ ಅಂಥ ಮನಸುಗಳನ್ನು ಸುಶಿಕ್ಷಿತ ಮನಸುಗಳು ಎಂದು ಪರಿಗಣಿಸುವದು ಹೇಗೆ? ಎಂಬುದು ಪ್ರಶ್ನೆ. ಇಂಥ ಪ್ರವೃತ್ತಿಗಳು ಸಂವಾದಗಳ ಸಾಧ್ಯತೆಗಳನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಬಹುದಷ್ಟೇ. ಅದರಿಂದೇನು ಪ್ರಯೋಜನ?

Sunday, October 31, 2010

ಕಾಣದ ನದಿಯೊಂದರ ಕಣಿವೆಯಲಿ ಕುಳಿತು..




ಶಾಲ್ಮಲಾ ಎಂಬ ಅಗೋಚರ ಹೊಳೆಯಂತೆ
ಒಳಗೊಳಗೆ ಹರಿದಿರುವ ನೂರೆಂಟು ಸೆಳವುಗಳ 
ಹೊಯ್ದಾಟ ತುಯ್ದಾಟ ನನ್ನೊಳಗೆ ಇಂದು, ಕುಳಿತಿರುವೆ 
ಅದೇ ಗುಪ್ತಗಾಮಿನಿ ನದಿಯ ಕಂಗಾವಲಿಗೆ ನಿಂತಂತೆ ಹಬ್ಬಿರುವ ಬೆಟ್ಟಗಳ ಕಣಿವೆಯೊಳಗೆ 

ವರ್ಷದ ಕೊನೇ ತಿಂಗಳು ಕೊನೆಯುಸಿರೆಳೆಯುತ್ತಿದೆ, ಇದು ಮಧ್ಯಾಹ್ನ
ಬೆಟ್ಟನೆತ್ತಿಯ ಒಂದು ಓರೆ, ನೆತ್ತಿಯ ಮೇಲೆ ತೂಗುತ್ತಿದೆ ಕೆಂಡಮಂಡಲ
ಸುತ್ತ ಕುರುಚಲು ನಡುವೆ ಹಾಸುಗಲ್ಲು ಅದರ ಮೇಲೆ ಈ ನಾನು 

ತೆರೆತೆರೆತೆರೆ ತೇಲಿಬಂದು ಮೈಯ್ಯನಮರಿ ಮುಖವ ಸವರಿ ಓಡುತಿರುವ ಮಂದಗಾಳಿ
ದ್ಯಾವಾ ಪೃಥ್ವಿ ಪವಡಿಸಿದ್ದಾಳೆ, ದಿಟ್ಟಿ ಹರಿದಲ್ಲೆಲ್ಲ
ಹೊಸತಾರುಣ್ಯದ ಹಮ್ಮಿನ ಹುಡುಗಿಯ ಏರುಎದೆಯ೦ತೆ  ಅಲ್ಲಿ
ಹಸಿರುಟ್ಟ ಹೆಂಗಸಿನ ಮೈ ನುಣುಪು ಕಿಬ್ಬೊಟ್ಟೆಯಾಗಿ ಕೆಳಗಿಳಿದಂತೆ ಇಲ್ಲಿ 
ದಿಣ್ಣೆ-ದಿಬ್ಬಗಳು 

ಕೆಳಗೆ, ದೂರದ ಹಾಸುಬಯಲಿನಲ್ಲಿ 

ಹದಿನೈದು ಎಮ್ಮೆ ಮೇಯುತ್ತಿವೆ
ಬಾಯಿ ನೆಲಕೆ ಹಚ್ಚಿಕೊಂಡೇ ನಿಂತಿವೆ, ಒಂದೂ ತಲೆಯೆತ್ತಿಲ್ಲ

ಕ್ಷಿತಿಜವೊಂದು ಗಿರಿಶ್ರೇಣಿ ಘನೀಭೂತ ಮೋಡದಂತೆ ಧೂಮ್ರಛಾಯೆಯಂತೆ
ಅಡ್ಡಡ್ಡ ಮಂಜುಪರದೆ ,ಈಗ
ಗಾಳಿ ಬೀಸುತ್ತಿಲ್ಲ ದನಗಾಹಿ ಹಾಡುತ್ತಿದ್ದಾನೆ
ಬಿಸಿಲು ಚುಚ್ಚತೊಡಗಿದೆ 
ಎಲ್ಲೋ ದೂರ ಪ್ರಪಾತದಿಂದೆ೦ಬ೦ತೆ
ಇಟ್ಟಿಗೆಯ ಬಟ್ಟಿಯಿಂದ ಟಕ್ ಟಕ್ ಟಕ ಸದ್ದು 

