Sunday, September 16, 2012

ಸಾಹಿತ್ಯಲೋಕದ ಒಂಟಿ ಸಲಗ : ಬುದ್ದಣ್ಣ ಹಿಂಗಮಿರೆ





     
`ಋಜುಪಥವ ಹಿಡಿದೆ ಛಲ ಬಿಡದೆ                          
ರಾಜಿಯಾಗದೆ ನಿಜದ ನೇರಕೆ ನಡೆದೆ
ಬುದ್ಧದರ್ಶನಕೆ ಹುಲ್ಲು ಗೆಜ್ಜೆ ನಿನಾದಕೆ
ಮುಪ್ಪಿಲ್ಲ ಹಿಂಗಮಿರೆಯಿತ್ತ ಕಾವ್ಯಗೌರವಕೆ
ಮಣಿಹವಿದು ನೀ ಗೈದ ಸೃಷ್ಟಿ ಸಾಮರ್ಥ್ಯಕೆ`
ಕನ್ನಡದ ಖ್ಯಾತ ಕವಿ, ವಿಮರ್ಶಕ ಡಾ.ಬುದ್ದಣ್ಣ ಹಿಂಗಮಿರೆಯವರಿಗೆ ಅರ್ಪಿತವಾದ `ಜನಪರ` (2011, ಸಂ: ಶಿವಾನಂದ ಗಾಳಿ) ಎಂಬ ಅಭಿನಂದನಾ ಗ್ರಂಥದಲ್ಲಿ ಪ್ರೊ. ಹಂಪನಾ ಅವರು ಬರೆದ ಕವಿತೆಯೊಂದರ ಸಾಲುಗಳಿವು. ಹಿಂಗಮಿರೆಯವರ ವ್ಯಕ್ತಿತ್ವ ಮತ್ತು ಸಾಹಿತ್ಯಕ್ಕೆ ಸಮನಾಗಿಯೇ ಸಂದ ಹೃದಯಸ್ಪರ್ಶಿ ಶ್ರದ್ಧಾಂಜಲಿ ಇದು.

ಕರ್ನಾಟಕ-ಮಹಾರಾಷ್ಟ್ರ ಗಡಿಯ ಕೃಷ್ಣಾ ನದಿ ತೀರದ ರಾಜಾಪುರ ಎಂಬ ಕುಗ್ರಾಮ ಹಿಂಗಮಿರೆ ಅವರ ಹುಟ್ಟೂರು (ಜ: 1933). ಸ್ವಪ್ರಯತ್ನದಿಂದ ಶಿಕ್ಷಣ ಸಾಹಿತ್ಯದಂಥ ಸಂಸ್ಕಾರಗಳನ್ನು ರೂಢಿಸಿಕೊಂಡ ಅವರು, ಖಾಸಗಿ ನೋವು-ಆಘಾತಗಳ ನಡುವೆಯೂ ಬದುಕಿನ ಕುರಿತು ಅಪಾರ ಪ್ರೀತಿಯನ್ನು ಉಳಿಸಿಕೊಂಡು, ಎಲ್ಲರಿಗೂ ಪ್ರೀತಿಯನ್ನೇ ಹಂಚುತ್ತ, ತಾನೂ ಬೆಳೆದು ಇತರರನ್ನೂ ಬೆಳೆಸಿದರು.

`ಸೋವಿಯೆತ್ ಲ್ಯಾಂಡ್ ನೆಹರು ಪ್ರಶಸ್ತಿ` ಪಡೆವವರೆಗೆ; ಸುಮಾರು ಕಾಲು ಶತಮಾನದಿಂದ ತಮ್ಮ ಅಂತರಂಗದಲ್ಲಿ ರೂಪುಗೊಳ್ಳುತ್ತ ನಡೆದ ದರ್ಶನವೊಂದಕ್ಕೆ ಬದುಕಿನ ಇಳಿಸಂಜೆಯಲ್ಲಿ `ಬುದ್ಧ ಕಾವ್ಯ ದರ್ಶನ`ವೆಂಬ ಮಹಾಕಾವ್ಯದ ರೂಪು ಕೊಟ್ಟು, ಅದನ್ನು ಪ್ರಕಟಿಸಿಯೇ ಈ ಲೋಕದಿಂದ ನಿರ್ಗಮಿಸುವವರೆಗೆ ಬುದ್ದಣ್ಣ ಹಿಂಗಮಿರೆ ನಡೆದದ್ದು ನಿರಂತರ ಸಂಘರ್ಷದ ದಾರಿ.

ಅಥಣಿಯ ಹೈಸ್ಕೂಲೊಂದರಲ್ಲಿ ಮಾಸ್ತರ್ ಆಗಿದ್ದ ಹಿಂಗಮಿರೆಯವರ ಜ್ಞಾನದಾಹ ಅವರನ್ನು ಸಾಂಗಲಿಯಲ್ಲಿದ್ದ ರಂ.ಶ್ರಿ.ಮುಗಳಿಯವರ ಬಳಿ ಕೊಂಡೊಯ್ದಿತು. ಮುಗಳಿಯವರ ಮಾರ್ಗದರ್ಶನದಲ್ಲಿ ಪ್ರೌಢಪ್ರಬಂಧ ಬರೆದು ಪೂನಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದು ನಿಪ್ಪಾಣಿ, ಹುಬ್ಬಳ್ಳಿ-ಧಾರವಾಡದ ಕಾಲೇಜುಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಕನ್ನಡ ಎಂ ಎ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಲೇ ವಿಶ್ವವಿದ್ಯಾಲಯದ ವಿದೇಶಿ ಭಾಷೆಗಳ ಅಧ್ಯಯನ ವಿಭಾಗದಲ್ಲಿ ರಷ್ಯನ್ ಭಾಷೆ-ಸಾಹಿತ್ಯದಲ್ಲಿ ಸ್ವತಃ ತಾವೂ ಎಂ.ಎ ಮಾಡಿದರು. ಮಾಸ್ಕೋನಗರದ ಪುಷ್ಕಿನ್ ಪ್ರತಿಮೆಯ ಬಳಿ ಸಾರ್ವಜನಿಕವಾಗಿ ಕವನವಾಚನ ಮಾಡುವವರೆಗೆ ಚಾಚಿಕೊಂಡ ಸುದೀರ್ಘ ಪಯಣವದು.

ವರಸೆಯಲ್ಲಿ ನನ್ನ ಭಾವ (ಚಿಕ್ಕಮ್ಮನ ಮಗಳ ಗಂಡ) ಆದರೂ 1964ರಲ್ಲಿ ನಾನು ಪ್ರಾಥಮಿಕ ಎರಡನೆಯ ತರಗತಿಯಲ್ಲಿದ್ದಾಗ ಯಡೂರಿನಲ್ಲಿ ನಡೆದ ಅವರ ಮದುವೆಯ ಅಸ್ಪಷ್ಟ ನೆನಪುಗಳನ್ನು ಹೊರತುಪಡಿಸಿದರೆ ಹಿಂಗಮಿರೆ ಎಂಬ ವ್ಯಕ್ತಿತ್ವದ ನಿಕಟ ಪರಿಚಯ ನನಗೆ ಇರಲೇ ಇಲ್ಲ. ಅವರ ನಿಕಟ ಸಂಪರ್ಕ ಬಂದದ್ದು ನಾನು ಧಾರವಾಡದ ಕರ್ನಾಟಕ ಕಾಲೇಜಿಗೆ ಪದವಿ ವಿದ್ಯಾಭ್ಯಾಸಕ್ಕೆ ಪ್ರವೇಶ ಕೋರಿ ಹೋದ ನಂತರವೇ.

ಆಗ ಅವರಲ್ಲಿ ಅಧ್ಯಾಪಕರು. ಅಲ್ಪ ಸ್ವಲ್ಪ ಸಾಹಿತ್ಯದ ಆಸಕ್ತಿ ಇದ್ದ ನನಗೆ ಹಿಂಗಮಿರೆ ಅವರೊಂದಿಗೆ ಸಂಪರ್ಕ ಬೆಳೆಯಿತು. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸಾಹಿತ್ಯಾಸಕ್ತಿಗೆ ನೀರೆರೆಯುವ ಅವರ ಆಸಕ್ತಿಯ ಫಲವಾಗಿ ವಿ.ಕೃ.ಗೋಕಾಕರ ಕಾಲದಿಂದ ಕರ್ನಾಟಕ ಕಾಲೇಜಿನ ಕನ್ನಡ ಸಂಘದ ಭಾಗವಾಗಿದ್ದ `ಕಮಲ ಮಂಡಲ` ಪ್ರಕಾಶನವನ್ನು ಮರುಜೀವಗೊಳಿಸಿದ ಅವರು, `ಸ್ಪಂದನ` ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳ ಕವನಸಂಗ್ರಹ ಹೊರತಂದರು. ಅದರಲ್ಲಿ ನನ್ನ ಕವಿತೆಗಳೂ ಸೇರಿದ್ದವು.