ಪೃಕೃತಿ ಮೌನವಾಗಿದ್ದಾಳೆ; ಆಗೊಮ್ಮೆ ಈಗೊಮ್ಮೆ 
ಒಕ್ಕಲ ಮಕ್ಕಳ ಮಾತಿನ ಕೂಗಿನ ಹಾ ಹೋ ದನಿಯನು ಮೀರಿ 
ಹರದಾರಿ ದೂರದ ಬೈಪಾಸ್ ಹೆದ್ದಾರಿವಾಹನಗಳ ಸದ್ದು ಗಾಳಿಗುಂಟ 
ಅಲ್ಲೊಂದು ಇಲ್ಲೊಂದು ಕೀಟಗಳ ಕಿರ್ರ್ ಗುಬ್ಬಿಗಳ ಚಿಂವ್ 
ಹಸಿರು ಸುಟ್ಟು ಕಂದು ಬಣ್ಣ  ತಳೆದು ನಿಂತ ಹುಲ್ಗಾವಲು
ಬೀಸಿಬಂದ ಗಾಳಿ ಸವರೆ ಜುಳುಜುಳೂ ಬಗ್ಗುವದು ಮತ್ತೆ ತಲೆ ಎತ್ತುವದು 
ಅದರಲೊಂದು ಲಯವಿದೆ 
ನಾಚಿಗ್ಗೇಡಿ ಎಮ್ಮೆಗಳು ಇನ್ನೂ ತಲೆಯೆತ್ತಿಲ್ಲ ;ನೆಲಕೆ ಹಚ್ಚಿ ಬಾಯಿ ಹೆಜ್ಜೆಯಷ್ಟೇ ಕೀಳುತ್ತಿವೆ 
ತೀರದಂಥ ಹಸಿವಿದೆ.

ಎಡಕ್ಕೊಂದು ದಿಬ್ಬ ಬಲಕ್ಕೊಂದು ಕೊರಕಲು
ನಡುವೆ ಇಳಿದು ಅಂಕುಡೊಂಕು ಮನಸೂರಿಗೆ ನಡೆದ ಹಾದಿ 
ದೂರ, ಎರಡು ಕರ್ರಗಿನ ಲಂಬರೇಖೆಗಳಂತೆ 
ಮಣ್ಣದಾರಿಯಲಿ ಹೆಜ್ಜೆ ನೂಕುತ್ತಿರುವ ಒಕ್ಕಲಗಿತ್ತಿಯರು
ಅವರು ಹಾದರಗಳ ಕುರಿತು ಮಾತಾಡುತ್ತಿರಬಹುದು 
ಗೌರವಾದರಗಳ ಕುರಿತೂ ಇರಬಹುದು ...

ದನಗಾಹಿ ಹುಡುಗ ಇತ್ತ ಬಂದ;ಹೆಗಲಮೇಲೆ ಅಡ್ಡಕೋಲು
ಹಕ್ಕಿರೆಕ್ಕೆ ಬಿಚ್ಚಿದಂತೆ ಕೋಲ ಬಳಸಿ  ಕೈಯ್ಯನೂರಿ 
ಕಣ್ಣಲ್ಲಿ ತಮಾಷೆ: 'ಏನ್ ಮಾಡಾಕ್ಹತ್ತೀರಿ?'
ಉತ್ತರ ಅವನ ಅಳವಿಗೆ ಮೀರಿತ್ತು,'ಕವಿತಾ ಬರಿಯಾಕ್ಹತ್ತೀನಿ'
ತಿರುತಿರುಗಿ ನೋಡುತ್ತ ಹೊರಟುಹೋದ

'ಇದು ಕವಿತೆಯಲ್ಲ...!', ಪ್ರತಿಭಟಿಸಿ, ಪರವಾಯಿಲ್ಲ 
ಇದು ಕವಿತೆಯಾಗಬೇಕೆಂಬ ಹಟ ನನಗೂ ಇಲ್ಲ 
ನೀವು ಪ್ರೌಢರಸಿಕರು
ರೂಪ ಆಕಾರವಿಲ್ಲದ ತಳಮಳಗಳ ಬಲ್ಲವರು ..

ಭಿನ್ನ ಧ್ವನಿ ಭಿನ್ನ ಲಯ ಬೇರೆಯದೇ ನೋಟ 
ಹೃದಯ ಹಗುರವಾಗಿದೆ 
ಮೇಲೇಳುವೆ, ಅಷ್ಟೇ... ...