ಅದಕ್ಕೆ ಮೊದಲು, ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗಲೂ `ಸಾಹಿತ್ಯ ಮಂಟಪ` ಎಂಬ ವೇದಿಕೆ ರೂಪಿಸಿ ಸರಜೂ ಕಾಟಕರ, ಸತೀಶ ಕುಲಕರ್ಣಿ, ಗವಿಸಿದ್ಧ ಬಳ್ಳಾರಿಯಂಥ ಕವಿಗಳು ಕಾವ್ಯಲೋಕವನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದರು.

ಇಂದಿರಾಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಪರಿಣಾಮವಾಗಿ ನೆಲೆಸಿದ್ದ ವಿಲಕ್ಷಣ ಮೌನದ ನಡುವೆಯೇ ಬಂಡಾಯ, ಸಮುದಾಯ, ರೈತ, ದಲಿತ ಮತ್ತಿತರ ಜನಪರ ಚಳವಳಿಗಳು ಧಾರವಾಡದಲ್ಲಿ ತಲೆ ಎತ್ತತೊಡಗಿದ್ದ ದಿನಗಳವು. ಮಾರ್ಕ್ಸಿಸ್ಟ್ ಚಿಂತನೆಯ ಪ್ರಭಾವಕ್ಕೊಳಗಾಗಿದ್ದ ನಾವು ಕೆಲವರು ಅದೇ ಒಲವಿನ ಹಿಂಗಮಿರೆ ಅವರೊಂದಿಗೆ ಒಡನಾಡುವದು ಸಹಜವಾಗಿತ್ತು.

ಒಂದೆಡೆ ಚಂದ್ರಶೇಖರ್ ಪಾಟೀಲರಂಥ ಸೋಷಲಿಸ್ಟರು ತುರ್ತುಸ್ಥಿತಿಯ ವಿರುದ್ಧ ದನಿ ಎತ್ತತೊಡಗಿದ್ದರೆ ಇನ್ನೊಂದೆಡೆ ಕಾದಂಬರಿಕಾರ ಬಸವರಾಜ ಕಟ್ಟೀಮನಿ, ವಿಮರ್ಶಕ ಶಂಕರ ಮೊಕಾಶಿ ಪುಣೇಕರ್ ಅಂಥವರು ತುರ್ತುಸ್ಥಿತಿಯನ್ನು ಸಮರ್ಥಿಸಿ ಇಂದಿರಾ ಭಜನೆ ಶುರು ಹಚ್ಚಿಕೊಂಡಿದ್ದರು.

ಹಿಂಗಮಿರೆಯವರು ತುರ್ತುಪರಿಸ್ಥಿತಿಯನ್ನು ಸಮರ್ಥಿಸಿದ್ದರು ಎಂಬುದಕ್ಕಿಂತ ಅವರು ಕಮ್ಯುನಿಜಂನಲ್ಲಿ ಆಸ್ಥೆಯುಳ್ಳವರಾಗಿದ್ದಕ್ಕೂ ಮತ್ತು ರಾಷ್ಟ್ರಮಟ್ಟದಲ್ಲಿ ಸಿಪಿಐ (ಭಾರತ ಕಮ್ಯುನಿಸ್ಟ್ ಪಕ್ಷ ) ಇಂದಿರಾಗಾಂಧಿ ವಿಧಿಸಿದ್ದ ತುರ್ತುಸ್ಥಿತಿಯನ್ನು ಬೆಂಬಲಿಸಿದ್ದಕ್ಕೂ ತಳಕು ಹಾಕಿ, ಹಿಂಗಮಿರೆಯವರನ್ನು ತುರ್ತುಸ್ಥಿತಿಯ ತಾತ್ವಿಕ ಬೆಂಬಲಿಗರೆಂಬಂತೆ ಬಿಂಬಿಸುವ ಲೋಹಿಯಾವಾದಿ ಸೋಷಲಿಸ್ಟರ ರೆಟರಿಕ್ಕೇ ಹೆಚ್ಚಾಗಿತ್ತು.

ತಮ್ಮ ಕುರಿತು ತಾವೇ ದೊಡ್ಡದಾಗಿ ಮಾತನಾಡಿಕೊಳ್ಳುವ ಜಾಯಮಾನದವರಲ್ಲದ ಹಿಂಗಮಿರೆ ತಮ್ಮಷ್ಟಕ್ಕೆ ತಾವು ಮೌನವಾಗಿ ಹಲವು ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದರು. ಅಂತಸ್ಸತ್ವದಲ್ಲಿ ನಿಜಕ್ಕೂ ಬಂಡಾಯಗಾರನಾದ ಮತ್ತು ಆ ಆಶಯದ ಕಾವ್ಯದ ಉತ್ತಮ ಪ್ರತಿನಿಧಿಯಾದ ಅವರು ಬಂಡಾಯ ಸಾಹಿತ್ಯ ಸಂಘಟಣೆಯ ವ್ಯಾಪ್ತಿಯೊಳಗೂ ಬರಲು ಬಯಸದೇ ತಮ್ಮ ಪಾಡಿಗೆ ತಾವಿದ್ದರು.

ದಲಿತ ಹೋರಾಟವೆಂಬುದು ಕರ್ನಾಟಕದಲ್ಲಿ ಸಂಘಟಿತವಾಗಿ ರೂಪಗೊಳ್ಳುವ ಮೊದಲೇ ಹಿಂಗಮಿರೆಯವರು ಚೆನ್ನಣ್ಣ ವಾಲೀಕಾರ್ ಮತ್ತು ಸೋಮಶೇಖರ್ ಇಮ್ರಾಪೂರ ಅವರನ್ನು ಜೊತೆ ಮಾಡಿಕೊಂಡು `ದಲಿತ` ಎಂಬ ನಿಯತಕಾಲಿಕೆಯ ಹಲವು ಸಂಚಿಕೆಗಳನ್ನು 1974ರಿಂದಲೇ ಹೊರತಂದಿದ್ದರು. ತೆಲುಗಿನ ದಿಗಂಬರ ಕಾವ್ಯ, ಮರಾಠಿ ದಲಿತಕಾವ್ಯ ಮತ್ತು ನಾಮದೇವ ಢಸಾಳರಂಥ ಪ್ರಖರ ದಲಿತ ಕವಿಗಳು ಕನ್ನಡಕ್ಕೆ ಪರಿಚಯವಾದದ್ದೇ ಅದರ ಮೂಲಕ.

1977ರಲ್ಲಿ ಅವರ ಮೂರನೇ ಕವನ ಸಂಗ್ರಹ `ಹದ್ದುಗಳ ಹಾಡು` ಬಿಡುಗಡೆಯಾಯಿತು. ಆ ಮೊದಲು `ಹುಲ್ಲುಗೆಜ್ಜೆ` (1962) ಹಾಗೂ `ಶಬ್ದ ರಕ್ತ ಮತ್ತು ಮಾಂಸ` ( 1968) ಪ್ರಕಟವಾಗಿದ್ದವು. `ಹುಲ್ಲುಗೆಜ್ಜೆ`ಯಲ್ಲಿ `ಕಿವುಡು ಭೂಮಿ ಕುರುಡು ಗಾಳಿ/ ಹುಲ್ಲು- ಗೆಜ್ಜೆ ನಿನದ/ ಒಮ್ಮೆ ಹಸಿರು ಒಮ್ಮೆ ಬರಡು/ ಸುಖ ದುಃಖದ ಮೋದ` ಎಂಬಂಥ ರೂಪಕಗಳು, `ಅಗ್ನಿ-ಬಂಡೆ ಸುತ್ತುವರಿವ/ಇದೊ ಬದುಕಿನ ಭ್ರಮಣ/ ಸರಸ-ವಿರಸ ಸ್ವಪ್ನ ನೆಯ್ದು/ ಹಾಡುತ್ತಿಹ ಹರಣ` ಎಂಬಂಥ ಸಾಲುಗಳು ಶಕ್ತ ಕವಿಯೊಬ್ಬನ ಆಗಮನವನ್ನು ನಿಸ್ಸಂದೇಹವಾಗಿ ಸಾರಿದ್ದವು. `ಶಬ್ದ ರಕ್ತ ಮತ್ತು ಮಾಂಸ`ದಲ್ಲಿ ನಿಗಿ ನಿಗಿ ಉರಿಯುವ ಗುಣವುಳ್ಳ ರೂಪಕ- ಪ್ರತಿಮೆಗಳು, ಬಂಡುಕೋರ ಆಶಯಗಳು, ವಾಸ್ತವದ ಕ್ರೌರ್ಯಗಳು, ವಿಲಕ್ಷಣ ವ್ಯಂಗ್ಯ, ಸ್ಫೋಟಕ ಸತ್ವ ದಟ್ಟವಾಗಿ ಮೇಳೈಸಿವೆ.

`ಸರಸ್ವತಿಯ ನಗ್ನಪುತ್ಥಳಿ ಸುತ್ತ ಹೂ ಸುರಿದು/ಸ್ವಚ್ಛಂದ ತುಳಿಯುತ್ತಿದ್ದೇವೆ ಹೊಸ ಲಯ,/ ಭಯ, ಶಂಕೆ, ಬಿರುಗಾಳಿ ಹೊರೆಕಟ್ಟಿ ತಂದು/ ಲಿಲಾವು ಮಾಡುತ್ತೇವೆ/ ರಕ್ತದಂಗಡಿ ಹೊಕ್ಕು ಲೂಟಿ ಮಾಡುತ್ತೇವೆ ಪ್ರತಿಮೆಗಳ` ಮುಂತಾದ ಸಾಲುಗಳು ಅಥವಾ `ಶ್ರದ್ಧೆ ಬಚ್ಚಲಲ್ಲಿ ತೊಯ್ದ ಭ್ರಮಿಷ್ಟರು ನಾವಲ್ಲ/... ... .../ ಅಂಧೇರನಗರಿಯಾಳ್ವ ಅಪ್ರಾಮಾಣಿಕ ಗಣಕ್ಕೆ/ ಇದೋ ಎತ್ತಿದ್ದೇವೆ ಕಪ್ಪುಧ್ವಜ`ದಂಥ ಸಾಲುಗಳು ಹಿಂಗಮಿರೆಯೆಂಬ ಕವಿಯೊಳಗೆ ಕುದಿಯುತ್ತಿದ್ದ ಅನುಭವ ಹಾಗೂ ಅದರ ಅಭಿವ್ಯಕ್ತಿಯ ಒತ್ತಡವನ್ನು ಸೂಚಿಸುತ್ತವೆ.

`ಹದ್ದುಗಳ ಹಾಡು` ನವ್ಯತೆಯಿಂದ ಕಳಚಿಕೊಂಡು ಆನಂತರ ಎಂಬತ್ತರ ದಶಕದುದ್ದಕ್ಕೂ ಕನ್ನಡ ಕಾವ್ಯಲೋಕದಲ್ಲಿ ಸ್ವಲ್ಪ ವಾಚ್ಯವಾಗಿ ರಾರಾಜಿಸಿದ ದಲಿತ, ಬಂಡಾಯ ಇತ್ಯಾದಿ ನಾಮಾಂಕಿತ ಪ್ರವೃತ್ತಿಗಳ ಮುನ್ಸೂಚನೆಯಂಥ ಪದ್ಯಗಳನ್ನು ಒಳಗೊಂಡು ಪ್ರಕಟವಾಯಿತು. ಇಲ್ಲಿಯ ಪದ್ಯಗಳಲ್ಲಿ `ನೆಲದ ಹಾಡು` ಎಂಬುದು ಮುಖ್ಯವಾದುದು. ಅಡಿಗರ ಭೂಮಿಗೀತಕ್ಕಿಂತ ತೀರ ಭಿನ್ನವಾದ ನೆಲೆಯ ದರ್ಶನವನ್ನು ಈ ಕವಿತೆ ಪ್ರಕಟಿಸಿತು.

70-80ರ ದಶಕಗಳಲ್ಲಿ ಹಿಂಗಮಿರೆಯವರು ಬಹಳಷ್ಟು ಕಾವ್ಯ ಹಾಗೂ ವಿಮರ್ಶೆಯ ಕೃಷಿಯನ್ನು ಮಾಡಿದರು. ಪುಣೆ ವಿಶ್ವವಿದ್ಯಾಲಯದಿಂದ ಅವರಿಗೆ ಡಾಕ್ಟರೇಟ್ ಪದವಿ ದೊರಕಿಸಿ ಕೊಟ್ಟ ಅವರ ಮಹಾಪ್ರಬಂಧ `ಕನ್ನಡದಲ್ಲಿ ಶೋಕಕಾವ್ಯ` 1976ರಲ್ಲಿ ಮೈಸೂರು ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟವಾಯಿತು. ನವ್ಯಕಾವ್ಯ ವಿಮರ್ಶೆಯ ಕುರಿತಾದ ಇವರ ಕೃತಿ `ಹೊಸಕಾವ್ಯ ಹೊಸದಿಕ್ಕು`.

ಹಿಂಗಮಿರೆಯವರ ಸಂಪಾದಿತ ಕಾವ್ಯಕೃತಿಗಳೂ ಹಲವಾರಿವೆ. ಅವರು ಸಂಪಾದಿಸಿದ ಕಾವ್ಯಕೃತಿಗಳಲ್ಲಿ ಬಹುಮುಖ್ಯವಾದುದು `ಹೊಸ ಜನಾಂಗದ ಕವಿತೆಗಳು` ಎಂಬ ಪ್ರಾತಿನಿಧಿಕ ಅಂಥಾಲಾಜಿ. ಇದು 1970ರಲ್ಲಿ ಪಿ.ಲಂಕೇಶ್ ಸಂಪಾದಿಸಿದ `ಅಕ್ಷರ ಹೊಸ ಕಾವ್ಯ`ಕ್ಕೆ ಪ್ರತ್ಯುತ್ತರವಾಗಿ ಪ್ರಕಟವಾದದ್ದು.

ಲಂಕೇಶ್ ಸಂಪಾದಿತ ಕೃತಿಯಲ್ಲಿ ಅಡಕವಾದ ಕವಿತೆಗಳು ಸಂಪಾದಕರ ವೈಯಕ್ತಿಕ ಇಷ್ಟಾನಿಷ್ಟಗಳ ನೆಲೆಯಲ್ಲಿ ಆಯ್ಕೆಯಾದ ಕವಿಗಳ ಕವಿತೆಗಳೆಂಬುದು ಸ್ಪಷ್ಟವಿತ್ತು. ಅಲ್ಲಿದ್ದುದು ಆಯಾ ಕವಿಗಳ ಪ್ರಾತಿನಿಧಿಕ ಕವಿತೆಗಳಲ್ಲ ಮತ್ತು ಉತ್ತರ ಕರ್ನಾಟಕ ಭಾಗದ ಹಲವು ಸಶಕ್ತ ಕವಿಗಳಿಗೆ ಅದರಲ್ಲಿ ಪ್ರಾತಿನಿಧ್ಯ ದೊರೆತಿಲ್ಲವೆಂಬ ಕಾರಣಕ್ಕೆ ಹಿಂಗಮಿರೆಯವರು ಪಿ.ಲಂಕೇಶ್ ಅಕಾರಣವಾಗಿಯೋ ಸಕಾರಣವಾಗಿಯೋ ಹೊರಗಿಟ್ಟ ಕವಿಗಳ ಪೈಕಿ 29 ಕವಿಗಳ ಪ್ರಾತಿನಿಧಿಕವೆನ್ನಬಹುದಾದ ಕವಿತೆಗಳನ್ನು ಅದರ ಮರುವರ್ಷವೇ (1971) ಪ್ರಕಟಿಸಿದರು.

ವರ್ತಮಾನದ ಕಾವ್ಯದ ಕುರಿತ ಸಂಪಾದಕರ ನಿರ್ದಿಷ್ಟ ಪ್ರಶ್ನೆಗಳಿಗೆ ಈ ಎಲ್ಲ ಕವಿಗಳ ಅನಿಸಿಕೆಗಳನ್ನು ಪ್ರತಿನಿಧಿಸುವ ಉತ್ತರಗಳು ಮತ್ತು ಸಂಪಾದಕೀಯ ಪ್ರಸ್ತಾವನೆಯೊಂದಿಗೆ ಪ್ರಕಟವಾದ ಈ ಸಂಕಲನದ ಕವಿಗಳಲ್ಲಿ ಹಲವರು ಇಂದಿಗೂ ಸೃಜನಶೀಲ ಜೀವಂತಿಕೆ ಉಳಿಸಿಕೊಂಡಿದ್ದಾರೆ.

ನಾಟಕ ಹಿಂಗಮಿರೆಯವರು ಸಾಕಷ್ಟು ಕೃಷಿಗೈದ ಇನ್ನೊಂದು ಕ್ಷೇತ್ರ. ತೀರ್ಪು, ನೀಲಾಂಜನೆ, ಅಹಲ್ಯೆ, ಸಂಗೊಳ್ಳಿ ರಾಯಣ್ಣ ಅವರ ರಂಗಕೃತಿಗಳು. ಕಲಘಟಗಿ ಪರಿಸರದ ಗ್ರಾಮೀಣರ ಬದುಕಿನಲ್ಲಿ ಬದಲಾವಣೆ ತರುವ ಕಾರ್ಯಗೈದ, ಕರ್ನಾಟಕ ಶಾಸನಸಭೆಗೂ ಆಯ್ಕೆಯಾಗಿದ್ದ ಫಾದರ್ ಜೇಕಬ್ ಅವರನ್ನು ಆದರ್ಶೀಕರಿಸಿ `ದೀನದಲಿತರ ನಾಯಕ` ಎಂಬ ನಾಟಕವನ್ನು ಬರೆದರು.

ರಷ್ಯನ್ ಭಾಷೆಯ ಕಾವ್ಯದ ಅನುವಾದ ಮತ್ತು ರೂಪಾಂತರ ಹಿಂಗಮಿರೆ ಅವರ ಇನ್ನೊಂದು ಕೊಡುಗೆ. ಅಕ್ಷರ ಪ್ರಕಾಶನದಿಂದ ಹಿಂಗಮಿರೆಯವರ `ರಷ್ಯನ್ ಹೊಸ ಕವಿತೆಗಳು` (1973) ಪ್ರಕಟವಾಯಿತು. ಪುಷ್ಕಿನ್ ಅವರು ಜಿಪ್ಸಿಗಳ ಕುರಿತು ಬರೆದ ಖಂಡಕಾವ್ಯವೊಂದನ್ನು ನಾಟಕಕ್ಕೆ ರೂಪಾಂತರಿಸಿ `ಅಲೆಮಾರಿಗಳು` ಶೀರ್ಷಿಕೆಯಡಿ ಪ್ರಕಟಿಸಿದರು.

ಅವರ ಸೃಜನಶೀಲ ತುಡಿತಗಳ ಶಿಖರಪ್ರಾಯ ಕೃತಿಯಾಗಿ `ಬುದ್ಧ ಕಾವ್ಯ ದರ್ಶನ` ಮಹಾಕಾವ್ಯ (2003) ಪ್ರಕಟವಾಯಿತು. ಹಿಂಗಮಿರೆ ಆ ಕಾವ್ಯದ ಉದ್ದೇಶವನ್ನು ಹೇಳಿದ್ದು ಹೀಗೆ: `ಕಾಳು ತುಂಬಿ ಹೊಡೆಯೆತ್ತಿ ನಿಂತ ಹೊಳಿಸಾಲ ಭೂಮಿಯಂತೆ/ ತುಂಬಿ ಹರಿಯುವಾ ಕೃಷ್ಣೆ-ತುಂಗೆಯರ ತುಂಬು ಪಾತ್ರದಂತೆ/ ಬುದ್ಧಕಾವ್ಯ ರುಚಿ ಕಲ್ಲುಸಕ್ಕರೆಯ ಅಚ್ಚ ಹರಳಿನಂತೆ/ ಕೊರಡ ಕೊನರಿಸುವ ಭಾವ ಚಿಮ್ಮಿಸುವ ಜೀವಸತ್ವದಂತೆ...`.

ಸಾವಿರದೈನೂರು ಚತುಷ್ಪದಿಗಳಿಂದ ಕೂಡಿ ಅರವತ್ತು ಅಧ್ಯಾಯಗಳಲ್ಲಿ ಬುದ್ಧನ ಬದುಕು ಸಂದೇಶದ ದರ್ಶನ ಮಾಡಿಸುವ ಈ ಛಂದೋಬದ್ಧ ಕೃತಿ ಎಚ್.ಆರ್. ಅಮರನಾಥ ಗುರುತಿಸಿದಂತೆ- `ಮತಪ್ರಚಾರದ ಆವೇಶವಿಲ್ಲದ, ತತ್ಕಾಲೀನತೆಯ ತೆವಲಿಲ್ಲದ, ಜಾನಪದೀಯ ಸತ್ವವನ್ನೂ, ಭಾವಗೀತಾತ್ಮಕತೆಯನ್ನೂ ಹೊಂದಿದ, ಪೌರಾಣಿಕತೆಯನ್ನು ಕಳಚಿ ಇತಿಹಾಸ ಪ್ರಜ್ಞೆಯಿಂದ ನಿರ್ವಹಿಸಲ್ಪಟ್ಟ ಕಾವ್ಯ`.

ಹಿರಿಯ ಮಗಳ ಬದುಕಿನ ಏರುಪೇರುಗಳ ದುಃಖ, ಇದ್ದ ಎರಡೂ ಗಂಡುಮಕ್ಕಳ ಅಕಾಲಿಕ ಮರಣದಂಥ ದುಃಖ ದುಮ್ಮಾನಗಳ ನಡುವೆಯೂ ತಮ್ಮ ಕ್ರಿಯಾಶೀಲತೆಯನ್ನು ಸತತವಾಗಿ ಉಳಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆಯನ್ನು ಹಿಂಗಮಿರೆ ಅವರು ಕೊಟ್ಟಿದ್ದಾರೆ. ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

`ಪುಷ್ಕಿನ್ ಕವಿತೆಗಳು` ಕೃತಿಗೆ ಸೋವಿಯೆಟ್ ಲ್ಯಾಂಡ್ ನೆಹರೂ ಪಾರಿತೋಷಕ, `ಹೊಸಕಾವ್ಯ ಹೊಸದಿಕ್ಕು` ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಮತ್ತು ಮೈಸೂರು ವಿಶ್ವವಿದ್ಯಾಲಯ ಸ್ವರ್ಣಮಹೋತ್ಸವ ಪ್ರಶಸ್ತಿ ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.

ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ ಹಿಂಗಮಿರೆಯವರ ಚಿಂತನೆ, ಬರವಣಿಗೆ ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಎಷ್ಟರ ಮಟ್ಟದಲ್ಲಿ ಚರ್ಚೆಯಾಯಿತು ಎಂಬುದನ್ನು ನೋಡಿದರೆ ನಿರಾಶೆಯಾಗುತ್ತದೆ.

ಕನಿಷ್ಠ ಪಕ್ಷ, ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ-ಸಾಹಿತ್ಯ ಪರಿಷತ್ತಿನಂಥ ಸಾರ್ವಜನಿಕ ಸಂಸ್ಥೆಗಳು ಹಿಂಗಮಿರೆಯವರು ತಮ್ಮ ಹಣ ಹಾಕಿ ತಮ್ಮದೇ `ಯುಗಧ್ವನಿ ಪ್ರಕಾಶನ`ದಿಂದ ಹೊರತಂದ ಸಹಸ್ರಾರು ಪುಟಗಳಷ್ಟಿರುವ ಸಾಹಿತ್ಯವನ್ನು ಸಮಗ್ರವಾಗಿ ಪ್ರಕಟಿಸುವ, ಅವರ ಸಾಹಿತ್ಯದ ಕುರಿತ ವಿಚಾರ-ವಿಮರ್ಶೆಗೆ ಚಾಲನೆಕೊಡುವ, ಅವರ `ಬುದ್ಧಕಾವ್ಯದರ್ಶನ` ಮಹಾಕಾವ್ಯದ ಜನಪ್ರಿಯ ಆವೃತ್ತಿಯನ್ನು ಪ್ರಕಟಿಸಿ ವಿತರಿಸುವ ಕೆಲಸಗಳನ್ನು ಕರ್ತವ್ಯಪ್ರಜ್ಞೆಯಿಂದ ಮಾಡಬೇಕಿದೆ.
 (ಪ್ರಜಾವಾಣಿ,  Sunday, 16 September, 2012)